ADVERTISEMENT

ಟರ್ಕಿ ಕೋಳಿ ಸಾಕಣೆ

ಚಂದ್ರಹಾಸ ಚಾರ್ಮಾಡಿ
Published 20 ಏಪ್ರಿಲ್ 2011, 19:30 IST
Last Updated 20 ಏಪ್ರಿಲ್ 2011, 19:30 IST

ಕರ್ನಾಟಕದ ಸಾವಿರಾರು ರೈತರು ಬೇಸಾಯದ ಜತೆಗೆ ಕೋಳಿಗಳನ್ನು ಸಾಕಿ ಪೂರಕ ಆದಾಯ ಪಡೆಯುತ್ತಿದ್ದಾರೆ. ನಾಟಿ ಕೋಳಿಗಳೇ ಅಲ್ಲದೆ ಗಿರಿರಾಜ, ಬ್ರಾಯ್ಲರ್, ಟೈಸನ್ ಮತ್ತಿತರ ಫಾರಂ ಕೋಳಿಗಳನ್ನೂ ಸಾಕುತ್ತಾರೆ.  ರೈತರು ಹಾಗೂ ಗ್ರಾಮೀಣ ಜನರು ಮನೆ ಬಳಕೆಗಾಗಿ ನಾಟಿ ಕೋಳಿಗಳನ್ನು ಸಾಕುತ್ತಾರೆ. ವಾಣಿಜ್ಯ ಉದ್ದೇಶಕ್ಕಾಗಿ ಟೈಸನ್,ಬ್ರಾಯ್ಲರ್ ಮತ್ತಿತರ ಕೋಳಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕುತ್ತಾರೆ.

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ನಾಟಿ ಕೋಳಿಗಳನ್ನು ಫಾರಂಗಳಲ್ಲಿ ಸಾಕುವ ಪ್ರಯೋಗವೂ ನಡೆಯುತ್ತಿದೆ. ಕೋಳಿ ಸಾಕಣೆಯಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಿವೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆಯ ದೇವಮ್ಮ ಗೌಡಯ್ಯ ಅವರು ಟರ್ಕಿ ಕೋಳಿ ಸಾಕುತ್ತಾರೆ.

  ಒಂದು ಜೊತೆ ಟರ್ಕಿ ಕೋಳಿಗೆ (ಹೆಣ್ಣು ಮತ್ತು ಗಂಡು)ಮೂರು ಸಾವಿರ ರೂ ಬೆಲೆ ಇದೆ. ಒಂದು ಟರ್ಕಿ ಕೋಳಿ ಮೊಟ್ಟೆಗೆ 25 ರೂ. ಒಂದು ವರ್ಷಕ್ಕೆ ಒಂದು ಕೋಳಿ 15 ಕೆ.ಜಿ.ಯಷ್ಟು ಬೆಳೆಯುತ್ತದೆ. ಒಂದು  ಕೆ.ಜಿ. ಮಾಂಸಕ್ಕೆ 750 ರೂ.ಬೆಲೆ ಇದೆ. ಒಂದು ಕೋಳಿ ವರ್ಷಕ್ಕೆ 100 ಮೊಟ್ಟೆಗಳನ್ನು  ಇಡುತ್ತದೆ.


ಟರ್ಕಿ ಕೋಳಿಯ ವಿಶೇಷವೆಂದರೆ ಅದು ಕೇವಲ ಮೊಟ್ಟೆಗಳನ್ನು ಇಡುತ್ತದೆಯೇ ಹೊರತು ಮರಿ  ಮಾಡುವುದಿಲ್ಲ. ಮರಿ ಮಾಡಲು ನಾಟಿ ಕೋಳಿಯಿಂದ ಕಾವು ಕೊಡಿಸಬೇಕು. ಅಥವಾ ಕೃತಕವಾಗಿ ಕಾವು ಕೊಡಬೇಕು. 35 ದಿನಗಳಲ್ಲಿ ಮೊಟ್ಟೆಯಿಂದ  ಮರಿ ಹೊರಬರುತ್ತದೆ. ರಾಗಿ, ಅಕ್ಕಿ, ಜೋಳ, ಹುಲ್ಲು, ಸೊಪ್ಪು ಇದರ ಆಹಾರ. ಇವು ಗಾತ್ರದಲ್ಲಿ  ಸಾಮಾನ್ಯ ಕೋಳಿಗಿಂತ ದೊಡ್ಡವು. ಗಂಡು ಕೋಳಿಯ ಜುಟ್ಟಿನ ಬಣ್ಣ ಆಗಾಗ ಹಸಿರು, ಕೆಂಪು, ನೀಲಿ ಬಣ್ಣಕ್ಕೆ ಬದಲಾಗುತ್ತದೆ.

ಟರ್ಕಿ ಕೋಳಿಗಳನ್ನು ಮಾಂಸಕ್ಕಾಗಿ ಬಳಕೆಯಾಗುವುದೇ ಹೆಚ್ಚು. ಮೊಟ್ಟೆಗಳಿಂದ ಮರಿ ಮಾಡಿ ಸಾಕುತ್ತಾರೆ.  ಈ ಮೊಟ್ಟೆಗಳನ್ನು ಸಾಮಾನ್ಯ ಕೋಳಿ ಮೊಟ್ಟೆಗಳಂತೆ ತಿನ್ನಲು ಬಳಸುವುದಿಲ್ಲ. ಟರ್ಕಿ ಕೋಳಿ ಮೊಟ್ಟೆಗಳು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಅವನ್ನು ಸುಲಭವಾಗಿ ಗುರುತಿಸಬಹುದು. ಟರ್ಕಿ ಕೋಳಿ ಸಾಕಣೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದವರು ಸಂಪರ್ಕಿಸಬೇಕಾದ ಮೊಬೈಲ್ ನಂಬರ್- 9448346145.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT