ADVERTISEMENT

ಒಂದು ಎಕರೆಯಲಿ ನಾಲ್ಕೆಕರೆ ಟೊಮೆಟೊ

ಹೊಸ ಹೆಜ್ಜೆ

ಜಿ.ಚಂದ್ರಕಾಂತ್
Published 12 ಸೆಪ್ಟೆಂಬರ್ 2016, 19:30 IST
Last Updated 12 ಸೆಪ್ಟೆಂಬರ್ 2016, 19:30 IST
ಐದು ಅಶ್ವಶಕ್ತಿಯ ಪಂಪ್‌ಸೆಟ್‌ ಬಳಸಿ ಕೃಷಿ
ಐದು ಅಶ್ವಶಕ್ತಿಯ ಪಂಪ್‌ಸೆಟ್‌ ಬಳಸಿ ಕೃಷಿ   

ಇವರ ಬಳಿ ಇರುವುದು ಒಂದು ಎಕರೆ ಜಮೀನು ಮಾತ್ರ. ಈ ಒಂದೇ ಜಮೀನಿನಲ್ಲಿ ಅವರು ನಾಲ್ಕು ಎಕರೆಗಾಗುವಷ್ಟು ಟೊಮೆಟೊ ಬೆಳೆದು ಏಳು ಲಕ್ಷ ರೂಪಾಯಿಗಿಂತಲೂ ಅಧಿಕ ಲಾಭ ಪಡೆದಿದ್ದಾರೆ!

ಇಂಥದ್ದೊಂದು ಸಾಧನೆ ಮಾಡಿರುವುದು ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಅಳ್ಳಗಿ(ಬಿ) ಗ್ರಾಮದ ರೈತ ಶಿವಶರಣಪ್ಪ ಗುರಪ್ಪ ಹಾಳಕಿ. ಇದಕ್ಕೆ ಕಾರಣ ಪಾಲಿಹೌಸ್‌. ಸರ್ಕಾರದ ಕೃಷಿಭಾಗ್ಯ ಯೋಜನೆ ಅಡಿ ಪಾಲಿಹೌಸ್ ನಿರ್ಮಾಣ ಮಾಡಿಕೊಂಡಿರುವ ಗುರಪ್ಪ ಅವರು ಈಗ ಎಲ್ಲರ ಹುಬ್ಬೇರುವಂತಹ ಇಳುವರಿ ತೆಗೆದಿದ್ದಾರೆ.

ಇವರು ₹ 28.40 ಲಕ್ಷ ವೆಚ್ಚದಿಂದ ಮಹಾರಾಷ್ಟ್ರದ ಪುಣೆ ಶಿಕಲಗಾರ್ ಕಂಪೆನಿಯ ಪಾಲಿಹೌಸ್ ಘಟಕ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ನಂ.137 ತಳಿಯ 10ಸಾವಿರ ಟೊಮೆಟೊ ಗಿಡಗಳನ್ನು ಬೆಳೆದಿದ್ದಾರೆ. ಇದಕ್ಕಾಗಿ ತೋಟಗಾರಿಕೆ ಇಲಾಖೆ ಇವರಿಗೆ ₹17 ಲಕ್ಷ ಸಹಾಯಧನ ನೀಡಿದೆ.

ಬದುವಿನಿಂದ ಬದುವಿಗೆ 5 ಅಡಿ ಅಂತರದ 65 ಸಾಲುಗಳಿದ್ದು, ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಂತರವಿಟ್ಟು 30 ಟ್ರಿಪ್ ಕೊಟ್ಟಿಗೆ ಮತ್ತು ಕುರಿ ಮತ್ತು ಬೇವಿನ ಗೊಬ್ಬರ ಹಾಕಿ ಟ್ರೈಕೋಡರ್ಮಾದಿಂದ ಸರಿಯಾದ ಉಪಚಾರ ಮಾಡಿರುತ್ತಾರೆ. ಹನಿ ಪ್ರತಿದಿನ 5 ಗಂಟೆ ನೀರು ಹಾಯಿಸಿ ಹುಳಗಳ ಅಂಟಿನ್ ಪ್ಲಾಸ್ಟಿಕ್ ಬ್ಯಾಗ್  600 ಚೆಂಡು ಹೂವು ಬೆಳೆದಿದ್ದಾರೆ.

ಪ್ರತಿಯೊಂದು ಟೊಮೆಟೊ ಗಿಡದ ಬುಡಗಳಿಗೆ ಮಲ್ಚಿಂಗ್ ಹೊದಿಕೆ ಅಳವಡಿಸಿದ್ದಾರೆ. ಸುಮಾರು 24 ಅಡಿ ಉದ್ದದವರೆಗೂ ಬೆಳೆವ ಪ್ರತಿ ಗಿಡಕ್ಕೆ ಇಂಡಿಟರ್ಮಿನೇಟ್‌ ರೋಪ್ ಥ್ರೆಡ್ ಹಾಕಿರುತ್ತಾರೆ.

ಕೇವಲ 4 ಜನ ಆಳುಗಳ ನೆರವಿನಿಂದ ಸದರಿ ಬೆಳೆಯ ನಿರ್ವಹಣೆ ಮಾಡಿ ಸುಮಾರು 20 ಸಲ ಬೆಳೆ ಕಟಾವು ಮಾಡಿ ₹ 7 ಲಕ್ಷ ಹಾಗೂ ಚೆಂಡು ಹೂವಿನ ಬೆಳೆಯಿಂದಲೂ 45ಸಾವಿರ ರೂಪಾಯಿ ಲಾಭ ಪಡೆದಿದ್ದಾರೆ.

ಮಹಾರಾಷ್ಟ್ರದ ಸೋಲಾಪುರ, ಪುಣೆ, ಲಾತೂರಗಳಿಗೆ ಭೇಟಿ ನೀಡಿ ಪಾಲಿಹೌಸಿನಲ್ಲಿ ಟೊಮೆಟೊ ಬೆಳೆಯುವ ಮಾಹಿತಿ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ ಇನ್ನೊಬ್ಬ ರೈತ ಅರವಿಂದ ಹಾಳಕಿ.

ಕಡಿಮೆ ಆಳು, ಕಡಿಮೆ ಕೀಟನಾಶಗಳ ಮತ್ತು ಕಡಿಮೆ ನೀರಿನ ಬಳಕೆಯಿಂದ ನಾಲ್ಕೆಕರೆಯ ಟೊಮೆಟೊ ಬೆಳೆಯನ್ನು ಕೇವಲ ಒಂದೆಕರೆಯಲ್ಲೇ ಬೆಳೆಯಬಹುದೆಂದು  ಇವರು ಸಾಬೀತು ಮಾಡಿದ್ದಾರೆ.

ಹೊರಗಿನ ವಾತಾವರಣದಲ್ಲಿ ಈ ತರಹ ಟೊಮೆಟೊ ಬೆಳೆ ಬೆಳೆಯಲು ಸಾಧ್ಯವಿಲ್ಲ ಎನ್ನುವುದು ಇವರ ಅಭಿಮತ. ಇವರು ಐದು ಅಶ್ವಶಕ್ತಿ ಸಾಮರ್ಥ್ಯದ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಂಡಿರುತ್ತಾರೆ. ಐದು ಗಂಟೆ ಈ ಪಂಪ್‌ಸೆಟ್ಟಿನಿಂದ ಬೆಳೆಗಳಿಗೆ ವಿದ್ಯುತ್ ಕಡಿತಗೊಂಡರೂ ವಿವಿಧ ಬೆಳೆಗಳಿಗೆ ನೀರುಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.