ADVERTISEMENT

ಆರ್ಕಿಡ್‌ಗಳ ಮಾಯಾಲೋಕ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಆರ್ಕಿಡ್‌ಗಳ ಮಾಯಾಲೋಕ
ಆರ್ಕಿಡ್‌ಗಳ ಮಾಯಾಲೋಕ   

* ವಿ.ಬಾಲಕೃಷ್ಣ ಶಿರ್ವ

ಶಿವಮೊಗ್ಗ–ತೀರ್ಥಹಳ್ಳಿ ರಸ್ತೆಯಲ್ಲಿ ಸಿಗುವ ಬೆಜ್ಜವಳ್ಳಿಯಿಂದ ತಿರುಗಿ (ಶಿವಮೊಗ್ಗ ಕಡೆಯಿಂದ ಬಂದರೆ ಎಡಬದಿ) ಆರು ಕಿ.ಮೀ. ಕ್ರಮಿಸಿದರೆ ಸಿಗುವುದೇ ಕನ್ನಂಗಿ ಗ್ರಾಮ. ಇಲ್ಲಿನ ಪಾಲಿಹೌಸ್‌ನಲ್ಲಿ ಕಂಗೊಳಿಸುತ್ತಿದೆ ಆಶಾ ಶೇಷಾದ್ರಿಯವರ ‘ಆರ್ಕಿಡ್’ ಪ್ರಪಂಚ. ಟಿಶ್ಯೂ ಕಲ್ಚರ್ ವಿಧದಲ್ಲಿ ಗಿಡವಾಗಿಸಿ, ಹಾಲೆಂಡ್ ಮಾದರಿಯ ಗಿಡಗಳನ್ನು ತಮ್ಮ ಪಾಲಿಹೌಸ್‌ನಲ್ಲಿ ಬೆಳೆಸಿ,ಯಶಸ್ವಿಯಾಗಿದ್ದಾರೆ.

ಆರ್ಕಿಡ್‌ ಬೆಳೆಯಲು ಪಾರದರ್ಶಕವಾದ ಕುಂಡಗಳನ್ನು ಅವರು ಬಳಸಿದ್ದಾರೆ. 5x3 ಇಂಚು ಅಥವಾ 7x4 ಇಂಚು ಅಳತೆಯ ಕುಂಡಗಳು ಹೆಚ್ಚು ಉಪಯುಕ್ತ. ಆ ಕುಂಡಗಳಿಗೆ ಮಣ್ಣಿನ ಅವಶ್ಯಕತೆ ಇರುವುದಿಲ್ಲ. ತೆಂಗಿನ ಸಿಪ್ಪೆ, ಇದ್ದಿಲು ತುಂಡು, ಮರದ ತೊಗಟೆಯ ಚೂರು ಹಾಕಿ ತುಂಬಿಸಬೇಕು. ಇದು ಆರ್ಕಿಡ್‌ಗೆ ಸ್ವಾಭಾವಿಕ ಪರಿಸರ ನೀಡಿದಂತಾಗುತ್ತದೆ. ತದನಂತರ ಗಿಡವನ್ನು ಊರಬೇಕು. ಪ್ರತಿದಿನ ನೀರು ಕೊಡುವ ಅವಶ್ಯಕತೆ ಇಲ್ಲ. ವಾರದಲ್ಲಿ ಮೂರು ದಿನ ನೀರು ಪೂರೈಯಿಸಿದರೆ ಸಾಕು.

ADVERTISEMENT

ವಾರಕ್ಕೊಮ್ಮೆ ಬಯೊ-20 ಸಿಂಪಡಣೆ ಮಾಡಿದಲ್ಲಿ ಗಿಡಗಳು ಪೊಗದಸ್ತಾಗಿ ಬೆಳೆಯುತ್ತವೆ ಎಂಬುದು ಆಶಾ ಅವರ ಅನುಭವದ ಮಾತು. ಕುಂಡದಲ್ಲಿ ಸಣ್ಣ ಸಣ್ಣ ತೂತುಗಳಿರಬೇಕು. ಪೂರೈಸಿದ ನೀರು ಬಸಿದು ಹೋಗಬೇಕು. ತೇವ ಮಾತ್ರ ಇದ್ದರೆ ಸಾಕು. ಒಂದುವೇಳೆ ನೀರು ಹೆಚ್ಚಾದರೆ, ಬೇರು ಕೊಳೆಯುವ ಸಾಧ್ಯತೆ ಇರುತ್ತದೆ.

