ADVERTISEMENT

ಕೋಲಾರದಲ್ಲಿ ಇಸ್ರೇಲ್ !

ಕೆ.ನರಸಿಂಹ ಮೂರ್ತಿ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST
ಕೋಲಾರದಲ್ಲಿ ಇಸ್ರೇಲ್ !
ಕೋಲಾರದಲ್ಲಿ ಇಸ್ರೇಲ್ !   

ಬರಗಾಲ ಪೀಡಿತ ಕೋಲಾರ ಜಿಲ್ಲೆಗೂ ಕೃಷಿ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ಪ್ರಯೋಗಗಳಿಂದ ವಿಶ್ವದ ಗಮನ ಸೆಳೆಯುತ್ತಿರುವ ಇಸ್ರೇಲ್ ದೇಶಕ್ಕೂ ಎತ್ತಣಿಂದೆತ್ತ ಸಂಬಂಧ?

ಈ ಪ್ರಶ್ನೆಯನ್ನು ಕೇಳುವವರು ಕೆಲವು ವರ್ಷಗಳ ಬಳಿಕ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ತೋಟಗಾರಿಕೆ ಕ್ಷೇತ್ರಕ್ಕೆ ಬಂದರೆ ಇಸ್ರೇಲ್ ದೇಶದ ಮಾವಿನ ಹಣ್ಣಿನ ರುಚಿ ನೋಡಬಹುದು!  ‘ಮಾವಿನ ಮಡಿಲು’ ಎಂಬ ಅನ್ವರ್ಥನಾಮ­ದಿಂದಲೇ ಗುರುತಿಸಲಾಗುವ ಶ್ರೀನಿವಾಸಪುರ ತಾಲ್ಲೂಕು ಈಗ ಮತ್ತೊಂದು ದಾಖಲೆ ಬರೆಯಲು ಹೊರಟಿದೆ.

ತಾಲ್ಲೂಕಿನ ಹೊಗಳಗೆರೆ ತೋಟಗಾರಿಕೆ ಕ್ಷೇತ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸ್ಥಾಪನೆಯಾಗಿರುವ ಮಾವು ಅಭಿವೃದ್ಧಿ ಕೇಂದ್ರದ ಆವರಣದಲ್ಲಿ ಇಸ್ರೇಲಿನ ಮಾವಿನ ತಳಿಗಳಾದ ಸೀವೆರ್ (seiver ) ಮತ್ತು 4/9 ಚಿಗುರೊಡೆದಿವೆ.

ಈ ಎರಡೂ ತಳಿಗಳ ತಲಾ 50 ವಾಟೆಗಳನ್ನು ಇಸ್ರೇಲಿನಿಂದ ನೇರವಾಗಿ ತರಲಾಗಿದೆ. ಕ್ಷೇತ್ರದ ಪಾಲಿಥಿನ್ ಕವರುಗಳ ಮಣ್ಣಿನಲ್ಲಿ ಹುದುಗಿಸಿಟ್ಟ ಒಂದೊಂದು ವಾಟೆಯಿಂದಲೂ ಕನಿಷ್ಠ ಮೂರರಿಂದ ನಾಲ್ಕು ಚಿಗುರು­ ಕಣ್ಣುಬಿಟ್ಟಿವೆ. ಅಂತಹ ನೂರಾರು ಸಸಿಗಳನ್ನು ಬೇರ್ಪಡಿಸಿ ದೇಸೀ ಮಾವಿನ ತಳಿಗಳ ನಡುವೆಯೇ ತೋಟಗಾರಿಕೆ ಇಲಾಖೆಯು ವಿಶೇಷ ಕಾಳಜಿಯಿಂದ ಬೆಳೆಸುತ್ತಿದೆ.

ಏನಿದರ ವಿಶೇಷ?
ಇಸ್ರೇಲಿನಿಂದ ಆಮದು ಮಾಡಿಕೊಂಡಿರುವ ತಳಿಗಳು ಹೆಚ್ಚು ಎತ್ತರ ಬೆಳೆಯುವಂಥವಲ್ಲ. ಕುಬ್ಜ ಆಕಾರದಲ್ಲೇ ಇರುವು­ದರಿಂದ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಲು ಸಾಧ್ಯವಿದೆ. ಹೆಚ್ಚು ಇಳುವರಿ ಬರುವುದಿಲ್ಲವಾದ್ದರಿಂದ ಗಾಳಿ ಮಳೆಗೆ ಉದುರಿ ನಷ್ಟವಾಗುವ ಸಾಧ್ಯತೆಯೂ ಕಡಿಮೆ ಎನ್ನುತ್ತಾರೆ ಕೇಂದ್ರದ ನಿರ್ದೇಶಕ ಸೋಮು.

