ADVERTISEMENT

ಚಳಿಗಾಲಕ್ಕೆ ಈ ಬೆಳೆ ಕೈತೋಟಕ್ಕೆ ಕಳೆ

ಸವಿತಾ ಎನ್.
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಚಳಿಗಾಲ ಕಾಲಿಟ್ಟು ತಿಂಗಳಾದರೂ ಈಗಲೂ ಚಳಿ ಹೆಚ್ಚಿದೆ. ಮನೆಯಲ್ಲಿಯೇ ಇರುವ ಕೈತೋಟದಲ್ಲಿ ಕೆಲವು ಬೆಳೆಗಳನ್ನು ಬೆಳೆಯಲು ಇದು ಉತ್ತಮ ಕಾಲ. ಈ ಬೆಳೆಗಳನ್ನು ಬೇಗನೇ ಬೆಳೆಯುವ ಜೊತೆಗೇ ಹೆಚ್ಚಿಗೆ ಬೆಳೆದರೆ ಒಂದಿಷ್ಟು ಸಂಪಾದನೆಯನ್ನೂ ಮಾಡಬಹುದು.

ಎಲೆಕೋಸು
ಎಲೆಕೋಸನ್ನು ಕೈ ತೋಟದಲ್ಲಿ ಸುಲಭವಾಗಿ ಬೆಳೆಯಬಹುದು. ಹಸಿರು ಎಲೆಗಳ ಈ ಆರೋಗ್ಯಕರ ತರಕಾರಿಯನ್ನು ಇನ್ನೊಂದು ಗಿಡಕ್ಕೆ 10 ಇಂಚಿನ ಅಂತರದಲ್ಲಿ ಬೆಳೆಯಬೇಕು. ಹೆಚ್ಚು ಬಿಸಿಲು ಬೀಳುವ ಜಾಗದಲ್ಲಿ ಇದನ್ನು ನೆಟ್ಟರೆ ಹೆಚ್ಚು ಸೂಕ್ತ.

ಸಾಂಬಾರು ಈರುಳ್ಳಿ
ಸಾಂಬಾರಿಗೆ ಬಳಸುವ ಈರುಳ್ಳಿಗಂತೂ ಭಾರಿ ಬೇಡಿಕೆ ಇದ್ದದ್ದೆ. ಸಾಮಾನ್ಯ ಈರುಳ್ಳಿಗಿಂತ ಸಾಂಬಾರು ಈರುಳ್ಳಿ ಬಳಸಿದರೆ ಅಡುಗೆಗೆ ರುಚಿಕರವಾಗಿತ್ತದೆ.
ಈ ಈರುಳ್ಳಿಯನ್ನು ಬೆಳೆಯಲು ಕೂಡ ಚಳಿಗಾಲವೇ ಸೂಕ್ತವಾಗಿದೆ. ಈರುಳ್ಳಿ ಬೀಜವನ್ನು ಮಣ್ಣಿನಲ್ಲಿ ಹಾಕಿದರೆ ಮೊಳಕೆ ಒಡೆಯುತ್ತದೆ.

ಆದರೆ ಮೊಳಕೆ ಒಡೆಯುತ್ತಿದ್ದಂತೆ ಈರುಳ್ಳಿ ಕತ್ತರಿಸಬಾರದು. ಚೆನ್ನಾಗಿ ಹರಡಲು ಸ್ವಲ್ಪ ಕಾಲಾವಕಾಶ ನೀಡಬೇಕು. ಬೇಗನೆ ಕೊಯ್ದರೆ ಈರುಳ್ಳಿಗೆ ಸಿಹಿ ರುಚಿ ಬಂದುಬಿಡುತ್ತದೆ. ಸಾಂಬಾರು ಈರುಳ್ಳಿಯನ್ನು ಕುಂಡದಲ್ಲಿಯೂ ಬೆಳೆಯಬಹುದು. ಎರಡು ವಾರಕ್ಕೊಮ್ಮೆ ನೀರು ಹಾಕಿದರೆ ಸಾಕು.

ಬಟಾಣಿ
ಬಟಾಣಿ ಬೆಳೆಯಲು ಚಳಿಗಾಲ ಸೂಕ್ತ . ಮಣ್ಣನ್ನು ಅಗೆದು ಬೀಜವನ್ನು ಕೇವಲ ಒಂದು ಇಂಚಿನ ಅಂತರದಲ್ಲಿ ನೆಡಬೇಕು. ಬಟಾಣಿಯನ್ನು ತೇವದ ಬಟ್ಟೆಯಲ್ಲಿಟ್ಟು ಅದು ಮೊಳಕೆ ಒಡೆಯುವ ಸಂದರ್ಭದಲ್ಲಿ ಮಣ್ಣಿನಲ್ಲಿ ನೆಟ್ಟರೆ ತುಂಬಾ ಹುಲುಸಾಗಿ ಬೆಳೆಯುತ್ತೆ.

