ADVERTISEMENT

ಟ್ರೇಗಳಲ್ಲಿ ಬೆಳೆದ ಮೇವು!

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST
ಟ್ರೇಗಳಲ್ಲಿ ಬೆಳೆದ ಮೇವು!
ಟ್ರೇಗಳಲ್ಲಿ ಬೆಳೆದ ಮೇವು!   

ವಿಜಯಕುಮಾರ ಗಾಣಿಗೇರ

ನುಗಾರಿಕೆ ಇಂದು ಆಧುನಿಕ ಸ್ಪರ್ಶ ಪಡೆದುಕೊಳ್ಳುತ್ತಿದೆ. ಲಾಭದಾಯಕ ಉದ್ಯೋಗವಾಗಿ ಅನೇಕ ಯುವಕರನ್ನು ಕೈಬೀಸಿ ಕರೆಯುತ್ತಿದೆ. ಹುಬ್ಬಳ್ಳಿ ಸಮೀಪದ ಕುಸುಗಲ್ ಗ್ರಾಮದಲ್ಲಿ ಸುಮಾರು 20 ವರ್ಷಗಳಿಂದ ಶಾಂಭವಿ ಡೇರಿ ನಡೆಸುತ್ತಿರುವ ಪ್ರಕಾಶ ವಿಜಾಪುರ ಅವರು ಆಧುನಿಕ ಅಂಶಗಳನ್ನು ಅಳವಡಿಸಿಕೊಂಡು ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಅಂತರ್ಜಾಲದ ಸಹಾಯದಿಂದ ಮಾಹಿತಿ ಪಡೆದು ದನಗಳ ಆಹಾರ ಪದ್ಧತಿಯಲ್ಲಿ ದೊಡ್ಡ ಬದಲಾವಣೆಗೆ ಕಾರಣರಾಗಿದ್ದಾರೆ.

ಹುಬ್ಬಳ್ಳಿಯ ಜೆ.ಜಿ ಕಾಮರ್ಸ್ ಕಾಲೇಜಿನಲ್ಲಿ ಬಿ.ಕಾಂ ಪೂರೈಸಿ ಸ್ವಂತ ದುಡಿಮೆಯಲ್ಲಿ ಬದುಕು ಕಟ್ಟಿಕೊಳ್ಳಲು ಹೈನುಗಾರಿಕೆ ಆಯ್ಕೆ ಮಾಡಿಕೊಂಡಿದ್ದಾರೆ. ಬ್ರೆಜಿಲ್‌, ಡೆನ್ಮಾರ್ಕ್‌ಗಳಲ್ಲಿ ಹೆಚ್ಚು ಪ್ರಚಲಿತವಿರುವ ಹೈಡ್ರೋಪೋನಿಕ್ ಮೇವು ಬೆಳೆಯುವ ವಿಧಾನವನ್ನು ಅಂತರ್ಜಾಲದ ಮೂಲಕ ಕಂಡುಕೊಂಡ ಇವರು ಅದನ್ನು ಪ್ರಾಯೋಗಿಕವಾಗಿ ತಮ್ಮ ಡೇರಿಯಲ್ಲಿ ಒಂದು ತಿಂಗಳು ಅಳವಡಿಸಿಕೊಂಡರು. ಉತ್ತಮ ಫಲಿತಾಂಶ ಪಡೆದು ಈಗ ಹಸಿರು ಮನೆಯಲ್ಲಿ 750 ಟ್ರೇಗಳಲ್ಲಿ ಹೈಡ್ರೋಪೋನಿಕ್ ಮೇವು ಬೆಳೆಯುತ್ತಿದ್ದಾರೆ.

