ADVERTISEMENT

ಅಂಗಳದಿ ಹಸಿರಿನ ಅನಾವರಣ

ಸುಪ್ರ ಸ್ಫೂರ್ತಿ
Published 6 ಜನವರಿ 2014, 19:30 IST
Last Updated 6 ಜನವರಿ 2014, 19:30 IST

ಇವರ ಮನೆಯ ಆವರಣದ ಒಳಗೆ ಹೋಗುತ್ತಿದ್ದಂತೆ ಪರಿಮಳ ಚೆಲ್ಲುತ್ತಾ ಸ್ವಾಗತಿಸುತ್ತದೆ ಪಾರಿಜಾತ, ಕೆಂಡಸಂಪಿಗೆ, ದೇವಮಲ್ಲಿಗೆ, ಕೆಂಪುಕಣಗಲೆ, ನಂಜಬಟ್ಟಲು ಇತ್ಯಾದಿ... ಒಂದೆರಡು ಹೆಜ್ಜೆ ಮುಂದಕ್ಕೆ ಸಾಗಿದರೆ ದಾಸವಾಳ, ಮಂಗಳೂರು ಮಲ್ಲಿಗೆ, ಮೂರು ಸುತ್ತಿನ ದುಂಡುಮಲ್ಲಿಗೆ. ಪತ್ರೆ, ಅಂಥೋರಿಯಂ ಮುಂತಾದ ಪುಷ್ಪಗಳ ಘಮಲು...

‘ಎಂಥ ಸೌಂದರ್ಯ ಕಂಡೆ...’ ಎನ್ನುತ್ತ ಅದೇ ಗುಂಗಿನಲ್ಲಿ ಸಾಗಿದೊಡನೆಯೇ ಅಲ್ಲಿ ಕಾಣುವುದು ಹಚ್ಚಹಸಿರಿನ ಹುಲ್ಲು ಹಾಸು, ಅಲಂಕಾರಿಕ ಗಿಡಕ್ಕೆ ಹಬ್ಬಿದ ಬಸಳೆ ಬಳ್ಳಿ, ಹುಲ್ಲು ಹಾಸಿನ ನಡುವಿನ ಅಲಂಕಾರಿಕ ಗಿಡಗಳಿಗೆ ನುಣುಪಾದ ಕಲ್ಲುಗಳಿಂದ ಮಾಡಿರುವ ಅಲಂಕಾರ, ಕೊಳದಲ್ಲಿ ತೇಲುವ ಹಸಿರು ಹೂವುಗಳು...

ಇನ್ನೂ ಏನೇನೋ ಇರಬಹುದೇ ಎನ್ನುತ್ತ ಮನೆಯ ಹಿಂದೆ ಹೋದರೆ ಅಲ್ಲಿ ಒಂದು ಕಡೆ ಕಿಚನ್‌ ಗಾರ್ಡನ್‌, ಇನ್ನು ಮುಕ್ಕಾಲು ಜಾಗದಲ್ಲಿ ಹಸಿರು ಹುಲ್ಲಿನ ಹಾಸು, ಅಡುಗೆ ಮನೆಗೆ ಬೇಕಾದ ಕರಿಬೇವು, ಕೊತ್ತಂಬರಿ, ಮೆಣಸಿನಕಾಯಿ, ಮೆಂತ್ಯ, ದಂಟು, ಹರಿವೆ, ಬ್ರಾಹ್ಮಿ, ಹೊನಗೊನೆ ಸೊಪ್ಪು, ಅರಿಶಿಣ, ಶುಂಠಿ, ಪುದೀನ, ನಿಂಬೆಗಿಡ, ಲೋಳೆಸರ, ನುಗ್ಗೆ, ದೊಡ್ಡಪತ್ರೆ, ಮರುಗ ಮಂಟಪಕ್ಕೆ ಹಬ್ಬಿರುವ ವೀಳ್ಯದೆಲೆ ಬಳ್ಳಿ, ಮುಂಗುರು ಬಳ್ಳಿ, ಸುಗಂಧಿತ ಲಿಂಬೆ ಎಲೆ, ಬಸುಮತಿ ಪರಿಮಳ ನೀಡುವ ಸಸ್ಯ, ಮಸಾಲೆ ಪರಿಮಳ ಬೀರುವ ಗಿಡ, ಹಾಗಲ ಬಳ್ಳಿ. ಆರ್ಯುವೇದದ ಸಸ್ಯ, ಗುಲಾಬಿ, ತುಳಸಿ ...

ಉಸ್ಸಪ್ಪಾ... ಎನ್ನುವಷ್ಟು ಸುಂದರ ತೋಟದ ದೃಶ್ಯ ಕಾಣಸಿಗುವುದು ತುಮಕೂರಿನ ಕುವೆಂಪು ನಗರದಲ್ಲಿ ‘ಪ್ರಣವಂ’ ಮನೆ. ಇದು ಕೇವಲ ಮನೆಯಾಗಿರದೇ ಸುಶೀಲಾ ಸದಾಶಿವಯ್ಯ ಅವರ ಸಸ್ಯ ಕಾಶಿಯಾಗಿದೆ.

