ADVERTISEMENT

ಅಕಾಲ ಹಲಸು

ಗಣಪತಿ ಭಟ್ಟ ಹಾರೋಹಳ್ಳಿ
Published 9 ನವೆಂಬರ್ 2011, 19:30 IST
Last Updated 9 ನವೆಂಬರ್ 2011, 19:30 IST

ಮಾರ್ಚ್‌ನಿಂದ ಜುಲೈ ತಿಂಗಳವರೆಗೆ  ಹಲಸಿನ ಹಣ್ಣಿನ ಸುಗ್ಗಿ. ಈ ಸಮಯದಲ್ಲಿ ಮಾರುಕಟ್ಟೆಗೆ ಹಲಸಿನ ಹಣ್ಣು ಹೆಚ್ಚಾಗಿ ಬರುವುದರಿಂದ ರೈತರಿಗೆ ಹೆಚ್ಚು ಆದಾಯ ಸಿಗುವುದಿಲ್ಲ.

ಆದರೆ ಹಣ್ಣಿನ ಸುಗ್ಗಿ ಮುಗಿದ ಮೇಲೆ ಮಾರುಕಟ್ಟೆಗೆ ಬರುವ ಹಣ್ಣಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು. ಕನಕಪುರ ತಾಲೂಕಿನ ಕರಿಕಲ್‌ದೊಡ್ಡಿ ಗ್ರಾಮದ ಹಮೀದ್ ಅವರ ತೋಟದಲ್ಲಿರುವ ಹಲಸಿನ ಮರದಲ್ಲಿ ಈಗ ಬಲಿತ ಹಲಸಿನ ಕಾಯಿಗಳಿವೆ. ಡಿಸೆಂಬರ್- ಜನವರಿಯಲ್ಲಿ ಹಣ್ಣುಗಳು ಸಿಗುತ್ತವೆ.

ಹಮೀದ್ ಈ ತೋಟವನ್ನು ಖರೀದಿಸಿ ಆರು ವರ್ಷಗಳಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಈ ಮರದಲ್ಲಿ ಹಲಸಿನ ಹಣ್ಣು ಸಿಗುತ್ತಿವೆ. ಅವರ ಪ್ರಕಾರ ಈ ಮರಕ್ಕೆ ಹತ್ತರಿಂದ ಹನ್ನೆರಡು ವರ್ಷಗಳಾಗಿರಬಹುದು.

ದಸರಾ ಸಮಯದಲ್ಲಿ ಹೂ ಬಿಟ್ಟು ಎಳೆ ಕಾಯಿಗಳು ಕಾಣಿಸುತ್ತವೆ. ಸಂಕ್ರಾಂತಿ ಹಬ್ಬದೊಳಗೆ ಹಣ್ಣುಗಳು ಮುಗಿಯುತ್ತವೆ. ಒಂದು ಹಣ್ಣು 15-20 ಕೇಜಿ ತೂಗುತ್ತದೆ. ಒಂದು ಹಣ್ಣಲ್ಲಿ  80-100 ತೊಳೆಗಳಿರುತ್ತವೆ. ತೊಳೆಗಳು ಗಾತ್ರದಲ್ಲಿ ಸ್ವಲ್ಪ ಚಿಕ್ಕವು. ಕಡು ಹಳದಿ ಬಣ್ಣದ ತೊಳೆಗಳು ಜೇನು ತುಪ್ಪದಷ್ಟೇ ಸಿಹಿಯಾಗಿರುತ್ತವೆ ಎನ್ನುತ್ತಾರೆ ಹಮೀದ್.

ಕಳೆದ ವರ್ಷ 45 ಹಣ್ಣುಗಳು ಸಿಕ್ಕಿದ್ದವು. ಮನೆಯವರು  ತಿಂದು ನೆಂಟರಿಷ್ಟರಿಗೆ ಹಂಚಿಯೂ ಉಳಿದ ಹದಿನೈದು ಹಣ್ಣುಗಳನ್ನು ಸಮೀಪದ ಹಾರೋಹಳ್ಳಿ ಸಂತೆಯಲ್ಲಿ ಹಮೀದ್ ಮಾರಿದ್ದರು. ಒಂದು ಹಣ್ಣಿಗೆ 40 ರೂ ಬೆಲೆ ಸಿಕ್ಕಿತು. ಸುಗ್ಗಿಯಲ್ಲಿ ಒಂದು ಹಣ್ಣಿಗೆ ಹತ್ತು ರೂ ಸಿಗುವುದು ಕಷ್ಟ ಎನ್ನುತ್ತಾರೆ ಹಮೀದ್.

ಈ ಹಣ್ಣಿನ ಮರಕ್ಕೆ ಕಸಿ ಕಟ್ಟಿದರೆ  ಅಕಾಲದಲ್ಲಿ ಹಣ್ಣು ಬಿಡುವ ಹಲಸಿನ ತಳಿಯನ್ನು ಅಭಿವೃದ್ಧಿಪಡಿಸಬಹುದು. ಹಮೀದ್ ಅವರ ಮೊಬೈಲ್ ನಂಬರ್- 9731815155.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.