ADVERTISEMENT

ಅಗ್ನಿ ಗುಡ್ಡದ ಅಂಚಿನಲ್ಲಿ...

ಮಳೆಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 19:30 IST
Last Updated 3 ಜುಲೈ 2019, 19:30 IST
ಅಗ್ನಿಗುಡ್ಡ . ಚಿತ್ರಗಳು: ಲೇಖಕರವು
ಅಗ್ನಿಗುಡ್ಡ . ಚಿತ್ರಗಳು: ಲೇಖಕರವು   

‘ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆಯಾಗುವ ಸಂಭವ’ ಎಂದು ಗೂಗಲ್ ಹವಾಮಾನ ವರದಿ ನೀಡಿತ್ತು. ಅದನ್ನೇ ನಂಬಿ ಹಾಸನದಿಂದ ಹೊರಟಾಗ ಸುಡುವ ಬಿಸಿಲಿತ್ತು. ಕೆಲವೇ ಮೈಲಿಗಳಷ್ಟು ದೂರದ ಸಕಲೇಶಪುರ ತಲುಪಿದಾಗ ಕತ್ತಲು ಕವಿದಂತೆ ಮೋಡ ಆವರಿಸಿತು. ಮುಂದೆ ಮಳೆ ನಮ್ಮನ್ನು ಸೊಗಸಾಗಿಯೇ ಬರಮಾಡಿಕೊಂಡಿತ್ತು.

ಮಳೆ ಮಕ್ಕಳು ರಚ್ಚೆ ಹಿಡಿದಂತೆ ಬರುತ್ತಿತ್ತು. ನಾಲ್ಕೇ ಹೆಜ್ಜೆ ಇಡುವಷ್ಟರಲ್ಲಿ ತೋಯಿಸಿ ಬಿಡುವಂತೆ ದಪ್ಪ ದಪ್ಪ ಹನಿಗಳಾಗಿ ಸುರಿಯುತ್ತಿತ್ತು. ಈ ಮಳೆಯೊಂದಿಗೆ ಗಾಳಿಯೂ ಜತೆಯಾಯಿತು, ರಾಗಕ್ಕೆ ತಾಳ ಸೇರಿದಂತೆ. ಮಳೆ ಗಾಳಿಯ ಬಿರುಸಿಗೆ ದಾರಿಯ ಇಕ್ಕೆಲದಲ್ಲಿದ್ದ ಮರಗಳೆಲ್ಲ ಮೈಮೇಲೆ ಬಂದೆರಗುತ್ತವೆಯೇನೋ ಎನ್ನುವಂತಿದ್ದ ವಾತಾವರಣದಲ್ಲಿ, ಕನ್ನಡ ಭಾವಗೀತೆಗಳನ್ನು ಕೇಳುತ್ತ ನಮ್ಮ ಪಯಣ ಸಾಗುತ್ತಿತ್ತು. ನವ ಜೋಡಿಗಳಾಗಿ ಹೊರಟಿದ್ದ ನಾವು, ಮಧ್ಯಾಹ್ನದ ವೇಳೆಗೆ ಬೇಲೂರು ತಲುಪಿದ್ದೆವು. ಹಾಸನದಿಂದ ಬೇಲೂರಿಗೆ 40 ಕಿ.ಮೀ. ಸಂಜೆ ‘ಕಾಡುಮನೆ’ ಎಸ್ಟೇಟ್ ಸುತ್ತಾಡಿ, ನಿಸರ್ಗದ ಸವಿ ಸವಿದೆವು. ಮತ್ತೆ ವಾಪಸ್ ಬೇಲೂರಿಗೆ ಹೊರಟೆವು. ಇರುಳ ದೀಪಗಳ ನಡುವೆ ತಲೆಯೆತ್ತಿ ನಿಂತಿದ್ದ ಅಲ್ಲಿನ ಐತಿಹಾಸಿಕ ದೇಗುಲ, ಬೇಲೂರಿಗೆ ನಮ್ಮನ್ನು ಸ್ವಾಗತಿಸುವಂತೆ ಕಾಣುತ್ತಿತ್ತು. ಅಲ್ಲೇ ವಾಸ್ತವ್ಯ.

