ADVERTISEMENT

ಅವಕಾಶ ಸಿಕ್ಕರೆ ಮೂರು ವಿಶ್ವಕಪ್‌ಗಳಲ್ಲಿ ಕೀಪಿಂಗ್‌ ಗ್ಲೌಸ್‌ ತೊಡುವೆ: ರಾಹುಲ್

ಕನ್ನಡಿಗ, ಭಾರತ ತಂಡದ ಸೀಮಿತ ಓವರ್‌ಗಳ ತಂಡದ ಉಪನಾಯಕ ಕೆ.ಎಲ್‌.ರಾಹುಲ್ ಆಶಯ

ಪಿಟಿಐ
Published 25 ನವೆಂಬರ್ 2020, 14:25 IST
Last Updated 25 ನವೆಂಬರ್ 2020, 14:25 IST
ಕೆ.ಎಲ್‌.ರಾಹುಲ್‌–ಪಿಟಿಐ ಸಂಗ್ರಹ ಚಿತ್ರ
ಕೆ.ಎಲ್‌.ರಾಹುಲ್‌–ಪಿಟಿಐ ಸಂಗ್ರಹ ಚಿತ್ರ   

ಸಿಡ್ನಿ : ಅವಕಾಶ ದೊರೆತರೆ ಮುಂದಿನ ಮೂರು ವಿಶ್ವಕಪ್‌ ಟೂರ್ನಿಯಲ್ಲಿ ಕೀಪಿಂಗ್‌ ಹೊಣೆ ಹೊರುತ್ತೇನೆ ಎಂದುಸೀಮಿತ ಓವರ್‌ಗಳ ಮಾದರಿಯಲ್ಲಿ ಭಾರತ ಕ್ರಿಕೆಟ್‌ ತಂಡದ ಉಪನಾಯಕ ಆಗಿರುವ, ಕನ್ನಡಿಗ ಕೆ.ಎಲ್‌. ರಾಹುಲ್‌ ಹೇಳಿದ್ದಾರೆ.

ರಾಹುಲ್‌ ಅವರು ಸದ್ಯ ಸೀಮಿತ ಓವರ್‌ಗಳ ಮಾದರಿಯ ವಿಕೆಟ್‌ ಕೀಪಿಂಗ್‌ನಲ್ಲಿ ರಿಷಭ್ ಪಂತ್‌ ಹಾಗೂ ಸಂಜು ಸ್ಯಾಮ್ಸನ್‌ ಅವರನ್ನು ಹಿಂದಿಕ್ಕಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಎರಡು ಟ್ವೆಂಟಿ–20 ವಿಶ್ವಕಪ್‌ ಟೂರ್ನಿಗಳು ಹಾಗೂ ಏಕದಿನ ವಿಶ್ವಕಪ್‌ ನಡೆಯಲಿವೆ.

28 ವರ್ಷದ ಈ ರಾಹುಲ್‌ ಕೀಪಿಂಗ್‌ ಗ್ಲೌಸ್‌ ತೊಟ್ಟರೆ ತಂಡಕ್ಕೆ ಹೆಚ್ಚುವರಿ ಬ್ಯಾಟ್ಸ್‌ಮನ್‌ ಅಥವಾ ಬೌಲರ್‌ಅನ್ನು ಹೊಂದುವ ಅವಕಾಶ ಇರಲಿದೆ.

ADVERTISEMENT

‘ತಂಡದ ಸಂಯೋಜನೆಗೆ ಒಂದಷ್ಟು ಸಹಾಯವಾಗುತ್ತದೆ ಎನ್ನುವುದಾದರೆ ನಾನು ಮುಂದಿನ ಮೂರು ವಿಶ್ವಕಪ್‌ ಟೂರ್ನಿಗಳಲ್ಲಿ ನಾನು ಕೀಪಿಂಗ್ ಜವಾಬ್ದಾರಿ ನಿಭಾಯಿಸುವುದನ್ನು ಇಷ್ಟಪಡುತ್ತೇನೆ‘ಎಂದು ರಾಹುಲ್‌ ಹೇಳಿದ್ದಾರೆ.

’ಆದರೆ ಈ ಕುರಿತು ತಂಡದ ಆಡಳಿತ ಮಂಡಳಿ ನನಗೇನೂ ಹೇಳಿಲ್ಲ. ಒಂದು ತಂಡವಾಗಿ ನಾವು ಆ ರೀತಿ ವಿಚಾರ ಮಾಡುತ್ತಿಲ್ಲ. ವಿಶ್ವಕಪ್ ಟೂರ್ನಿಗಳು ಮುಖ್ಯವಾಗುತ್ತದೆ. ಈ ಟೂರ್ನಿಗಳಿಗಾಗಿ ತಂಡಗಳು ಬಹಳಷ್ಟು ಸಿದ್ಧತೆಯನ್ನು ನಡೆಸುತ್ತವೆ. ಬ್ಯಾಟಿಂಗ್‌ ಮತ್ತು ಕೀಪಿಂಗ್‌ ಎರಡರಲ್ಲೂ ನಾನು ಸ್ಥಿರ ಪ್ರದರ್ಶನ ತೋರಿದರೆ ಹೆಚ್ಚುವರಿ ಬ್ಯಾಟ್ಸ್‌ಮನ್ ಅಥವಾ ಬೌಲರ್‌ಅನ್ನು ಹೊಂದುವ ಅವಕಾಶ ತಂಡಕ್ಕೆ ಇರುತ್ತದೆ‘ ಎಂದು ರಾಹುಲ್‌ ನುಡಿದರು.

ಏಕದಿನ ಮಾದರಿಯಲ್ಲಿ ಐದನೇ ಕ್ರಮಾಂಕದಲ್ಲಿ ಹಾಗೂ ಟಿ–20 ಪಂದ್ಯಗಳಲ್ಲಿ ಆರಂಭಿಕನಾಗಿ ರಾಹುಲ್‌ ಕಣಕ್ಕಿಳಿಯುತ್ತಾರೆ.

‘ನಾವು ಕೊನೆಯ ಬಾರಿ ಆಡಿದ್ದ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ್ದೆ. ಈ ಕ್ರಮಾಂಕ ನನಗೆ ಬಹಳಷ್ಟು ತೃಪ್ತಿ ನೀಡಿದೆ. ತಂಡ ಹೇಳುವ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಿದ್ಧ‘ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.