ADVERTISEMENT

ಕೋಕೊಪಿಟ್‌ನಲ್ಲಿ ಕಬ್ಬಿನ ಸಸಿ ಬೆಳೆದು...

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2017, 19:30 IST
Last Updated 28 ಆಗಸ್ಟ್ 2017, 19:30 IST
ಕೋಕೊಪಿಟ್‌ನಲ್ಲಿ ಕಬ್ಬಿನ ಸಸಿ ಬೆಳೆದು...
ಕೋಕೊಪಿಟ್‌ನಲ್ಲಿ ಕಬ್ಬಿನ ಸಸಿ ಬೆಳೆದು...   

* ಬಸವರಾಜ ಗಿರಗಾಂವಿ

ಹಲವಾರು ಕೃಷಿ ಬೆಳೆಗಳಿಗೆ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯ. ಆದರೆ ಕಬ್ಬಿನ ವಿಷಯ ಹಾಗಲ್ಲ. ರೈತರೇ ತಮ್ಮ ಅವಶ್ಯಕತೆಗೆ ಅನುಗುಣವಾಗಿ, ಬೆಳೆಸಿದ ಕಬ್ಬನ್ನು ಕಟಾವು ಮಾಡಿ ಸಣ್ಣ ತುಂಡುಗಳನ್ನಾಗಿ ಮಾಡಿ ಸಾಲುಗಳಲ್ಲಿ ಹರಡಿ ನಾಟಿ ಮಾಡಬೇಕು. ಇದು ಬಹಳ ಹಿಂದಿನಿಂದ ಬಂದಿರುವ ಪದ್ಧತಿ. ಇದರಿಂದ ದೇಶದಾದ್ಯಂತ ಕೋಟ್ಯಂತರ ಮೌಲ್ಯದ ಕಬ್ಬು, ಬೀಜದ ರೂಪದಲ್ಲಿ ವ್ಯಯವಾಗುತ್ತಿದೆ. ಕಬ್ಬು ಸಸಿ ನಾಟಿ ಪದ್ಧತಿ, ಈ ಅಪವ್ಯಯವನ್ನು ತಡೆಯುವ ಹೊಸ ಹಾದಿಯಾಗಬಲ್ಲದು.

ಏನಿದು ಕಬ್ಬು ಸಸಿ ನಾಟಿ ಪದ್ಧತಿ?

ADVERTISEMENT

ಹತ್ತು ತಿಂಗಳ ಕಬ್ಬನ್ನು ಕಟಾವು ಮಾಡಿ ಕಬ್ಬಿನ ಗಿಡದಲ್ಲಿನ ಗಣಿಕೆಗಳ ಮಧ್ಯದ ಕಣ್ಣನ್ನು ಮಾತ್ರ ವ್ಯವಸ್ಥಿತವಾಗಿ ತೆಗೆದುಕೊಳ್ಳುವುದು. ನಂತರ ಸಣ್ಣ ಸಣ್ಣ ಟ್ರೇನಲ್ಲಿ ಕಣ್ಣುಗಳನ್ನು ಕೋಕೊಪಿಟ್‌ನೊಂದಿಗೆ ನಾಟಿ ಮಾಡಿದಾಗ ಕೆಲವು ದಿನಗಳ ನಂತರ ಕಬ್ಬಿನ ಕಣ್ಣುಗಳು ಸಸಿಯಾಗಿ ಚಿಗುರೊಡೆಯುತ್ತವೆ. ಚಿಗುರೊಡೆದ ಕಬ್ಬಿನ ಸಸಿಗಳನ್ನು 30–45 ದಿನಗಳ ಕಾಲ ಟ್ರೇನಲ್ಲಿ ವ್ಯವಸ್ಥಿತವಾಗಿ ಬೆಳೆಸಿ ನಂತರ ಸಸಿಗಳನ್ನು ಜಮೀನಿನಲ್ಲಿ ನಾಟಿ ಮಾಡುವುದೇ ಕಬ್ಬು ಸಸಿ ನಾಟಿ ಪದ್ಧತಿ.