ADVERTISEMENT

‘ನಮ್ಮ ಡೈರಿಯಲ್ಲಿ 35 ಹಸು, ಒಂದು ಗಿರ್ ತಳಿಯ ಹೋರಿ, ನಾಲ್ಕು ಎಮ್ಮೆ, ಹಾಗೂ ನಾಲ್ಕು ಎಮ್ಮೆ ಕರುಗಳಿವೆ. ದೇಶಿಯ ತಳಿ ಹಸುಗಳನ್ನು ಪಡೆಯಲೆಂದೇ ಗಿರ್ ತಳಿಯ ಹೋರಿ ಸಾಕಿರುವೆ. ಭಿನ್ನ ಜಾತಿಯ ತಳಿಗಳ ಕೂಡಿಕೆ ಮಾಡುವುದರಿಂದ ಆರೋಗ್ಯವಂತ ಕರುಗಳು ಹಾಗೂ ಉತ್ತಮ ಗುಣಮಟ್ಟದ ಹಾಲು ನೀಡುವ ತಳಿಗಳ ಅಭಿವೃದ್ಧಿಯಾಗಲಿದೆ’ ಎನ್ನುತ್ತಾರೆ ಪ್ರಕಾಶ ವಿಜಾಪುರ.

ಹೈಡ್ರೋಪೋನಿಕ್ ಮೇವು:
ಹೈಡ್ರೋಪೋನಿಕ್ ಆಹಾರ ನೀಡುವುದರಿಂದ ಹಾಲಿನಲ್ಲಿ ಕೊಬ್ಬಿನ ಅಂಶ ಹೆಚ್ಚಿಸಲು, ಡಿಗ್ರಿ ಕಾಯ್ದುಕೊಳ್ಳಲು, ಹಸುಗಳಿಗೆ ಕಾಲು–ಬಾಯಿ ಬೇನೆ ಬರದಂತೆ ತಡೆಯಲು ಸಾಧ್ಯವಾಗುತ್ತದೆ. ಗರ್ಭಾವಸ್ಥೆಯಲ್ಲಿರುವ ದನಗಳಿಗೆ ಆಹಾರ ನೀಡುವುದರಿಂದ ಕರು ಆರೋಗ್ಯವಾಗಿ ಬೆಳೆಯುತ್ತದೆ ಎಂಬುದನ್ನು ಪ್ರಕಾಶ ಕಂಡುಕೊಂಡಿದ್ದಾರೆ.

ಕೊಟ್ಟಿಗೆಯಲ್ಲಿಯೇ ಹಸುಗಳಿಗೆ ಮೇವು, ನೀರು ಪೂರೈಕೆ ಮಾಡಲಾಗುತ್ತದೆ. ಮೈತೊಳೆದ ನೀರು ಹಾಗೂ ಗಂಜಲು ಹರಿದು ಹೋಗಲು ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಶೇಖರಣೆಯಾದ ಮಿಶ್ರಣವನ್ನು ಎಂಜಿನ್ ಸಹಾಯದಿಂದ ನಾಲ್ಕು ಎಕರೆ ಜಮೀನಿಗೆ ಪೂರೈಕೆ ಮಾಡಲಾಗುತ್ತದೆ. ಕೊಳವೆ ಬಾವಿಯ ನೀರು ಸವಳಾಗಿದೆ. ಅದರಿಂದ ಭೂಮಿ ಹಾಳಾಗದಂತೆ ಈ ಮಿಶ್ರಣ ತಡೆಯುತ್ತದೆ. ಹನ್ನೆರಡು ತಿಂಗಳುಗಳಲ್ಲಿ 65 ರಿಂದ 70 ಟ್ರ್ಯಾಕ್ಟರ್ ಸಗಣಿ ಗೊಬ್ಬರ ಸಂಗ್ರಹವಾಗುತ್ತದೆ. ಒಂದು ವರ್ಷ ನಮ್ಮ ಹೊಲಕ್ಕೆ, ನಂತರದ ಎರಡು ವರ್ಷ ರೈತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಪ್ರಕಾಶ ವಿವರಿಸುತ್ತಾರೆ.

