ADVERTISEMENT

ಔಷಧ ರೂಪದ ಕಲ್ಲುಬಾಳೆ

ಲೀಲಾಕುಮಾರಿ ತೊಡಿಕಾನ
Published 12 ಜನವರಿ 2015, 19:30 IST
Last Updated 12 ಜನವರಿ 2015, 19:30 IST

ರಸಬಾಳೆ, ಪಚ್ಚಬಾಳೆ, ಏಲಕ್ಕಿ ಬಾಳೆ, ನೇಂದ್ರ ಬಾಳೆ, ಮಿಟ್ಲಿ, ಮೈಸೂರು ಬಾಳೆ... ಇವೆಲ್ಲ ಸಾಮಾನ್ಯವಾಗಿ ಕೇಳಿಬರುವ ಬಾಳೆ ತಳಿಯ ಹೆಸರು. ಆದರೆ ಬಾಳೆಯಲ್ಲಿ ಕಲ್ಲು ಬಾಳೆಯ ತಳಿಯೂ ಇದೆ ಎಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ.
ಹಲವು ಅನಾರೋಗ್ಯಗಳನ್ನು ವಾಸಿ ಮಾಡುವ ಔಷಧಿಯ ಗುಣಗಳನ್ನು ಹೊಂದಿದೆ ಈ ಕಲ್ಲುಬಾಳೆ. ಇದರ ತಿರುಳು ಮಾತ್ರವಲ್ಲದೇ ಹಣ್ಣಿನೊಳಗಿರುವ ಬೀಜ ಕೂಡ ಆರೋಗ್ಯಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ.

ಕಲ್ಲುಬಾಳೆ ನೋಡಲು ಇತರ ಬಾಳೆಯಂತೆಯೇ ಇರುತ್ತದೆ. ಇದರ ಎಲೆಗಳು ಬೇರೆ ಬಾಳೆಲೆಗಿಂತ ಅಗಲ ಹಾಗೂ ಉದ್ದ. ಹೂವು ಸಹ ಗಾತ್ರದಲ್ಲಿ ದೊಡ್ಡದು. ಆದರೆ ಕಾಯಿಗಳು ಮಾತ್ರ ಚಿಕ್ಕದಾಗಿದ್ದು, ಹಣ್ಣಾದಾಗ ಸಿಹಿಯ ಜೊತೆಗೆ ಸ್ವಲ್ಪ ಕಹಿಯಾಗಿರುತ್ತದೆ. ಹಣ್ಣಿನ ಒಳಗೆ ಕಲ್ಲುಗಳಂತೆ ಕಪ್ಪು ಬಣ್ಣದ ಬೀಜಗಳಿರುತ್ತವೆ. ಹೆಚ್ಚಾಗಿ ಈ ಬಾಳೆಗಳು ಹಾಸಿದಂತಿರುವ ಕಲ್ಲುಗಳ (ಪಾರೆಕಲ್ಲು) ಎಡೆಯಲ್ಲಿ ಬೆಳೆಯುತ್ತವೆ. ಕಲ್ಲುಗಳ ಎಡೆಯಲ್ಲಿರುವ ಮಣ್ಣೊಳಗೆ ಬೇರನ್ನು ಇಳಿ ಬಿಡುತ್ತವೆ. ಈ ಬಾಳೆಹಣ್ಣಿನ ಬೀಜ ಬಿದ್ದ ಎಡೆಯಲ್ಲೆಲ್ಲಾ ಅದು ಮೊಳಕೆಯೊಡೆದು ಬಾಳೆಗಿಡ ಬೆಳೆಯಲಾರಂಭಿಸುತ್ತದೆ.

ಮೂತ್ರಪಿಂಡದ ಕಲ್ಲು ಕರಗಲು ಬಾಳೆ ಬಳಸುವ ರೀತಿ: ಬಾಳೆದಿಂಡನ್ನು ಚೆನ್ನಾಗಿ ಜಜ್ಜಿ ಅದನ್ನು ಹಿಂಡಿ ರಸವನ್ನು ತೆಗೆಯಬೇಕು. ನಂತರ ರಸವನ್ನು ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಅರ್ಧ ಲೋಟದಷ್ಟು ಏಳರಿಂದ ಹತ್ತು ದಿನಗಳವರೆಗೆ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲಿನ ಶೀಘ್ರ ಶಮನ ದೊರೆಯುತ್ತದೆ. ಹಣ್ಣಿನೊಳಗಿನಿಂದ ಬೀಜಗಳನ್ನು ತೆಗೆದು (ಹಣ್ಣುಗಳನ್ನು ಒಂದು ವಾರ ನೀರಿನಲ್ಲಿ ನೆನೆಸಿಟ್ಟರೆ ಸುಲಭವಾಗಿ ಬೀಜಗಳನ್ನು ಬೇರ್ಪಡಿಸಬಹುದು) ಸಂಗ್ರಹಿಸಿಡಬೇಕು.

ನಂತರ ಬೀಜಗಳನ್ನು ಚೆನ್ನಾಗಿ ಜಜ್ಜಿ, ಕಷಾಯ ಮಾಡಿ ಕುಡಿಯುವುದರಿಂದ ಮೂತ್ರಪಿಂಡದಲ್ಲಿರುವ ಕಲ್ಲು ಕರಗುತ್ತದೆ. ಆದರೆ ಇದು ತುಂಬಾ ಉಷ್ಣವಾಗಿರುವುದರಿಂದ ಹಾಲು ಅಥವಾ ಜೀರಿಗೆಯನ್ನು ಬೆರೆಸಿ ಕಷಾಯ ಮಾಡಿದರೆ ಉತ್ತಮ. ಎರಡು ಲೋಟ ನೀರಿಗೆ ಎರಡು ಚಮಚ ಜಜ್ಜಿದ ಕಲ್ಲುಬಾಳೆ ಬೀಜ, ಎರಡು ಚಮಚ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ಕುದಿದು ಒಂದು ಲೋಟವಾದಾಗ ಕೆಳಗಿಳಿಸಬೇಕು. ನಂತರ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು. ಹಾಲಿನಲ್ಲೇ ಜಜ್ಜಿದ ಬೀಜ ಬೆರೆಸಿ ಚೆನ್ನಾಗಿ ಕುದಿಸಿ ಕುಡಿಯಬಹುದು. ಸ್ವಲ್ಪ ಕಹಿಯಾಗಿರುವುದರಿಂದ ಒಂಚೂರು ಬೆಲ್ಲವನ್ನು ಸೇರಿಸಬಹುದು. ಬೆಲ್ಲ ಸೇರಿಸದೇ ಕುಡಿಯುವುದರಿಂದ ಬಾಯಿಗೆ ಅಹಿತವಾದರೂ ಆರೋಗ್ಯಕ್ಕೆ ಹಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.