ಕವಲೊಡೆದ ಹಾದಿಗಳು

ADVERTISEMENT

ಬೇಲೂರಿನಿಂದ ಅಗಣಿಗೆ 48 ಕಿ.ಮೀ (30 ಮೈಲಿ) ದೂರ. ಅದೊಂದು ಪುಟ್ಟ ಹಳ್ಳಿ. ಅಲ್ಲಿಂದಲೇ ಚಾರಣಕ್ಕೆ ಮಾರ್ಗ ಸಿಗಬೇಕು. ಬೇಲೂರಿನಿಂದ ಅಗಣಿಗೆ ಎರಡು ಮಾರ್ಗಗಳಿವೆ. ಮಬ್ಬು ಮುಸುಕಿದ ಮೂಡಿಗೆರೆಯ ಹಾದಿ ಒಂದು. ಹಸಿರು ಹಾಸಿದ ಸಕಲೇಶಪುರದ್ದು ಮತ್ತೊಂದು ಹಾದಿ. ಬೆಳಗಿನ ಜಾವವೇ ಸಜ್ಜಾಗಿ ಮೂಡಿಗೆರೆಯ ಹಾದಿಯಲ್ಲಿ ಹೊರಟ ನಾವು, ರಸ್ತೆ ಬದಿಯಲ್ಲಿ ಪುಟ್ಟದೊಂದು ಹೋಟೆಲ್‌ಗೆ ಹೋದೆವು. ಅದರ ಹೆಸರು ಪುಷ್ಪಗಿರಿ ಕೆಫೆ, ಗೋಣಿಬೀಡು. ಆ ಹೋಟೆಲ್‌ನಲ್ಲಿ ವಿಭಿನ್ನವಾಗಿ ಕಂಡ ತಿಂಡಿಗಳ ರುಚಿಯೂ ಜೀವನಪೂರ್ತಿ ನೆನಪಿರುವಂತಿತ್ತು. ಆ ಹಾದಿಯಲ್ಲಿ ಹೋಗುವವರು ಈ ಹೋಟೆಲ್‌ ತಿಂಡಿಗಳ ರುಚಿಯನ್ನು ಒಮ್ಮೆ ಸವಿಯಲೇಬೇಕು.

ಅಗಣಿ ಸಮೀಪಿಸುತ್ತಿದ್ದಂತೆ ಮಳೆಯ ಅಬ್ಬರ ಹೆಚ್ಚಾಯಿತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ, ಗುಡ್ಡದ ಹಾದಿಗಳಲ್ಲಿ ಸಾಗುವಾಗ ಜಿಗಣೆಯ ಕಾಟ ತಪ್ಪಿದ್ದಲ್ಲ. ಹಾದಿ ತೋರಿಸಿದ ಹಳ್ಳಿಯ ವ್ಯಕ್ತಿಯೊಬ್ಬರು, ಜಿಗಣೆಯಿಂದ ತಪ್ಪಿಸಿ ಕೊಳ್ಳಲು, ಸುಣ್ಣವನ್ನು ಬಾಟಲಿಯಲ್ಲಿ ತುಂಬಿಸಿ ತಂದುಕೊಟ್ಟರು. ಬದಲಿಗೆ ಏನನ್ನೂ ಕೇಳದೆ, ದಾರಿಯುದ್ದಕ್ಕೂ ಸಹಾಯ ಮಾಡಿದ ಹಳ್ಳಿಯ ಜನರ ಮನಸ್ಸು, ಈ ವ್ಯಾವಹಾರಿಕ ಜಗತ್ತಿನಲ್ಲಿ ಅಚ್ಚರಿಯುಂಟು ಮಾಡಿತ್ತು.