ಕಣ್ಣುರಹಿತ ಕಬ್ಬಿನ ಗತಿಯೇನೆಂದು ಚಿಂತಿಸಬೇಕಿಲ್ಲ. ಅದಕ್ಕೂ ದಾರಿಯಿದೆ. ಕಣ್ಣುರಹಿತ ಕಬ್ಬಿನಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಿರುವುದರಿಂದ ಇದು ಪಶುಗಳಿಗೆ ಒಳ್ಳೆಯ ಆಹಾರ. ಇಂಥ ಕಣ್ಣುರಹಿತ ಕಬ್ಬನ್ನು ಸಕ್ಕರೆ ಕಾರ್ಖಾನೆಗಳೂ ನುರಿಸುವ ಆಯ್ಕೆಯಿದೆ. ಆದರೆ ಇವುಗಳಲ್ಲಿ ಸುಕ್ರೋಸ್ ಪ್ರಮಾಣ ಕಡಿಮೆ ಇರುವುದರಿಂದ ಕಾರ್ಖಾನೆಗಳಿಗೆ ನಿರೀಕ್ಷಿಸಿದಷ್ಟು ಸಕ್ಕರೆ ಇಳುವರಿ ಅಸಾಧ್ಯ. ಕಬ್ಬನ್ನು ಕೇವಲ ಬೀಜಕ್ಕಾಗಿ ವ್ಯಯಗೊಳಿಸದೆ ವಿವಿಧ ರೂಪದಲ್ಲಿ ಉಪಯೋಗಿಸಿ ಲಾಭ ಮಾಡಿಕೊಳ್ಳಬಹುದು.

ಕಬ್ಬು ಸಸಿ ನಾಟಿ ಪದ್ಧತಿ ಕ್ರಮಗಳು

* ಕೋಕೊಪಿಟ್ ಅವಶ್ಯ: ಕಬ್ಬಿನ ಸಸಿ ತಯಾರಿಸುವ ಟ್ರೇನಲ್ಲಿ ಕೋಕೊಪಿಟ್‌ (ತೆಂಗಿನ ಮರದ ಯಾವುದೇ ಒಣಗಿದ ತ್ಯಾಜ್ಯದಿಂದ ತಯಾರಿಸಿದ ಹುಡಿ) ಮಾತ್ರ ತುಂಬಬೇಕು. ಇದು ನೀರನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿದೆ ಮತ್ತು ಟ್ರೇನಲ್ಲಿ ಸಡಿಲಾಗಿ ಇರುವುದರಿಂದ ಕಬ್ಬಿನ ಕಣ್ಣಿಗೆ ಬೇಗನೆ ಮೊಳಕೆಯೊಡೆಯುವ ಸಾಮರ್ಥ್ಯ ಬರುತ್ತದೆ. ಸಡಿಲಿರುವ ಸ್ಥಳದಲ್ಲಿ ಸಸಿ ಬೇರು ಬಿಡಲು ಅನುಕೂಲ. ದಿನ ಕಳೆದಂತೆ ಈ ಕೋಕೊಪಿಟ್ ನೀರಿನೊಂದಿಗೆ ಬೆರೆತು ಕಳೆತು ಗೊಬ್ಬರವಾಗುತ್ತ ಸಸಿಗೆ ಆಹಾರವಾಗಿ ಪರಿವರ್ತನೆಯಾಗುತ್ತದೆ.

ಕೋಕೊಪಿಟ್ ಬದಲು ಮಣ್ಣನ್ನು ಉಪಯೋಗಿಸಿ ದರೆ ಕೆಲವೇ ಗಂಟೆಗಳಲ್ಲಿ ಆ ಮಣ್ಣು ಗಟ್ಟಿಯಾಗಿ ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಆಗ ಎಳೆಯ ಕಬ್ಬಿನ ಕಣ್ಣಿಗೆ ಮೊಳಕೆಯೊಡೆಯಲು ಮತ್ತು ಬೇರು ಬಿಡಲು ಸಾಧ್ಯವಾಗುವುದಿಲ್ಲ. ಟ್ರೇನಲ್ಲಿ ಕೇವಲ ಕಬ್ಬಿನ ಕಣ್ಣು ಮತ್ತು ಸ್ವಲ್ಪ ಕೋಕೊಪಿಟ್ ಹಿಡಿಯುವಷ್ಟು ಮಾತ್ರ ಅಂದಾಜು 72 ಸಣ್ಣ ಸಣ್ಣ ರಂಧ್ರಗಳಿರುತ್ತವೆ. ಆದ್ದರಿಂದ ಕೋಕೊಪಿಟ್ ಮಾತ್ರ ಉಪಯೋಗಿಸಬೇಕು. ಏನನ್ನೂ ಮಿಶ್ರಣ ಮಾಡಬಾರದು.

* ರೈತರು ತಮಗೆ ಅವಶ್ಯವಿರುವಷ್ಟು ಕಬ್ಬಿನ ಕಣ್ಣುಗಳನ್ನು ಮೊನಚಾದ ಉಪಕರಣಗಳಿಂದ ವ್ಯವಸ್ಥಿತವಾಗಿ ಬೇರ್ಪಡಿಸಬಹುದು. ಸುಲಭವಾಗಿ ಕಬ್ಬಿನಿಂದ ಕಣ್ಣುಗಳನ್ನು ಕತ್ತರಿಸುವ ಯಂತ್ರಗಳು ಸಾಕಷ್ಟಿವೆ.

