ADVERTISEMENT

ಅಮೆರಿಕ ಓಪನ್ ಟೆನಿಸ್ ಟೂರ್ನಿ: ನಾಲ್ಕರ ಘಟ್ಟಕ್ಕೆ ಲೇಲಾ ಫರ್ನಾಂಡಸ್‌

ಅಮೆರಿಕ ಓಪನ್ ಟೆನಿಸ್ ಟೂರ್ನಿ: ಡ್ಯಾನಿಲ್ ಮೆಡ್ವೆಡೆವ್‌, ಅರಿನಾ ಸಬಲೆಂಕಾ ಜಯಭೇರಿ

ಏಜೆನ್ಸೀಸ್
Published 8 ಸೆಪ್ಟೆಂಬರ್ 2021, 12:12 IST
Last Updated 8 ಸೆಪ್ಟೆಂಬರ್ 2021, 12:12 IST
ಪಂದ್ಯ ಗೆದ್ದ ಲೇಲಾ ಫರ್ನಾಂಡಸ್ ಸಂತಸ– ಎಎಫ್‌ಪಿ ಚಿತ್ರ
ಪಂದ್ಯ ಗೆದ್ದ ಲೇಲಾ ಫರ್ನಾಂಡಸ್ ಸಂತಸ– ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಅಪರಿಮಿತ ಉತ್ಸಾಹದ ಗಣಿ, ಯುವ ಪ್ರತಿಭೆ ಲೇಲಾ ಫರ್ನಾಂಡಸ್‌ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ. ಖ್ಯಾತನಾಮ ಆಟಗಾರ್ತಿಯರಿಗೆ ಸೋಲಿನ ರುಚಿ ತೋರಿಸುತ್ತ ಸಾಗಿರುವ ಕೆನಡಾದ 19ರ ಹರೆಯದ ಪೋರಿ, ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಅರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಎಂಟರಘಟ್ಟದ ಹಣಾಹಣಿಯಲ್ಲಿ ಲೇಲಾ ಅವರು ಐದನೇ ಕ್ರಮಾಂಕದ ಎಲಿನಾ ಸ್ವಿಟೋಲಿನಾ ಎದುರು 6-3, 3-6, 7-6 (5)ರಿಂದ ಗೆದ್ದರು. ಇದರೊಂದಿಗೆ ರಷ್ಯಾದ ಮರಿಯಾ ಶರಪೋವಾ (2005 ರಲ್ಲಿ) ಬಳಿಕ ಟೂರ್ನಿಯ ನಾಲ್ಕರ ಘಟ್ಟ ತಲುಪಿದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡರು.

ಟೂರ್ನಿಯ ಈ ಹಿಂದಿನ ಪಂದ್ಯಗಳಲ್ಲಿ ಅಮೆರಿಕ ಓಪನ್ ಮಾಜಿ ಚಾಂಪಿಯನ್‌ಗಳಾದ ಜಪಾನ್‌ನ ನವೊಮಿ ಒಸಾಕ ಮತ್ತು ಆ್ಯಂಜೆಲಿಕ್ ಕರ್ಬರ್ ಅವರಿಗೆ ಎಡಗೈ ಆಟಗಾರ್ತಿ ಲೇಲಾ ಆಘಾತ ನೀಡಿದ್ದರು.

ADVERTISEMENT

ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದ ಲೇಲಾ ಅವರಿಗೆ ಎರಡನೇ ಸೆಟ್‌ನಲ್ಲಿ ಉಕ್ರೇನ್‌ನ ಅನುಭವಿ ಆಟಗಾರ್ತಿಯ ಎದುರು ಮಣಿಯಬೇಕಾಯಿತು. ಆದರೆ ಮೂರನೇ ಸೆಟ್‌ನಲ್ಲಿ 5–2ರ ಆರಂಭದ ಮುನ್ನಡೆ ಗಳಿಸಿದ ಲೇಲಾ ಸುಲಭವಾಗಿ ಗೆಲ್ಲುತ್ತೇನೆ ಎಂದುಕೊಂಡರು. ಆದರೆ ಸೆಟ್‌ಅನ್ನು ಸ್ವಿಟೋಲಿನಾ ಟೈಬ್ರೇಕ್‌ವರೆಗೆ ಕೊಂಡೊಯ್ದರು. ಆದರೆ ಛಲಬಿಡದ ಲೇಲಾ ಸೆಟ್ ಹಾಗೂ ಪಂದ್ಯ ಗೆದ್ದು ಬೀಗಿದರು.

