ADVERTISEMENT

ಝಣಝಣ ಝರ್ಬೆರಾ

ವಿ.ಬಾಲಕೃಷ್ಣ ಶಿರ್ವ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST
ಝಣಝಣ ಝರ್ಬೆರಾ
ಝಣಝಣ ಝರ್ಬೆರಾ   

ಈಗ ಅಡಿಕೆ, ಭತ್ತ, ಅರಶಿಣ ಇತ್ಯಾದಿಗಳ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ತಲುಪಿದ್ದಾರೆ. ಅದಕ್ಕಾಗಿಯೇ ಅಂಥೇರಿಯಮ್, ಚೆಂಡು ಹೂ, ಗುಲಾಬಿ, ಝರ್ಬೆರಾದ ಬೇಸಾಯಕ್ಕೆ ಮೊರೆ ಹೋಗಿದ್ದಾರೆ. ಮಲೆನಾಡಿನ ರೈತರಂತೂ ಹೂವಿನ ಬೇಸಾಯವನ್ನು ಸವಾಲಾಗಿ ಸ್ವೀಕರಿಸಿ ಭರ್ಜರಿಯಾಗಿ ಬೆಳೆಯಲು ಆರಂಭಿಸಿ ಯಶಸ್ವಿಯಾಗಿದ್ದಾರೆ.

ತೀರ್ಥಹಳ್ಳಿಯಿಂದ 6 ಕಿ.ಮೀ ದೂರದ ತ್ಯಾರಂದೂರಿನ ಮುರುಗೇಂದ್ರಪ್ಪನವರು ಝರ್ಬೆರಾವನ್ನು 10 ಗುಂಟೆಯಷ್ಟು ಜಾಗದಲ್ಲಿ ಬೆಳೆಸಿದ್ದಾರೆ. ಕ್ರಿಮಿಕೀಟಗಳಿಂದ ರಕ್ಷಣೆ ಹಾಗೂ ಹವಾಮಾನ ನಿಯಂತ್ರಣಕ್ಕಾಗಿ ಹಸಿರು ಮನೆಯನ್ನು ನಿರ್ಮಿಸಿದ್ದಾರೆ. ತುಂಬ ಬಿಸಿಲಿರುವ ಸಂದರ್ಭದಲ್ಲಿ ಎಲ್ಲೆಡೆ ಇಬ್ಬನಿಯಂತಹ ವಾತಾವರಣ ಸೃಷ್ಟಿಸುವ ವ್ಯವಸ್ಥೆಯೂ ಇದರಲ್ಲಿದೆ.
 
ಈ ಗ್ರೀನ್ ಹೌಸ್ (ಹಸಿರು ಮನೆ) ನಿರ್ಮಿಸಲು ತಗಲಿರುವ ವೆಚ್ಚ ಸುಮಾರು 10.50 ಲಕ್ಷ ರೂಪಾಯಿ. ಈ ಪೈಕಿ ಅವರಿಗೆ 4 ಲಕ್ಷ ರೂ ಸಬ್ಸಿಡಿ ದೊರೆಯುತ್ತದೆ. ಹಸಿರು ಮನೆಯ ಮೇಲೆ ಹಾಕಿರುವ ಪ್ಲಾಸ್ಟಿಕ್ ಹೊದಿಕೆ ಸರಾಸರಿ 18 ಡಿಗ್ರಿ ಸೆಲ್ಸಿಯಸ್ ಶಾಖವನ್ನು ಕಾಯ್ದುಕೊಳ್ಳುತ್ತದೆ. ಒಂದು ಲಕ್ಷದಷ್ಟು ಲಕ್ಸ್ (ಸೂರ್ಯನ ಬೆಳಕಿನ ಮಾಪನ) ಬೆಳಕು ಈ ಹೂವಿನ ಬೆಳವಣಿಗೆಗೆ ಅವಶ್ಯಕ ಎಂಬುದು ಅವರ ಅನುಭವದ ನುಡಿ.

ಅವರ ಪ್ರಕಾರ, ಸಸಿ ನೆಡುವುದಕ್ಕೆ ನೂರು ಚೀಲ ಭತ್ತದ ಹೊಟ್ಟು, ಹತ್ತು ಟ್ರ್ಯಾಕ್ಟರ್ ಮರಳು, 15 ಟ್ರ್ಯಾಕ್ಟರ್ ಸಗಣಿ ಗೊಬ್ಬರದ ಜೊತೆಗೆ ಮಣ್ಣನ್ನು ಮಿಶ್ರಣ ಮಾಡಿ ಏರಿ ಅಥವಾ ದಿಣ್ಣೆ ನಿರ್ಮಿಸಬೇಕು. ಅದು ಒಂದು ಮೀಟರ್ ಅಗಲ, 70 ಸೆಂಟಿ ಮೀಟರ್ ಎತ್ತರವಿರಬೇಕು. ಒಂದು ಅಡಿ ಅಂತರವಿರಿಸಿ, ತ್ರಿಕೋನಾಕಾರದಲ್ಲಿ ಸಸಿ ನೆಡಬೇಕು.
 