ಈ ತಳಿಗಳನ್ನು ಮೊದಲಿಗೆ ಪ್ರಾಯೋಗಿಕವಾಗಿ ಬೆಳೆಯ­ಲಾಗು­ವುದು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳು­ತ್ತವೆಯೇ? ರೈತರಿಗೆ ಈ ತಳಿಗಳು ಅನುಕೂಲಕರವಾಗಿ­ರು­ತ್ತ­ವೆಯೇ ಮತ್ತು ಹೆಚ್ಚು ಲಾಭವನ್ನು ತರುತ್ತವೆಯೇ ಎಂಬುದನ್ನು ಪರಿಶೀಲಿಸಿದ ಬಳಿಕ ರೈತರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಪರಿಚಯಿಸಲಾಗುವುದು ಎನ್ನುತ್ತಾರೆ ಅವರು.

ಬಂದಿದ್ದರು ಯೂರಿ ರೂಬಿನ್ಸ್ ಟನ್....
ಇದೇ ಕ್ಷೇತ್ರದಲ್ಲಿ ಜಾರಿಗೊಳ್ಳಲಿರುವ, ಈಗ ಭ್ರೂಣಾವಸ್ಥೆಯಲ್ಲಿರುವ ಇಂಡೋ ಇಸ್ರೇಲ್ ಯೋಜನೆಯ ಸಲುವಾಗಿಯೇ ಇಸ್ರೇಲಿನ ಎಂಬೆಸಿಯ ಯೂರಿ ರೂಬಿನ್ಸ್ ಟನ್ ಅವರು ಈ ಕ್ಷೇತ್ರಕ್ಕೆ ಕಳೆದ ಅಕ್ಟೋಬರ್‌ನಲ್ಲಿ ಭೇಟಿ ಕೊಟ್ಟಿದ್ದರು.

ಸ್ಥಳೀಯ ಮಾವಿನ ತಳಿಗಳನ್ನು ಇಸ್ರೇಲ್ ಮಾದರಿಯ ಅಧಿಕ ಸಾಂದ್ರತೆ ಪದ್ಧತಿಯಲ್ಲಿ ಬೆಳೆಯುವ ಕುರಿತು ಪ್ರಯೋಗ­ವನ್ನೂ ಕೇಂದ್ರದಲ್ಲಿ ಶುರು ಮಾಡಲಾಗಿದೆ. ದೇಶದ ವಿವಿಧ ಭಾಗಗಳಲ್ಲಿರುವ ಸುಮಾರು 150 ಮಾವಿನ ತಳಿಗಳ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸುವ ಕೆಲಸವೂ ಶುರುವಾಗಿದ್ದು ಈಗಾಗಲೇ 25 ಬಗೆಯ ತಳಿಗಳನ್ನು ನಾಟಿ ಮಾಡಿ ಬೆಳೆಸಲಾಗುತ್ತಿದೆ. 100 ತಳಿಗಳನ್ನು ಪೂರೈಸಲು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಗೆ ಮನವಿ ಸಲ್ಲಿಸಲಾಗಿದೆ.

ಗೊಬ್ಬರ ಮತ್ತು ನೀರನ್ನು ಏಕಕಾಲಕ್ಕೆ ಅಗತ್ಯ ಪ್ರಮಾಣದಲ್ಲಿ ಪೂರೈಸುವ ಇಸ್ರೇಲ್ ತಾಂತ್ರಿಕತೆಯನ್ನೂ ಅಳವಡಿಸಲಾಗಿದೆ. ಹೀಗೆ ಏಕಕಾಲಕ್ಕೆ ಹೊಗಳಗೆರೆ ತೋಟಗಾರಿಕೆ ಕ್ಷೇತ್ರವು ಇಸ್ರೇಲ್ ಮಾವಿನ ತಳಿ ಮತ್ತು ತಂತ್ರಜ್ಞಾನದ ಪ್ರಯೋಗದಿಂದ ಗಮನ ಸೆಳೆಯುತ್ತಿದೆ.