* ಕಬ್ಬಿನಿಂದ ಬೇರ್ಪಡಿಸುವಾಗ ಕಣ್ಣುಗಳಿಗೆ ಯಾವುದೇ ತೊಂದರೆಯಾಗ ದಂತೆ ಎಚ್ಚರವಹಿಸುವುದು ಅವಶ್ಯ. ತೊಂದರೆಯಾದ ಕಣ್ಣುಗಳು ಮೊಳಕೆಯೊಡೆಯುವುದಿಲ್ಲ.

* ಟ್ರೇನಲ್ಲಿ ನಾಟಿ ಮಾಡಿದ ತಕ್ಷಣದಿಂದಲೇ ಆಯಾ ದಿನದ ವಾತಾವರಣ ಗಮನಿಸಿ ಪ್ರತಿದಿನ ಕನಿಷ್ಠ 3–4 ಬಾರಿ ನೀರು ಹಾಕಬೇಕು. ಟ್ರೇನಲ್ಲಿ ತೇವಾಂಶ ಕಾಪಾಡಿಕೊಳ್ಳಬೇಕು.

* ಕಬ್ಬಿನ ಕಣ್ಣುಗಳು ಮೊಳಕೆಯೊಡೆದ ನಂತರ ಕನಿಷ್ಠ 15– 45 ದಿನಗಳೊಳಗೆ ಹೊರತೆಗೆದು ಜಮೀನಿನಲ್ಲಿ ನಾಟಿ ಮಾಡಬೇಕು.

* ಚಳಿಗಾಲದಲ್ಲಿ ಕಬ್ಬಿನ ಕಣ್ಣುಗಳು ಬೇಗನೆ ಮೊಳಕೆಯೊಡೆಯುವುದಿಲ್ಲ, ಇದಕ್ಕಾಗಿ ಆರ್ದ್ರತೆ ಸೃಷ್ಟಿಸಲು ಗ್ರೀನ್ ಹೌಸ್ ಅವಶ್ಯಕ. ಇನ್ನುಳಿದ ದಿನಗಳಲ್ಲಿ ಬಯಲಲ್ಲಿ ಸಸಿ ತಯಾರಿಸಿದರೆ ಯಾವುದೇ ತೊಂದರೆಯಿಲ್ಲ.

ಒಂದು ಟನ್ ಕಬ್ಬಿನಿಂದ ದೊರೆಯುವ ಸಸಿಗಳು: 10 ತಿಂಗಳ ಆರೋಗ್ಯವಂತ ಒಂದು ಟನ್ ಕಬ್ಬಿನ ಬೆಳೆಯಲ್ಲಿ 1.5 ಕೆಜಿಯ ಅಂದಾಜು 666 ಕಬ್ಬುಗಳು ಲಭ್ಯವಿರುತ್ತವೆ. ಪ್ರತಿಯೊಂದು ಕಬ್ಬಿನಲ್ಲಿ 15 ಕಣ್ಣುಗಳಿರುತ್ತವೆ. ಅಂದರೆ ಒಂದು ಟನ್ ಕಬ್ಬಿನ ಬೆಳೆಯಲ್ಲಿ 9,990 ಕಣ್ಣುಗಳಿರುತ್ತವೆ. ಈ ಕಣ್ಣುಗಳಲ್ಲಿ ಕನಿಷ್ಠ 9,500 ಕಣ್ಣುಗಳು ಸಸಿ ಮಾಡಲು ಯೋಗ್ಯ.

ಒಂದು ಟನ್ ಕಬ್ಬಿನಲ್ಲಿ ಮೂರು ಕ್ವಿಂಟಲ್ ಕಬ್ಬಿನ ಕಣ್ಣುಗಳು ಮಾತ್ರ ಸಸಿ ತಯಾರಿಕೆಗೆ ಸಾಕು. ಇನ್ನು 7 ಕ್ವಿಂಟಲ್ ಕಣ್ಣುರಹಿತ ಕಬ್ಬು ಉಳಿಯು ತ್ತದೆ. ಕಣ್ಣುರಹಿತ ಕಬ್ಬನ್ನು ಆಲೆಮನೆ ಅಥವಾ ಪಶು ಆಹಾರಕ್ಕೆ ಮಾರಾಟ ಮಾಡಿದರೆ ಅಲ್ಲೂ ಉಳಿತಾಯವಾಗಿ ಸಸಿಗೆ 50 ಪೈಸೆ ಖರ್ಚು ತಗಲಬಹುದು.

