ADVERTISEMENT

ಸಂಪ್ರದಾಯಶೀಲ ರಾಷ್ಟ್ರೀಯವಾದಿ ಶಿಂಜೊ ಅಬೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 19:30 IST
Last Updated 8 ಜುಲೈ 2022, 19:30 IST
ಶಿಂಜೊ ಅಬೆ
ಶಿಂಜೊ ಅಬೆ   

ಎರಡನೇ ವಿಶ್ವಯುದ್ಧದ ನಂತರ ಜಪಾನ್‌ನ ಪ್ರಧಾನಿ ಹುದ್ದೆಗೇರಿದ ಅತ್ಯಂತ ಕಿರಿಯ ವ್ಯಕ್ತಿ, ಜಪಾನ್‌ನ ಅತ್ಯಂತ ದೀರ್ಘಾವಧಿಯ ಪ್ರಧಾನಿ... ಇವು ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರಿಗೆ ಸಂಬಂಧಿಸಿದ ದಾಖಲೆಗಳು. ನಾಲ್ಕು ಬಾರಿ ಪ್ರಧಾನಿ ಹುದ್ದೆಗೆ ಏರಿದ್ದ ಅಬೆ ಅವರಿಗೆ, ರಾಜಕಾರಣ ಅವರ ಕುಟುಂಬದಿಂದ ಬಳುವಳಿಯಾಗಿ ಬಂದದ್ದು.

ಶಿಂಜೊ ಅಬೆ ಅವರ ತಾತ ನೋಬುಸುಕೆ ಕಿಶಿ ಅವರು ಜಪಾನ್‌ನ ಪ್ರಧಾನಿಯಾಗಿದ್ದರು. ಅಬೆ ಅವರ ತಂದೆ ಶಿಂಟಾರೋ ಅಬೆ ಅವರು ಜಪಾನ್‌ನ ವಿದೇಶಾಂಗ ಸಚಿವರಾಗಿದ್ದರು. 1993ರಲ್ಲಿ ಅಬೆ ಅವರು ಮೊದಲ ಬಾರಿಗೆ ಜಪಾನ್‌ನ ಸಂಸತ್ತಿನ ಕಳೆಮನೆಯ ಸದಸ್ಯರಾಗಿ ಚುನಾಯಿತರಾದರು. ಅಲ್ಲಿಂದ ಅವರು ರಾಜಕಾರಣದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ.

2005ರಲ್ಲಿ ಅಂದಿನ ಪ್ರಧಾನಿ ಜುನಿಷಿರೋ ಕೋಇಝುಮಿ ಅವರು ಅಬೆ ಅವರನ್ನು ಸಂಪುಟ ಕಾರ್ಯದರ್ಶಿಯಾಗಿ ನೇಮಕ ಮಾಡಿದರು. ಹೀಗೆ 2005ರಲ್ಲೇ ಅಬೆ ಅವರು ಜಪಾನ್‌ ಸಂಪುಟ ದರ್ಜೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನಂತರದ ಒಂದು ವರ್ಷದ ಅವಧಿಯಲ್ಲೇ ದೇಶದ ಪ್ರಧಾನಿಯಾಗುವ ಅವಕಾಶವೂ ಅವರಿಗೆ ಒದಗಿ ಬಂದಿತು.

2006ರಲ್ಲಿ, ತಮ್ಮ 52ನೇ ವಯಸ್ಸಿನಲ್ಲಿ ಅಬೆ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಪ್ರಧಾನಿಯಾಗಿ ಅವರ ಆ ಅಧಿಕಾರದ ಅವಧಿ ಸುಗಮವಾಗಿ ಇರಲಿಲ್ಲ. ಅವರ ಸರ್ಕಾರವು ಹಲವು ಹಗರಣಗಳ ಆರೋಪವನ್ನು ಎದುರಿಸಬೇಕಾಯಿತು. ಆ ಸರ್ಕಾರದ ಅವಧಿಯಲ್ಲಿ ದೇಶದ ನಿವೃತ್ತ ನೌಕರರ ಪಿಂಚಣಿ ದತ್ತಾಂಶಗಳು ಅಳಿಸಿಹೋದವು. ಇಂತಹ ಹಗರಣಗಳ ಬೆನ್ನಲ್ಲೇ ಜಪಾನ್‌ ಸಂಸತ್ತಿನ ಮೇಲ್ಮನೆಗೆ 2007ರ ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಅಬೆ ಅವರ ಎಲ್‌ಡಿಪಿ ಪಕ್ಷವು ಹೀನಾಯ ಸೋಲು ಕಂಡಿತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ತೀವ್ರ ಅನಾರೋಗ್ಯದ ಕಾರಣ ಅಬೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