ಇಸ್ರೇಲ್ ಹನಿ ನೀರಾವರಿ ತಂತ್ರಜ್ಞಾನದ ವ್ಯವಸ್ಥೆಯ ವಿಶೇಷ ಎಂದರೆ, ಇಂತಿಷ್ಟು ನೀರು ಮತ್ತು ಗೊಬ್ಬರವನ್ನು ಇಂತಿಷ್ಟು ಅವಧಿಯಲ್ಲಿ ಇಷ್ಟು ಗಿಡಗಳಿಗೆ ಮಾತ್ರ ಪೂರೈಕೆಯಾಗಬೇಕು ಎಂಬ ಸೂಚನೆಯನ್ನು ಕಂಪ್ಯೂಟರ್ ನಿಯಂತ್ರಿತ ವ್ಯವಸ್ಥೆಯ ಮೂಲಕ ಸೂಚಿಸಿದರೆ ಅಷ್ಟೇ ಪ್ರಮಾಣದ ನೀರು ಪೂರೈಕೆಯಾಗುತ್ತದೆ. ಅದರಾಚೆಗೆ ಒಂದು ತೊಟ್ಟು ನೀರನ್ನೂ ಪಂಪ್ ಸೆಳೆಯುವುದಿಲ್ಲ. ಅತ್ಯಂತ ಸೂಕ್ಷ್ಮ ಲೆಕ್ಕಾಚಾರದಲ್ಲಿ ನೀರನ್ನು ಬಳಸಿ ತೋಟಗಾರಿಕೆಯನ್ನು ನಡೆಸುವುದು ಈ ಪ್ರಯತ್ನದ ಹಿಂದಿರುವ ಉದ್ದೇಶ.

ಮಳೆ ಕೊರತೆ ಮತ್ತು ಬತ್ತಿದ ಅಂತರ್ಜಲದ ಈ ಸನ್ನಿವೇಶದಲ್ಲಿ ತೋಟಗಾರಿಕೆಯು ದುಬಾರಿ ಮತ್ತು ನಷ್ಟದ ಬಾಬತ್ತು ಎಂಬ ಲೆಕ್ಕಾಚಾರದ ನಡುವೆ ಜೀವನ ನೂಕುತ್ತಿರುವ ಜಿಲ್ಲೆಯ ರೈತರಿಗೆ ಈ ತಂತ್ರಜ್ಞಾನ ಇನ್ನಷ್ಟು ಉತ್ಸಾಹ ತುಂಬಲಿದೆ ಎಂಬುದು ಮತ್ತೊಂದು ಸಂಗತಿ.

ಮಾವು ಕಾಶಿ
ಹೊಗಳಗೆರೆ ತೋಟಗಾರಿಕೆ ಕ್ಷೇತ್ರವು ಮುಂದಿನ ವರ್ಷಗಳಲ್ಲಿ ಇಡೀ ರಾಜ್ಯದಲ್ಲೇ ‘ಮಾವು ಕಾಶಿ’ ಎಂದು ಪ್ರಸಿದ್ಧವಾಗಲಿದೆ. ದೇಶದ ವಿವಿಧ ಭಾಗಗಳಲ್ಲಿರುವ ಮಾವಿನ ತಳಿಗಳ ಪರಿಚಯ ಇಲ್ಲಿ ದೊರಕಲಿದೆ. ಮಾವು ಬೆಳೆಯುವುದರಿಂದ ಹಿಡಿದು ಕಟಾವು ಹಂತದವರಿಗೆ ರೈತರಿಗೆ ಬೇಕಾದ ಎಲ್ಲ ಬಗೆಯ ತರಬೇತಿಯನ್ನೂ ನೀಡಲು ಇಲ್ಲಿ ಸಿದ್ಧತೆ ನಡೆದಿದೆ. ಅದಕ್ಕಾಗಿಯೇ ತರಬೇತಿ ಕೇಂದ್ರ ಮತ್ತು ಪ್ರದರ್ಶನ ಕೇಂದ್ರವನ್ನು ನಿರ್ಮಿಸಲಾಗಿದೆ.

30/30 ಅಡಿಗಳ ಅಂತರದಲ್ಲಿ ಮಾವು ಬೆಳೆಯುವ ಸಾಂಪ್ರದಾಯಿಕ ಪದ್ಧತಿಗಿಂತಲೂ, 2/3 ಮೀಟರ್ ಅಂತರದಲ್ಲಿ ಮಾವು ಬೆಳೆಯುವ ಅಧಿಕ ಸಾಂದ್ರತೆ ಪದ್ಧತಿಯನ್ನು ಅಳವಡಿಸಿಕೊಂಡರೆ ಪ್ರತಿ ಎಕರೆಯಲ್ಲಿ ಸುಮಾರು 670 ಸಸಿಗಳನ್ನು ಬೆಳೆಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿಯೂ ಪ್ರಯೋಗ ನಡೆದಿದೆ ಎನ್ನುತ್ತಾರೆ ಸೋಮು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT