ADVERTISEMENT

ಕೆಂಪು, ಅಳ್ಳಿನ ಜೋಳದ ಸವಿ...

ಎಸ್.ಬಿ.ಮೆಣಸಿನಕಾಯಿ
Published 5 ಮೇ 2014, 19:30 IST
Last Updated 5 ಮೇ 2014, 19:30 IST
ವಿವಿಧ ತಳಿ ಜೋಳಗಳೊಂದಿಗೆ ಈರಮ್ಮ
ವಿವಿಧ ತಳಿ ಜೋಳಗಳೊಂದಿಗೆ ಈರಮ್ಮ   

ಉತ್ತರ ಕರ್ನಾಟಕದ ಯರಿಭೂಮಿಗಳಲ್ಲಿ ಬಿಳಿಜೋಳದ ಜೊತೆ ವಿಶೇಷವಾಗಿ ಬೆಳೆಯುವ ಬೆಳೆ ಕೆಂಪು ಜೋಳ ಹಾಗೂ ಅಳ್ಳಿನ ಜೋಳ. ಇವುಗಳನ್ನು ಬಿಳಿಜೋಳದ ಜೊತೆ ಬೆರಸಗಾಳ ಮಾಡಿ ಇಲ್ಲವೇ ಬೆಳೆಗಳ ಮಧ್ಯೆ ಒಂದೆರಡು ತಿರುವು ಹಾಕುವುದು ವಾಡಿಕೆ. ಕೆಂಪು ಜೋಳದ ದಂಟು ಬಿಳಿ ಜೋಳದ ದಂಟನ್ನು ಹೋಲುತ್ತಿದ್ದು, ಅದರ ರವದಿ ಅಲ್ಲಲ್ಲಿ ಕೆಂಪಗಿರುತ್ತದೆ. ಇದರ ತೆನೆ ಸಂಪೂರ್ಣ ಕೆಂಪಗಿದ್ದು, ಜೋಳವು ಕೆಂಪಾಗಿರುತ್ತದೆ. ಇದರ ಒಳಭಾಗ ಬಿಳಿಯಾಗಿರುತ್ತದೆ. ಈ ಜೋಳದ ಹಿಟ್ಟು ಬಲು ಜಿಗುಟಾಗಿರುವುದರಿಂದ ರೊಟ್ಟಿ ಮಾಡುವುದು ಅಪರೂಪ. ಆದರೆ ಇದರಿಂದ ತಯಾರಿಸುವ ಕುಚಗಡಬು ಬಲು ರುಚಿ.

ಅಳ್ಳಿನ ಜೋಳ ಬಿಳಿಜೋಳದ ದಂಟನ್ನು ಹೋಲುತ್ತದೆ. ಇದರ ತೆನೆಯಲ್ಲಿರುವ ಸೆರಗುಗಳು ಕಪ್ಪಾಗಿದ್ದು, ಜೋಳ ಅಚ್ಚ ಬೆಳ್ಳಗಿರುತ್ತವೆ. ಈ ಜೋಳದ ಕಾಳು ಸ್ವಲ್ಪ ಪೊಳ್ಳಾಗಿದ್ದು ಇದರ ಹಿಟ್ಟು ಜಿಗುಟು ಕಡಿಮೆ ಇರುವುದರಿಂದ ರೊಟ್ಟಿ ಮಾಡಲು ಅಷ್ಟಾಗಿ ಬರುವುದಿಲ್ಲ. ಇದರಿಂದ ಕುರಡಗಿ, ಬಾನ ಮಾಡುವುದಲ್ಲದೇ ಪಂಚಮಿ ಹಬ್ಬದಲ್ಲಿ ಇದರಿಂದ ಅಳ್ಳು ತಯಾರಿಸುವುದು ವಿಶೇಷ.

ಇಂಥ ಅಪರೂಪದ ಜೋಳದ ಕೃಷಿ ಮಾಡುತ್ತಿದ್ದಾರೆ ಹಳದೂರ ಗ್ರಾಮದ ಈರಮ್ಮ. ರಾ. ಸುಣಗಾರ. ‘ಕೆಂಪಜ್ವಾಳದ ಕುಚಗಡಬು, ಬೆಲ್ಲದಬ್ಯಾಳಿ, ತುಪ್ಪಾ ಹಕ್ಕೊಂಡ ಉಂಡ್ರ ಅದರ ರುಚಿ ಉಂಡವರ್ರಿಗೆ ಗೊತ್ರಿ. ಇನ್ನ ಅಳ್ಳಿನ ಜ್ವಾಳದಿಂದ ಮಾಡಿದ ಬಾನಾ ಉಂಡ ನೋಡಬೇಕ್ರಿ’ ಎನ್ನುತ್ತಾರೆ ಈರಮ್ಮ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.