ADVERTISEMENT

ನಮ್ಮ ಆಹಾರ ನಾವೇ ಬೆಳೆಯೋಣ

ಎ.ಪಿ.ಚಂದ್ರಶೇಖರ
Published 17 ಆಗಸ್ಟ್ 2011, 19:30 IST
Last Updated 17 ಆಗಸ್ಟ್ 2011, 19:30 IST

ರೈತರಾದ ನಾವು ಯಾಕೆ ಹಣ ಮಾಡಬೇಕು ಅಥವಾ  ಹಣ ಗಳಿಸಲು ಯಾಕೆ ಹೆಣಗಬೇಕು? ಉದ್ಯೋಗಸ್ಥರು ಹಣ ಮಾಡಲೇಬೇಕು. ಅವರಿಗದು ಅನಿವಾರ್ಯ. ಏನನ್ನಾದರೂ ಕೊಂಡುಕೊಳ್ಳಲು ಅವರಿಗೆ ಹಣ ಬೇಕು.

 `ಏನನ್ನು ಕೊಂಡುಕೊಳ್ಳದಿದ್ದರೆ ಅಥವಾ `ಏನು ಇಲ್ಲದಿದ್ದರೆ~ ನಾವು ಬದುಕಲಾರೆವೋ ಅಂಥಾ ಆಹಾರ ನಮ್ಮ ಜೊತೆಗಿರುವಾಗ ಅಥವಾ ಆಹಾರ ಬೆಳೆಯುವ ಭೂಮಿ ನಮ್ಮ ಪಾಲಿಗೆ ಇರುವಾಗ, ನಮಗೆ ಅವರಷ್ಟು ಹಣದ ಅವಶ್ಯಕತೆ ಏನಿದೆ? ಈ ವಿಷಯವನ್ನು ವಿಸ್ತರಿಸಿ ಹೇಳುವುದಾದರೆ ನಮಗೆ ಬೆಳಗಿನಿಂದ ಸಂಜೆಯವರೆಗೆ ಸಾಕಷ್ಟು ವಸ್ತುಗಳು ಬೇಕಾಗಬಹುದು. ನಮ್ಮ ಮನೆಯಲ್ಲಿ ಸಾಕಷ್ಟು ವಸ್ತುಗಳಿರಬಹುದು.
 
ತೀವ್ರವಾಗಿ ಯೋಚನೆ ಮಾಡಿದರೆ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ, ಈ ವಸ್ತುಗಳೆಲ್ಲ ಇಲ್ಲದಿದ್ದರೂ ನಮಗೆ ಬದುಕಲು ಸಾಧ್ಯವಿದೆ. ಆದರೆ ಅನ್ನ, ತರಕಾರಿ, ಹಣ್ಣು, ಹಾಲು, ಕಾಳು, ನೀರು, ಗಾಳಿ ಇಲ್ಲದಿದ್ದರೆ ಬದುಕು ಅಸಾಧ್ಯ.

ಬಹಳ ಗಮ್ಮತ್ತಿನ ವಿಚಾರವೇನೆಂದರೆ, ಈ ಎಲ್ಲ ಅನಿವಾರ್ಯ ಅಗತ್ಯಗಳನ್ನು ಉದ್ಯೋಗಸ್ಥರೆಲ್ಲ ಹಣ ಕೊಟ್ಟೇ ಕೊಂಡುಕೊಳ್ಳಬೇಕು. ಆದರೆ ಇವೆಲ್ಲ ನಾನಿರುವಲ್ಲೇ ಇವೆ. ನಮ್ಮ ಭೂಮಿಯಲ್ಲೇ ಬೆಳೆಯುತ್ತವೆ. ನಾವು ಬೆಳೆಯದಿದ್ದರೂ ಬೆಳೆಯುತ್ತವೆ. ಹಾಗೆ ಬೆಳೆಯುತ್ತಿರುವುದರಿಂದಲೇ ನಾವೆಲ್ಲ ಇಲ್ಲಿದ್ದೇವೆ. ನಾವು ಬೆಳೆದರಷ್ಟೇ (ಬೆಳೆದುದನ್ನಷ್ಟೇ) ಅವರು ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯ.

