ADVERTISEMENT

ಕಬ್ಬಿನ ಜತೆ ಮಿಶ್ರ ಬೆಳೆ

ಬಸವರಾಜ ಹವಾಲ್ದಾರ
Published 9 ಮಾರ್ಚ್ 2011, 19:30 IST
Last Updated 9 ಮಾರ್ಚ್ 2011, 19:30 IST
ಕಬ್ಬಿನ ಜತೆ ಮಿಶ್ರ ಬೆಳೆ
ಕಬ್ಬಿನ ಜತೆ ಮಿಶ್ರ ಬೆಳೆ   

ಕಬ್ಬಿನೊಂದಿಗೆ ಮಿಶ್ರ ಬೆಳೆಗಳನ್ನು ಬೆಳೆಯುವ ಪ್ರಯೋಗದಲ್ಲಿ ಬೆಳಗಾವಿ ಜಿಲ್ಲೆಯ ರೈತರು ಯಶಸ್ವಿಯಾಗುತ್ತಿದ್ದಾರೆ. ಕಬ್ಬಿನ ಜತೆಯಲ್ಲಿ ತರಕಾರಿಗಳನ್ನು ಬೆಳೆಯಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಬ್ಬಿನ ಜತೆಯಲ್ಲಿ ತರಕಾರಿ ಬೆಳೆಯುವ ಪ್ರಯತ್ನಗಳಿಂದ ಬೇಸಾಯದ ವೆಚ್ಚ ಕಡಿಮೆಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂಬುದು ಗಮನಾರ್ಹ.

ಸಾಂಪ್ರದಾಯಿಕ ವಿಧಾನದಲ್ಲಿ ಕಬ್ಬು ಬೆಳೆಯಲು ರೈತರು ಪ್ರತಿ ಎಕರೆಗೆ ಸರಾಸರಿ 2.5 ಟನ್ ಕಬ್ಬಿನ ಬೀಜ ಬಳಸುತ್ತಾರೆ.ಆದರೆ ಅಂತರ ಬೇಸಾಯ ವಿಧಾನದಲ್ಲಿ 100 ಕೆಜಿ ಕಬ್ಬಿನ ಕಣ್ಣು (ಬೀಜ) ಸಾಕು. ಸಾಂಪ್ರದಾಯಿಕ ಪದ್ಧತಿಯಲ್ಲಿ ಕಣ್ಣಿನ ಸಮೇತ ಕಬ್ಬಿನ ಗಣಿಕೆಯನ್ನು ನಾಟಿಗೆ ಬಳಸಲಾಗುತ್ತದೆ. ಆದರೆ ಇಲ್ಲಿ ಕೇವಲ ಕಣ್ಣನ್ನು ಮಾತ್ರ ತೆಗೆದುಕೊಂಡು ಉಳಿದದ್ದನ್ನು ಸಕ್ಕರೆ ಅಥವಾ ಬೆಲ್ಲ ಮಾಡಲು ಬಳಸಬಹುದು.

ಪಿಟ್‌ನಲ್ಲಿ ಸಸಿ: ಕಬ್ಬಿನ ಕಣ್ಣನ್ನು ಮಾತ್ರ ಕತ್ತರಿಸಿ ಅದನ್ನು ಕೋಕೊ ಪಿಟ್‌ನಲ್ಲಿ ಹಾಕಿ ನರ್ಸರಿ ಮಾದರಿಯಲ್ಲಿ  ಸಸಿಯಾಗಿ ಬೆಳೆಸಬಹುದು. 45 ದಿನಗಳ ಕಾಲ ಸಸಿಗಳು ಕೋಕೊ ಪಿಟ್‌ನಲ್ಲಿ ಬೆಳೆಯುತ್ತವೆ. ಆ ನಂತರ ಅವನ್ನು  ನಾಟಿ ಮಾಡಬಹುದು.

ಹೀಗೆ ಮಾಡುವುದರಿಂದ 45 ದಿನಗಳ ಕಾಲ ಕಬ್ಬಿಗೆ ನೀರು ಹಾಕುವ ಅಗತ್ಯ ಬೀಳುವುದಿಲ್ಲ. ಆ ಸಮಯದಲ್ಲಿ ಅಂತರ ಬೇಸಾಯದಲ್ಲಿ ಅರಿಷಿಣ, ನೆಲಗಡಲೆ, ಟೊಮೆಟೊ, ಬೆಂಡೆ ಕಾಯಿ, ಈರುಳ್ಳಿ ಹಾಗೂ ಇತರ ದ್ವಿದಳ ಧಾನ್ಯಗಳು ಬಿತ್ತಿ ಬೆಳೆಯಬಹುದು. ನಲವತ್ತೈದು ದಿನಗಳ ನಂತರ  ಕೋಕೋಪಿಟ್‌ನಲ್ಲಿ ಬೆಳೆದ ಕಬ್ಬಿನ ಸಸಿಗಳನ್ನು ನಾಟಿ ಮಾಡಬಹುದು. ಅದರ ಜತೆಗೆ ನವ ಧಾನ್ಯಗಳನ್ನು ಬಿತ್ತನೆ ಮಾಡಬಹುದು.

ಈ ವಿಧಾನದಲ್ಲಿ ಐದು ಅಡಿ ಅಂತರದಲ್ಲಿ ಕಬ್ಬು ಬೆಳೆಯುತ್ತಾರೆ. ಎರಡು ಸಾಲುಗಳ ನಡುವೆ ಮಿಶ್ರ ಬೆಳೆ ಬೆಳೆಯುವ ಉದ್ದೇಶದಿಂದ ಹೀಗೆ ಮಾಡುತ್ತಾರೆ. ಅಂತರ ಬೇಸಾಯ ಮಾಡುವುದರಿಂದ ಸತ್ವ ಕಳೆದುಕೊಂಡಿರುವ ಮಣ್ಣಿಗೆ ಸೂರ್ಯ ಕಿರಣಗಳು ನೇರವಾಗಿ ಬೀಳುತ್ತವೆ. ಬೆಳಕು ಹಾಗೂ ಗಾಳಿ ಹೇರಳವಾಗಿ ಸಿಗುತ್ತದೆ. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎನ್ನುತ್ತಾರೆ ಬೇಡಕಿಹಾಳದ ರೈತ  ಸುರೇಶ ದೇಸಾಯಿ.

ಸಾವಯವ ಹಾಗೂ ಮಿಶ್ರ ಬೆಳೆ ಪದ್ಧತಿಯಲ್ಲಿ ಕಬ್ಬಿನ ಇಳುವರಿಯೂ ಉತ್ತಮವಾಗಿ ಬರುತ್ತದೆ. ಜತೆಗೆ ಕಾಯಿಪಲ್ಲೆ, ಅರಿಷಿಣದಂತಹ ಬೆಳೆಗಳಿಂದ ಹೆಚ್ಚು ಆದಾಯ ಪಡೆಯಬಹುದು ಎನ್ನುವುದು ಅವರ ಅನುಭವ.

ಈ ವಿಧಾನದಲ್ಲಿ ಅಂತರ ಬೆಳೆಗೆ ಕೊಟ್ಟ ನೀರನ್ನು ಬಳಸಿಕೊಂಡು ಕಬ್ಬು ಬೆಳೆಯುತ್ತದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಬಿಸಿಲಿನ ಕೊರತೆಯಿಂದ ಭೂಮಿಯಲ್ಲಿರುವ ಕಾರ್ಬನ್ ಡೈಆಕ್ಸೈಡ್, ಬಯೋಮಾಸ್ ಆಗಿ ಪರಿವರ್ತನೆ ಆಗುವುದಿಲ್ಲ. ಇದರಿಂದಾಗಿ ವಾತಾವರಣದ ಉಷ್ಣತೆ  (ಗ್ಲೋಬಲ್ ವಾರ್ಮಿಂಗ್) ಹೆಚ್ಚುವುದಿಲ್ಲ. ಅಂತರ ಬೇಸಾಯ ಮಾಡುವುದರಿಂದ ಸೂರ್ಯ ಕಿರಣಗಳು ಎಲ್ಲೆಡೆ ತಲುಪುತ್ತವೆ. ಇದರಿಂದ ಫೋಟೊಸಿಂಥೆಸಿಸ್  ಕಾರ್ಬನ್ ಡೈ ಆಕ್ಸೈಡ್ ಪರಿವರ್ತನೆಯಾಗುತ್ತದೆ ಎನ್ನುತ್ತಾರೆ ದೇಸಾಯಿ.

ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಆರ್ಗ್ಯಾನಿಕ್ ಫುಡ್ ಕ್ಲಬ್, ನಬಾರ್ಡ್ ಸಹಯೋಗದೊಂದಿಗೆ ಈ ಪದ್ಧತಿಯನ್ನು ಅಳವಡಿಸಲಾಗಿದೆ. ಜಿಲ್ಲೆಯಲ್ಲಿ 200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಈ ಪದ್ಧತಿಯಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇತರ ರೈತರೂ ಈ ಪದ್ಧತಿಯತ್ತ ಆಕರ್ಷಿತರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.