ADVERTISEMENT

ಕೃಷಿ ಮಂಥನ

ಎಲ್‌.ನಾರಾಯಣ ರೆಡ್ಡಿ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST

* ಸಂಧ್ಯಾ, ಮೈಸೂರು
ನಮ್ಮ ಮನೆಯಲ್ಲಿ ಇರುವ ದಾಸವಾಳ, ನಂಜುಬಟ್ಟಲೆ ಹುಳುಗಳ ಕಾಟದಿಂದ ಚಿಗುರುತ್ತಿಲ್ಲ. ಏನು ಮಾಡುವುದು?
ರಸ ಹೀರುವ ಕೀಟದ ಹಾವಳಿ ಇರಬೇಕು. ಇದಕ್ಕೆ 1 ಕೆ.ಜಿ. ಬೇವಿನ ಬೀಜ ಕುಟ್ಟಿ ಆ ಪುಡಿ ಮುಳುಗುವಷ್ಟು ಗಂಜಲ ಅಥವಾ ಕುದಿಸಿದ ನೀರಿನಲ್ಲಿ 2 ದಿನ ನೆನೆಸಿ, 15 ಲೀಟರು ನೀರು ಸೇರಿಸಿ ಬಟ್ಟೆಯಲ್ಲಿ ಶೋಧಿಸಿ 10 ದಿನದ ಅಂತರದಲ್ಲಿ ಸಿಂಪರಣೆ ಮಾಡಿ.

* ಬೋರೇಗೌಡ, ಬೆಳ್ಳೂರು
ತೆಂಗಿನ ತೋಟದಲ್ಲಿ ಮೆಣಸು ಬೆಳೆಸಬಹುದಾ?
ತೆಂಗಿನ ಎರಡೂ ದಿಕ್ಕಿನಲ್ಲಿ ಎರಡು ಸಾಲು ಮೆಣಸು ಬೆಳೆಸಬಹುದು. ಈಗ ನೆಡಲು ಸೂಕ್ತ ಕಾಲ. ತೆಂಗಿನ ಮರದ ಸುತ್ತ ಬುಡದಿಂದ 15 ಅಡಿ ಖಾಲಿಯಿಡುವುದರಿಂದ ಗರಿ ಬಿದ್ದು ಹಾನಿಯಾಗುವುದನ್ನು ತಪ್ಪಿಸಬಹುದು.

* ರಾಜ ವಿಠಲ, ಸೋಮವಾರಪೇಟೆ
ಲಿಂಬೆ ಗಿಡಕ್ಕೆ ಮೊಳೆ ಹೊಳೆದರೆ ಉತ್ತಮ ಬೆಳೆ ಬರುತ್ತದೆ ಎಂದಿದ್ದೀರಿ. ಇದನ್ನು ಬೇರೆ ಬೆಳೆಗಳಿಗೂ ಅನ್ವಯ ಮಾಡಬಹುದೇ?
ಹಣ್ಣಿನ ಎಲ್ಲಾ ಮರಗಳಿಗೂ ಸಹಾಯವಾಗುತ್ತದೆ. ಬಳ್ಳಿ ಬೆಳೆಗಳಾದರೆ ಉದ್ದದ ಮುಳ್ಳನ್ನು ಚುಚ್ಚಿ. ತೆಂಗಿನ ಮರಕ್ಕೆ ಕಾಸರಗೋಡು ತೆಂಗಿನ ಬೆಳೆ ಸಂಶೋಧನಾ ಕೇಂದ್ರದಿಂದ ಒಂದು ಪುಡಿ ದೊರೆಯುತ್ತದೆ. ದಯವಿಟ್ಟು ಮೊಳೆ ಹೊಡೆದ ಜಾಗಕ್ಕೆ ಹಚ್ಚಿ.

ADVERTISEMENT

* ಸುರೇಶ್ ಎಸ್. ಮಸೋಳೆ, ಬೀದರ್
ನದಿ ತೀರದಲ್ಲಿರುವ ನನ್ನ ಜಮೀನಿಗೆ ನೀರು ಹಿಡಿಯುತ್ತಿದೆ. ರೇಷ್ಮೆ ಬೆಳೆಯಬಹುದಾ?
ರೇಷ್ಮೆ ಬೆಳೆಗೆ ಹಿಡಿ ತೇವ ಒಳ್ಳೆಯದು. ಶೇಕಡ 55 ನೀರಿನ ಅಂಶಕ್ಕಿಂತ ಹೆಚ್ಚಿನ ತೇವಾಂಶವಿದ್ದರೆ 20-25 ಅಡಿಗೊಂದರಂತೆ ಬಸಿ ಕಾಲುವೆ ತೆಗೆದು ತೇವಾಂಶ ಕಡಿಮೆ ಮಾಡಿಕೊಳ್ಳಿ.

