ADVERTISEMENT

ಅಕ್ಕಿ ಬೆಳೆಯಲ್ಲೂ ಲಾಭ ಅಧಿಕ

ಬಿ.ಸಿ.ಅರವಿಂದ
Published 29 ಅಕ್ಟೋಬರ್ 2012, 19:30 IST
Last Updated 29 ಅಕ್ಟೋಬರ್ 2012, 19:30 IST

`ಬತ್ತ ಬೆಳೆದರೆ ಲಾಭವೇ ಇಲ್ಲ~ ಎನ್ನುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಮಲೆನಾಡಿನ ಹಲವು ರೈತರು ಕಾಫಿ, ಬಾಳೆ, ಅಡಿಕೆಗಳತ್ತ ವಾಲಿದ್ದಾರೆ. ಬತ್ತದ ಗದ್ದೆಯನ್ನು ಬೇರೆ ಬೆಳೆಗಳು  ಆಕ್ರಮಿಸಿಕೊಂಡಿವೆ. ಕೆಲವರ ಭೂಮಿ ಹಾಳು ಬಿದ್ದರೆ ಕೆಲವರು ಗುತ್ತಿಗೆಗೆ ಕೊಟ್ಟಿದ್ದಾರೆ. ಸ್ವತಃ ಕೃಷಿಕನಾದರೂ ಪೇಟೆಯಿಂದ ಅಕ್ಕಿ ಕೊಳ್ಳುವಂತಾಗಿದೆ.

ಆದರೆ ವಾಸ್ತವದಲ್ಲಿ, ಬತ್ತದ ಕೃಷಿಯನ್ನು   ವೈಜ್ಞಾನಿಕ ರೀತಿಯಲ್ಲಿ ನಡೆಸಿದರೆ ಖಂಡಿತ ಲಾಭವಿದೆ ಎಂದು ತೋರಿಸಿಕೊಟ್ಟಿದ್ದಾರೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಂಜುಗೂಡನಹಳ್ಳಿ ಗ್ರಾಮದ ರೈತ ಹೆಚ್.ಎಲ್.ನರೇಶ್.
ದನಗಳನ್ನು ಸಾಕಿದ್ದರಿಂದ ಗೊಬ್ಬರ ಕೊಳ್ಳುವ ಖರ್ಚು ಉಳಿತಾಯವಾಗಿದೆ.

ರಾಸಾಯನಿಕ ಗೊಬ್ಬರ ಕೀಟನಾಶಕಗಳನ್ನು ಬಳಸುವುದಿಲ್ಲ. ಪ್ರತಿ ವರ್ಷ ಸೆಣಬಿನ ಬೀಜವಾಗಿ ಹಾಕಿ 2 ತಿಂಗಳು ಬಿಟ್ಟು ಉಳುಮೆ ಮಾಡುವುದರಿಂದ ಭೂಮಿ ಫಲವತ್ತಾಗಿದೆ. ಅಜೋಲವನ್ನು ಗದ್ದೆ ನಾಟಿ ಮಾಡುವಾಗ ಹಾಕುವುದರಿಂದ ಕಳೆ ನಿಯಂತ್ರಣವಾಗಿದೆ. ಸ್ವತಃ ನಾಟಿ ಯಂತ್ರವನ್ನು ಹೊಂದಿರುವುದರಿಂದ ಕಾರ್ಮಿಕರ ಅವಲಂಬನೆ ಕಡಿಮೆಯಾಗಿದೆ. ಇದರಿಂದ ಸಾಕಷ್ಟು ಉಳಿತಾಯವಾಗಿದೆ. ಯಂತ್ರದಿಂದ ನಾಟಿ ಮಾಡುತ್ತಾರೆ. 20-30 ದಿವಸದಲ್ಲಿ ನಾಟಿ ಕೆಲಸ ಮುಗಿಯುತ್ತದೆ.