ಆರ್ಕಿಡ್ ಬೆಳವಣಿಗೆಗೆ 25 ಡಿಗ್ರಿಯಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಸೂಕ್ತ. ಗಿಡಗಳು ಬೆಳೆಯುವ ಸಂದರ್ಭದಲ್ಲಿ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚು ಅನುಕೂಲಕರ ಎಂಬುದು ಆಶಾರವರ ಅಂಬೋಣ.

ಬೇಸಿಗೆ ಮುಗಿಯುತ್ತಾ ಬರುವ ಸಂದರ್ಭದಲ್ಲಿ ಅಂದರೆ ಮಳೆಗಾಲ ಆರಂಭಕ್ಕೆ ಹೂ ಬಿಡಲು ಟಿಸಿಲೊಡೆಯುತ್ತದೆ. ಅಂದರೆ ನೆಟ್ಟು ಒಂದು ವರ್ಷಕ್ಕೆ ಹೂ ಬಿಡಲು ಆರಂಭವಾಗುತ್ತದೆ. ಹೂ ಬಿಡಲು ಪ್ರಖರವಾದ ಬೆಳಕು ಹೆಚ್ಚು ಪ್ರಯೋಜನಕಾರಿ. ಈ ಹೂ ಯಾನೆ ಆರ್ಕಿಡ್‌ಗಳ ಬಣ್ಣಗಳಿಗೆ ಲೆಕ್ಕ ಇರಿಸಲು ಸಾಧ್ಯವಿಲ್ಲ. ನೂರಾರು ಬಣ್ಣಗಳಿಂದ ಕಂಗೊಳಿಸುತ್ತವೆ ಈ ಆರ್ಕಿಡ್ ಎನ್ನುತ್ತಾರೆ ಆಶಾ.

ಆರ್ಕಿಡ್‌ನ ಇನ್ನೊಂದು ವೈಶಿಷ್ಟ್ಯವೇನೆಂದರೆ 2–3 ತಿಂಗಳವರೆಗೆ ಬಾಡದೆ ಇರುವುದು. ಬೊಕೆಗಿಂತ, ಹೂ ಕುಂಡದೊಂದಿಗೆ ಕೊಡುವುದು ಪಟ್ಟಣದಲ್ಲಿ ಹೊಸ ಟ್ರೆಂಡ್ ಆಗಿದೆ. ಒಂದು ಆರ್ಕಿಡ್‌ ಕುಂಡಕ್ಕೆ ₹300ದಿಂದ
₹ 600ರವರೆಗೆ ಬೆಲೆ ಇದೆ. ಆರ್ಕಿಡ್ ಹೂಗಳನ್ನು ಹೋಟೆಲ್‌ನ ಒಳಾಂಗಣ ಅಲಂಕಾರಕ್ಕೆ ಬಳಕೆ ಮಾಡಲಾಗುತ್ತದೆ. ಗಿಫ್ಟ್ ಶಾಪ್‌ಗಳಲ್ಲೂ ಕಾಣಬಹುದಾಗಿದೆ.

ಮಲೆನಾಡಿನಲ್ಲಿ ಪ್ರಪ್ರಥಮವಾಗಿ ವೆನಿಲ್ಲಾ ಮತ್ತು ಆರ್ಕಿಡ್ ಬೆಳೆಸಿದವರು ಶೇಷಾದ್ರಿ ದಂಪತಿ. ಪ್ರಸ್ತುತ ತಮ್ಮ ಮನೆಯಂಗಣದ ಪಾಲಿಹೌಸ್‌ ನಲ್ಲಿ ಬೆಳೆದ ‘ಆರ್ಕಿಡ್’ ಚಿಕ್ಕಮಗಳೂರು, ಶಿವಮೊಗ್ಗ, ಮುಂಬೈ ಮಾರುಕಟ್ಟೆಗೆ ಹೋಗು ತ್ತದೆ. ಲಕ್ಷಗಟ್ಟಲೆ ತೊಡಗಿಸ ಬೇಕಿದ್ದರೂ, ಹೊಸ ಟ್ರೆಂಡಿನಲ್ಲಿ ಹೆಚ್ಚು ಬೇಡಿಕೆ ಇರುವುದಂತೂ ದಿಟ.

ರಿಸ್ಕ್ ಇದೆಯಾದರೂ ಲಾಭದಾಯಕ ಎನ್ನಲಡ್ಡಿಯಿಲ್ಲ ಎಂಬುದು ಆಶಾರವರ ಅಂಬೋಣ. ಸಂಪರ್ಕಕ್ಕೆ: 9448093033.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.