ADVERTISEMENT

ತಾಜಾತನಕ್ಕೆ ಚೆಂದದ ಪ್ಯಾಕಿಂಗ್

ಆನಂದತೀರ್ಥ ಪ್ಯಾಟಿ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಕೃಷಿ ಉತ್ಪನ್ನಗಳ ಕೊಯ್ಲು ಶುರುವಾಗುತ್ತಲೇ ಸಂಸ್ಕರಣೆ ಹಾಗೂ ಪ್ಯಾಕಿಂಗ್ ಘಟಕಗಳಲ್ಲಿ ಗಡಿಬಿಡಿ ಶುರುವಾಗುತ್ತದೆ. ಕೆಲಸ ಮಾಡಲು ಥಾಯ್ಲೆಂಡ್‌ನಿಂದ ಕಾರ್ಮಿಕರು ವಿಮಾನದಲ್ಲಿ ಟೆಲ್‌ ಅವೀವ್‌ಗೆ ಬಂದಿಳಿಯುತ್ತಾರೆ. ನಾಲ್ಕೈದು ತಿಂಗಳ ಕಾಲ ಕೆಲಸ ಮಾಡಿ, ತಿಂಗಳಿಗೆ ೭–೮ ಲಕ್ಷ ರೂಪಾಯಿ ಜೇಬಿಗಿಳಿಸಿ ಮತ್ತೆ ವಾಪಸು ಹೋಗುತ್ತಾರೆ. ಇಲ್ಲಿನ ಪ್ಯಾಕೇಜಿಂಗ್‌ ಘಟಕಗಳಲ್ಲಿ ಗರಿಷ್ಠ ಇಪ್ಪತ್ತಕ್ಕಿಂತ ಹೆಚ್ಚು ಕಾರ್ಮಿಕರು ಕಾಣಸಿಗುವುದಿಲ್ಲ!

ಉತ್ಪಾದನೆ ಮಾಡಿದರಷ್ಟೇ ಸಾಲದು; ಅದನ್ನು ಅಚ್ಚುಕಟ್ಟಾಗಿ ಗ್ರಾಹಕರಿಗೆ ತಲುಪಿಸಲು ಸೂಕ್ತ ಪ್ಯಾಕಿಂಗ್ ಕೂಡ ಇರಬೇಕು. ಆದರೆ ಜನಸಂಪನ್ಮೂಲವಿಲ್ಲದೇ ಪರದಾಡುತ್ತಿರುವ ಇಸ್ರೇಲ್, ಹೊರದೇಶಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳುತ್ತದೆ. ಇದನ್ನು ಗಮನಿಸಿ, ಸಂಶೋಧಕರು ಯಂತ್ರಗಳನ್ನು ವಿನ್ಯಾಸ ಮಾಡುತ್ತಿದ್ದಾರೆ. ‘ಕಾರ್ಮಿಕರ ಅವಲಂಬನೆಯನ್ನು ಆದಷ್ಟು ಕಡಿಮೆ ಮಾಡು­­ವುದು ನಮ್ಮ ಉದ್ದೇಶ’ ಎನ್ನುತ್ತಾರೆ, ‘ಜುರಾನ್’ ಎಂಬ ಎಂಜಿನಿಯ­ರಿಂಗ್ ಕಂಪೆನಿಯ ನಿರ್ದೇಶಕ ಅವ್ನರ್ ಗೆಲಿಲಿ.

ಕೃಷಿ ಉತ್ಪನ್ನಗಳನ್ನು ವಿದೇಶಗಳಲ್ಲಿ ಮಾರಾಟ ಮಾಡುವುದು ಒಂದು ಕಲೆ. ಅದಕ್ಕೊಂದಿಷ್ಟು ಬ್ರ್ಯಾಂಡ್, ಪ್ಯಾಕಿಂಗ್, ಸಂಸ್ಕರಣೆ ಇರಲೇಬೇಕು. ಇಸ್ರೇಲಿನ ಸ್ಥಾಪನಾನಂತರದ ವರ್ಷಗಳಲ್ಲಿ ಕೃಷಿಯತ್ತ ಗಮನ ಹರಿಸಿದಾಗ, ರಫ್ತು ಮಾಡುವ ಯೋಚನೆಯೇ ಅವರಲ್ಲಿ ಇರಲಿಲ್ಲ. ಉತ್ಪಾದನೆ ಹೆಚ್ಚಾಗುತ್ತಲೇ ಅದನ್ನು ವಿದೇಶಗಳಿಗೆ ಕಳಿಸಲು ಶುರು ಮಾಡಿದಾಗ, ಅದರಿಂದ ಸಿಗುತ್ತಿದ್ದ ಆದಾಯ ದಂಗು ಬಡಿಸಿತು. ಇದನ್ನೇ ಆಧರಿಸಿ, ರಫ್ತು ಯೋಜನೆ ರೂಪಿಸಲಾಯಿತು. ೩೦ ವರ್ಷ
ಗಳಿಂ­ದೀಚೆ ರಫ್ತು ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಯೂರೋಪಿನ ಸೂಪರ್ ಮಾರ್ಕೆಟ್‌ಗಳಲ್ಲಿ ಕಾಣುವ ಉತ್ಪನ್ನಗಳ ಪೈಕಿ ಅರ್ಧಕ್ಕೂ ಹೆಚ್ಚು ಪ್ರಮಾಣ ಇಸ್ರೇಲಿನದ್ದೇ ಆಗಿರುತ್ತದೆ!

ಬಣ್ಣದ ಕಾಳು
ಅಮೆರಿಕ, ಜರ್ಮನಿ, ಕೆನಡಾ ಸೇರಿದಂತೆ ಹತ್ತಾರು ದೇಶಗಳಿಗೆ ಇಸ್ರೇಲಿನ ಕೃಷಿ ಉತ್ಪನ್ನ ರಫ್ತಾಗುತ್ತವೆ. ಅಲ್ಲಿಂದ ಬರುವ ಗ್ರಾಹಕರ ಅಭಿಪ್ರಾಯ ಆಧರಿಸಿ, ಪ್ಯಾಕಿಂಗ್‌ ಕುರಿತು ಸಂಶೋಧನೆ ನಡೆಸಲಾಗುತ್ತದೆ.

ಬೃಹತ್ ಗಾತ್ರದ ದಾಳಿಂಬೆಗೆ ಜರ್ಮನಿಯಲ್ಲಿ ಬಹು ಬೇಡಿಕೆ. ತಿನ್ನಲು ಹಾಗೂ ವೈನ್ ತಯಾರಿಕೆಗೆ ದಾಳಿಂಬೆ ಬಳಸುತ್ತಾರೆ. ಇಸ್ರೇಲಿನಿಂದ ದಾಳಿಂಬೆ ಹಣ್ಣು ತರಿಸಿ, ಅದರ ಸಿಪ್ಪೆ ತೆಗೆದು, ಕಾಳು ಬೇರ್ಪಡಿಸಿ, ಶುಚಿಗೊಳಿಸಿ, ಸಂಸ್ಕರಿಸಿ... ಇಷ್ಟೆಲ್ಲ ಪ್ರಕ್ರಿಯೆಗೆ ಎಷ್ಟೊಂದು ಸಮಯ ಬೇಕಲ್ಲ? ಬರೀ ಕಾಳುಗಳನ್ನೇ ಕಳಿಸಿದರೆ ಹೆಚ್ಚು ಬೆಲೆ ಎಂಬುದನ್ನು ಅರಿತು, ಎಂಟು ವರ್ಷಗಳ ಹಿಂದೆಯೇ ಯಂತ್ರವೊಂದನ್ನು ರೂಪಿಸಲಾಯಿತು. ‘ಜುರಾನ್’ ಕಂಪೆನಿಯು ಈ ಯಂತ್ರಗಳನ್ನು ತಯಾರಿಸುತ್ತದೆ.
ಜಫಾ ಕಣಿವೆಯ ಅಂಚಿನಲ್ಲಿದ್ದ ದಾಳಿಂಬೆ ಪ್ಯಾಕಿಂಗ್ ಘಟಕಕ್ಕೆ ಭೇಟಿ ನೀಡಿದಾಗ, ಅಲ್ಲಿದ್ದುದು ಬರೀ ನಾಲ್ಕು ಕಾರ್ಮಿಕರು.