ಪಾಲಕ್ ಸೊಪ್ಪು
ಪಾಲಕ್ ಸೊಪ್ಪು ರುಚಿಕರ ಮಾತ್ರವಲ್ಲದೆಯೇ, ಔಷಧಯುಕ್ತ ಸಸ್ಯ ಕೂಡ. ಇದನ್ನು ಬೆಳೆಯಲು ಚಳಿಗಾಲ ಸೂಕ್ತವಾದುದು. ಮಣ್ಣನ್ನು ಅಗೆದು ಪಾಲಕ್ ಬೀಜವನ್ನು ಹಾಕಿದರೆ ಅದು ನಾಲ್ಕರಿಂದ ಆರು ವಾರಗಳಲ್ಲಿ ಚಿಗುರು ಒಡೆಯುತ್ತದೆ.

ಈ ಸೊಪ್ಪಿಗೆ ಬೇಗನೆ ಕ್ರಿಮಿ ಕೀಟಗಳು ತಗುಲುವ ಸಾಧ್ಯತೆ ಇದೆ. ಆದುದರಿಂದ ಉತ್ತಮ ಗೊಬ್ಬರದೊಂದಿಗೆ ಕ್ರಿಮಿ ನಾಶಕವನ್ನೂ ಬಳಸಿದರೆ ಕೀಟ ಬಾಧೆಯಿಂದ ಮುಕ್ತಿ ಪಡೆಯಬಹುದು. ಇದಕ್ಕೆ ಕ್ರಿಮಿನಾಶಕ ಹಾಕಿರುವ ಕಾರಣ, ಪಾಲಕ್ ಸೊಪ್ಪನ್ನು ಅಡುಗೆಗೆ ಬಳಸುವಾಗ ಉಪ್ಪಿನೊಂದಿಗೆ ತೊಳೆದು ಬಳಸುವುದು ಆರೋಗ್ಯಕ್ಕೆ ಉತ್ತಮ.

ಈ ನಾಲ್ಕು ಬೆಳೆಗಳು ಚಳಿಗಾಲದಲ್ಲಿ ಬೆಳೆಯಲು ಯೋಗ್ಯವಾಗಿವೆ. ಇದರ ಜೊತೆಗೆ ಕ್ಯಾರೆಟ್, ಬ್ರೊಕೋಲಿ, ಕೊತ್ತಂಬರಿ, ಟೊಮೆಟೊ ಮತ್ತು ಬೆಳ್ಳುಳ್ಳಿಯನ್ನು ಕೂಡ ಚಳಿಗಾಲದಲ್ಲಿ ಬೆಳೆಯಬಹುದು. ಆದರೆ ಇವುಗಳನ್ನು ಬೆಳೆಯಲು ಸ್ವಲ್ಪ ಹೆಚ್ಚಿನ ಜಾಗದ ಅವಶ್ಯಕತೆ ಇದೆ.

ಮನೆಯಲ್ಲಿಯೇ ಗೊಬ್ಬರ
ಕೈತೋಟದಲ್ಲಿ ನೀವು ಹಲವಾರು ಗಿಡಗಳನ್ನು ಬೆಳೆದಿರುತ್ತೀರಿ. ಆದರೆ ಅವುಗಳಿಗೆ ಗೊಬ್ಬರ ಹೇಗೆ ಹಾಕಬೇಕು ಎಂಬ ಬಗ್ಗೆ ಹಲವಾರು ಸಂದರ್ಭಗಳಲ್ಲಿ ನಿಮಗೆ ತಿಳಿದೇ ಇರುವುದಿಲ್ಲ. ಕೆಲವು ಗಿಡಗಳಿಗೆ ರಾಸಾಯನಿಕ ಗೊಬ್ಬರಗಳ ಅವಶ್ಯಕತೆ ಇದ್ದರೂ, ಹಲವು ಗಿಡಗಳಿಗೆ ಮನೆಯಲ್ಲಿಯೇ ತಯಾರಿಸಿರುವ ಗೊಬ್ಬರಗಳನ್ನೂ ನೀವು ಹಾಕಬಹುದು. ಅದರ ಪರಿಚಯ ಇಲ್ಲಿದೆ.

ಚಹಾ: ತಿಂಗಳಿಗೆ ಒಂದು ಬಾರಿ ಚಹಾ ಸೊಪ್ಪನ್ನು ಗಿಡಕ್ಕೆ ಹಾಕಿದರೆ ನಿಮ್ಮ ಕೈತೋಟದಲ್ಲಿನ ಗಿಡಗಳು ಹುಲುಸಾಗಿ ಬೆಳೆಯುತ್ತವೆ. ಇದು ಗಿಡದ ಚಿಗುರಿಗೆ ಉತ್ತಮ. `ಟೀ ಬ್ಯಾಗ್'ಗಳನ್ನೂ ಕೂಡ ಗಿಡದ ಬುಡಕ್ಕೆ ಹಾಕಬಹುದು.

ಕಾಫಿ: ಉಳಿದ ಕಾಫಿ ಪುಡಿಯನ್ನು ಮತ್ತು ಗಷ್ಟವನ್ನು ಗಿಡದ ಬುಡಕ್ಕೆ ಬಳಸಿದರೆ ಒಳ್ಳೆಯದು. ಆದರೆ ಹಾಕುವ ಮುನ್ನ ನೀರಿನಲ್ಲಿ ಬೆರೆಸಿ ಹಾಕಬೇಕು. ಪ್ರತಿದಿನವೂ ಇದನ್ನು ಬಳಸಬಾರದು. ವಾರಕ್ಕೊಮ್ಮೆ ಕಾಫಿ ಗೊಬ್ಬರ ಹಾಕಿದರೆ ಗಿಡಕ್ಕೆ ಅವಶ್ಯವಿರುವ ವಿಟಮಿನ್ ನೀಡುತ್ತದೆ.

ಬಾಳೆ ಸಿಪ್ಪೆ: ಗುಲಾಬಿ ಹೂವಿಗೆ ಬಾಳೆಹಣ್ಣಿನ ಸಿಪ್ಪೆ ತುಂಬಾ ಒಳ್ಳೆಯದು. ಸಿಪ್ಪೆಯನ್ನು ಕಿತ್ತು ಬುಡಕ್ಕೆ ಹಾಕಿದರೆ ಫಲವತ್ತತೆ ನೀಡುತ್ತದೆ.

ಮೊಟ್ಟೆ ಸಿಪ್ಪೆ: ಗಿಡಕ್ಕೆ ಅಗತ್ಯವಿರುವ ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಗುಣ ಮೊಟ್ಟೆಯ ಸಿಪ್ಪೆಯಲ್ಲಿದೆ. ಪುಡಿ ಮಾಡಿದ ಮೊಟ್ಟೆ ಸಿಪ್ಪೆಯನ್ನು ಗಿಡದ ಬುಡದ ಸುತ್ತ ಹಾಕಬೇಕು. ಅಥವಾ ನೀರಿನಲ್ಲಿ ಸುಮಾರು 15 ಮೊಟ್ಟೆ ಸಿಪ್ಪೆಗಳನ್ನು ಸುಮಾರು ಎಂಟು ಗಂಟೆಯವರೆಗೆ ನೆನೆಸಿ, ಸಿಪ್ಪೆ ತೆಗೆದು ವಾರಕ್ಕೆ ಒಂದು ಬಾರಿ ಈ ನೀರನ್ನು ಗಿಡಗಳಿಗೆ ಹಾಕಬಹುದು.

ಓಕ್ ಎಲೆ: ಒಣಗಿದ ಓಕ್ ಎಲೆಗಳನ್ನು ಬಕೆಟ್ ನೀರಿನಲ್ಲಿ ನೆನೆಹಾಕಿ ಬಿಸಿಲಿನಲ್ಲಿ ಇಡಬೇಕು. ಆ ನೀರು ತನ್ನ ಬಣ್ಣ ಬದಲಿಸುವವರೆಗೂ (ಸುಮಾರು ಒಂದು ವಾರ) ಅದನ್ನು ಹಾಗೇ ಬಿಡಬೇಕು. ಅಥವಾ ಒಂದು ವಾರ ಕಾಯುವುದು ಹೆಚ್ಚೆನಿಸಿದರೆ ಬಿಸಿ ನೀರಿಗೆ ಹಾಕಿ ತಣ್ಣಗಾದ ನಂತರ ಗಿಡಗಳಿಗೆ ಸಿಂಪಡಿಸಬಹುದು. ಅದೇ ರೀತಿ ನೈಸರ್ಗಿಕ ಕ್ರಿಮಿನಾಶಕ ಕೂಡ ನಿಮ್ಮ ಮನೆಯಲ್ಲಿಯೇ ಲಭ್ಯ ಇದೆ. ಅದನ್ನು ತಯಾರಿಸುವುದು ಕೂಡ ಬಲು ಸುಲಭ.

ಮೊಟ್ಟೆ ಸಿಪ್ಪೆ ಮತ್ತು ಉಪ್ಪು: ಮೊಟ್ಟೆಯ ಸಿಪ್ಪೆ ಮತ್ತು ಸ್ವಲ್ಪ ಉಪ್ಪನ್ನು ಗಿಡದ ಬುಡಕ್ಕೆ ಹಾಕಬೇಕು. ಇದು ಸಸ್ಯಗಳನ್ನು ಹಾಳು ಮಾಡುವ ಬಸವನ ಹುಳು, ಗೊಂಡೆ ಹುಳುಗಳನ್ನು ನಾಶಪಡಿಸುತ್ತದೆ.

