ನಮಗೆ ಯೋಚನೆ ಮಾಡುವ ಶಕ್ತಿ ಇದೆ. ಈ ಕಾರಣಕ್ಕಾಗಿಯೇ ನಾವು ಪ್ರಾಣಿಗಳಿಗಿಂತ ಭಿನ್ನವಾಗಿದ್ದೇವೆ. ಹೀಗಾಗಿ ನಾವು ಮೇಲ್ಮಟ್ಟದ ಜೀವಿಗಳು. ನಾಲ್ಕು ಕಾಲಿದ್ದರಷ್ಟೇ ನಡೆಯಬಲ್ಲ ಜೀವಿಗಳ ತಲೆ, ಎದೆ, ಹೊಟ್ಟೆ, ರಟ್ಟೆ ಎಲ್ಲಾ ಒಂದೇ ಮಟ್ಟದಲ್ಲಿದೆ.
ಈ ಕಾರಣದಿಂದಾಗಿ ಅವು ಹೊಟ್ಟೆಗೆ ಬೇಕಾದ ಆಹಾರ ಪಡೆಯಲು ಕೆಲಸ ಮಾಡುತ್ತವೆ. ಅವು ಹಾಗಿರುವುದರಿಂದ ನಮಗೆ ತಿಂದು,ಉಂಡು ಸಂಭ್ರಮಿಸಲು ಇಷ್ಟೆಲ್ಲ ಸಂಪತ್ತು ಈ ಭೂಮಿಯಲ್ಲಿದೆ.
ಆಹಾರಕ್ಕೆ ತಕ್ಕಷ್ಟು ಕೆಲಸ. ಆ ಮೇಲೆ ಸುಖನಿದ್ರೆ, ಸಂಭ್ರಮ, ಸಂತೃಪ್ತಿಗಳು ಪ್ರಾಣಿಗಳಿಗೆ ಸಹಜ. ನಾವಾದರೋ ಇದನ್ನು ಕೃತಕವಾಗಿಯೇ ಸಾಧಿಸಬೇಕು.
ಹಾಗೆಂದು ಪ್ರಕೃತಿಯ ನಿಯಮಗಳನ್ನು ಮೀರಲು ಸಾಧ್ಯವಿಲ್ಲ. ಆದರೆ ಅಸೂಯೆ ಹಾಗೂ ಭಯಗಳ ಇಮ್ಮಡಿ ಪರಿಣಾಮವಾಗಿ ನಾವಿಂದು ತಲುಪಿದ ನಾಗರಿಕ ಗುಣಮಟ್ಟ ಭಯ ಹುಟ್ಟಿಸುವ ಮಟ್ಟದಲ್ಲಿದೆ.
ನಮ್ಮ ರಕ್ಷಣೆಗಾಗಿ, ಪೋಷಣೆಗಾಗಿ, ಸಂಭ್ರಮಕ್ಕಾಗಿ ನಾವೇ ರೂಪಿಸಿದ ವ್ಯವಸ್ಥೆ ನಮ್ಮನ್ನೇ ಬಲಿ ತೆಗೆದುಕೊಳ್ಳಲು ಸನ್ನದ್ಧವಾಗಿದೆ. ಹೀಗೆ ಮುಂದುವರಿದರೆ, ನಾವು ಯೋಚಿಸುವುದು ಸಾಧ್ಯವಾಗದಿದ್ದರೆ ಸೂರ್ಯನಿರುವವರೆಗೆ ಇರಬೇಕಾದ ಈ ಭೂಮಿಯ ಜೀವಾಧಾರಕ ವ್ಯವಸ್ಥೆ ಹಾಗೇ ನಶಿಸಿ ಹೋಗುವ ಸಂಭವವಿದೆ. ಇಲ್ಲಿರುವ ಜೀವ ವ್ಯವಸ್ಥೆಯ ಜೀವ ನೀರಿನಲ್ಲಿದೆ.
`ನೀರು~ ಒಂದು ಸಮಸ್ಯೆ ಆಗಿರಲಿಲ್ಲ. ಎಲ್ಲಿ ನೆಲವನ್ನು ತೋಡಿದರೂ ನೀರು ಸಿಗುತ್ತಿತ್ತು. ಎಲ್ಲರೂ ಸೇದುವ ಬಾವಿಯನ್ನು ಮಾಡಿಕೊಂಡು ನೀರು ಕುಡಿಯುತ್ತಿದ್ದರು.
ಸೇದುವ ಬಾವಿ ಎಂದರೆ ಏನೆಂಬುದನ್ನು ಬಹುಶಃ ಇಂದಿನ ತಲೆಮಾರಿನವರಿಗೆ ವಿವರಿಸಬೇಕಿದೆ. ಬಾವಿ ಎಂದರೆ ಬಹುತೇಕ ಆರರಿಂದ ಹತ್ತು ಅಡಿ ವ್ಯಾಸದ ಗುಂಡಿ.
ನೀರ ಸೆಲೆಗೆ ಅನುಗುಣವಾಗಿ ಇಪ್ಪತ್ತರಿಂದ ನಲ್ವತ್ತು ಅಡಿ ಆಳ ಇದ್ದೀತು. ಇದಕ್ಕಿಂತ ಆಳವಾದರೆ ಬಾವಿ ತೋಡುವುದು ಹಾಗೂ ನೀರು ಸೇದುವುದು ಕಷ್ಟ. ಹಿಂದಿನ ದಿಗಳಲ್ಲಿ ಕೆಲವೇ ಅಡಿಗಳ ಅಂತರದಲ್ಲಿ ನೀರು ಸಿಗುತ್ತಿತ್ತು. ನೀರಿಗೆ ಅನುಗುಣವಾಗಿ ನಮ್ಮ ಜೀವನ ಕ್ರಮ ಹಾಗೂ ನಾಗರಿಕತೆ ಇರುತ್ತಿತ್ತು.