10 ಗುಂಟೆ ಜಾಗದಲ್ಲಿ ಕೆಂಪು, ಕೇಸರಿ, ಬಿಳಿ, ಹಳದಿ, ಗುಲಾಬಿ ಬಣ್ಣದ ಹೂ ಬಿಡುವ ಸುಮಾರು 5 ಸಾವಿರ ಸಸಿ ನೆಡಬಹುದು. ಹೀಗೆ ನೆಟ್ಟ ಎರಡು ತಿಂಗಳ ನಂತರ ಮೊಗ್ಗು ಕಾಣಿಸಿಕೊಳ್ಳುತ್ತದೆ. ಮೂರು ತಿಂಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ. ತದ ನಂತರ ನಿರಂತರ ಹೂ ಪಡೆಯಬಹುದು. ಒಂದು ಸಸಿಯಿಂದ ವರ್ಷಕ್ಕೆ ಕನಿಷ್ಠ 40 ಹೂ ದೊರೆಯುತ್ತದೆ.

ಬೆಳಿಗ್ಗೆ 9.30ರ ಒಳಗೆ ಹೂ ಕೊಯ್ಯುವ ಕೆಲಸ ಮುಗಿಸಬೇಕು. ತೆಗೆದ ನಂತರ 2 ಗಂಟೆಗಳ ಕಾಲ ನೀರಿನಲ್ಲಿ ಇರಿಸಬೇಕು. ಹಾಗೆ ಮಾಡಿದಲ್ಲಿ ಬಾಡುವುದಿಲ್ಲ. ತದನಂತರ ಪ್ರತಿಯೊಂದು ಹೂವಿಗೆ ಪ್ಲಾಸ್ಟಿಕ್ ಕವರ್ ಹಾಕಬೇಕು (ಅದು ಮಾರುಕಟ್ಟೆಯಲ್ಲಿ ಲಭ್ಯ).

ಹತ್ತು ಹೂಗಳಿರುವ ಒಂದು ಕಟ್ಟು ಒಂದು ಗುಚ್ಛ ಆಗುತ್ತದೆ. ಗಿಡ ಸುಸ್ಥಿತಿಯಲ್ಲಿದ್ದರೆ 200 ಗುಚ್ಛವನ್ನು ಪ್ಯಾಕಿಂಗ್ ಪೆಟ್ಟಿಗೆಯಲ್ಲಿ ಜೋಡಿಸಬಹುದು. ಪ್ಯಾಕಿಂಗ್ ಪೆಟ್ಟಿಗೆ ಕೂಡಾ ಮಾರುಕಟ್ಟೆಯಲ್ಲಿ ಲಭ್ಯ. ಹೀಗೆ ಪ್ಯಾಕ್ ಮಾಡಿದ್ದನ್ನು ಬೆಂಗಳೂರು, ಹೈದ್ರಾಬಾದ್, ಗೋವಾ ಮುಂತಾದ ಪ್ರದೇಶಗಳಲ್ಲಿ ಬೇಡಿಕೆ ಇರುವುದರಿಂದ ಅಲ್ಲಿ ಕಳುಹಿಸಿಕೊಡಬಹುದು. ಒಂದು ಹೂವಿಗೆ ಸರಾಸರಿ 2.30 ರೂಪಾಯಿ ಸಿಕ್ಕರೆ ಈ ಕೃಷಿ ಲಾಭದಾಯಕ ಎನ್ನುತ್ತಾರೆ.

 ಮುರುಗೇಂದ್ರಪ್ಪನವರು ವ್ಯಾನ್‌ನಲ್ಲಿ ಹೂಗಳನ್ನು ತೀರ್ಥಹಳ್ಳಿಗೆ ಕಳಿಸಿ, ಬಸ್ಸಿನಲ್ಲಿ ಹೈದ್ರಾಬಾದ್ ಮಾರುಕಟ್ಟೆಗೆ ಸಾಗಿಸುತ್ತಾರೆ. ಈ ಹೂ ಕೃಷಿ ಕೈಗೊಳ್ಳುವ ಮುನ್ನ ಬೆಂಗಳೂರಿನ ರಾಷ್ಟ್ರೀಯ ತೋಟಗಾರಿಕಾ ಕೇಂದ್ರದಲ್ಲಿ ತರಬೇತಿ ಪಡೆಯುವುದು ಒಳ್ಳೆಯದು ಎಂಬುದು ಅವರ ಕಿವಿಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.