2012ರ ಚುನಾವಣೆಯಲ್ಲಿ ಎಲ್‌ಡಿಪಿ ಅಧಿಕಾರಕ್ಕೆ ಬಂದಿತು. ಅಬೆ ಎರಡನೇ ಅವಧಿಗೆ ಪ್ರಧಾನಿಯಾದರು. ಅಬೆ ಅವರು ಸಂಪ್ರದಾಯಶೀಲ ರಾಷ್ಟ್ರೀಯವಾದಿ ಆಗಿದ್ದರು. ‘ಬ್ರಿಟಿಷರ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ ಜಪಾನ್‌ನ ಸಂವಿಧಾನವನ್ನು ಬದಲಿಸಬೇಕು’ ಎಂದು ಅವರು ಎರಡನೇ ಅವಧಿಗೆ ಪ್ರಧಾನಿಯಾದ ದಿನದಿಂದ ಹಲವು ಬಾರಿ ಹೇಳಿದ್ದರು. ಅವರ ಈ ಪ್ರಯತ್ನಕ್ಕೆ ವ್ಯಕ್ತವಾದ ಬೆಂಬಲದಷ್ಟೇ, ವಿರೋಧವೂ ಇತ್ತು. ಹೀಗಾಗಿ ಸಂವಿಧಾನ ಬದಲಿಸುವ ಅವರ ಮಹತ್ವಾಕಾಂಕ್ಷೆ ಕೈಗೂಡಲಿಲ್ಲ.

ಅಬೆ ಅವರು ತಮ್ಮ ಆಕ್ರಮಣಕಾರಿ ಮತ್ತು ಚುರುಕಿನ ಸೇನಾ ನೀತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಹೊರದೇಶಗಳಲ್ಲಿ ಜಪಾನ್‌ ಸೇನೆಯನ್ನು ಇರಿಸಲು ಮತ್ತು ಬೇರೆ ದೇಶಗಳೊಂದಿಗೆ ರಕ್ಷಣಾ ಸಹಕಾರವನ್ನು ಗಟ್ಟಿಗೊಳಿಸಲು ಅವಕಾಶ ಮಾಡಿಕೊಡುವ ಕಾನೂನನ್ನು ಅಬೆ ಅವರ ಸರ್ಕಾರ 2015ರಲ್ಲಿ ರೂಪಿಸಿತು. ರಕ್ಷಣಾ ಕ್ಷೇತ್ರಕ್ಕೆ ನೀಡುವ ಅನುದಾನವನ್ನು ಹೆಚ್ಚಿಸಲಾಯಿತು. ಅಮೆರಿಕ, ಭಾರತ, ಬ್ರಿಟನ್‌ ಅನ್ನು ಒಳಗೊಂಡ ಕ್ವಾಡ್‌ ರಕ್ಷಣಾ ಒಕ್ಕೂಟ ರಚನೆಯಲ್ಲಿ ಅಬೆ ಮಹತ್ವದ ಪಾತ್ರ ವಹಿಸಿದರು. ಇದು ನೆರೆಯ ಚೀನಾ ಮತ್ತು ಉತ್ತರ ಕೊರಿಯಾದ ಕಣ್ಣುಗಳನ್ನು ಕೆಂಪಾಗಿಸಿತು.

ಎಲ್‌ಡಿ‍ಪಿ ಪಕ್ಷದ ಯಾವುದೇ ನಾಯಕರೂ ಮೂರನೇ ಬಾರಿ ಪ್ರಧಾನಿಯಾಗಲು ಪಕ್ಷದ ನಿಯಮಗಳಲ್ಲಿ ಅವಕಾಶವಿಲ್ಲ. ಆದರೆ ಅಬೆ ಅವರ ಪ್ರಭಾವ ಎಷ್ಟಿತ್ತೆಂದರೆ, ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಪಕ್ಷದ ನಿಯಮಗಳನ್ನು ಸಡಿಲಿಸಲಾಯಿತು. 2014ರಲ್ಲಿ ಅವರು ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರು. 2020ರಲ್ಲಿ ಮತ್ತೆ ನಾಲ್ಕನೇ ಬಾರಿ ಪ್ರಧಾನಿಯಾದರು. ಆದರೆ ತೀವ್ರ ಅನಾರೋಗ್ಯದ ಕಾರಣ 2020ರ ಆಗಸ್ಟ್‌ನಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದಿದ್ದರು.

ಭಾರತದೊಂದಿಗೆ ಉತ್ತಮ ಸಂಬಂಧ

ಶಿಂಜೊ ಅಬೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ರಾಷ್ಟ್ರಧ್ವಜವನ್ನುಶನಿವಾರ ಅರ್ಧ ಎತ್ತರದಲ್ಲಿ ಹಾರಿಸಲು ಕೇಂದ್ರ ಸರ್ಕಾರವು ಸೂಚನೆ ನೀಡಿದೆ.

ಅಬೆ ಅವರು ಭಾರತ ಮತ್ತು ಭಾರತದ ನಾಯಕರ ಜತೆಗೆ ಸ್ನೇಹ ಸಂಬಂಧವನ್ನು ಹೊಂದಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಭಾರತಕ್ಕೆ ಹಲವು ಬಾರಿ ಭೇಟಿ ನೀಡಿದ್ದರು. ಭಾರತ ಮತ್ತು ಜಪಾನ್‌ ನಡುವೆ ರಕ್ಷಣಾ ಸಹಕಾರ ಗಟ್ಟಿಯಾಗಲು ಅಡಿಗಲ್ಲು ಹಾಕಿದ್ದೇ ಶಿಂಜೊ ಅಬೆ.ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಜತೆಗೆ ಅವರು ಉತ್ತಮ ಸಂಬಂಧ ಹೊಂದಿದ್ದರು.

2006ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ನಂತರ ಶಿಂಜೊ ಅಬೆ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಭಾರತದ ಸಂಸತ್ತಿನಲ್ಲಿ ಮಾತನಾಡಿದ್ದ ಅವರು, ‘ಇಂಡೊ–ಪೆಸಿಫಿಕ್‌ ಸಹಕಾರ’ ಪರಿಕಲ್ಪನೆಯನ್ನು ಪ್ರಚುರಪಡಿಸಿದ್ದರು. ಇಂಡೊ–ಪೆಸಿಫಿಕ್‌ ಸಹಕಾರ ಒಕ್ಕೂಟ ಅಸ್ತಿತ್ವಕ್ಕೆ ಆ ಭೇಟಿಯು ಬುನಾದಿ ಹಾಕಿತ್ತು ಎಂದು ವಿಶ್ಲೇಷಿಸಲಾಗಿದೆ. 2014ರಲ್ಲಿ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್‌ ಅವರ ಆಹ್ವಾನದ ಮೇರೆಗೆ ಅಬೆ ಅವರು ಮತ್ತೆ ಭಾರತಕ್ಕೆ ಭೇಟಿ ನೀಡಿದ್ದರು. ಭಾರತದ ಗಣರಾಜ್ಯೋತ್ಸವದಲ್ಲಿ ಭಾಗಿಯಾದ ಜಪಾನ್‌ನ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಅಬೆ ಅವರದ್ದು.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಅಬೆ ಅವರು, ಭಾರತಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು. ಆ ಪ್ರವಾಸದ ವೇಳೆ ಅವರು ವಾರಾಣಸಿಯಲ್ಲಿ ನಡೆದ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದರು. ಈ ಭೇಟಿಯ ವೇಳೆ ರಕ್ಷಣಾ ಸಹಕಾರ, ವಾಣಿಜ್ಯ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್‌ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದವು. 2017ರಲ್ಲಿ ಅಬೆ ಅವರು ಭಾರತಕ್ಕೆ ಮತ್ತೊಮ್ಮೆ ಭೇಟಿ ನೀಡಿದ್ದರು. ಮೋದಿ ಅವರ ಸರ್ಕಾರವು 2021ನೇ ಸಾಲಿನಲ್ಲಿ ಅಬೆ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ, ಗೌರವಿಸಿತ್ತು.

(ಆಧಾರ: ಬಿಬಿಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.