ಸದ್ದಿಲ್ಲದೇ ಕೆಲಸ ಮಾಡು­ತ್ತಿದ್ದ ಯಂತ್ರದ ಆ ಬದಿಯಲ್ಲಿ ಒಬ್ಬ ಕುಳಿತು ಎರಡೆರಡು ದಾಳಿಂಬೆ­ಗಳನ್ನು ಇಡುತ್ತಿದ್ದಂತೆಯೇ ಅದು ಒಳಗೆ ಸಾಗುತ್ತಿತ್ತು. ಇನ್ನೊಂದು ಬದಿಯಲ್ಲಿ ಬರೀ ಸಿಪ್ಪೆಗಳು ಬರುತ್ತಿದ್ದವು. ನೀರಿನಿಂದ ತೊಳೆದ ಕೆಂಪು ಕಾಳುಗಳು ಆ ತುದಿಯಲ್ಲಿ ಬಂದು, ಪಾರದರ್ಶಕ ಡಬ್ಬಿಯಲ್ಲಿ ಬಿದ್ದು, ಅದು ನಿರ್ವಾತ (ವ್ಯಾಕ್ಯೂಮ್) ಪ್ಯಾಕ್ ಆಗಿ, ಮೇಲೊಂದು ಚೆಂದದ ಲೇಬಲ್ ಅಂಟಿಸಿಕೊಂಡು, ೨೪ ಪ್ಯಾಕ್‌ಗಳು ಇನ್ನೊಂದು ರಟ್ಟಿನ ಡಬ್ಬಿಯಲ್ಲಿ ಕುಳಿತುಕೊಳ್ಳುತ್ತಿದ್ದವು. ಅಂಥ ಹಲವು ಡಬ್ಬಿಗಳನ್ನು ಇನ್ನೊಬ್ಬ ಕಾರ್ಮಿಕ ಲಾರಿಯಲ್ಲಿ ಒಯ್ದಿಟ್ಟರೆ ಆಯಿತು. ‘ನಮ್ಮ ಈ ಘಟಕದಿಂದ ದಿನಕ್ಕೆ ೫೦೦ ಕ್ವಿಂಟಲ್ ದಾಳಿಂಬೆ ರಫ್ತಾಗುತ್ತದೆ’ ಎನ್ನುತ್ತಾರೆ ಇದರ ವ್ಯವಸ್ಥಾಪಕ ಮುಸಾದ್‌. ಕರ್ನಾಟಕದ ತೋಟಗಾರಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ನೂರಾರು ಕೋಟಿ ಮೊತ್ತದ ದಾಳಿಂಬೆ ರಫ್ತು ಮಾಡಿದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ರೈತರಿಗೆ ಇಂಥದೊಂದು ಯಂತ್ರವಿದ್ದರೆ ಹೇಗಿತ್ತು ಎಂಬ ಯೋಚನೆ ಆಗ ಮೂಡಿತ್ತು!
‌‌
ರೈತರೂ ಉದ್ದಿಮೆದಾರರು
ತಮ್ಮ ಉತ್ಪನ್ನಗಳಿಗೆ ಪ್ರತ್ಯೇಕ ಬ್ರ್ಯಾಂಡಿಂಗ್, ಪ್ಯಾಕಿಂಗ್ ಮಾಡಿಕೊಳ್ಳಲು ರೈತರೇ ಮುಂದಾದರೆ ಸರ್ಕಾರ ಎಲ್ಲ ನೆರವು ನೀಡುತ್ತದೆ. ಹೀಗಾಗಿ ಅರವಾ ಕಣಿವೆಯ ‘ಜಫಾ’ ಹಾಗೂ ‘ಅದಾನ್’ ಮುಶಾವ್‌ಗಳು (ರೈತ ಸಹಕಾರ ಸಂಘಗಳು) ಚೆರಿ ಟೊಮೆಟೊ, ಕ್ಯಾಪ್ಸಿಕಂ (ದಪ್ಪ ಮೆಣಸಿನಕಾಯಿ), ಕ್ಯಾರೆಟ್‌ ಹಾಗೂ ಸೌತೆಕಾಯಿ ಪ್ಯಾಕಿಂಗ್ ಘಟಕಗಳನ್ನು ಸ್ಥಾಪಿಸಿಕೊಂಡಿವೆ. ಇವು ಸಣ್ಣ ಪ್ರಮಾಣದವು.

