ADVERTISEMENT

ಕೃಷಿ ಮಂಥನ

ಎಲ್‌.ನಾರಾಯಣ ರೆಡ್ಡಿ
Published 9 ಜೂನ್ 2014, 19:30 IST
Last Updated 9 ಜೂನ್ 2014, 19:30 IST

ತೇಜಮೂರ್ತಿ, ಚಿತ್ರದುರ್ಗ
* ಅತಿ ಕನಿಷ್ಠ ಮಳೆಯಾಧಾರಿತ ಪ್ರದೇಶದ ಒಣಬೇಸಾಯ ಪದ್ಧತಿಯಲ್ಲಿ ಮಣ್ಣಿನ ತೇವಾಂಶ ಕಾಪಾಡಿಕೊಳ್ಳಲು ಮತ್ತು ಅಂತರ್ಜಲ ವೃದ್ಧಿಸಲು ಯಾವ ಸೂಕ್ತ ಕ್ರಮ ಅನುಸರಿಸಬೇಕು?
ಉ:
ತಮ್ಮ ಜಮೀನಿನ ಸುತ್ತ 4 ಅಡಿ ಅಗಲ, 3 ಅಡಿ ಎತ್ತರದ ಬದುಗಳನ್ನು ನಿರ್ಮಿಸಿ. ಪ್ರತಿ 80 ಅಡಿ ಅಂತರದಲ್ಲಿ ಇಳಿಜಾರಿಗೆ ಅಡ್ಡಲಾಗಿ ಒಂದೂವರೆ ಅಡಿ ಅಗಲ, 1 ಅಡಿ ಎತ್ತರದ ಸಣ್ಣ ಬದುಗಳನ್ನು ನಿರ್ಮಿಸಿ. ಮಳೆ ನೀರಿನ ವೇಗ ತಗ್ಗಿಸಿ ಇಂಗಲು ಅನುವು ಮಾಡಿಕೊಡಿ.

ನಿಮ್ಮ ಭೂಮಿಯ ಸುತ್ತಲೂ ಮೇವು, ಹಸಿರೆಲೆ ಗೊಬ್ಬರ, ಹಣ್ಣು ಮತ್ತು ಮರಮಟ್ಟು ನೀಡುವಂತಹ ಮರಗಳನ್ನು ಬೆಳೆಯುವುದರಿಂದ ಅನೇಕ ಲಾಭಗಳಿವೆ. 3 ಎಕರೆಗೊಂದರಂತೆ ಕೃಷಿ ಹೊಂಡ ನಿರ್ಮಿಸಿ ನೀರನ್ನು ಇಂಗಿಸಿ. ಎಲ್ಲಕ್ಕೂ ಮಿಗಿಲಾಗಿ ನಿಮ್ಮ ಕೃಷಿ ಉಳಿಕೆಗಳನ್ನು ಸುಡದೆ ಭೂಮಿಗೆ ಸೇರಿಸಿ. ನಿಮ್ಮ ಮಣ್ಣಿನ ಸಾವಯವ ಪದಾರ್ಥ ಹೆಚ್ಚಿಸಿ ರಾಸಾಯನಿಕಗಳ ಬಳಕೆ ನಿಲ್ಲಿಸಿದರೆ ತೇವಾಂಶ ಕಾಯ್ದುಕೊಳ್ಳಬಹುದು.

ನಾಗರಾಜು, ಮಂಡ್ಯ
* ಬೀಟೆ ಸಸಿಗಳು ಎಲ್ಲಿ ದೊರೆಯುತ್ತವೆ? ಇದು ಲಾಭದಾಯಕವೇ? ಉತ್ತಮವಾದ ಸಸಿ ಎಲ್ಲಿ ಸಿಗುತ್ತದೆ?
ಉ:
ಬೀಟೆ ಸಸಿ ಕಟಾವಿಗೆ ಬರಲು 60–70 ವರ್ಷ ಬೇಕು. ತಾಳ್ಮೆಯಿದ್ದರೆ ಬೆಳೆಸಬಹುದು. ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿರಿ. ಮಡಿಕೇರಿ ಜಿಲ್ಲೆಯಲ್ಲಿ ಕಾಫಿ ಎಸ್ಟೇಟ್ ಮಾಲೀಕರನ್ನು ಸಂಪರ್ಕಿಸಿ ನೋಡಿ.

ದರ್ಶನ ನಾಯ್ಕ, ಸಿದ್ದಾಪುರ
* ಈಶಾಡ, ಮಲ್ಲಿಕಾ ಮಾವಿನ ಹಣ್ಣು ಸುಂದರವಾಗಿದ್ದರೂ ಒಳಗಡೆ ಹುಳು ತಿಂದು ಹಾಳಾಗಿರುತ್ತವೆಯಲ್ಲ?
ಉ:
ಹಣ್ಣಿನ ಹುಳುಗಳಲ್ಲಿ ಎರಡು ವಿಧ. ಹಣ್ಣಿಗೆ ನೊಣದ ಹುಳು ಹಾಗೂ ಓಟೆಗೆ (ಗೊರಟಿಗೆ)ಬೀಳುವ ಹುಳು. ಮೊಟ್ಟೆಯನ್ನು ಹಣ್ಣಿನ ಮೇಲೆ (ಕೀಳುವ ಮೊದಲೆ) ಇಡದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಗಂಡುಪತಂಗ ಅಥವಾ ನೊಣಗಳನ್ನು ಆಕರ್ಷಿಸುವ ಪ್ಯಾರಾಮನ್‌ ಟ್ರಾಪ್‌ನಲ್ಲಿ ಹೆಣ್ಣು ಪತಂಗ ಅಥವಾ ನೊಣ ಬೆದೆ ಬಂದಂತಹ ವಾಸನೆ ನೀಡುವ ಮಾತ್ರೆಗಳನ್ನಿಟ್ಟು ಸಾಯಿಸುವುದು ಅಥವಾ ಬೇವಿನ ಬೀಜದ ಕಷಾಯ (ಶೇ 5) ಸಿಂಪಡಿಸಿ ಕಾಪಾಡಿಕೊಳ್ಳುವುದು.

