ADVERTISEMENT

ಬಂಜರು ಜಮೀನಲ್ಲಿ ಜಾಯಿಕಾಯಿ!

ನಾಗೇಂದ್ರ ಖಾರ್ವಿ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST
ಪೂರ್ಣಾನಂದ ಭಟ್
ಪೂರ್ಣಾನಂದ ಭಟ್   

ಅದು ಬರಡು ಭೂಮಿ. ಹುಲ್ಲು ಕೂಡ ಬೆಳೆಯಲು ಸಾಧ್ಯವಿರದ ಭೂಮಿಯಲ್ಲಿ ಅದ್ಭುತ ಎನ್ನುವ ರೀತಿಯಲ್ಲಿ ಕೃಷಿಕರೊಬ್ಬರು ಜಾಯಿಕಾಯಿ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಂಕೋಲಾ ತಾಲ್ಲೂಕಿನ ಸಕಲಬೇಣದ ಪ್ರಗತಿಪರ ಕೃಷಿಕ ಪೂರ್ಣಾನಂದ ಭಟ್ ಜಾಯಿಕಾಯಿ ಕೃಷಿಯಲ್ಲಿ ಮಾಡಿರುವ ಸಂಶೋಧನೆಗೆ ಅಂತರರಾಷ್ಟ್ರೀಯ ಮನ್ನಣೆ ಸಿಕ್ಕಿದೆ.

ಇಷ್ಟಕ್ಕು ಭಟ್ಟರು ಕಲಿತದ್ದು ಬಿಎ ಪದವಿ. ಮಾಡಿರುವುದು ತೋಟಗಾರಿಕೆ ಬೆಳೆಯಲ್ಲಿ ಸಂಶೋಧನೆ ಎನ್ನುವುದು ಇಲ್ಲಿ ಗಮನಾರ್ಹ. ಜಾಯಿಕಾಯಿ ಗಿಡ ನೆಟ್ಟು ಅದು ಫಲ ನೀಡಿದ ನಂತರವೇ ಆ ಮರ ಗಂಡೋ ಅಥವಾ ಹೆಣ್ಣೋ ಎನ್ನುವುದು ಗೊತ್ತಾಗುತ್ತದೆ. ಇದು ಸಾಮಾನ್ಯ ಪದ್ಧತಿ.

ಈ ರೀತಿಯಾಗಿ ಜಾಯಿಕಾಯಿ ಬೆಳೆ ಮಾಡುವ ಪದ್ಧತಿ ದೀರ್ಘಕಾಲೀನದ್ದು (ಅಂದಾಜು ಏಳು ವರ್ಷ). ಈ ಪದ್ಧತಿಯಲ್ಲಿ ಕೃಷಿಕರಿಗೆ ನಿರಾಶೆಯೂ ಕಾದಿರುತ್ತದೆ. ಈ ಪದ್ಧತಿಗೆ ತಿಲಾಂಜಲಿ ಇಟ್ಟಿದ್ದಾರೆ ಭಟ್ಟರು. ಬೀಜವನ್ನು ನೋಡಿಯೇ ಜಾಯಿಕಾಯಿ ಸಸಿಯನ್ನು ಹೆಣ್ಣು, ಗಂಡು ಮತ್ತು ಮಿಶ್ರತಳಿ (ಸೆಮಿ ಮೇಲ್) ಎಂದು ಗುರುತಿಸುವುದನ್ನು ಭಟ್ಟರು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಸಂಶೋಧನೆ ಕೈಗೊಂಡ ದಶಕಗಳ ನಂತರ ಭಟ್ಟರಿಗೆ ಯಶಸ್ಸು ಸಿಕ್ಕಿದೆ.

ಸಾಮಾನ್ಯ ಪದ್ಧತಿಯಲ್ಲಿ ಜಾಯಿಕಾಯಿ ಕೃಷಿ ಮಾಡುವುದು ಭಟ್ಟರಿಗೂ ಬೇಸರ ತರಿಸಿತು. ಜಾಯಿಕಾಯಿ ಸಸಿ ತಂದು ನೆಟ್ಟು ಏಳು ವರ್ಷಗಳ ನಂತರ ಅದು ಫಲ ನೀಡದಿದ್ದರೆ ಕಡಿದು ಹಾಕುವುದು ಎಂದರೆ ಸಾಮಾನ್ಯವಾಗಿ ಎಲ್ಲ ಕೃಷಿಕರಿಗೂ ನೋವುಂಟು ಮಾಡುವ ಸಂಗತಿ.