ಉದಾಹರಣೆಗೆ ಒಂದು ಟೊಮೆಟೊ ಹಣ್ಣು ತೆಗೆದುಕೊಳ್ಳಿ. ಹಾಗೆ ಮನೆಯ ಹೊಸ್ತಿಲಲ್ಲೇ ನಿಂತು ಅದರ ಬೀಜಗಳನ್ನು ಹೊರಕ್ಕೆ ಎಸೆಯಿರಿ. ಮತ್ತು ಅದನ್ನು ಮರೆತು ಬಿಡಿ. ಮಳೆ ಬಂದ ನಾಲ್ಕನೇ ದಿನಕ್ಕೆ ಆ ಬೀಜಗಳೆಲ್ಲ ಮೊಳೆತು, ಗಿಡ ಬಲಿತು, ಒಂದು ಬೀಜ ನೂರಾರು ಹಣ್ಣಾಗುವ (ಸಾವಿರಾರು ಬೀಜವಾಗುವ) ಆ ಹಣ್ಣು, ಆ ಬೀಜ ನಿರಂತರವಾಗುವ ಪ್ರಕೃತಿಯ ವಿಪುಲ ಸಾಧ್ಯತೆಯನ್ನು ಗುರುತಿಸಿದ್ದಾದರೆ, ಒಂದು ಟೊಮೆಟೊದೊಳಗೆ ಇರುವ ಸಾವಿರಾರು ವೈವಿಧ್ಯಗಳನ್ನು ಗಮನಿಸಿದ್ದಾದರೆ, ಕೃಷಿ ಬಲು ಸುಲಭ. ಬದುಕು ಬಲು ಸುಲಭ.

ಸುಲಭದ ಕೃಷಿಯನ್ನು,ಬದುಕನ್ನು ನಾವು ನಾಗರಿಕತೆಯ ಹೆಸರಿನಲ್ಲಿ ಕಠಿಣಗೊಳಿಸುತ್ತ ಸಾಗಿದ್ದೇವೆ. ಅನಿವಾರ್ಯವಲ್ಲದ ಭೋಗವಸ್ತುಗಳಿಗೆ ದುಬಾರಿ ಬೆಲೆ ಕೊಟ್ಟಿದ್ದೇವೆ. ಪ್ರಕೃತಿಯ ಜೀವ, ನಿರ್ಜೀವ ವಸ್ತು ವೈಶಿಷ್ಟ್ಯಗಳಿಗೆ ಕೊಡಬೇಕಾದ ಪ್ರಥಮ ಪ್ರಾಶಸ್ತ್ಯವನ್ನು ಅದರ ಸಂಕೇತವಾದ ಹಣಕ್ಕೆ ಕೊಟ್ಟಿದ್ದೇವೆ.