`ಕಂಬೈನ್ಡ್ ಹಾರ್‌ವೆಸ್ಟ್~ ಯಂತ್ರವನ್ನು ಉಪಯೋಗಿಸುವುದರಿಂದ ಗದ್ದೆ ಕೊಯ್ಯುವುದು ಮತ್ತು ಒಕ್ಕಲಾಟ ಒಂದೇ ಸಾರಿ ಆಗುತ್ತದೆ. ಇದರಿಂದ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ. ಇವರು ತಮ್ಮ ಎಂಟು ಎಕರೆ ಗದ್ದೆಯಲ್ಲಿ ಹೊಳೆಸಾಲು ಚಿಪ್ಪುಗ (ಪುರಿ ಮಾಡುವ) ಬತ್ತವನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷ ಒಂದು ಎಕರೆಗೆ 20 ಕ್ವಿಂಟಲ್ ಬತ್ತದ ಇಳುವರಿ ಬಂದಿದೆ. ಕ್ವಿಂಟಲ್‌ಗೆ 2,300 ರೂಪಾಯಿಗಳಂತೆ ಮಾರಿ ಪ್ರತಿ ಎಕರೆಗೆ ರೂ 46ಸಾವಿರ ರೂಪಾಯಿ ಲಾಭ ಗಳಿಸಿದ್ದಾರೆ. ಅವರು ಖರ್ಚು ಮಾಡಿರುವುದು ಕೇವಲ ರೂ15 ಸಾವಿರ.

ತಮ್ಮ ಎಂಟು ಎಕರೆ ಗದ್ದೆಯ ಜೊತೆಗೆ ಬೇರೆಯವರ ಗದ್ದೆಯನ್ನು ಗುತ್ತಿಗೆಗೆ ಪಡೆದು ಬತ್ತವನ್ನು ಬೆಳೆಯುತ್ತಿದ್ದಾರೆ. ಪ್ರತಿ ವರ್ಷವು ಮೇ 30ಕ್ಕೆ ಅಗೆ ಹಾಕುವುದು, ಅಗೆ ಹಾಕಿ 15 ರಿಂದ 20 ದಿನಗಳೊಳಗೆ ನಾಟಿ ಮಾಡುವುದು ಮತ್ತು ಇಲಿಗಳನ್ನು ನಿಯಂತ್ರಿಸಲು ಅವು ಓಡಾಡುವ ಜಾಗದಲ್ಲಿ ಎರಡು ಬಿದಿರಿನ ಕಂಬಗಳನ್ನು ನಿಲ್ಲಿಸಿ ಅದರ ಮೇಲೆ ಇನ್ನೊಂದು ಬಿದಿರಿನ ತುಂಡನ್ನು ಅಡ್ಡವಾಗಿ ಇಟ್ಟಿದ್ದಾರೆ. ಅದರಲ್ಲಿ ಗೂಬೆಗಳು ಮತ್ತು ಇತರ ಪಕ್ಷಿಗಳು ರಾತ್ರಿ ವೇಳೆಯಲ್ಲಿ ಕುಳಿತುಕೊಂಡು ಇಲಿಗಳನ್ನು ಹಿಡಿದು ತಿನ್ನುತ್ತವೆ. ಇದರಿಂದ ಇಲಿಗಳು ನಿಯಂತ್ರಣವಾಗಿವೆ.

ಹೀಗೆ ವ್ಯವಸ್ಥಿತವಾಗಿ ಬತ್ತದ ಕೃಷಿ  ಕೈಗೊಂಡರೆ ಖಂಡಿತ ಲಾಭವಿದೆ. ಗದ್ದೆಯನ್ನು ತೋಟವಾಗಿ ಪರಿವರ್ತನೆ ಮಾಡಿದರೆ ಮತ್ತೊಂದು ದಿನ ಅಕ್ಕಿಗೆ ಚಿನ್ನದ ಬೆಲೆ ಬಂದರೆ ಆಗ ತೋಟವನ್ನು ಗದ್ದೆಯನ್ನಾಗಿ ಪರಿವರ್ತನೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ನರೇಶ್. ಸಂಪರ್ಕಕ್ಕೆ: 94489 20180
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.