ADVERTISEMENT

ಚಂದ್ರಯಾನ–2 ಉಡ್ಡಯನ ಇಂದು

ಕಾರ್ಯಾಚರಣೆ ಯಶಸ್ವಿಯಾಗುವ ವಿಶ್ವಾಸದಲ್ಲಿ ಇಸ್ರೊ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 19:30 IST
Last Updated 21 ಜುಲೈ 2019, 19:30 IST
   

ಚೆನ್ನೈ:‘ಚಂದ್ರಯಾನ–2ರ ಉಡ್ಡಯನ ಕಾರ್ಯಾಚರಣೆಯು ಸೋಮವಾರ ಯಶಸ್ವಿಯಾಗಿ ನಡೆಯಲಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮುಖ್ಯಸ್ಥ ಕೆ.ಶಿವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೂರ್ವನಿಗದಿಯಂತೆ ಜುಲೈ 15ರ ರಾತ್ರಿ 2.51ಕ್ಕೆ ಚಂದ್ರಯಾನ–2ರ ನೌಕೆಗಳನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್‌–2 ರಾಕೆಟ್ ನಭಕ್ಕೆ ಜಿಗಿಯಬೇಕಿತ್ತು. ಆದರೆ ನಿಗದಿತ ಸಮಯಕ್ಕೆ 56 ನಿಮಿಷ 21 ಸೆಕೆಂಡ್‌ ಇರುವಾಗ ತಾಂತ್ರಿಕ ಸಮಸ್ಯೆಯ ಕಾರಣ ಕಾರ್ಯಾಚರಣೆಯನ್ನು ರದ್ದು ಮಾಡಲಾಗಿತ್ತು. ಆ ತಾಂತ್ರಿಕ ಸಮಸ್ಯೆಗಳನ್ನು ಈಗ ಸರಿಪಡಿಸಲಾಗಿದೆ ಎಂದು ಇಸ್ರೊ ಹೇಳಿದೆ.

‘ಈ ಬಾರಿ ನಾವು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದೇವೆ. ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿದ್ದೇವೆ. ಒಂದೂವರೆ ದಿನದಷ್ಟು ಸಮಯ ಪರಿಶೀಲನೆ ನಡೆಸಿದ್ದೇವೆ. ಸೋಮವಾರದ ಕಾರ್ಯಾಚರಣೆ ಯಶಸ್ವಿಯಾಗೇ ಆಗುತ್ತದೆ. ಈ ಕಾರ್ಯಾಚರಣೆ ವಿಫಲವಾಗುವ ಸಾಧ್ಯತೆ ಇಲ್ಲವೇ ಇಲ್ಲ’ ಎಂದು ಶಿವನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಚಂದ್ರಯಾನ–1ರಿಂದ ಹಲವು ಹೊಸ ವಿಚಾರಗಳು ಪತ್ತೆಯಾಗಿದ್ದವು. ಚಂದ್ರನಲ್ಲಿ ನೀರಿನ ಕಣಗಳಿರುವುದನ್ನು ಚಂದ್ರಯಾನ–1 ಪತ್ತೆ ಮಾಡಿತ್ತು. ಈ ಬಾರಿಯೂ ಅಂಥಹದ್ದೇ ಹೊಸ ಸಂಗತಿ ಪತ್ತೆಯಾಗಲಿದೆ’ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದರು.

ದಕ್ಷಿಣ ಧ್ರುವ ತಲುಪಲಿರುವ ನೌಕೆ

* ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಕಾರ್ಯಾಚರಣೆ ನಡೆಯಲಿದೆ

* ಸೋಮವಾರ ಮಧ್ಯಾಹ್ನ 2.43ರಲ್ಲಿ ಉಡ್ಡಯನ ನಡೆಯಲಿದೆ

* ಭಾನುವಾರ ಸಂಜೆ 6.43ರಿಂದಲೇ ಉಡ್ಡಯನಕ್ಕೆ ಕ್ಷಣಗಣನೆ ಆರಂಭಿಸಲಾಗಿದೆ

* ಚಂದ್ರಯಾನ–2 ‘ವಿಕ್ರಂ’ ಲ್ಯಾಂಡರ್‌ ನೌಕೆ ಮತ್ತು ‘ಪ್ರಜ್ಞಾನ್’ ರೋವರ್ ನೌಕೆಯನ್ನು ಒಳಗೊಂಡಿದೆ

* ಚಂದ್ರಯಾನ–2 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ

* ಚಂದ್ರನ ದಕ್ಷಿಣ ಧ್ರುವದ ಬಹುತೇಕ ಭಾಗವು ಸದಾ ಕತ್ತಲಲ್ಲೇ ಇರುತ್ತದೆ. ಈವರೆಗೆ ಯಾವುದೇ ದೇಶದ ಸಂಶೋಧನಾ ನೌಕೆ ದಕ್ಷಿಣ ಧ್ರುವವನ್ನು ತಲುಪಿಲ್ಲ. ಆ ಸ್ಥಳವನ್ನು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ

* ಚಂದ್ರನ ದಕ್ಷಿಣ ಧ್ರುವದಲ್ಲಿರುವ ಪಳೆಯುಳಿಕೆಗಳ ಅಧ್ಯಯನ ನಡೆಸಲಾಗುತ್ತದೆ. ನಮ್ಮ ಸೌರವ್ಯೂಹದ ಆರಂಭಿಕ ಹಂತದ ಸ್ಥಿತಿಗತಿಗಳು ಈ ಪಳೆಯುಳಿಕೆಗಳಲ್ಲಿ ದಾಖಲಾಗಿರುವ ಸಾಧ್ಯತೆ ಇದೆ. ಚಂದ್ರಯಾನ–2 ಹೊಸ ವೈಜ್ಞಾನಿಕ ಆವಿಷ್ಕಾರಗಳಿಗೆ ಕಾರಣವಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.