* ಮರಿನಾಯಕ, ಎಚ್.ಡಿ.ಕೋಟೆ
ಮಳೆ ಜಾಸ್ತಿ ಇರುವುದರಿಂದ ಹತ್ತಿಯ ಎಲೆಗಳು ಹಳದಿ ರೋಗಕ್ಕೆ ತಿರುಗುತ್ತಿದೆ. ಏನು ಪರಿಹಾರ?
ಹತ್ತಿ ಬೆಳೆಗಷ್ಟೇ ಅಲ್ಲ. ಎಲ್ಲ ಬೆಳೆಗಳಿಗೂ ನೀರು ಹೆಚ್ಚಾದರೆ ಹಲವು ರೋಗಗಳು ಬರುತ್ತವೆ. ನೀರು ನಿಲ್ಲದಂತೆ ಕಾಲುವೆ ಬಸಿ ಕಾಲುವೆ ಮಾಡಿ ನೀರನ್ನು ಹೊರಕ್ಕೆ ಹಾಕಿ. ರೋಗನಾಶಕವನ್ನು ಸಿಂಪಡಿಸಿರಿ. ಹದಕ್ಕೆ ಬಂದ ಮೇಲೆ ನೆಲಕ್ಕೆ ಕುಂಟೆಹಾಯಿಸಿ ಹೆಪ್ಪು ಸಡಿಲಿಸಿ ಬೇರಿಗೆ ಗಾಳಿ ಒದಗಿಸಿ.

* ವನಜಕುಮಾರಿ, ಬೆಂಗಳೂರು
ಬದನೆ ಗಿಡಗಳ ಚಿಗುರು ಬಾಡಿ ಹೋಗುತ್ತಿವೆ. ಇಲ್ಲಿಯವರೆಗೆ ಸಿಂಪರಣೆ ಮಾಡಿದ ಔಷಧ ಈಚೆಗೆ ಕೆಲಸ ಮಾಡುತ್ತಿಲ್ಲ. ಏನು ಮಾಡುವುದು?

ಬದನೆ ಸಸಿ ಚಿಗುರು ಮಾತ್ರ ಬಾಡುತ್ತಿದ್ದರೆ ಸುಳಿ ಹುಳು (ಕೊರಕವಿರಬಹುದು) ಬಾಧೆ ಇರಬಹುದು. 15 ದಿನಕ್ಕೊಮ್ಮೆ 1 ಕೆ. ಜಿ. ಬೇವಿನ ಕುಟ್ಟಿ 2 ಲೀಟರ್ ಗಂಜಲದಲ್ಲಿ 2 ದಿನ ನೆನೆಸಿದ ನಂತರ 15 ಲೀಟರ್‌ಬೆರೆಸಿ ಬಟ್ಟೆಯಲ್ಲಿ ದ್ರಾವಣವನ್ನು ಶೋಧಿಸಿ ಸಿಂಪಡಿಸಿದರೆ ಬೇರೆ ಹುಳುಗಳನ್ನು ಸಹ ನಿಯಂತ್ರಿಸಬಹುದು.

* ಅರುಣ, ಪಿರಿಯಾಪಟ್ಟಣ- ಮೈಸೂರು ಜಿಲ್ಲೆ
ಕುಂಡದಲ್ಲಿ ಹೇಗೆ ಕೊತ್ತಂಬರಿ, ಬೀನ್ಸ್ ಬೆಳೆಸಬಹುದು?

ಕುಂಡಗಳಲ್ಲಿ ಕೆಳಗಿನ ಭಾಗದಲ್ಲಿ ನೀರು ಬಸಿಯಲು 1-2 ರಂಧ್ರ ಮಾಡಿ ಅದಕ್ಕೆ ಸಣ್ಣ ಕಲ್ಲು ಅಡ್ಡವಾಗಿಟ್ಟು ಮೂರನೇ ಒಂದು ಭಾಗ ಕೆಮ್ಮಣ್ಣು, ಮೂರನೇ ಒಂದು ಭಾಗ ಮರಳು, ಮೂರನೇ ಒಂದು ಭಾಗ ಗೊಬ್ಬರ ಬೆರೆಸಿ ಎಲ್ಲಾ ವಿಧದ ತರಕಾರಿಗಳನ್ನು ಬೆಳೆಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.