ADVERTISEMENT

ಕಬ್ಬಿನ ಸೀಮೆಯಲ್ಲಿ ಹೂ

ಕೆ.ಚೇತನ್
Published 2 ಮಾರ್ಚ್ 2011, 19:30 IST
Last Updated 2 ಮಾರ್ಚ್ 2011, 19:30 IST

ಆನೇಕಲ್ ತಾಲ್ಲೂಕಿನ ಚಿಂತಲಮಡಿವಾಳ ಗ್ರಾಮದ ರಾಮಕೃಷ್ಣ ರೆಡ್ಡಿ ಎಂಬ ರೈತರು ಮಂಡ್ಯ ತಾಲ್ಲೂಕಿನ  ಬೆಳ್ಳುಂಡಗೆರೆ ಗ್ರಾಮ ಸಮೀಪದಲ್ಲಿ 2.22 ಎಕರೆ ಭೂಮಿ ಖರೀದಿಸಿ ಅಲ್ಲಿ ಗೋಲ್ಡನ್ ರಾಡ್ ಎಂಬ ಅಲಂಕಾರ ಸಸ್ಯ ಹಾಗೂ ಸುಗಂಧ ರಾಜ ಹೂ ಬೆಳೆದು ಸುತ್ತಮುತ್ತಲ ರೈತರ ಗಮನ ಸೆಳೆದಿದ್ದಾರೆ.

ರೆಡ್ಡಿ ಅವರು ತಮ್ಮ ಊರಿನ ಸಾಗುವಳಿ ಭೂಮಿಯಲ್ಲಿದ್ದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾದ ಮೇಲೆ ಮಂಡ್ಯ ಜಿಲ್ಲೆಯಲ್ಲಿ ಭೂಮಿ ಖರೀದಿಸುವ ನಿರ್ಧಾರ ಮಾಡಿದರು. ಸೂಕ್ತ ಭೂಮಿಗಾಗಿ ಸಾಕಷ್ಟು ಹುಡುಕಾಡಿ ಬೆಳ್ಳುಂಡಗೆರೆ ಗ್ರಾಮದಲ್ಲಿ ಭೂಮಿ ಖರೀದಿಸಿ ನಾಲ್ಕು ವರ್ಷಗಳಿಂದ ಬೇಸಾಯ ಮಾಡುತ್ತಿದ್ದಾರೆ.

ರೆಡ್ಡಿಯವರು ಖರೀದಿಸಿದ ಭೂಮಿಯ ಮಧ್ಯೆ ಕಾಲುವೆ ಹಾದು ಹೋಗಿರುವುದರಿಂದ ಅವರಿಗೆ ನೀರಿನ ಕೊರತೆ ಇಲ್ಲ. ಮದುವೆ, ಆರತಕ್ಷತೆ ವೇದಿಕೆಗಳನ್ನು ಸಿಂಗರಿಸಲು ಹೂವಿನ ಜತೆಯಲ್ಲಿ ಬಳಸುವ ‘ಗೋಲ್ಡನ್ ರಾಡ್’ ಅಲಂಕಾರಿಕ ಸಸ್ಯಗಳನ್ನು 2 ಎಕರೆಯಲ್ಲಿ ಬೆಳೆದಿದ್ದಾರೆ. ಉಳಿದ 22 ಗುಂಟೆಯಲ್ಲಿ ‘ಸುಗಂಧ ರಾಜ’ ಹೂ ಬೆಳೆದಿದ್ದಾರೆ. ಎರಡೂ ಬೆಳೆಗಳು ಸಮೃದ್ಧವಾಗಿವೆ.

‘ಗೋಲ್ಡನ್ ರಾಡ್’ ಸಸ್ಯಗಳು ನಾಟಿ ಮಾಡಿದ ನಂತರ 3 ರಿಂದ 4 ತಿಂಗಳಲ್ಲಿ ಕೊಯ್ಲಿಗೆ ಬರುತ್ತವೆ. ವರ್ಷದಲ್ಲಿ  ನಾಲ್ಕೈದು ಸಲ ಕೊಯ್ಲು ಮಾಡಬಹುದು. ಗಿಡಗಳನ್ನು ಚೆನ್ನಾಗಿ ಆರೈಕೆ ಮಾಡಿದರೆ 3-4 ವರ್ಷ ಫಸಲು ಪಡೆಯಬಹುದು ಎನ್ನುತ್ತಾರೆ ರೆಡ್ಡಿ.

ಕೀಟ ಹಾಗೂ ರೋಗಗಳನ್ನು ನಿಯಂತ್ರಿಸಲು ಅಗತ್ಯವಿದ್ದಾಗ ಔಷಧ ಸಿಂಪಡಿಸುತ್ತಾರೆ. ನಾಲ್ಕೈದು  ದಿನಗಳಿಗೊಮ್ಮೆ ನೀರುಣಿಸುತ್ತಾರೆ.  ರೆಡ್ಡಿ ಅವರ ಪುತ್ರ ಬೆಂಗಳೂರಿನಲ್ಲಿ ಹೂವಿನ ವ್ಯಾಪಾರ ಮಾಡುವುದರಿಂದ ಅವರಿಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ದಲ್ಲಾಳಿಗಳ ಕಿರಿಕಿರಿಯೂ ಇಲ್ಲ.  ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಸಿಗುತ್ತಿದೆ.

‘ಗೋಲ್ಡನ್ ರಾಡ್ ಮತ್ತು ಸುಗಂಧರಾಜ ಹೂವಿಗೆ ರಾಜ್ಯದಲ್ಲೇ ಬೇಡಿಕೆ ಇದೆ. ಕೆಲವು ಸಲ ಕೇರಳ ಮತ್ತು ಗೋವಾ ರಾಜ್ಯಕ್ಕೂ ಕಳಿಸುತ್ತಾರೆ. ಆಸಕ್ತರು ರಾಮಕೃಷ್ಣ ರೆಡ್ಡಿ ಅವರ ಜತೆಯಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.