ಅಗ್ನಿ ಗುಡ್ಡ - ಹೆಸರೇ ಹೇಳುವಂತೆ ಆಗಾಗ ಜ್ವಾಲಾಮುಖಿ ಗಳನ್ನು ಉಗುಳುತ್ತಾ, ಹೊಗೆಯಾಡುತ್ತ ಮೆರೆಯುತ್ತದೆ. ‘ಪರಮಾತ್ಮ’ ಸಿನಿಮಾದಲ್ಲಿ ಮಿಂಚಿ ಮರೆಯಾದ, ಟಿಪ್ಪು ಸುಲ್ತಾನನ ಮಂಜೀರಾಬಾದ್ ಕೋಟೆಗೂ ಇಲ್ಲಿಂದಲೇ ರಹದಾರಿಯಿದೆ. ಸುಮಾರು ಎರಡು ಮೈಲಿ ಚಾರಣ ಮಾಡಿದರೆ ಸಾಕು. ಹೊಸತೊಂದು ಲೋಕ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

ಚಾರಣದ ಆರಂಭ

ಅಗಣಿಯಲ್ಲಿ ಮುಂದೆ ಸಾಗಿದರೆ, ಒಂದು ದಾರಿ ಬದಿಯಲ್ಲಿ ಒಂದಷ್ಟು ಮನೆಗಳು ಕಾಣುತ್ತವೆ. ಊರಿನ ಜನ ಹೇಳಿದ ಪ್ರಕಾರ ಯಾವ ಮನೆಯ ಮುಂದೆ ಜಲ್ಲಿ ಕಲ್ಲಿನ ರಾಶಿಯಿದೆಯೋ, ಅದೇ ಮನೆಯ ಪಕ್ಕದಲ್ಲಿರುವ ಹಾದಿ ಗುಡ್ಡಕ್ಕೆ ಸೇರುತ್ತದೆ. ಗೂಗಲ್ ಮ್ಯಾಪಿಗೂ ಜನರು ತೋರಿಸಿದ ಹಾದಿಗೂ ಸಂಬಂಧವೇ ಇರಲಿಲ್ಲ. ಆದರೆ ಜಲ್ಲಿಕಲ್ಲಿನ ರಾಶಿಯ ಎದುರಿನ ಮನೆಯಲ್ಲಿ, ಕುಡಿಯಲು ನೀರು ಮತ್ತು ಚಾರಣದ ಹಾದಿಯ ವಿವರ ಸಿಗುವುದಂತೂ ಖಚಿತ..

ಚಾರಣದ ಹಾದಿ ಹಿಡಿಯುವಷ್ಟರಲ್ಲಿ ಮಳೆ ನಿಂತಿತ್ತು. ಎತ್ತರೆತ್ತರವಾಗಿ ಬೆಳೆದುಕೊಂಡ ಮರಗಳ ನಡುವಿನಿಂದ ಸೂರ್ಯನ ಕಿರಣವೊಂದು ಇಣುಕಿತ್ತು. ಮೊಣಕಾಲಿನವರೆಗೂ ಸುಣ್ಣ ಬಳಿದುಕೊಂಡು, ಸಣ್ಣ ಹಾದಿಯಲ್ಲಿ ಚಾರಣ ಆರಂಭಿಸಿದೆವು. ಚಪ್ಪರದಂತೆ ಹಾಸಿದ ಕಾಡಿನ ಕೆಳಗೆ ಕೆಸರಾದ ಕೆಮ್ಮಣ್ಣಿನ ಹಾದಿಯದು. ನೆರಳಿನ ಹಾಸು ದಾಟುತ್ತಿದ್ದಂತೆಯೇ ಬಿಸಿಲಿನ ಬಿರುಸು ಕಾಡಿತು. ಕಡಿದಾದ ಈ ಹಾದಿಯಲ್ಲಿ ಅರ್ಧ ಮೈಲು ನಡೆದರೆ ಹೊಸದೊಂದು ಲೋಕ ತೆರೆದುಕೊಳ್ಳುತ್ತದೆ.