ಮೂಲ ಯೋಜನೆ
ಮನೆ ಕಟ್ಟುವಾಗ ಗಿಡಗಳನ್ನು ಬೆಳೆಸುವುದಕ್ಕಾಗಿಯೇ ಹೆಚ್ಚು ಜಾಗ ಮೀಸಲಿಟ್ಟು ಯೋಜನೆ ರೂಪಿಸಿದರ ಫಲವೇ ಇಂದು ಅವರ ಮನೆಯ ಅಂಗಳದಲ್ಲಿ ‘ಏನು ಬೇಕಾದರೂ ಸಿಗುತ್ತದೆ’ ಎನ್ನುವಷ್ಟು ಪ್ರಮಾಣದಲ್ಲಿ ಸಸ್ಯ ಸಾಮ್ರಾಜ್ಯವಿದೆ. ಈ ತೋಟದಿಂದ ಮನೆಯೊಳಗೆ ಸದಾ ತಂಪಿನ ಹವೆ, ತಂಗಾಳಿಯ ಸುಳಿಗಾಳಿ. ಸಹಜವಾಗಿ ಹಕ್ಕಿ ಪಕ್ಷಿಗಳ ಇಂಚರ.

ಹಿತ್ತಲಿನ ವಿಶಾಲ ಜಗಲಿ ಮೇಲೆ ಕುಳಿತು, ಬೆಳಗಿನ ಕಾಫಿ ಹೀರುತ್ತಾ ಪ್ರಾರಂಭವಾದರೆ, ರಾತ್ರಿ ಮಲಗುವವರೆಗೂ ಹಸಿರ ತೋಟದ ಜೊತೆಗಿನ ನಂಟಿನಿಂದ ಜೀವನೋತ್ಸಾಹ ನಿರಂತರ. ಕಾಲ ಕಳೆಯುವುದು ಹೇಗೆಂಬ ಬೇಸರವಿಲ್ಲ! ತರಕಾರಿ ಅಂಗಡಿ ಹುಡುಕಿಕೊಂಡು ಹೋಗುವ ತಾಪತ್ರಯವಿಲ್ಲ. ನೈಸರ್ಗಿಕ, ಸ್ವಾವಲಂಬಿ ಕಾಯಕದಿಂದ ದೇಹ ಮನಸ್ಸುಗಳೆರಡೂ ಸದಾ ಆರೋಗ್ಯ ಉಲ್ಲಾಸ ಭರಿತ.

ಅರಿಶಿಣವನ್ನು ವರ್ಷಪೂರ್ತಿ ಅಡುಗೆಗೆ ಮತ್ತು ಔಷಧಿಯಾಗಿಯೂ ಉಪಯೋಗಿಸುತ್ತಾರೆ. ಅಡುಗೆ ಮನೆಯಲ್ಲಿ ಉಪಯೋಗಿಸಿದ ತ್ಯಾಜ್ಯವನ್ನು ನಗರಸಭೆಯ ಕಸದ ಸಂಗ್ರಹಕ್ಕೆ ಕೊಡದೆ ಗಿಡದ ಬುಡದಲ್ಲೇ ಅವುಗಳನ್ನು ಹಾಕುವುದರಿಂದ ಗಿಡಕ್ಕೆ ಒಳ್ಳೆಯ ಗೊಬ್ಬರವಾಗಿದೆ. ಸಗಣಿ ಹಿಂಡಿಯ ಗೊಬ್ಬರವನ್ನು ಮೇಲೆ ಕೊಡುವುದರಿಂದ ಸೊಪ್ಪು, ತರಕಾರಿಗಳಿಗೆ ಯಾವುದೇ ರಾಸಾಯನಿಕ ಬಳಸದೆ ನೈಸರ್ಗಿಕ ಉತ್ಪನ್ನದಿಂದ ಆರೋಗ್ಯಕರವಾದ ಸೊಪ್ಪು, ತರಕಾರಿ ದೊರೆಯುತ್ತದೆ.

ತಾವರೆ ಕೊಳದಲ್ಲಿ ಓಡಾಡುವ ಮೀನುಗಳು ಕೊಳವನ್ನು ಶುಭ್ರವಾಗಿ ಕನ್ನಡಿಯಂತೆ ಮಾಡಿವೆ. ಸುಶೀಲಾ ಆಸಕ್ತಿಯಿಂದ ನೋಡಿಕೊಳ್ಳುವ ಜೇನುಪೆಟ್ಟಿಗೆಯಿಂದ ವರ್ಷಕ್ಕೆ ಎರಡರಿಂದ ಮೂರು ಸಾರಿ ಜೇನು ಸಂಗ್ರಹವಾಗುತ್ತದೆ. ಅವರ ಮನೆಗೂ ಸಾಕಾಗಿ, ಆಪ್ತರಿಗೂ ಕಳುಹಿಸಿ ಕೊಡುತ್ತಾರೆ. ಕಾಯಕ ನಿರತ ಜೇನು ಹುಳುಗಳ ಓಡಾಟ ನೋಡುವುದೇ ಸೊಬಗು. ಕಾಂಪೌಂಡ್‌ ಆಚೆಗಿನ  ನೇರಳೆ, ಸೀಬೆ ಮರ ಇದರ ಹಿತ್ತಲಿನ ಸೌಂದರ್ಯಕ್ಕೆ ಪೂರಕವಾಗಿ ಹಸಿರು ನಂದನವನ್ನೇ ಸೃಷ್ಟಿಸಿದೆ.

ಸುಶೀಲಾ ಅವರು ತೋಟಗಾರಿಕೆಯ ಜೊತೆಗೆ ಸಾಹಿತಿಯಾಗಿ, ಬರವಣಿಗೆ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಇತರ ಕಲೆಗಾರಿಕೆಯಲ್ಲೂ ಪರಿಣತರು, ಸಮಯದ ಸದುಪಯೋಗದಿಂದ, ಹಸಿರನ್ನು ಪ್ರೀತಿಸಿ ಬೆಳೆಸುವ ಇವರ ಸ್ವಾವಲಂಬಿ ಕಾಯಕ ಬೇರೊಬ್ಬರಿಗೆ ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.