ಈ ಕಾರಣಕ್ಕಾಗಿಯೇ ಭಟ್ಟರು ಜಾಯಿಕಾಯಿ ಕೃಷಿಯಲ್ಲಿ ಸಂಶೋಧನೆ ಕೈಗೊಂಡರು. ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾಲಯಕ್ಕೆ ಹೋಗಿ ಜಾಯಿಕಾಯಿ ಸಸಿಗಳ ಕುರಿತಾದ ಸಾಹಿತ್ಯ ಅಧ್ಯಯನ ಮಾಡಿ ಸಂಶೋಧನೆಗೆ ಬೇಕಾದ ವಿಷಯ ಸಂಗ್ರಹ ಮಾಡಿದರು. ನಂತರ ತಮ್ಮ ತೋಟದಲ್ಲಿ ಪ್ರಯೋಗ ಮಾಡಿದರು. ನಿರಂತರ ಹತ್ತು ವರ್ಷಗಳ ಸಂಶೋಧನೆಯ ನಂತರ ಭಟ್ಟರಿಗೆ ಫಲ ದೊರಕಿತು.

ಸುಲಭದಲ್ಲಿ ಪತ್ತೆ
ಭಟ್ಟರು ತಮ್ಮ ಸಂಶೋಧನೆಯಿಂದ ಹೆಣ್ಣು, ಗಂಡು ಮತ್ತು ಮಿಶ್ರತಳಿಯ ಬೀಜ ಯಾವುದು ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಾಗಿರುವುದು ಅಷ್ಟೇ ಅಲ್ಲ ಈ ಜಾಯಿಕಾಯಿ ಗಿಡಗಳು ನೆಟ್ಟ ಮೂರೇ ವರ್ಷಕ್ಕೆ ಫಲ ನೀಡುತ್ತವೆ!

ತಾವು ಮಾಡಿದ ಸಂಶೋಧನೆಯ ನಂತರ ಭಟ್ಟರು ತಮ್ಮ 19 ಎಕರೆ ತೋಟದಲ್ಲಿ ಒಟ್ಟು 2500 ಜಾಯಿಕಾಯಿ ಗಿಡಗಳನ್ನು ಬೆಳೆಸಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ಸಂಖ್ಯೆಯ ಜಾಯಿಕಾಯಿ ಗಿಡವನ್ನು ಬೆಳೆಸಿರುವವರಲ್ಲಿ ಇವರೇ ಮೊದಲಿಗರು. ಭಟ್ಟರ ತೋಟಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಶಿರಸಿ ತೋಟಗಾರಿಕೆ ಕಾಲೇಜು, ಕೊಚ್ಚಿನ್‌ನ ಸಾಂಬಾರು ಮಂಡಳಿ ನಿರ್ದೇಶಕರು, ಭಾರತೀಯ ಸಾಂಬಾರು ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿಗಳು ಭೇಟಿ ನೀಡಿ ಜಾಯಿಕಾಯಿಯಲ್ಲಿ ಮಾಡಿರುವ ಸಂಶೋಧನೆ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.'

`ಸಾಮಾನ್ಯ ಪದ್ಧತಿಯಲ್ಲಿ ಜಾಯಿಕಾಯಿ ಕೃಷಿ ಮಾಡುವುದು ತುಂಬ ದೀರ್ಘಕಾಲೀನ ಪ್ರಕ್ರಿಯೆ. ಇದಕ್ಕೆ ಮುಕ್ತಿಹಾಡಬೇಕು ಮತ್ತು ಸಂಶೋಧನೆ ಮಾಡಿದರೆ ತನಗೆ ಯಶಸ್ಸು ಸಿಗುತ್ತದೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿತ್ತು. ಈಗ ಸಂಶೋಧನೆಯಲ್ಲಿ ಯಶಸ್ಸು ಕಂಡಿದ್ದೇನೆ. ಸಂಶೋಧನೆಗೆ ಭಾರತೀಯ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಿದ್ದೇನೆ' ಎನ್ನುತ್ತಾರೆ ಪೂರ್ಣಾನಂದ ಭಟ್. ಮಾಹಿತಿಗಾಗಿ 08388-292199 ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.