ಗುರುವಾರ ನಡೆಯುವ ಸೆಮಿಫೈನಲ್‌ನಲ್ಲಿ ಕೆನಡಾದ 73ನೇ ರ‍್ಯಾಂಕಿನ ಆಟಗಾರ್ತಿಗೆ ಎರಡನೇ ಕ್ರಮಾಂಕದ ಅರಿನಾ ಸಬಲೆಂಕಾ ಸವಾಲು ಎದುರಾಗಿದೆ. ಎಂಟರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಬೆಲಾರೂಸ್‌ನ ಅರಿನಾ 6-1, 6-4ರಿಂದ ಫ್ರೆಂಚ್‌ ಓಪನ್ ಚಾಂಪಿಯನ್‌, ಜೆಕ್‌ ಗಣರಾಜ್ಯದ ಬರ್ಬೊರಾ ಕ್ರೆಚಿಕೊವಾ ಅವರನ್ನು ಪರಾಭವಗೊಳಿಸಿದರು.

ಅಲ್ಕರಾಜ್‌ ಅಭಿಯಾನ ಅಂತ್ಯ: ಸ್ಪೇನ್‌ನ 18ರ ಪ್ರಾಯದ ಕಾರ್ಲೊಸ್ ಅಲ್ಕರಾಜ್ ಅವರ ಅಭಿಯಾನ ಮಂಗಳವಾರ ಅಂತ್ಯಗೊಂಡಿತು.ಅವರು ಕಾಲಿನ ಗಾಯದ ಕಾರಣ ಕ್ವಾರ್ಟರ್‌ಫೈನಲ್‌ ಪಂದ್ಯದ ಮಧ್ಯೆಯೇ ಹಿಂದೆ ಸರಿದರು. ಈ ವೇಳೆ ಅವರ ಎದುರಾಳಿ ಕೆನಡಾದ ಫೆಲಿಕ್ಸ್ ಅಗರ್‌ ಅಲಿಯಾಸಿಮ್‌ 6-3, 3-1ರಿಂದ ಮುನ್ನಡೆಯಲ್ಲಿದ್ದರು. ಹೀಗಾಗಿ ಅಗರ್‌ ಸೆಮಿಫೈನಲ್ ತಲುಪಿದರು.

ಅಮೆರಿಕದ ಆ್ಯಂಡ್ರೆ ಅಗಾಸಿ (1988) ಬಳಿಕ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದರು ಅಲ್ಕರಾಜ್‌.

ಮುಂದಿನ ಹಣಾಹಣಿಯಲ್ಲಿ ಅಗರ್‌ ಅವರು ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ ಎದುರು ಸೆಣಸುವರು. ಎರಡನೇ ರ‍್ಯಾಂಕಿನ ಮೆಡ್ವೆಡೆವ್‌ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ 6-3, 6-0, 4-6, 7-5ರಿಂದ ನೆದರ್ಲೆಂಡ್ಸ್‌ನ ಬೊಟಿಚ್‌ ವ್ಯಾನ್‌ ಡಿ ಜಾಂಡ್‌ಸ್ಕಲ್ಪ್‌ ಅವರನ್ನು ಮಣಿಸಿದರು.

ನಾಲ್ಕರ ಘಟ್ಟದಲ್ಲಿ ಮೆಡ್ವೆಡೆವ್ ವಿಜೇತರಾದರೆ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್ ಎದುರು ಮುಖಾಮುಖಿಯಾಗುವ ಸಾಧ್ಯತೆಯಿದೆ. 2019ರ ಅಮೆರಿಕ ಓಪನ್ ರನ್ನರ್‌ ಅಪ್ ಆಗಿರುವ 25 ವರ್ಷದ ಮೆಡ್ವೆಡೆವ್‌ ಅವರು, ಈ ವರ್ಷದ ಆಸ್ಟ್ರೇಲಿಯಾ ಓಪನ್‌ನಲ್ಲಿ ಸರ್ಬಿಯಾ ಆಟಗಾರನಿಗೆ ಮಣಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.