ಕಾಡಿನುದ್ದಕ್ಕೂ ಹಕ್ಕಿಗಳ ಇಂಚರ ಕೇಳಿಸುವುದಷ್ಟೇ ಅಲ್ಲದೆ, ನವಿಲುಗಳ ನರ್ತನವೂ ಕಾಣ ಸಿಗಬಹುದು. ಕಡಿದಾದ ಹಾದಿಯನ್ನು ದಾಟಿ ಗುಡ್ಡದ ಸಾಲಿಗೆ ಬಂದರೆ, ಹಸಿರು ಪರ್ವತವನ್ನು ಸೀಳುವಂತೆ ಕಾಣುವ ಹಾದಿಯೊಂದು ಸಿಗುತ್ತದೆ. ಅದೇ ಅಗ್ನಿ ಗುಡ್ಡದ ಮೇಲೆ ಕೊಂಡೊಯ್ಯುವ ರಸ್ತೆ. ತುಂಬಾ ಮುಂಜಾನೆ ಹೋಗಿದ್ದರಿಂದ ಬೇರೆ ಯಾವ ವ್ಯಕ್ತಿಗಳು ಸುತ್ತಮುತ್ತ ಕಾಣಲಿಲ್ಲ. ತೀರಾ ಕಡಿದಾದ ಗುಡ್ಡವಲ್ಲದಿದ್ದರಿಂದ, ಹೆಚ್ಚೇನೂ ದಣಿವಾಗಲಿಲ್ಲ.

ಅಗ್ನಿಪರ್ವತದ ಅಂಚಿನಲ್ಲಿ

ಒಂದೆಡೆ ಪ್ರಪಾತದಂತಿರುವ ತಗ್ಗಿನಲ್ಲಿ ಹಬ್ಬಿ ಹರಡಿರುವ ಕಾಡು. ಮತ್ತೊಂದೆಡೆ ಎತ್ತರೆತ್ತರಕೆ ಚಾಚಿ ನಿಂತ ಗುಡ್ಡಗಳ ಸಾಲು. ಸಾಲುಸಾಲಾಗಿ ನಿಂತ ಗಿರಿ ಶೃಂಗಗಳು ಕಪ್ಪುಗಟ್ಟಿರುವ ಮೋಡಕ್ಕೆ ಮುತ್ತಿಡುವಂತೆ ಕಾಣುತ್ತಿತ್ತು. ಮಳೆ ಬಿದ್ದ ನಂತರ ಒಂದು ಕ್ಷಣಕ್ಕೆ ಮಂಜು ಮುಸುಕಿ ಚಳಿಯನ್ನು ತಂದಿಟ್ಟರೆ, ಮತ್ತೊಂದು ಕ್ಷಣಕ್ಕೆ ಮಂಜು ಸರಿದು ಹೊಸ ಲೋಕವೊಂದನ್ನು ತೆರೆದಿಡುತ್ತಿತ್ತು.

ಸುತ್ತಲೂ ಗುಡ್ಡಗಳ ಸಾಲೇ ಹರಡಿರುವುದರಿಂದ, ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಯಾವ ಗುಡ್ಡವನ್ನಾದರೂ ಚಾರಣ ಮಾಡಬಹುದು. ಎತ್ತರೆತ್ತರಕೆ ಸಾಗುತ್ತಿದ್ದರೆ, ನೋಟ ಮತ್ತಷ್ಟು ವಿಹಂಗಮವಾಗುತ್ತ ಸಾಗುತ್ತದೆ. ಒಂದು ಗುಡ್ಡದಲ್ಲಿ ಕೂಗಿದರೆ, ಮತ್ತೊಂದು ಗುಡ್ಡಕ್ಕೆ ಪ್ರತಿಧಾವಣಿಸುತ್ತದೆ. ಇಷ್ಟೆಲ್ಲ ಸೌಂದರ್ಯ ಸವಿದು ಕೆಳಗಿಳಿಯುವ ಹೊತ್ತಿಗೆ ಬಿಸಿಲು ಬಂದಿತ್ತು. ದಾರಿಯಲ್ಲಿ ಕಾಣಸಿಕ್ಕ ಪ್ರವಾಸಿಗರೆಲ್ಲರೂ, ಸುಣ್ಣ ಬಳಿದ ನಮ್ಮ ಕಾಲುಗಳನ್ನು ನೋಡಿ ನಗುತ್ತಿದ್ದರು. ಮಳೆಯ ಅಬ್ಬರಕೆ, ಕಡಿದಾದ ಹಾದಿಗಳಿಗೆ ತುಸು ಹೆಚ್ಚೇ ತಯಾರಾಗಿ ಬಂದ ನಾವು, ಅವರ ನಗುವ ಅಲೆಗಳೊಡನೆ ಸೇರಿ ಹೋದೆವು.

