ADVERTISEMENT

ಪ್ಯಾರಾ ಕ್ಲೈಂಬಿಂಗ್ ವಿಶ್ವ ಚಾಂಪಿಯನ್‌ಶಿಪ್‌: ಮಾಸ್ಕೋದಲ್ಲಿ ಮಿಂಚಿದ ಸುನೀತಾ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 7:53 IST
Last Updated 18 ಸೆಪ್ಟೆಂಬರ್ 2021, 7:53 IST
ಸುನೀತಾ ದುಂಡಪ್ಪನವರ ಅವರೊಂದಿಗೆ ಕ್ರೀಡಾ ಸಂಯೋಜಕಿ ಶಿಖಾ ಶೆಟ್ಟಿ ಇದ್ದಾರೆ
ಸುನೀತಾ ದುಂಡಪ್ಪನವರ ಅವರೊಂದಿಗೆ ಕ್ರೀಡಾ ಸಂಯೋಜಕಿ ಶಿಖಾ ಶೆಟ್ಟಿ ಇದ್ದಾರೆ   

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ತೋಲಗಿ ಗ್ರಾಮದ ಸುನೀತಾ ಎನ್. ದುಂಡಪ್ಪನವರ ಮಾಸ್ಕೋದಲ್ಲಿ ನಡೆದ ಐಎಫ್‌ಎಸ್‌ಸಿ (ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಸ್ಪೋರ್ಟ್ಸ್‌ ಕ್ಲೈಂಬಿಂಗ್) ಪ್ಯಾರಾ ಕ್ಲೈಂಬಿಂಗ್‌ ವಿಶ್ವ ಚಾಂಪಿಯನ್‌ಶಿಪ್‌–2021ರಲ್ಲಿ 3ನೇ ಸ್ಥಾನ ಗಳಿಸಿ ಕಂಚಿನ ಪದಕ ಪಡೆದು ಸಾಧನೆ ತೋರಿದ್ದಾರೆ.

ಭಾರತ ದೇಶವು ದೃಷ್ಟಿದೋಷವುಳ್ಳವರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿತ್ತು. 24 ವರ್ಷದ ಸುನೀತಾ ಅವರು ‘ಬಿ3’ (ಅರೆ ದೃಷ್ಟಿದೋಷ) ವಿಭಾಗದಲ್ಲಿ ಸ್ಪರ್ಧಿಸಿ ಪದಕಕ್ಕೆ ಕೊರಳೊಡ್ಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಅವರು ಬೆಂಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿದ್ದಾರೆ. ಅಲ್ಲಿ ಐದು ವರ್ಷಗಳಿಂದ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ. 2014ರಲ್ಲಿ ಬೆಳಗಾವಿಯ ಸಮರ್ಥನಂ ಸಂಸ್ಥೆಗೆ ವೃತ್ತಿಪರ ತರಬೇತಿಗೆಂದು ಬಂದಿದ್ದರು. ನಾಲ್ಕು ತಿಂಗಳವರೆಗೆ ಕಂಪ್ಯೂಟರ್ ತರಬೇತಿ ಪಡೆದಿದ್ದರು. ಅವರಿಗಿದ್ದ ವಿಶೇಷ ಪ್ರತಿಭೆ ಗಮನಿಸಿದ ಸಂಸ್ಥೆಯ ಮುಖ್ಯಸ್ಥ ಅರುಣ್‌ಕುಮಾರ್ ಎಂ.ಜಿ. ಅವರು, ಸುನೀತಾ ಅವರನ್ನು ಹೆಚ್ಚಿನ ತರಬೇತಿ ಹಾಗೂ ಅವಕಾಶಗಳಿಗಾಗಿ ಬೆಂಗಳೂರಿನಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಗೆ ಕಳುಹಿಸಿದ್ದರು.

ADVERTISEMENT

‘ತರಬೇತುದಾರರ ಮಾರ್ಗದರ್ಶನ ಮತ್ತು ನಿರಂತರ ಪ್ರಯತ್ನದ ಫಲವಾಗಿ ಅವರು ಈ ಸಾಧನೆ ತೋರುವುದು ಸಾಧ್ಯವಾಗಿದೆ’ ಎಂದು ಅರುಣ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವರು ದೃಷ್ಟಿದೋಷವುಳ್ಳ ಮಹಿಳಾ ಕ್ರೀಡಾಕೂಟಡದಲ್ಲಿ ರಾಷ್ಟ್ರಮಟ್ಟದ ಆಟಗಾರ್ತಿಯೂ ಹೌದು. ಕಳೆದ ಎರಡು ವರ್ಷಗಳಿಂದ ಆಡುತ್ತಿದ್ದಾರೆ. ಒಮ್ಮೆ ರಾಜ್ಯ ತಂಡದ ಉಪ ನಾಯಕಿಯಾಗಿದ್ದರು. ಅಥ್ಲೆಟಿಕ್ಸ್‌ ಕ್ರೀಡಾಪಟುವೂ ಹೌದು. ಸಮರ್ಥನಂ ಸಂಸ್ಥೆಯಿಂದ 2019ರಲ್ಲಿ ಮೈಸೂರಿನಿಂದ ಬೆಂಗಳೂರಿನವರೆಗೆ ಆಯೋಜಿಸಿದ್ದ ಮ್ಯಾರಾಥಾನ್‌ನಲ್ಲಿ ಭಾಗವಹಿಸಿ ಗಮನಸೆಳೆದಿದ್ದರು’ ಎಂದು ಮಾಹಿತಿ ನೀಡಿದರು.

‘ಮಗಳು ಕಂಚಿನ ಪದಕ ಗಳಿಸಿದ್ದಕ್ಕೆ ಖುಷಿಯಾಗಿದೆ. ಸಮರ್ಥನಂ ಅಂಗವಿಕಲರ ಸಂಸ್ಥೆಯವರೇ ಅವಳನ್ನು ನೋಡಿಕೊಳ್ಳುತ್ತಿದ್ದಾರೆ. ಅವರೆ ತರಬೇತಿಯನ್ನೂ ನೀಡು‌ತ್ತಿದ್ದಾರೆ. ಬೇರೆ ದೇಶಕ್ಕೆ ಹೋಗಬೇಕು ಎಂದು ಕರೆ ಮಾಡಿ ತಿಳಿಸಿದ್ದಳು. ನಿನಗೆ ಹೇಗೆ ತಿಳಿಯುತ್ತದಯೋ ಹಾಗೆಯೇ ಮಾಡು ಎಂದು ತಿಳಿಸಿದ್ದೆ’ ಎಂದು ಸುನೀತಾ ತಂದೆ ನೀಲಕಂಠ ಬಸಪ್ಪ ದುಂಡಪ್ಪನವರ ಪ್ರತಿಕ್ರಿಯಿಸಿದರು.

‘ತಂದೆ ನೀಲಕಂಠ– ತಾಯಿ ಸಾವಿತ್ರಿ ಊರಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ನಾನು ಪ್ರಾಥಮಿಕ ಶಿಕ್ಷಣವನ್ನು ಊರಲ್ಲೇ ಮುಗಿಸಿದೆ. ದೂರ ಇದ್ದಿದ್ದರಿಂದ ಉನ್ನತ ಶಿಕ್ಷಣ ಪಡೆಯಲಾಗಿರಲಿಲ್ಲ. ಕಂಪ್ಯೂಟರ್‌ ತರಬೇತಿಗೆಂದು 2014ರಲ್ಲಿ ಬೆಳಗಾವಿಯ ಸಮರ್ಥನಂ ಅಂಗವಿಕಲರ ಸಂಸ್ಥೆಗೆ ಸೇರಿದ್ದೆ. ಅಲ್ಲಿಂದ ನನ್ನನ್ನು ಬೆಂಗಳೂರಿನ ಸಂಸ್ಥೆಗೆ ಕಳುಹಿಸಿದರು. ಅಲ್ಲಿ ಶಿಕ್ಷಣ ಮುಂದುವರಿಸುತ್ತಲೇ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು’ ಎಂದು ಸುನೀತಾ ತಿಳಿಸಿದರು.

‘ಅಲ್ಟ್ರಾ ಮ್ಯಾರಾಥಾನ್‌ನಲ್ಲಿ ವಿಶ್ವ ದಾಖಲೆ ಮಾಡಿದೆ. ರಾಷ್ಟ್ರೀಯ ವಾಲ್ ಕ್ಲೈಂಬಿಂಗ್‌ ಸ್ಪರ್ಧೆಯಲ್ಲಿ 2018ರಲ್ಲಿ ಜಮ್ಮುವಿನಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗಳಿಸಿದ್ದೆ. ಕ್ರೀಡೆಯಲ್ಲಿ ಭಾರತಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಆಸೆ ಇತ್ತು. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಚಿನ್ನದ ಪದಕದ ಗುರಿ ಇದೆ. ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ರಾಷ್ಟ್ರಗೀತೆ ಮೊಳಗುವಂತೆ ಮಾಡಬೇಕು ಎಂಬ ಗುರಿ ಇದೆ. ಇದಕ್ಕಾಗಿ ಅಭ್ಯಾಸ ಮುಂದುವರಿಸುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.