ಇನ್ನು ಮುಶಾವ್‌ಗಳಿಂದ ಉತ್ಪನ್ನ ಪಡೆದು ವಿದೇಶಕ್ಕೆ ರಫ್ತು ಮಾಡುವ ಕಂಪೆನಿಗಳು ಮುಂಚಿತವಾಗಿಯೇ ಒಪ್ಪಂದ ಮಾಡಿಕೊಳ್ಳುತ್ತವೆ. ರೈತರಿಂದ ಕೃಷಿ ಉತ್ಪನ್ನ ಖರೀದಿಸುವಾಗ ಅದರ ಬೆಲೆಯನ್ನು ಸರ್ಕಾರ ನಿಗದಿ ಮಾಡುತ್ತದೆ. ರೈತರು ಬೆಳೆದು ಕೊಟ್ಟರೆ ಆಯಿತು. ಮಾರುಕಟ್ಟೆ ಹುಡುಕುವ ಗೋಜು ಅವರಿಗೆ ಇಲ್ಲ. ಇಂಥ ೭೦ಕ್ಕೂ ಹೆಚ್ಚು ಪ್ಯಾಕಿಂಗ್ ಕಂಪೆನಿಗಳು ಇಸ್ರೇಲಿನಲ್ಲಿವೆ.

ಇಂಥವುಗಳಲ್ಲಿ ಅತಿ ದೊಡ್ಡ ಕಂಪೆನಿ ‘ಗಿಲಾಡ್’. ಯೂರೋಪ್ ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆಯುಳ್ಳ ತರಕಾರಿ ಕ್ಯಾಪ್ಸಿಕಂ. ಅದನ್ನು ಗಿಲಾಡ್ ಪೂರೈಸುತ್ತದೆ. ಅಂದ ಹಾಗೆ, ಈ ಕ್ಯಾಪ್ಸಿಕಂ ಖಾರ ಇರುವುದಿಲ್ಲ. ಸೌತೆಕಾಯಿಯಂತೆ ತಿನ್ನಬಹುದಾದಷ್ಟು ಸಿಹಿ ಇರುತ್ತದೆ! ಪ್ರತಿ ವರ್ಷ ೨ ಲಕ್ಷ ಕ್ವಿಂಟಲ್‌ ಕ್ಯಾಪ್ಸಿಕಂ ಈ ಘಟಕವೊಂದರಿಂದಲೇ ಯೂರೋಪ್‌ಗೆ ಹೋಗುತ್ತದೆ. ಬರೀ ೨೦ ಕೆಲಸಗಾರರು ಇರುವ ಈ ಘಟಕದಿಂದ ಕಳೆದ ವರ್ಷ ಎಷ್ಟು ಮೊತ್ತದ ಉತ್ಪನ್ನ ರವಾನಿಸಲಾಗಿದೆ ಎಂಬ ಪ್ರಶ್ನೆಗೆ, ಗಿಲಾಡ್‌ನ ಮುಖ್ಯಸ್ಥ ಶೆನ್ ಅರೆಮನಸ್ಸಿನಿಂದ ‘೨.೫ ಕೋಟಿ ಯೂರೋಗಳಷ್ಟು’ ಎಂಬ ಮಾಹಿತಿ ನೀಡಿದರು! ಅಂದರೆ ಸುಮಾರು 2೦೦ ಕೋಟಿ ರೂಪಾಯಿಗಳು!!

ಊಟ-–ಉಪಾಹಾರದ ಸಮಯದಲ್ಲಿ ತಾಜಾ ತರಕಾರಿ ಹಾಗೂ ಹಣ್ಣು ಬಳಕೆ ಯೂರೋಪಿಯನ್ನರಲ್ಲಿ ಹೆಚ್ಚು. ಅದನ್ನು ಗಮನದಲ್ಲಿ ಇಟ್ಟುಕೊಂಡು ಇಸ್ರೇಲ್, ಅಚ್ಚುಕಟ್ಟಾದ ಪ್ಯಾಕಿಂಗ್ ತಂತ್ರಜ್ಞಾನ ರೂಪಿಸಿದೆ. ಇಲ್ಲಿಂದ ಪ್ಯಾಕೆಟ್‌ನಲ್ಲಿ ಹೊರಡುವ ಹಣ್ಣು ಅಥವಾ ತರಕಾರಿ, ತಾಜಾತನ ಕಳೆದುಕೊಳ್ಳದೇ ಶೀಘ್ರ ಅವಧಿಯಲ್ಲಿ ಊಟದ ಟೇಬಲ್ ಮೇಲಿರಬೇಕು. ಕಲ್ಲಂಗಡಿ, ಕ್ಯಾಪ್ಸಿಕಂ, ಕ್ಯಾರೆಟ್, ಟೊಮೆಟೊ ಆಗಿರಬಹುದು ಅಥವಾ ಮ್ಯಾಂಡರಿನ್ ಆಗಿರಬಹುದು. ಹೆಚ್ಚು ಹೆಚ್ಚು ಬಣ್ಣಗಳ ತರಕಾರಿ ಟೇಬಲ್ ಮೇಲಿದ್ದರೇನೇ ಊಟಕ್ಕೆ ಕಳೆ! ಅಂಥ ವರ್ಣರಂಜಿತ ತರಕಾರಿ– ತಳಿ ಅಭಿವೃದ್ಧಿಪಡಿಸುವುದು ಸಂಶೋಧಕರ ಹೊಣೆ.