ಈರುಳ್ಳಿ : ಬೆಳ್ಳುಳ್ಳಿ, ಈರುಳ್ಳಿಯ ಎಸಳುಗಳನ್ನು ನೀರಿನೊಂದಿಗೆ ಬೆರೆಸಿ, ಹಿಂಡಿ ಮಣ್ಣಿನ ಮೇಲೆ ಹಾಕಿದರೆ ಹುಳುಗಳನ್ನು ನಾಶ ಪಡಿಸುತ್ತದೆ ಮತ್ತು ಹಾರುವ ಚಿಟ್ಟೆಗಳನ್ನು ನಿಯಂತ್ರಣ ಮಾಡುತ್ತದೆ. ಇದನ್ನು ತರಕಾರಿ ಎಣ್ಣೆಯೊಂದಿಗೆ ಬೆರೆಸಿ ಹಾಕಿದರೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿ ಸಿಪ್ಪೆ ಸಮೇತ ಎಸಳುಗಳನ್ನು ಎರಡು ಮೆಣಸಿನ ಕಾಯಿಯೊಂದಿಗೆ ಬ್ಲೀಚ್ ಸೇರಿಸಿ ನೀರಿನೊಂದಿಗೆ ಬೆರೆಸಿ ಸಿಂಪಡಿಸಿದರೆ ಎಂತಹ ಹುಳುವಿದ್ದರೂ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ಎಲೆಯ ಕೆಳಗೆಯೂ ಸಿಂಪಡಿಸಬೇಕು.

ಸೋಪು: ಪಾತ್ರೆ ತೊಳೆಯುವ ಸೋಪುಗಳನ್ನು ಸಹ ಕ್ರಿಮಿನಾಶಕದಂತೆ ಬಳಸಬಹುದು. ನೀರಿನೊಂದಿಗೆ ದ್ರವರೂಪದಲ್ಲಿ ಸೋಪನ್ನು ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಹಣ್ಣು, ತರಕಾರಿಗಳ ಮೇಲೆ ಸಿಂಪಡಿಸಬಾರದು. ಇದನ್ನು ಆಗಾಗ್ಗೆ ಮಾತ್ರ ಉಪಯೋಗಿಸಬೇಕು.

ಟೊಮೊಟೊ: ಟೊಮೊಟೊಗಳ ಎಲೆಯಲ್ಲಿ ಕ್ರಿಮಿಗಳನ್ನು ನಾಶ ಮಾಡುವಂತಹ ಸತ್ವವಿರುವುದರಿಂದ ಇವುಗಳ ಎಲೆಯನ್ನು ಬಳಸಬಹುದು. ಎಲೆಯನ್ನು ಚಿಕ್ಕದಾಗಿ ಕತ್ತರಿಸಿ ಒಂದು ಕಪ್ ಎಲೆಗೆ ಒಂದು ಕಪ್ ನೀರು ಬೆರೆಸಿ 24 ಗಂಟೆ ನೆನೆಯಿಸಿ ಸೋಸಿದ ನೀರನ್ನು ಗಿಡಕ್ಕೆ ಸಿಂಪಡಿಸಬೇಕು. ಇದು ಗಿಡಗಳ ಬೆಳವಣಿಗೆಗೆ ಮಾರಕವಾಗಿರುವ ಕ್ರಿಮಿಗಳನ್ನು ನಾಶಪಡಿಸುತ್ತದೆ.

ಬೇವಿನ ಎಣ್ಣೆ: ಬೇವಿನ ಎಣ್ಣೆಯನ್ನು ಸಿಂಪಡಿಸುವುದರಿಂದ ಕ್ರಿಮಿಗಳೂ ನಾಶವಾಗುವುದು ಮಾತ್ರವಲ್ಲ.  ಮತ್ತೆ  ಕ್ರಿಮಿಗಳು ಮರುಕಳಿಸದಂತೆ ಮಾಡುತ್ತದೆ. ಇದು ಇನ್ನೂ ಅನೇಕ ಸಸ್ಯ ಸಂಬಂಧಿ ರೋಗಗಳನ್ನು ತಡೆಗಟ್ಟುತ್ತದೆ.

ಎರೆಹುಳ: ಎರೆಹುಳುವನ್ನು ಮಣ್ಣಿನಲ್ಲಿ ಹಾಕುವುದರಿಂದ ಫಲವತ್ತತೆ ಹೆಚ್ಚಾಗಿ ಗಿಡಗಳಿಗೆ ಸೂಕ್ತ ಪೋಷಕಾಂಶ ದೊರೆಯುತ್ತದೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.