ಇದರ ಬದಲು, ಅನಿವಾರ್ಯವಾದ ನಮ್ಮ ಆಹಾರವನ್ನು  ನಮ್ಮದೇ ಭೂಮಿಯಲ್ಲಿ ಆದ್ಯತೆಯಿಂದ ಬೆಳೆದುದಾದರೆ, ಏಕಬೆಳೆ ಪದ್ಧತಿಯಿಂದ ಲಭ್ಯವಾಗಿರುವ ನಮ್ಮದೇ ಭೂಮಿಯಲ್ಲಿ ಆದ್ಯತೆಯಿಂದ ಬೆಳೆದುದಾದರೆ, ಏಕಬೇಳೆ ಪದ್ಧತಿಯಿಂದ ಬಹುಬೆಳೆ ಪದ್ಧತಿಗೆ (ಪ್ರಕೃತಿಯ ನೀತಿಗೆ) ಬದಲಾದರೆ, ತೆಂಗು, ಅಡಿಕೆ, ಕಬ್ಬು, ಹೊಗೆಸೊಪ್ಪು, ತೊಗರಿ, ಜೋಳ, ಕಾಫಿ, ಚಹಾ ಎಂದು ಎಲ್ಲೆಲ್ಲೂ ಒಂದೇ ಬೆಳೆಯುವ ಬದಲು ಎಲ್ಲೆಲ್ಲೂ ಎಲ್ಲವನ್ನೂ ಕಾಡಿನ ತತ್ವದಲ್ಲಿ ಮಿಶ್ರ ಬೆಳೆಯಾಗಿ ಬೆಳೆದುದಾದರೆ, ಕಳೆಗಳೊಳಗಿರುವ ಆಹಾರದ ಮಹತ್ವವನ್ನು ಅರಿತು ಬಳಸುವುದು ಸಾಧ್ಯವಾದರೆ, ಹಣದ ಬೆಳೆಯಷ್ಟೇ ಮಹತ್ವ ಆಹಾರದ ಬೆಳೆಗೂ ಲಭಿಸಿದರೆ, ಆಗ ನಾವು ಬೆಳೆಯುವ (ಅದಾಗಿ ಬೆಳೆಯುವ) ಎಲ್ಲ ಬೆಳೆಗಳೂ (ಕಳೆಗಳೂ) ಹಣದ ಬೆಳೆಯೇ ಆಗಿಬಿಡುತ್ತವೆ.

ಹಣಕ್ಕಾಗಿ ಕೃಷಿ ಮಾಡದಿದ್ದರೂ ರೈತನಿಗೆ ಹಣ ತಾನಾಗಿ ಹರಿದು ಬರುವುದು. ಹಣದ ಅವಶ್ಯಕತೆ ಬಹುಮಟ್ಟಿಗೆ ಕಡಿಮೆಯಾಗುವುದು. ಪ್ರಕೃತಿ ಬಯಸದ ಸೋಗಲಾಡಿ ಉದ್ಯೋಗಗಳೆಲ್ಲ ಹಾಗೆ ಕಣ್ಮರೆಯಾಗಿ ಬಿಡುವುದು. ಇಂದು ಅನಿವಾರ್ಯವಾಗಿ ರೈತರು ಕೃಷಿ ಮಾಡುವ ಹಾಗೆ ಅಂದು ಅವರೆಲ್ಲ ಅನಿವಾರ್ಯವಾಗಿ ಉದ್ಯೋಗ ಮಾಡುವಂತಾಗುವುದು.

ಉದ್ಯೋಗಗಳಲ್ಲೆಲ್ಲಾ ಕೃಷಿ ಪ್ರಥಮ ಆದ್ಯತೆಯ ಉದ್ಯೋಗವಾಗುವುದು. ಕೃಷಿಕ ತಾನು ಪ್ರಕೃತಿಯನ್ನು ಅರಿತು ಬೆಳೆದ ಬೆಳೆಗಳನ್ನು ಉದ್ಯೋಗಸ್ಥರು ಗೌರವದಿಂದ ಸ್ವೀಕರಿಸಿ, ವೈಜ್ಞಾನಿಕ ಬೆಲೆ ಕೊಟ್ಟು ಕೊಂಡುಕೊಳ್ಳುವ ಸ್ಥಿತಿ ಬರುವುದು. ಇಂಥಾ ಅಪೂರ್ವ ಸ್ವಾವಲಂಬಿ ಸಾಧ್ಯತೆಯನ್ನು ಸಾಕಾರಗೊಳಿಸುವುದರಲ್ಲಿ ನಿಜವಾದ ಕೃಷಿ ಇದೆ.

ನಮ್ಮ ಅನ್ನದ ಬಟ್ಟಲು ತುಂಬಿರುವಾಗ, ಅದು ನಮ್ಮ ಬಳಿಯೇ ಇರುವಾಗ, ಅದು ನಮ್ಮದೇ ಭೂಮಿಯ ಬಳುವಳಿ ಆಗಿರುವಾಗ, ನಮಗಿರುವ (ರೈತರಿಗಿರುವ) ಶಕ್ತಿಯೇ ಬೇರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.