ಕೊಟ್ಟಿಗೆಯಲ್ಲಿ ಎಫ್‌.ಎಂ. ರೇಡಿಯೊ ಅಳವಡಿಸಿದ್ದು ದನಗಳೂ ಸಂಗೀತ ಆಲಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ. ಡೇರಿ ನೋಡಿಕೊಳ್ಳಲು ಬಿಹಾರದ ಮೂವರನ್ನು ಸಹಾಯಕರನ್ನಾಗಿ ನೇಮಿಸಿಕೊಂಡಿದ್ದಾರೆ. ಸ್ಥಳೀಯರು ಒಂದು ತಿಂಗಳು ದುಡಿದು ನಂತರ ಬಿಟ್ಟುಬಿಡುತ್ತಾರೆ. ಆದರೆ, ಬಿಹಾರದವರು ನಮ್ಮಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬರು ಕೆಲಸ ಬಿಟ್ಟು ಹೊರಟರೆ ಇನ್ನೊಬ್ಬರನ್ನು ನೇಮಿಸಿ ಹೋಗುತ್ತಾರೆ. ಇದರಿಂದ ಕೆಲಸಗಾರರ ಸಮಸ್ಯೆ ಉಂಟಾಗಿಲ್ಲ ಎನ್ನುತ್ತಾರೆ ಪ್ರಕಾಶ.

***

ಏನಿದು ತಂತ್ರಜ್ಞಾನ?

ಮಣ್ಣಿನ ಸಹಾಯವಿಲ್ಲದೇ ಕೇವಲ ನೀರು ಬಳಸಿ ಮೇವು ಬೆಳೆಯುವುದೇ ಹೈಡ್ರೋಫೋನಿಕ್ ಮೇವು. ಅದಕ್ಕಾಗಿ ₹1.5 ಲಕ್ಷ ವೆಚ್ಚದಲ್ಲಿ ಹಸಿರು ಮನೆ ನಿರ್ಮಾಣ ಮಾಡಲಾಗಿದ್ದು, ಗೋವಿನಜೋಳ, ಜೋಳ, ಗೋಧಿಗಳಂತಹ ಕಾಳುಗಳನ್ನು 12 ಗಂಟೆ ನೀರಿನಲ್ಲಿ ನೆನೆಯಿಟ್ಟು ನಂತರ ಗೊಬ್ಬರದ ಹಾಳೆಯಲ್ಲಿ 48 ಗಂಟೆ ಶೇಖರಿಸಿ ಇಡಲಾಗುತ್ತದೆ. ಮೊಳಕೆ ಬಂದ ಕಾಳುಗಳನ್ನು 800ಗ್ರಾಂ ಪ್ರಮಾಣದಲ್ಲಿ ಪ್ಲಾಸ್ಟಿಕ್ ಟ್ರೇಗಳಲ್ಲಿ ಇಡಲಾಗುತ್ತದೆ. ಪ್ರತಿ ಎರಡು ಗಂಟೆಗೆ ಒಮ್ಮೆ ತುಂತುರು ಹನಿ ಮೂಲಕ ಸಸಿಗಳಿಗೆ ನೀರು ಕೊಡಲಾಗುತ್ತದೆ. ಒಂಬತ್ತು ದಿನಗಳಲ್ಲಿ ಆ ಮೊಳಕೆ 9 ರಿಂದ 12 ಇಂಚು ಎತ್ತರಕ್ಕೆ ಬೆಳೆಯುತ್ತದೆ. ಒಂದು ಟ್ರೇನಲ್ಲಿ ಸುಮಾರು 8 ರಿಂದ 9 ಕೆ.ಜಿ. ಮೇವು ದೊರೆಯುತ್ತದೆ.

ನೇರವಾಗಿ ರೈತರಿಂದಲೇ ಗೋವಿನ ಜೋಳ, ಗೋಧಿ, ಬಾರ್ಲಿ, ಜೋಳ ಮಾರಾಟಕ್ಕೆ ಪಡೆದು ಹೈಡ್ರೋಫೋನಿಕ್ ಮೇವು ಬೆಳೆಯಲಾಗುತ್ತದೆ. ಇದರಿಂದ ಹಿಂಡಿಯ ಅವಶ್ಯಕತೆ ನೀಗುತ್ತದೆ. ಹಸುಗಳಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಪೌಷ್ಟಿಕ ಆಹಾರ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.