ADVERTISEMENT

ಅಮೆರಿಕ ಓಪನ್ ಟೆನಿಸ್ ಟೂರ್ನಿ: ಮೆಡ್ವೆಡೆವ್, ಒಸಾಕ ಶುಭಾರಂಭ

ಸ್ವಿಟೋಲಿನಾ, ಸಿಟ್ಸಿಪಾಸ್‌ ಜಯಭೇರಿ

ರಾಯಿಟರ್ಸ್
Published 31 ಆಗಸ್ಟ್ 2021, 14:23 IST
Last Updated 31 ಆಗಸ್ಟ್ 2021, 14:23 IST
ಡ್ಯಾನಿಯಲ್ ಮೆಡ್ವೆಡೆವ್‌ ಆಟದ ವೈಖರಿ– ಎಎಫ್‌ಪಿ ಚಿತ್ರ
ಡ್ಯಾನಿಯಲ್ ಮೆಡ್ವೆಡೆವ್‌ ಆಟದ ವೈಖರಿ– ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಡ್ಯಾನಿಯಲ್ ಮೆಡ್ವೆಡೆವ್‌ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಮೆಡ್ವೆಡೆವ್‌ 6-4 6-3 6-1ರಿಂದ ರಷ್ಯಾದ ರಿಚರ್ಡ್‌ ಗ್ಯಾಸ್ಕೆಟ್‌ ಅವರನ್ನು ಮಣಿಸಿದರು. 25 ವರ್ಷದ ರಷ್ಯಾ ಆಟಗಾರನಿಗೆ ವೃತ್ತಿಜೀವನದ 200ನೇ ಗೆಲುವಾಗಿತ್ತು.

2019ರ ಅಮೆರಿಕ ಓಪನ್ ಫೈನಲಿಸ್ಟ್ ಮೆಡ್ವೆಡೆವ್ ಅವರು ಬೇಸ್‌ಲೈನ್ ಹೊಡೆತಗಳಿಂದ ಎದುರಾಳಿಯನ್ನು ಕಂಗೆಡಿಸಿದರು. ಈ ವರ್ಷದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಅವರು ಪ್ರಶಸ್ತಿ ಸುತ್ತೂ ತಲುಪಿದ್ದರು.

ADVERTISEMENT

ಎರಡನೇ ಸುತ್ತಿನ ಪಂದ್ಯದಲ್ಲಿ ಮೆಡ್ವೆಡೆವ್ ಅವರು ಜರ್ಮನಿಯ ಡಾಮಿನಿಕ್ ಕೋಫರ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಸೋಮವಾರ ರಾತ್ರಿ ನಡೆದ ಪುರುಷರ ವಿಭಾಗದ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ರಷ್ಯಾದ ಆ್ಯಂಡ್ರೆ ರುಬ್ಲೆವ್‌ 6-3, 7-6 (7/3), 6-3ರಿಂದ ಕ್ರೊವೇಷ್ಯಾದ ಇವೊ ಕಾರ್ಲೊವಿಚ್ ಎದುರು, ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್‌ 2-6, 7-6 (9/7), 3-6, 6-3, 6-4ರಿಂದ ಬ್ರಿಟನ್‌ ಆ್ಯಂಡಿ ಮರ್ರೆ ಎದುರು, ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್‌ 4-6, 4-6, 7-6 (9/7), 6-2, 6-2ರಿಂದ ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ತ್‌ ಎದುರು ಜಯ ಸಾಧಿಸಿ ಮುನ್ನಡೆದರು.

ಮಹಿಳೆಯರ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿಜಪಾನ್‌ನ ನವೊಮಿ ಒಸಾಕ 6-4, 6-1ರಿಂದ ಜೆಕ್‌ ಗಣರಾಜ್ಯದ ಮರಿಯಾ ಬೌಜ್‌ಕೊವಾ ಎದುರು, ಉಕ್ರೇನ್‌ನ ಎಲಿನಾ ಸ್ವಿಟೋಲಿನಾ 6-2, 6-3ರಿಂದ ಕೆನಡಾದ ರೆಬೆಕ್ಕಾ ಮರಿನೊ ಎದುರು, ಜರ್ಮನಿಯ ಎಂಜೆಲಿಕ್ ಕೆರ್ಬರ್‌ 3-6, 6-4, 7-6 (7/3)ರಿಂದ ಉಕ್ರೇನ್‌ನ ಡಯಾನಾ ಯಸ್ತಮಸ್ಕಾ ವಿರುದ್ಧ, ಜೆಕ್‌ ಗಣರಾಜ್ಯದ ಬಾರ್ಬರಾ ಕ್ರೆಸಿಕೊವಾ 6-0, 6-4ರಿಂದ ಅಮೆರಿಕದ ಆಸ್ತ್ರಾ ಶರ್ಮಾ ವಿರುದ್ಧ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.