ADVERTISEMENT

ತೊಗರಿಯ ತಿಜೋರಿ

ಜಿ.ಚಂದ್ರಕಾಂತ್
Published 5 ಜನವರಿ 2015, 19:30 IST
Last Updated 5 ಜನವರಿ 2015, 19:30 IST
ತೊಗರಿಯ ತಿಜೋರಿ
ತೊಗರಿಯ ತಿಜೋರಿ   

ಕಲಬುರಗಿಯಿಂದ 15 ಕಿ.ಮೀ. ದೂರದಲ್ಲಿರುವ ಶ್ರೀನಿವಾಸ ಸರಡಗಿ ಗ್ರಾಮದಲ್ಲಿನ ದೇವೇಂದ್ರಪ್ಪ ಬೆರಜೆ ಅವರ ತೋಟವು ತೊಗರಿ ಬೆಳೆಗಳ ತಿಜೋರಿಯಂತಿದೆ. ಇಲ್ಲಿ ಐ.ಸಿ.ಪಿ.ಹೆಚ್. 2740, ಬಿ.ಎಸ್.ಎಂ.ಆರ್.736, ಜಿ.ಆರ್.ಜಿ. 811, ಜಿ.ಆರ್.ಜಿ. 2009, ಟಿ.ಎಸ್.ಆರ್.3 ಆರ್., ಮಾರುತಿ ಜಿ.ಆರ್.ಜಿ.811 ಸೇರಿದಂತೆ ಸ್ಥಳೀಯ ಹಲವು ತೊಗರಿ ತಳಿಗಳು ತೊನೆಯಾಡುತ್ತಿವೆ.

ತೊಗರಿ ತಳಿಗಳನ್ನು ಖುಷ್ಕಿಯಲ್ಲಿ ಸಾಲಿನಿಂದ ಸಾಲಿಗೆ ಆರು ಅಡಿ ಮತ್ತು ಬೀಜದಿಂದ ಬೀಜಕ್ಕೆ ಎರಡು ಅಡಿ ಅಂತರವಿಟ್ಟು ನಾಟಿ ಮಾಡುತ್ತಾರೆ. ಹನಿ ನೀರಾವರಿ ಪದ್ಧತಿಯಲ್ಲಿ ಎಕರೆಗೆ ಮುಕ್ಕಾಲು ಕೆ.ಜಿ. ತೊಗರಿ ಬೀಜ ಮತ್ತು ಖುಷ್ಕಿಯಲ್ಲಿ ಎಕರೆಗೆ 3–4 ಕೆ.ಜಿ. ತೊಗರಿ ಬೀಜದ ಬಿತ್ತನೆ ಮಾಡಿ ಕಾಲ ಕಾಲಕ್ಕೆ ಕೃಷಿ ತಜ್ಞರು ನೀಡುವ ಸಲಹೆಯಂತೆ ಸಮಗ್ರ ಬೆಳೆ ನಿರ್ವಹಣೆ ಪದ್ಧತಿ ಅಳವಡಿಸಿಕೊಂಡು ತೊಗರಿ ಬೆಳೆಯನ್ನು ಹುಲುಸಾಗಿ ಬೆಳೆದಿದ್ದಾರೆ.

ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಇವರು ತೊಗರಿಯ ಜೊತೆಜೊತೆಗೇ ತಮ್ಮ 18.21 ಎಕರೆ ಜಮೀನಿನಲ್ಲಿ ಹಲವು ತರಹದ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ.

ಹತ್ತಿ ಬೆಳೆ, ಜಿ-9 ತಳಿಯ ಬಾಳೆ, ಕರಿಬೇವಿನ ಗಿಡ, ಸಪೋಟ, ಮಾವು, ತೆಂಗು ಮುಂತಾದವುಗಳನ್ನು ಸಹ ಬೆಳೆದಿದ್ದು, ಈಗ ಮೂರು ಎಕರೆ ಪ್ರದೇಶವನ್ನು ಸಂಪೂರ್ಣವಾಗಿ ತೋಟಗಾರಿಕೆ ಬೆಳೆಯ ಕ್ಷೇತ್ರಕ್ಕಾಗಿಯೇ ಮೀಸಲಿಡಲು ಯೋಜಿಸಿದ್ದಾರೆ.

