ADVERTISEMENT

ಆಲಂಕಾರಿಕ ಮೀನು

ಜಿ.ಆರ್.ಗುಂಡಪ್ಪ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಆಲಂಕಾರಿಕ  ಮೀನಿನ ಸಾಕಣೆ ಇಂದು ವಾಣಿಜ್ಯ ಉದ್ದಿಮೆಯಾಗಿ  ಬೆಳೆಯುತ್ತಿದೆ. ಅಲಂಕಾರಿಕ ಮೀನುಗಳನ್ನು  ಗಾಜಿನ ಪೆಟ್ಟಿಗೆಗಳಲ್ಲಿ ಸಾಕಿ, ಮನೆಯ  ಪಡಸಾಲೆಯಲ್ಲಿ, ಮುಖ್ಯ ಕಚೇರಿಗಳಲ್ಲಿ, ದೊಡ್ಡ ದೊಡ್ಡ ಅಂಗಡಿಗಳಲ್ಲಿ, ಖಾಸಗಿ ಕೊಠಡಿಗಳಲ್ಲಿ ಇಟ್ಟಿರುತ್ತಾರೆ.
 
ಮನಸ್ಸಿನ ಸಂತೋಷಕ್ಕೆ, ಮನೆ ಸೌಂದರ್ಯ ಹೆಚ್ಚಿಸಲು, ಮನರಂಜನೆಗಾಗಿ ಇವನ್ನು ಸಾಕುವುದುಂಟು. ಈ ಪೆಟ್ಟಿಗೆಗಳನ್ನು ನೋಡುವುದೇ ಒಂದು ಅಂದ.  ಒಂದು ಮೀನನ್ನು ಮತ್ತೊಂದು ಮೀನು ಓಡಿಸಿಕೊಂಡು ಹೋಗುವುದು, ಹಿಂತಿರುಗಿ ಮತ್ತೆ ಅದು ಓಡಿಸಿಕೊಂಡು ಬರುವುದು, ನೃತ್ಯ ಮಾಡುವುದು, ವಿಶ್ರಾಂತಿ ತೆಗೆದುಕೊಳ್ಳುವಾಗ ತದೇಕ ಚಿತ್ತದಿಂದ ಮಲಗಿ ನಿದ್ರಿಸುವುದು, ಪೆಟ್ಟಿಗೆಯ ಒಂದು ಭಾಗದಲ್ಲಿ ದಿನಗಟ್ಟಲೆ ಕುಳಿತಿರುವುದು. ಇವನ್ನೆಲ್ಲ ನೋಡುತ್ತಿದ್ದರೆ ಮನಸ್ಸಿಗೆ ಮುದ ನೀಡುತ್ತದೆ. ಮನೆಯಿಂದ ಹೊರಗೆ ಹೋಗುವ ಮುನ್ನ, ಮನೆಗೆ ಹಿಂತಿರುಗಿದ ನಂತರ ಇದರ ಜೊತೆ ಆಡುವುದೆ ಒಂದು ಸೊಗಸು.

ಈ ಆಲಂಕಾರಿಕ  ಮೀನಿನಲ್ಲಿ ಅನೇಕ ತಳಿಗಳಿವೆ. ಹಾಗಾಗಿ, ಅವುಗಳ  ಬಣ್ಣ ಏರುಪೇರು ಇರುತ್ತದೆ. ಒಂದೇ ಮೀನಿನಲ್ಲಿ ಎರಡು ಮೂರು ಬಣ್ಣ ಅಥವಾ  ಒಂದೇ ಬಣ್ಣದ ಮೀನುಗಳೆಲ್ಲ ಇವೆ. ಇವು ಪೆಟ್ಟಿಗೆಯಲ್ಲಿ ಕಾಮನಬಿಲ್ಲಿನಂತೆ ಕಾಣುತ್ತಿವೆ. ಇವುಗಳಲ್ಲಿ ಬಹಳ ಮುಖ್ಯವಾಗಿ ಇರುವ ತಳಿಗಳೆಂದರೆ ಗೋಲ್ಡ್‌ಫಿಶ್, ಕೊಯಿರಾರ್ಪನ್ನು, ಪ್ಲೊರಿಯಾ, ಪೈನ್‌ಮೌತ್, ಚಿಕಲಿಸಾ. ಹೀಗೆ 25ಕ್ಕೂ ಹೆಚ್ಚು ಅಲಂಕಾರಿಕ ಮೀನುಗಳಿವೆ. ಇವುಗಳನ್ನು ಬೇರೆ ಬೇರೆ ತಳಿಗಳೊಡನೆ ಮಿಶ್ರ ಮಾಡಿ ಸಾಕಿದಾಗ ಮಿಶ್ರತಳಿ ಮೀನುಗಳು ಲಭ್ಯವಾಗುತ್ತವೆ. 

ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿ ಮೀನಿನ ಮರಿಗಳ ಉತ್ಪಾದನೆಗೆ 30 ಅಡಿ, 40 ಅಡಿ ಉದ್ದಗಲದ ಕೊಳವನ್ನು ನಿರ್ಮಿಸಲಾಗುತ್ತದೆ.  ದೊಡ್ಡ ಗಾತ್ರದ ಗಾಜಿನ ಪೆಟ್ಟಿಗೆಯಲ್ಲೂ ಉತ್ಪಾದನೆ ಮಾಡಬಹುದು. ಅಲಂಕಾರಿಕ ಮೀನಿನ ಮರಿಗಳಿಗೆ ವಿಪರೀತ ಬೇಡಿಕೆ ಇದೆ.

ಇದು ಲಾಭದಾಯಕ ಕಸುಬು ಹೌದು. ಇದನ್ನು ಸಾಕುವುದಾದರೆ ಪದೇ ಪದೇ ನೀರನ್ನು ಬದಲಾಯಿಸಿ ಶುದ್ಧ ನೀರು ಹಾಕುವುದು, ಕಾಲಕ್ಕೆ ಸರಿಯಾಗಿ ಆಹಾರವನ್ನು ನೀಡುವುದು, ಆಮ್ಲಜನಕದ ಸರಬರಾಜು ಮಾಡುವುದು ಬಹಳ ಮುಖ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.