ಅಷ್ಟಕ್ಕೂ ಇಸ್ರೇಲಿನ ಕೃಷಿ ಸಂಶೋಧನೆ ಹೇಗಿದೆ? ಬರೀ ತಳಿಗಳನ್ನು ರೈತರಿಗೆ ಕೊಟ್ಟು ‘ಪರಿಣಾಮ ಏನಾದರಾಗಲಿ, ನಮಗೇನು?’ ಎಂದು ಬೇಜವಾಬ್ದಾರಿಯಿಂದ ಸುಮ್ಮನೇ ಕುಳಿತುಕೊಳ್ಳುವಂಥದ್ದಲ್ಲ. ಅಲ್ಲಿನ ಕೃಷಿ ವಿಜ್ಞಾನಿಗಳ ಮೇಲಿರುವ ಹೊಣೆ ಗುರುತರವಾದುದು. ಲೇಖಕರು ಇಸ್ರೇಲ್ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಿದ್ದರು. ಅಲ್ಲಿಯ ಅನುಭವದ ಎಂಟನೇ ಕಂತು ಇದು.

ಪದಾರ್ಥವೊಂದನ್ನು ಗ್ರಾಹಕ ಮತ್ತೆ ಖರೀದಿಸುವಂತೆ ಮಾಡುವುದೇ ಪ್ಯಾಕಿಂಗ್‌ನ ಮುಖ್ಯ ಗುರಿ. ಪ್ರತಿಯೊಂದು ಹಂತದಲ್ಲೂ ಗುಣಮಟ್ಟ ತಪಾಸಣೆ ಅಗತ್ಯ. ಸೋಂಕು ತಗುಲದಂತೆ ಕೈಗವಸು ಧರಿಸಿ, ತರಕಾರಿ–ಹಣ್ಣು ಕೀಳುವುದು, ಪ್ಲಾಸ್ಟಿಕ್ ಹಾವಳಿ ತಡೆಯಲು ಕಾಗದ ಪ್ಯಾಕೆಟ್ ಬಳಕೆ, ಉತ್ಪನ್ನ ಹೆಚ್ಚು ಬಾಳಿಕೆ ಬರುವಂತೆ ಮಾಡುವ ಸುಧಾರಿತ ತಂತ್ರಜ್ಞಾನ ‘ಮಾಡಿಫೈಡ್ ಅಟ್ಮಾಸ್ಫಿಯರ್ ಪ್ಯಾಕೇಜಿಂಗ್’ (ಎಂಎಪಿ) ಅಳವಡಿಕೆ ಇಲ್ಲಿದೆ. ಇದೆಲ್ಲದರ ಪರಿಣಾಮವಾಗಿ, ಹಣ್ಣು-ತರಕಾರಿಗಳು ಹೆಚ್ಚು ದಿನ ಬಾಳಿಕೆ ಬರುತ್ತವೆ. ಹಾಗೆಂದು ಬಣ್ಣ, ಪರಿಮಳ ಹಾಗೂ ರುಚಿಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ರಫ್ತಿನ ಸಮಯದಲ್ಲಿ ತೇವಾಂಶ ಕಡಿಮೆಯಾಗಿ ಅಥವಾ ಮುದುಡಿದಾಗ ತೂಕ ಕುಸಿಯಬಹುದು. ಅದಕ್ಕಾಗಿ ಉತ್ಪನ್ನದ ಪ್ಯಾಕಿಂಗ್ ಸಮಯದಲ್ಲಿ ಅದರ ನಿಗದಿತ ತೂಕಕ್ಕಿಂತ ಶೇ 3ರಷ್ಟು ಹೆಚ್ಚಿನ ಪ್ರಮಾಣ ಸೇರಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.