‘ಮೂರು ವರ್ಷಗಳ ಹಿಂದೆ ಇದೇ 18 ಎಕರೆ ಹೊಲದಲ್ಲಿ ಪ್ರತಿ ವರ್ಷ ಒಟ್ಟು ಒಂದೂವರೆ ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದೆ. ಈಗ ಪ್ರತಿ ವರ್ಷ ನಾಲ್ಕು ಎಕರೆ ಬಾಳೆಯಿಂದ 12 ಲಕ್ಷ, ತೊಗರಿಯಿಂದ 3 ಲಕ್ಷ ಹಾಗೂ ಹತ್ತಿಯಿಂದ 50 ಸಾವಿರ ರೂಪಾಯಿ ಆದಾಯ ಬರುತ್ತಿದೆ. ಇದರಲ್ಲಿ ಎಲ್ಲ ಖರ್ಚು-ವೆಚ್ಚ ಹೋದರೂ ಈ ವರ್ಷ ಸುಮಾರು ಎಂಟು ಲಕ್ಷ ರೂಪಾಯಿ ನಿವ್ವಳ ಆದಾಯ ಬರುವ ನಿರೀಕ್ಷೆಯಿದೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ತಮ್ಮ ಹೊಲದಲ್ಲಿ ಎರಡು ನೀರಾವರಿ ಕೊಳವೆ ಬಾವಿಯಿಂದ ಹನಿ ನೀರಾವರಿ ಪೈಪ್‌ಲೈನ್ ಅಳವಡಿಸಿದ್ದು, ಪರ್ಯಾಯ ವಿದ್ಯುತ್‌ಗಾಗಿ ಜನರೇಟರ್ ಸಹ ಹೊಂದಿದ್ದಾರೆ.

‘ಈ ಹಿಂದೆ ರಾಜಕೀಯದಲ್ಲಿ ತೊಡಗಿಕೊಂಡಿದ್ದು ಮಾತ್ರವಲ್ಲದೇ ಗುತ್ತಿಗೆ ಕೆಲಸ, ಕಿರಾಣಿ ಅಂಗಡಿ ಎಂದೆಲ್ಲಾ ಕೆಲಸ ನಿರ್ವಹಿಸಿ ಕೈ ಸುಟ್ಟುಕೊಂಡಿದ್ದೆ. ಈಗ ಕಳೆದ ಮೂರು ವರ್ಷಗಳಿಂದ ಕೃಷಿಯನ್ನು ಕೈಗೊಂಡು ಆತ್ಮ ಸಂತೃಪ್ತಿ ಪಡೆದಿದ್ದೇನೆ. ಹಲವಾರು ರೈತರು, ಕೃಷಿ ವಿಜ್ಞಾನಿಗಳು ತಮ್ಮ ಹೊಲಕ್ಕೆ ಭೇಟಿ ನೀಡಿ ಪ್ರಶಂಸಿಸಿದ್ದಾರೆ’ ಎನ್ನುತ್ತಾರೆ ಅವರು.

ಇವರ ಸಾಧನೆಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೆ ಕೃಷಿ ಶಿಲ್ಪಿ-ಸಮಾಜ ಸೇವಕ ಹಾಗೂ ಕೃಷಿ ಪ್ರಶಸ್ತಿಗಳನ್ನೂ ಪಡೆದು ಕೊಂಡಿದ್ದಾರೆ. ಇವರ ಸಂಪರ್ಕ ಸಂಖ್ಯೆ 9632803962.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.