ADVERTISEMENT

ಕುಮಾರ್, ಮಂಡ್ಯ
* ನಮ್ಮದು ಎರೆ ಮಣ್ಣಿನ ಭೂಮಿ. ಹಿಪ್ಪು ನೇರಳೆ ಕಡ್ಡಿ, ಶುಂಠಿ, ಮೆಣಸು ಇವುಗಳಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ?
ಉ:
ಯಾವ ಬೆಳೆ ಬೆಳೆದರೂ ಅನೇಕ ಸಮಸ್ಯೆ ಎದುರಾಗುವುದು ಸಾಮಾನ್ಯವಾದ್ದರಿಂದ ತಾವು ಮೂರೂ ಬೆಳೆಗಳನ್ನು ಬೆಳೆಯುವುದು ಕ್ಷೇಮ. ಶುಂಠಿ ಬೆಳೆಯಲು ಏಪ್ರಿಲ್‌ 2ನೇ ವಾರದಿಂದ ಮೇ 2ನೇ ವಾರದವರೆಗೆ ನಾಟಿ ಮಾಡಲು ಸೂಕ್ತ ಕಾಲವಾದ್ದರಿಂದ ತಕ್ಷಣವೇ 1 ಎಕರೆಗೆ 800 ಕೆ. ಜಿ ಬಿತ್ತನೆ ಶುಂಠಿ ಖರೀದಿಸಿರಿ.

ಸಾವಯವದಲ್ಲಿ ಶುಂಠಿ ಬೆಳೆಸಲು 30 ಟನ್‌ ಕೊಟ್ಟಿಗೆ ಗೊಬ್ಬರ ಬೆರೆಸಿ 45 ಸೆಂ. ಮಿ ಸಾಲಿಂದ ಸಾಲಿಗೆ ಅಂತರ ಕೊಟ್ಟು ಸಾಲಿನಲ್ಲಿ 18–20 ಸೆಂ.ಮಿ ಅಂತರದಲ್ಲಿ ನೆಟ್ಟು ವಾರಕ್ಕೊಮ್ಮೆ ನೀರು ಹಾಯಿಸುತ್ತಿರಿ. ಶುಂಠಿಗೆ ನೆರಳು ನೀಡಲು ಒಂದೂವರೆ ಮೀಟರಿಗೊಂದರಂತೆ ತೊಗರಿ ನೆಟ್ಟು ನೆರಳು ಒದಗಿಸಿ. ಎರಡೂವರೆ ತಿಂಗಳ ನಂತರ 2 ಟನ್ನಿನಷ್ಟು ಎರೆಗೊಬ್ಬರ ಒದಗಿಸಿ. ಡಿಸೆಂಬರ್‌ ತಿಂಗಳ ನಂತರ ಪೈರು ಒಣಗಲು ಪ್ರಾರಂಭಿಸಿದಂದಿನಿಂದ ಮಾರ್ಚ್‌ವರೆಗೆ ಅನುಕೂಲವಿದ್ದಾಗ ಶುಂಠಿ ತೆಗೆದು ಮಾರಬಹುದು.

ಮಹೇಶ್‌, ಬಾಗಲಕೋಟೆ
* ಬಾಳೆಯಲ್ಲಿ ಯಾವ ತಳಿ ಹೆಚ್ಚಿಗೆ ಇಳುವರಿ ಕೊಡುತ್ತದೆ?
ಉ:
ಬಾಳೆಯಲ್ಲಿ ಜಿ – 9 ಹೆಚ್ಚಿನ ಇಳುವರಿ ನೀಡುವ ತಳಿ.

ಸುದರ್ಶನ ಎಂ.ವಿ. ಬೆಂಗಳೂರು
* ಮಣ್ಣಿನ ಕುಂಡದಲ್ಲಿ ಗುಲಾಬಿ ಹೂವು ಬೆಳೆಸಿದ್ದೇನೆ. ಹೂವು ಅರಳುವ ಸಮಯದಲ್ಲಿ ಒಣಗುತ್ತಿವೆ. ಆದ್ದರಿಂದ ಬೇರನ್ನು ಚಿಕ್ಕದಾಗಿ ಕತ್ತರಿಸಿ ಬೇರೆ ಕುಂಡದಲ್ಲಿ ಮಣ್ಣು ಗೊಬ್ಬರ ಬೆರೆಸಿ ನೆಡಬಹುದೇ ತಿಳಿಸಿ.
ಉ:
ಮೂರನೇ ಎರಡು ಭಾಗ ಬೇರು ಕತ್ತರಿಸಿ ದೊಡ್ಡ ಕುಂಡದಲ್ಲಿ ಮಣ್ಣು ಗೊಬ್ಬರ ತುಂಬಿಸಿ ನೆಟ್ಟು ನೀರು ಕೊಡುತ್ತಿರಿ. ಯಾವ ತೊಂದರೆಯೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.