ಇಂತಹ ಬಾವಿಗಳಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಮೂರ್ನಾಲ್ಕು ಅಡಿ ನೀರು ಇರುತ್ತಿತ್ತು. ಮಳೆಗಾಲದಲ್ಲಿ ನೀರಿನ ಮಟ್ಟ ಜಾಸ್ತಿ ಇರುತ್ತದೆ. ಮಳೆಗಾಲದಲ್ಲಿ ಎಷ್ಟು ಜಾಸ್ತಿ ನೀರಿರುತ್ತದೋ ಅಷ್ಟು ಬಾವಿಗಳು ಬೇಸಿಗೆಯಲ್ಲಿ ಶಕ್ತವಾಗಿರುತ್ತದೆ. ಬಾವಿಯ ಬೇಸಿಗೆಯ ಶಕ್ತಿಗೆ ಹತ್ತಾರು ಪರಿಸರದ ಕಾರಣಗಳಿವೆ.
ಬಾವಿಯಿಂದ ನೀರು ಸೇದಬೇಕಾದರೆ ನಾಲ್ಕು ಅಡಿಗಳಾದರೂ ನೀರು ಇರಬೇಕು.ಹಾಗೂ ಅಷ್ಟು ನೀರು ನಮಗೆ ಸಾಕು. ಅಷ್ಟು ನೀರು ಪಡೆಯುವುದು ನಮ್ಮ ಹಕ್ಕು.ಯೋಚಿಸಿದರೆ ತಿಳಿದೀತು `ಅದು ನಮ್ಮ ಕರ್ತವ್ಯ ಕೂಡ~ ಹಾಗಾಗಿ ಹಿಂದಿನ ಜನರು ಎಷ್ಟು ಬೇಕೋ ಅಷ್ಟೇ ಆಳದ ಬಾವಿಗಳನ್ನು ತೋಡಿಕೊಳ್ಳುತ್ತಿದ್ದರು.
ಇಂತಹ ಬಾವಿಗಳನ್ನು ತೋಡಲು ಸಾಮಾನ್ಯವಾಗಿ ಆರೇಳು ಜನರು ಬೇಕು. ಅಂತಹ ಒಂದು ಬಾವಿಯ ನೀರು ಆರೇಳು ಜನರ ಜೀವನಕ್ಕೆ (ಕೃಷಿಗೆ ಹಾಗೂ ಕುಡಿಯಲು) ಸಾಕಿತ್ತು.
ಬಾವಿಗೆ ಮೆಟ್ಟಲುಗಳನ್ನು ಮಾಡಿಕೊಂಡು ನಾವೇ ಇಳಿದು ಹೋಗಿ ಬಿಂದಿಗೆಯಲ್ಲಿ ನೀರು ತುಂಬಿಕೊಂಡು ತರುವುದಕ್ಕಿಂತ ಸುಲಭವಾಗಿ ಹಗ್ಗ ಬಳಸಿ ರಾಟೆ ಮೂಲಕ ನೀರು ಸೇದಿಕೊಳ್ಳುವ ವ್ಯವಸ್ಥೆ ಅದ್ಭುತ.
ಹಗ್ಗ ಕಟ್ಟಿದ ಬಿಂದಿಗೆ ಮೂಲಕ ನೀರು ತುಂಬುದಕ್ಕಿಂತ ಮೆಟ್ಟಿಲುಗಳ ಮೂಲಕ ಬಾವಿಗೆ ಇಳಿದು ನೀರು ತೆಗೆಯುವುದು ಜಾಸ್ತಿಯಾದರೆ ನೀರಿನ ಕೊರತೆ ಉಂಟಾಗುತ್ತದೆ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. ನೀರನ್ನು ಹಾಗೂ ಪ್ರಕೃತಿಯ ಇನ್ನಿತರೆ ಸಂಪತ್ತುಗಳನ್ನು ನಮ್ಮ ಪೂರ್ವಿಕರು ಬಳಸಿದ ರೀತಿ, ತಮಗೆ ತಾವೇ ಹಾಕಿಕೊಂಡ ಒಂದು ಮಿತಿ. ಅದೊಂದು ಅದ್ಭುತ ವ್ಯವಸ್ಥೆ.
ನಮ್ಮ ಹಿಂದಿನ ತಲೆಮಾರುಗಳ ಜನರು ಬಿಂದಿಗೆ, ರಾಟೆ ಮತ್ತು ಹಗ್ಗಗಳನ್ನಷ್ಟೇ ಯೋಚಿಸಿದ್ದರು. ಆದರೆ ನಾವು ಈಗ ವಿದ್ಯುತ್ ಮೋಟರ್ ಬಳಸಿ ನೀರೆತ್ತುವ ವ್ಯವಸ್ಥೆ ರೂಪಿಸಿಕೊಂಡಿದ್ದೇವೆ. ಹೀಗೇ ಭಾರೀ ಅಣೆಕಟ್ಟುಗಳ ತೀವ್ರ ದುಷ್ಪರಿಣಾಮಗಳನ್ನು ಯೋಚಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ಈಗ ಬಂದೊದಗಿದೆ.
ಮಳೆ ನೀರು ಅಂತರ್ಜಲವಾಗಿ ಬಾವಿಯಲ್ಲಿ ಒಸರುವ ವೇಗಕ್ಕಿಂತ ನೂರಾರು ಪಟ್ಟು ವೇಗವಾಗಿ ನೀರೆತ್ತುವ ವ್ಯವಸ್ಥೆ ಎಲ್ಲ ರೀತಿಯಿಂದಲೂ ಅಪಾಯಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.