ಒಂದು ಎಕರೆ ನಾಟಿ ಮಾಡಲು ಅವಶ್ಯಕ ಕಬ್ಬಿನ ಸಸಿಗಳು: ಒಂದು ಎಕರೆಯಲ್ಲಿ 5 ಅಡಿ ಅಗಲ, 264 ಉದ್ದ ಸಾಲುಗಳು ಇರುತ್ತವೆ. ಉದ್ದ ಸಾಲುಗಳಲ್ಲಿ 2 ಅಡಿಗೆ ಒಂದು ಸಸಿಯಂತೆ 4,356 ಸಸಿಗಳು ಅವಶ್ಯ. ಸಸಿಗೆ 50 ಪೈಸೆ ಎಂತಾದರೆ ₹2,178 ಹಣ ಖರ್ಚಾಗುತ್ತದೆ.

ಕಬ್ಬಿನ ಸಸಿ ನಾಟಿ ವಿಧಾನ: ಕಬ್ಬಿನ ಸಸಿ ಗಳನ್ನು ಸಸಿಯಿಂದ ಸಸಿಗೆ 2 ಅಡಿ, ಸಾಲಿ ನಿಂದ ಸಾಲಿಗೆ 5 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡುವಾಗ ತೇವಾಂಶ ಕಡ್ಡಾಯ. ಕೈಯಿಂದ 5 ಇಂಚು ತಗ್ಗು ತೆಗೆದು ನಾಟಿ ಮಾಡಬೇಕು. ಕನಿಷ್ಠ 15 ದಿನಗಳವರೆಗೆ ತೇವಾಂಶ ಕಾಪಾಡುವಂತೆ ನೀರನ್ನು ಹಾಯಿಸಬೇಕು.

ಪ್ರಯೋಜನಗಳು:

* ಆರೋಗ್ಯವಂತ ಸಸಿಗಳು ಲಭ್ಯ

* ತಿಂಗಳವರೆಗೆ ನೀರು ಮತ್ತು ಕಳೆ ನಿರ್ವಹಣೆ ತೊಂದರೆ ಇರುವುದಿಲ್ಲ

* ಬೀಜಕ್ಕೆ ಮತ್ತು ನಾಟಿಗೆ ಅನಗತ್ಯ ಸುತ್ತಾಟ ತಪ್ಪುತ್ತದೆ

* ಹಣ, ಸಮಯದ ಉಳಿತಾಯ

ಇಳುವರಿ ಹೇಗಿರುತ್ತದೆ? ಹಳೆಯ ಸಂಪ್ರದಾಯ ದಂತೆ ಕಬ್ಬನ್ನೇ ನೇರವಾಗಿ ಜಮೀನಿನಲ್ಲಿ ನಾಟಿ ಮಾಡುವುದರಿಂದ ಕೆಲವು ಕಬ್ಬು ನಾಟಿಯಾಗದೇ ಉಳಿಯಬಹುದು. ಇದರಿಂದ ನಾಟಿಯಾದ ಸಸಿಗಳ ಅಂತರ ಹೆಚ್ಚಾಗಿ ಇಳುವರಿ ಕಡಿಮೆಯಾಗುತ್ತದೆ. ಕಬ್ಬಿನ ಸಸಿಗಳನ್ನು ನಾಟಿ ಮಾಡುವುದರಿಂದ ಸಸಿಗಳ ಅಂತರ ಒಂದೇ ರೀತಿಯಾಗಿರುತ್ತದೆ. ಜಮೀನಿನಲ್ಲಿ ನಾಟಿ ಮಾಡುವ 45 ದಿನ ಮೊದಲು ಟ್ರೇನಲ್ಲಿ ಆರೋಗ್ಯವಂತವಾಗಿ ಬೆಳೆದ ಕಾರಣ ಇಳುವರಿ ಅಧಿಕವಿರುತ್ತದೆ. ಇದರಿಂದ ಸಕ್ಕರೆ ಇಳುವರಿಯ ಪ್ರಮಾಣವೂ ಹೆಚ್ಚಾಗುತ್ತದೆ.

