ADVERTISEMENT

ಅಡಿಕೆ ಮರದಿಂದ ಕಣಜ

ಎನ್.ಎಂ.ನಟರಾಜ ನಾಗಸಂದ್ರ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST
ಅಡಿಕೆ ಮರದಿಂದ ಕಣಜ
ಅಡಿಕೆ ಮರದಿಂದ ಕಣಜ   

ಆಧುನಿಕ ಮಾದರಿಯ ಗೋದಾಮುಗಳು, ನವೀನ ಧಾನ್ಯ ಸಂಗ್ರಹಣೆ ವ್ಯವಸ್ಥೆಗಳು ಬಂದಿದ್ದರೂ ಸಹ ದೇವನಹಳ್ಳಿ ತಾಲ್ಲೂಕಿನ ಗುಂಡಮಗೆರೆ, ಸಾಸಲು, ಹೊಸಹಳ್ಳಿ, ಹೊಸಕೋಟೆ ಗ್ರಾಮಗಳಲ್ಲಿ ಇಂದಿಗೂ ಅಡಿಕೆ ದಬ್ಬೆಯಲ್ಲಿ ನಿರ್ಮಿಸಿರುವ ತೊಟ್ಟಿಗಳಿಂದ ಮಾಡಿದ ಕಣಜಗಳೇ ಜನಪ್ರಿಯ. ಏಕಕೆಂದರೆ ಕಡಿಮೆ ವೆಚ್ಚದಲ್ಲಿ ಧಾನ್ಯಗಳು ಕೆಡದಂತೆ ಸಂಗ್ರಹಿಸಿಡಲು ಇದರಲ್ಲಿ ಸಾಧ್ಯ.

`ರಾಗಿ ಬೆಳೆಯುವ ಬಹುತೇಕ ಜಮೀನುಗಳಲ್ಲಿ ಮುಸುಕಿನ ಜೋಳ ಆಕ್ರಮಿಸಿಕೊಂಡಿತ್ತು. ಹೀಗಾಗಿ ಸಹಜವಾಗಿಯೇ ಇದು ಕೊಯ್ಲಿಗೆ (ಕಳೆದ ಡಿಸೆಂಬರ್) ಬರುತ್ತಿದ್ದಂತೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿತ್ತು. ಉತ್ತಮ ಧಾರಣೆ ಸಿಗುವವರೆಗೂ ದಿಂಡಿನ ಸಮೇತ ಜೋಳವನ್ನು ಹಾಳಾಗದಂತೆ ರಕ್ಷಿಸಬೇಕಾದ ಜರೂರಿ ಇತ್ತು.

ಆದ್ದರಿಂದ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಧಾನ್ಯ ಸಂಗ್ರಹಣೆಯ ತೊಟ್ಟಿಗಳನ್ನು ನಿರ್ಮಿಸಿ ಕೊಂಡಿದ್ದೇವೆ~ ಎನ್ನುತ್ತಾರೆ ಸಾಸಲು ಹೋಬಳಿಯ ಗುಂಡಮಗೆರೆ ಗ್ರಾಮದ ನಾರಾಯಣಪ್ಪ.

ನಿರ್ಮಿಸುವ ವಿಧಾನ
ನಾಲ್ಕು ವರ್ಷಗಳ ಹಿಂದೆ ಮನೆ ಮುಂದಿನ ಅಂಗಳದಲ್ಲಿ ಸುಮಾರು 20 ಅಡಿ ಉದ್ದ, 5 ಅಡಿ ಎತ್ತರ, 4 ಅಡಿ ಅಗಲದ ಅಡಿಕೆ ದಬ್ಬೆ ತೊಟ್ಟಿಯನ್ನು ನಿರ್ಮಿಸಲಾಗಿದೆ. ಒಂದು ತೊಟ್ಟಿಗೆ ಸುಮಾರು 3 ರಿಂದ 4 ಸಾವಿರ ರೂ ವೆಚ್ಚವಾಗಿದೆ. ಸ್ಥಳೀಯವಾಗಿ ಅಡಿಕೆ ಮರಗಳು ದೊರೆತರೆ ನಿರ್ಮಾಣದ ವೆಚ್ಚ ಇನ್ನೂ ಕಡಿಮೆಯಾಗಲಿದೆ.

ಭೂಮಿ ಮಟ್ಟದಿಂದ ಒಂದು ಅಡಿ ಮೇಲೆ ಇರುವಂತೆ ಅಡಿಕೆ ತೊಟ್ಟಿ ನಿರ್ಮಿಸಲಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಹರಿದು ಬರುವ ನೀರಿನಿಂದ ಹಾಗೂ ಇಲಿ, ಹೆಗ್ಗಣಗಳಿಂದ  ಧಾನ್ಯವನ್ನು ರಕ್ಷಣೆ ಮಾಡಲು ಸಾಧ್ಯ.

ತೊಟ್ಟಿಯಲ್ಲಿ ಮಳೆಗಾಲ ಸೇರಿದಂತೆ ವರ್ಷವಿಡೀ ರಾಗಿ, ಜೋಳ, ಅವರೆ, ಅಲಸಂದೆ, ತೆಂಗಿನಕಾಯಿ, ನೆಲಗಡಲೆ ಹೀಗೆ ಎಲ್ಲ ಬಗೆಯ ಆಹಾರ ಧಾನ್ಯಗಳನ್ನು ಸಂಗ್ರಹಣೆ ಮಾಡಬಹುದು. ಆದರೆ ಒಂದೊಂದು ಋತುಮಾನಕ್ಕೆ ಒಂದೊಂದು ರೀತಿ ಸಂಗ್ರಹಣೆ ವಿಧಾನವನ್ನು ಅನುಸರಿಸಬೇಕಾಗುತ್ತದೆ.

ಬೇಸಿಗೆಯಲ್ಲಿ ಧಾನ್ಯಗಳನ್ನು ಸಂಗ್ರಹಣೆ ಮಾಡುವಾಗ ತೊಟ್ಟಿಯ ಮೇಲ್ಭಾಗದಲ್ಲಿ ಸ್ಥಳೀಯವಾಗಿ ದೊರೆಯುವ ಬಂದ್ರಿಸೊಪ್ಪಿನ ಗಿಡದ ಅಥವಾ ಜೊಂಬು (ಸದಾ ನಿಂತಿರುವ ನೀರಿನಲ್ಲಿ ಬೆಳೆಯುವ ಸಸಿ) ಹೊದಿಸಬೇಕು. ಇದರಿಂದ ಧಾನಕ್ಕೆ ಹುಳು ಬೀಳದಂತೆ ತಡೆಯಬಹುದು.

ಇದರ ಮೇಲೆ ಪ್ಲಾಸ್ಟಿಕ್ ಹೊದಿಕೆಯನ್ನು ಬಳಸುವುದರಿಂದ ಮಳೆ ಬಂದರೂ ಯಾವುದೇ ತೊಂದರೆಯಾಗುವುದಿಲ್ಲ. ಮನೆ ಅಂಗಳದಲ್ಲೇ ಧಾನ್ಯ ಸಂಗ್ರಹಣೆ ಮಾಡುವುದರಿಂದ ಗಾಳಿ, ಬೆಳಕು ಚೆನ್ನಾಗಿ ಇರುವುದರಿಂದ ಹುಳುಗಳ ಕಾಟ ತಪ್ಪಲಿದೆ ಎನ್ನುವುದು ರೈತರ ಅಭಿಪ್ರಾಯ.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.