ADVERTISEMENT

ಕಲ್ಲುನೆಲದಲ್ಲಿ ಸಮೃದ್ಧ ಬಾಳೆ

ರಮೇಶ ಕೆ
Published 28 ಸೆಪ್ಟೆಂಬರ್ 2011, 19:30 IST
Last Updated 28 ಸೆಪ್ಟೆಂಬರ್ 2011, 19:30 IST
ಕಲ್ಲುನೆಲದಲ್ಲಿ ಸಮೃದ್ಧ ಬಾಳೆ
ಕಲ್ಲುನೆಲದಲ್ಲಿ ಸಮೃದ್ಧ ಬಾಳೆ   

ಕಲ್ಲು ಬಂಡೆಗಳಿರುವ ಭೂಮಿಯಲ್ಲಿ ಬೇಸಾಯ ಮಾಡುವುದು ಕಷ್ಟ ಸಾಧ್ಯ. ಅಂತಹ ಭೂಮಿಯಲ್ಲಿ ಆಹಾರ ಧಾನ್ಯಗಳನ್ನು ಬೆಳೆಯಬಹುದಷ್ಟೆ. ಹೊಸದುರ್ಗ ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಪಿ. ಲಿಂಗದೇವರು ಪಂಪಯ್ಯ ಎಂಬ ರೈತರು ತಮ್ಮ ಎರಡೂವರೆ ಎಕರೆ ಕಲ್ಲು ಹೊಲದಲ್ಲಿ ರೊಬಸ್ಟಾ (ಜಿ-9-ಪಚ್ಚಬಾಳೆ) ತಳಿಯ ಅಂಗಾಂಶ ಬಾಳೆ ಬೆಳೆದು ಯಶಸ್ವಿಯಾಗಿದ್ದಾರೆ!

ಲಿಂಗದೇವರು ಪಂಪಯ್ಯ ಅವರಿಗೆ ಊರಿನ ಗುಡ್ಡದ ಪಕ್ಕದಲ್ಲಿ ಇಪ್ಪತ್ತು ಎಕರೆ ಜಮೀನಿದೆ. ಅಲ್ಲಿ ಬರೀ ಕಲ್ಲು,ಬಂಡೆಗಳೇ ತುಂಬಿವೆ. ಅದರಲ್ಲಿನ ಎರಡೂವರೆ ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ಅವರ ಈ ಸಾಹಸ ಸುತ್ತಲಿನ ಊರುಗಳ ರೈತರ ಗಮನ ಸೆಳೆದಿದೆ. ನಾಟಿಗೆ ಮೊದಲು ಗುಣಿ ತೆಗೆದು ಊರ ಸಮೀಪದ ಗೋಕಟ್ಟೆಯಿಂದ ಸುಮಾರು 60 ಟ್ರ್ಯಾಕ್ಟರ್‌ಗಳಷ್ಟು ಮಣ್ಣನ್ನು ತರಿಸಿ ಪ್ರತಿ ಗುಣಿಗೆ ಐದು ಮಂಕರಿಗಳಷ್ಟು ಮಣ್ಣು, ಬೇವಿನ ಹಿಂಡಿ, ಒಣಗಿದ ಎಲೆಗಳು, ಕೊಟ್ಟಿಗೆ ಗೊಬ್ಬರ ಸೇರಿಸಿ ತುಂಬಿದರು.

ಬೆಂಗಳೂರಿನ ಜಿಕೆವಿಕೆಯಿಂದ1850 ರೊಬಸ್ಟಾ ಬಾಳೆ ಸಸಿಗಳನ್ನು ತರಿಸಿ ನಾಟಿ ಮಾಡಿದರು. ಬಾಳೆ ಗಿಡಗಳಿಗೆ ಹನಿ ನೀರಾವರಿ ಅಳವಡಿಸಿದರು. ತಜ್ಞರ ಸಲಹೆಯಂತೆ ರಾಸಾಯನಿಕ ಗೊಬ್ಬರವನ್ನೂ ಹಾಕಿದರು. ಗಿಡಗಳು ಸಮೃದ್ಧವಾಗಿ ಬೆಳೆದು ಗೊನೆ ಬಿಟ್ಟಿವೆ. ಒಂದೊಂದು ಗೊನೆ 25ರಿಂದ 30ಕೆ.ಜಿ. ತೂಗುತ್ತವೆ.  