ಸರ್ಕಾರದ ಸಹಕಾರವೂ ಬೇಕು: ಕಣ್ಣುರಹಿತ ಕಬ್ಬನ್ನು ಬಹಳ ಗಂಟೆಗಳ ಕಾಲ ಇಟ್ಟರೆ ಅದು ಹಾಳಾಗುತ್ತದೆ. ಅದಕ್ಕಾಗಿ ಈ ಕಬ್ಬನ್ನು ತ್ವರಿತವಾಗಿ ಹೈನುಗಾರಿಕೆಯ ಪಶು ಸಾಕಾಣಿಕಾ ಕೇಂದ್ರಗಳಿಗೆ, ಗೋಶಾಲೆಗಳಿಗೆ, ಮೃಗಾಲಯಗಳಿಗೆ ಪಶು ಆಹಾರದ ಸಲುವಾಗಿ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನುರಿಸಲು ವಿಲೇವಾರಿಯಾಗುವಂತೆ ಸರ್ಕಾರ ಮಾರುಕಟ್ಟೆ ಒದಗಿಸಬಹುದು. ಈ ಪದ್ಧತಿ ಈಗಾಗಲೇ ತಮಿಳುನಾಡು, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ, ಮಹಾರಾಷ್ಟ್ರ, ಕರ್ನಾಟಕದ ಬೆಳಗಾವಿ ಜಿಲ್ಲೆಯ ಗಡಿ ಭಾಗಗಳಲ್ಲಿ ಪ್ರಚಲಿತದಲ್ಲಿದೆ. ಕೆಲವು ಕಾರ್ಖಾನೆಗಳು ಮತ್ತು ರೈತರು ಈ ಪ್ರಯೋಗ ನಡೆಸಿ ಯಶಸ್ವಿಯೂ ಆಗಿದ್ದಾರೆ. ಈ ಪದ್ಧತಿ ಕುರಿತು ಇನ್ನಷ್ಟು ಚರ್ಚೆಯ ಅವಶ್ಯಕತೆಯಿದೆ. ಸಂಪರ್ಕಕ್ಕೆ:9945220660.

***

ಎಷ್ಟೊಂದು ಉಳಿತಾಯ

ಭಾರತ ಸರಾಸರಿ 50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬನ್ನು ಹೊಂದಿದೆ. ಇದರಲ್ಲಿ 20 ಲಕ್ಷ ಹೆಕ್ಟೇರ್‌ ಕಬ್ಬನ್ನು ಪ್ರತಿವರ್ಷ ಹೊಸದಾಗಿ ನಾಟಿ ಮಾಡುತ್ತಾರೆ. ಇನ್ನುಳಿದ 30 ಲಕ್ಷ ಹೆಕ್ಟೇರ್‌ ಕಬ್ಬು ಕುಳೆ ಇರುತ್ತದೆ. ಹೊಸದಾಗಿ ನಾಟಿ ಮಾಡುವ 20 ಲಕ್ಷ ಹೆಕ್ಟೇರ್‌ ಕಬ್ಬಿಗೆ 1.60 ಕೋಟಿ ಮೆಟ್ರಿಕ್‌ ಟನ್ ಕಬ್ಬು ಬೀಜಕ್ಕೆ ಬೇಕಾಗುತ್ತದೆ. ಅಂದರೆ ಅಂದಾಜು ಪ್ರತಿ ಹೆಕ್ಟೇರ್‌ಗೆ 8 ಮೆಟ್ರಿಕ್‌ ಟನ್‌ನಂತೆ ಕಬ್ಬು ಬೀಜಕ್ಕೆ ಉಪಯೋಗವಾಗುತ್ತದೆ. ಕಬ್ಬು ಬೆಳೆಯ ಸದ್ಯದ ಮಾರುಕಟ್ಟೆ ದರ ಪ್ರತಿ ಮೆಟ್ರಿಕ್‌ ಟನ್‌ಗೆ ₹3000ನಂತೆ ಲೆಕ್ಕ ಮಾಡಿದರೆ ₹4,500 ಕೋಟಿ ರೂಪಾಯಿ ಖರ್ಚಾಗುತ್ತದೆ.
ಈ ಪದ್ಧತಿ ಅನುಸರಿಸಿದರೆ ಪ್ರತಿ ಹೆಕ್ಟೇರ್‌ಗೆ ಕೇವಲ 8 ಕ್ವಿಂಟಲ್ ಕಬ್ಬಿನ ಕಣ್ಣುಗಳು ಸಾಕಾಗುತ್ತವೆ. ದೇಶಾದ್ಯಂತ 20 ಲಕ್ಷ ಹೆಕ್ಟೇರ್‌ ನಲ್ಲಿ ಕಬ್ಬು ನಾಟಿ ಮಾಡಲು ಕೇವಲ 16 ಲಕ್ಷ ಮೆಟ್ರಿಕ್‌ ಟನ್ ಕಬ್ಬಿನ ಕಣ್ಣುಗಳು ಸಾಕಾಗುತ್ತದೆ.

⇒ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.