ಹೋಗುವುದು ಹೇಗೆ?

ಸಕಲೇಶಪುರದಿಂದ 40 ಕಿ.ಮೀ ದೂರದಲ್ಲಿದೆ ಅಗ್ನಿಗುಡ್ಡ. ಅಗಣಿ ಎಂಬಲ್ಲಿಂದ ಚಾರಣ ಆರಂಭವಾಗುತ್ತದೆ. ಸಕಲೇಶಪುರ-ಮೂಡಿಗೆರೆ ದಾರಿಯಲ್ಲಿ ಹಾನಬಾಳ್ ನಿಂದ 10 ಕಿ.ಮೀ ದೂರದಲ್ಲಿದೆ ಅಗಣಿ. ಅಗ್ನಿಗುಡ್ಡಕ್ಕೆ ಮೂಡಿಗೆರೆಯಿಂದಲೂ ದಾರಿಯಿದೆ. ಬಸ್ಸಿನ ವ್ಯವಸ್ಥೆಯಿದೆ. ಆದರೆ ಸಾಕಷ್ಟಿಲ್ಲ. ಹಾನಬಾಳ್ ನಿಂದ ಅಗಣಿಗೆ ಆಟೊಗಳು ಸಿಗುತ್ತವೆ. ಕಡಿದಾದ ಹಾದಿ. ಸ್ವಂತ/ಬಾಡಿಗೆ ವಾಹನದಲ್ಲಿ ಬರುವುದು ಉತ್ತಮ.

ಊಟ-ವಸತಿ-ವ್ಯವಸ್ಥೆ

ಅಕ್ಟೋಬರ್-ಜನವರಿ ಚಾರಣಕ್ಕೆ ಉತ್ತಮ ಸಮಯ. ಸಾಹಸದ ಹುಚ್ಚಿದ್ದವರು ಮಳೆಗಾಲದ ಪಯಣವನ್ನು ಆಯ್ದುಕೊಳ್ಳಬಹುದು.
ಸುತ್ತ ಮುತ್ತ ಎಲ್ಲೂ ಹೋಟೆಲ್ ಗಳಿಲ್ಲ. ಉಪಹಾರಕ್ಕೆ ಬುತ್ತಿಕಟ್ಟಿಕೊಂಡು ಹೋಗುವುದೇ ಉತ್ತಮ.

ಸಕಲೇಶಪುರದ ಸುತ್ತ ವಸತಿ ಸಾಕಷ್ಟು ಹೋಟೆಲ್ / ಹೋಮ್ ಸ್ಟೇಗಳಿವೆ. ಆದರೆ, ತುಸು ದುಬಾರಿ. ಆಸಕ್ತರು ಟೆಂಟ್ ವಾಸ ಮಾಡಲು ಉತ್ತಮ ತಾಣ. ಟೆಂಟ್ ನಲ್ಲಿ ಉಳಿದು, ಗುಡ್ಡಗಾಡಿನಲ್ಲಿ ಇರುಳು ಕಳೆಯುವ ಸಾಹಸಕ್ಕೆ ಇದು ಪ್ರಸಕ್ತವಾದ ಸ್ಥಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.