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 24ಸಾವಿರ ಸಹಾಯಧನವನ್ನು  ಪಂಪಯ್ಯ ಪಡೆದಿದ್ದಾರೆ. ಗುಣ ಮಟ್ಟದ ಬಾಳೆಗೆ ಬೇಡಿಕೆ ಇದೆ. ತಿಪಟೂರು, ಬಳ್ಳಾರಿ, ಬೆಂಗಳೂರು ಮಾರುಕಟ್ಟೆಗಳಿಗೆ ಕಳುಹಿಸಿ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

`ನಮ್ಮ  ಪಕ್ಕದ ಹೊಲದ ರೈತರು ಬಾಳೆ ಬೆಳೆದು ನಷ್ಟ ಅನುಭವಿಸಿದ್ದನ್ನು ನೋಡಿದ್ದೆ. ಹೊಸದುರ್ಗದಲ್ಲಿ ತೋಟಗಾರಿಕೆ ಇಲಾಖೆ ವ್ಯವಸ್ಥೆಗೊಳಿಸಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದೆ. ಶಿಬಿರದಲ್ಲಿ ರೈತರ ಅನುಭವಗಳನ್ನು ಕೇಳಿಕೊಂಡೆ. ತಜ್ಞರು ನೀಡಿದ ಸಲಹೆಗಳನ್ನು ಗಮನಿಸಿದೆ. ಕಲ್ಲು ಬಂಡೆಗಳ ಭೂಮಿಯಲ್ಲಿ ಬಾಳೆ ಬೆಳೆಯುವ ದುಸ್ಸಾಹಸ ಮಾಡಿದೆ. ಆದರೆ ಯಶಸ್ವಿಯಾಗುವ ಬಗ್ಗೆ ಅನುಮಾನಗಳಿದ್ದವು. ಆದರೆ ಮೊದಲ  ಪ್ರಯತ್ನದಲ್ಲಿ ಯಶಸ್ವಿಯಾದೆ~ಎನ್ನುತ್ತಾರೆ ಪಂಪಯ್ಯ.

 ಬಾಳೆ ಬೇಸಾಯಕ್ಕೆ ಪಂಪಯ್ಯ ಸುಮಾರು 1.30 ಲಕ್ಷ ರೂ ಖರ್ಚು ಮಾಡಿದ್ದಾರೆ. ಮೊದಲ ಬೆಳೆಯಿಂದ 6 ಲಕ್ಷರೂ ಆದಾಯ ನಿರೀಕ್ಷಿಸಿದ್ದಾರೆ. ಮುಂದಿನ ಎರಡು ಬೆಳೆಗಳಿಗೆ ಅವರಿಗೆ ಹೆಚ್ಚಿನ ಖರ್ಚು ಬರುವುದಿಲ್ಲ. ಹೀಗಾಗಿ ಎಲ್ಲವೂ ಲಾಭವೇ. ಈಗ ಅವರು ಇನ್ನೂ ಅರ್ಧ ಎಕರೆಯಲ್ಲಿ  800 ಪುಟ್ಟಬಾಳೆ ಸಸಿಗಳನ್ನು ನಾಟಿ ಮಾಡಿದ್ದಾರೆ. ಅವೂ ಗೊನೆ ಬಿಟ್ಟಿವೆ.
ಆಸಕ್ತರು ಪಂಪಯ್ಯ ಅವರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಅವರ ಮೊಬೈಲ್ ನಂಬರ್: 94833 20614

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.