ADVERTISEMENT

ಬರಗಾಲಕ್ಕೆ ವರ ಈ ನಾಟಿ ತೊಗರಿ!

ಗಾಣಧಾಳು ಶ್ರೀಕಂಠ
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST
ಚಿತ್ರಗಳು: ಲೇಖಕರವು
ಚಿತ್ರಗಳು: ಲೇಖಕರವು   

ಮೊದಲು ತೊಗರಿ ಬೀಜಾನ ಕೂರಿಗೇಲಿ ಬಿತ್ನೆ ಮಾಡ್ತಿದ್ದೆ. ಎಕರೆಗೆ 10 ರಿಂದ 12 ಸೇರು ಬೀಜ ಹಾಕ್ತಿದ್ದೆ. ಸಸಿ ದಡೂಸ್ ಆಗ್ತಿದ್ವು ... ಎಕರೆಗೆ ಮೂರರಿಂದ ನಾಲ್ಕು ಚೀಲ ಇಳುವರಿ ಬರ್ತಿತ್ತು. ಕಳೆದ ವರ್ಷ ಬೀಜಾನ ಪಾಕೆಟ್‌ಗೆ ಹಾಕಿ, ಒಂದು ತಿಂಗಳಾ ಸಸಿ ಮಾಡಿ, ನಾಟಿ ಮಾಡಿದೆ ನೋಡ್ರಿ. ಎರಡು ಸೇರು ಬೀಜದಲ್ಲಿ ಬಿತ್ತನೆನೇ ಮುಗೀತು. ಎಕರೆಗೆ 10 ಚೀಲ ಬಂತು… ಅದಕ್ಕೆ ಈ ವರ್ಷ 60 ಸಾವಿರ ಸಸಿ ಮಾಡಿ 13 ಎಕರೆಗೆ ನಾಟಿ ಮಾಡೀನ್ರಿ …’

ಬೀದರ್‌ ಜಿಲ್ಲೆ ಸೇಡಂ ತಾಲ್ಲೂಕಿನ ಹಾಬಾಳ(ಟಿ) ಗ್ರಾಮದ ರೈತ ಶಂಕ್ರಪ್ಪ ಶೇರಿಕಾರ ಎರಡು ಎಕರೆಯಲ್ಲಿ ನಾಟಿ ಪದ್ಧತಿಯಲ್ಲಿ ತೊಗರಿ ಕೃಷಿ ಮಾಡಿದ್ದನ್ನು ಉಮೇದಿನಿಂದ ಹೇಳಿಕೊಂಡರು. ಪ್ರತಿ ಮಾತಿನಲ್ಲೂ ಬಿತ್ತನೆ ಮತ್ತು ನಾಟಿ ಪದ್ಧತಿ ನಡುವಿನ ವ್ಯತ್ಯಾಸಗಳನ್ನು ತೆರೆದಿಡುತ್ತಿದ್ದರು. ಜತೆಗೆ ಪೂರಕ ಮಾಹಿತಿಯಾಗಿ ಅಂಕಿ ಅಂಶಗಳನ್ನು ಕೊಡುತ್ತಿದ್ದರು.

‘ನಾಟಿ ಪದ್ಧತಿ’ ಏನು ? ಹೇಗೆ ?
ಇದು ಹೊಸ ವಿಧಾನ ಅಲ್ಲ. ‘ಶ್ರೀ’ (ಸಿಸ್ಟಮ್ ಆಫ್ ರೈಸ್ ಇಂಟೆನ್ಸಿಫಿಕೇಷನ್ ) ವಿಧಾನದಲ್ಲಿ ಬತ್ತ ಬೆಳೆದಂತೆ, ಗುಳಿ ರಾಗಿ ಅಥವಾ ನೆಟ್ಟಿ ಪದ್ಧತಿಯಲ್ಲಿ ರಾಗಿ ಕೃಷಿ ಮಾಡಿದಂತೆ, ತೊಗರಿಯನ್ನೂ ನರ್ಸರಿಯಲ್ಲಿ ಒಂದು ತಿಂಗಳ ಸಸಿಯಾಗಿ ಬೆಳೆಸಿ, ಜಮೀನಿಗೆ ನಾಟಿ ಮಾಡಲಾಗುತ್ತದೆ. ಇದೇ ತೊಗರಿ ನಾಟಿ ಪದ್ಧತಿ.

ADVERTISEMENT

ತೊಗರಿ ಬೀಜವನ್ನು ಒಂದು ತಿಂಗಳು ನರ್ಸರಿಯಲ್ಲಿ ಬೆಳೆಸಿ, ನಂತರ ಭೂಮಿ ಹದ ನೋಡಿಕೊಂಡು, ಸಸಿಯಿಂದ ಸಸಿಗೆ ಮೂರು ಅಡಿ, ಸಾಲಿನಿಂದ ಸಾಲಿಗೆ ಆರು ಅಡಿ ಅಂತರದಲ್ಲಿ ಸಸಿ ನಾಟಿ ಮಾಡುತ್ತಾರೆ. ಎರಡು ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿತ್ತು. ಈಗ ಕಡಿಮೆ ಮಳೆ ಬೀಳುವ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಣೆಯಾಗಿದೆ.

ಸಾಮಾನ್ಯವಾಗಿ ಮೇ ತಿಂಗಳಲ್ಲಿ ತೊಗರಿ ನರ್ಸರಿ ಮಾಡುತ್ತಾರೆ. ಕೆಲವರು ಟೊಮೆಟೊ, ಮೆಣಸಿನಕಾಯಿ ಬೆಳೆಸುವ ಟ್ರೇಗಳಲ್ಲಿ ಬೆಳೆಸುತ್ತಾರೆ. ಕೆಲವು ಕಡೆ ಪೊಟ್ಟಣಗಳಲ್ಲಿ ಸಸಿ ಬೆಳೆಸುವ ಪದ್ಧತಿ ಇದೆ.

ಟ್ರೇ ಅಥವಾ ಪೊಟ್ಟಣಗಳಿಗೆ ಮಣ್ಣು, ತಿಪ್ಪೆಗೊಬ್ಬರ, ಎರೆಹುಳುವಿನ ಗೊಬ್ಬರ ಹಾಗೂ ಎರಡು ತೊಗರಿ ಬೀಜಗಳನ್ನು ನಾಟಿ ಮಾಡಿ, ಒಂದು ಹದ ನೀರುಣಿಸುತ್ತಾರೆ. ಒಂದು ತಿಂಗಳು ನಂತರ ಒಂದು ಅಡಿ ಎತ್ತರಕ್ಕೆ ಸಸಿ ಬೆಳೆ­ಸುತ್ತಾರೆ. ನಂತರ ಹದ ಮಳೆ ನೋಡಿ ಜಮೀನಿಗೆ ಸ್ಥಳಾಂತರಿಸುತ್ತಾರೆ.

‘ಕಳೆದ ವರ್ಷ ಮೇ ತಿಂಗಳಲ್ಲಿ ನರ್ಸರಿ ಮಾಡಿದೆ. ಜೂನ್ ತಿಂಗಳಲ್ಲಿ ಸಸಿ ನಾಟಿ ಮಾಡಿದೆ. ಸಸಿ ನಾಟಿ ನಂತರ ಮಳೆ ಬರಬೇಕು. ಆದರೆ ಬರಲಿಲ್ಲ. ಸಸಿಗಳು ಹೂವಾಗುವ ಹೊತ್ತಿಗೆ ಒಂದು ಹದ ಸ್ಪ್ರಿಂಕ್ಲರ್ ನೀರು ಕೊಟ್ಟೆ, ಸಸಿ ಸೊಂಪಾಗಿ ಬೆಳೆಯಿತು. 40 ದಿನಗಳ ನಂತರ ಕುಡಿ ಚಿವುಟಿದೆ. ಆ ವರ್ಷ ಫಸಲು ಚೆನ್ನಾಗಿ ಬಂತು’ ಎನ್ನುತ್ತಾ ನಾಟಿ ವಿಧಾನದ ಅನುಭವಗಳನ್ನು ಶಂಕ್ರಪ್ಪ ಹಂಚಿಕೊಳ್ಳುತ್ತಾರೆ.

ಅನುಕೂಲ ಏನು?
ಮಳೆ ವ್ಯತ್ಯಾಸದಿಂದ ಬಿತ್ತನೆ ವಿಳಂಬವಾದಾಗ ಈ ಪದ್ಧತಿ ಅನುಕೂಲಕರ. ಬಿತ್ತನೆ ವಿಳಂಬದ ಸಮಯದಲ್ಲಿ ನರ್ಸರಿಯಲ್ಲಿ ಬೀಜ ಸಸಿಯಾಗುತ್ತದೆ. ‘ಒಂದು ತಿಂಗಳು ಬಿತ್ತನೆ ಅವಧಿ ವಿಳಂಬವಾದರೆ, ಆ ಒಂದು ತಿಂಗಳು ಭೂಮಿ­ಯಲ್ಲಿ ಬೆಳೆಯಬೇಕಾದ ಸಸಿ ನರ್ಸರಿಯಲ್ಲಿ ಸಮಗ್ರ ಪೋಷಕಾಂಶಗಳ ಆರೈಕೆಯೊಂದಿಗೆ ಬೆಳೆಯುತ್ತದೆ. ಆ ಸಸಿ ಆರೋಗ್ಯವಾಗಿದ್ದು, ಗುಣಮಟ್ಟದ್ದಾಗಿರುತ್ತದೆ’ ಎನ್ನುತ್ತಾರೆ ಚಿತ್ರದುರ್ಗ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್ ಕಳ್ಳೆಣ್ಣನವರ್.

ಬೆಳವಣಿಗೆ ಅವಧಿ ಹೆಚ್ಚಿದಷ್ಟು ತೊಗರಿ ಇಳುವರಿ ಹೆಚ್ಚಾಗುತ್ತದೆ. ಸಮಗ್ರ ಪೋಷಕಾಂಶಗಳೊಂದಿಗೆ 25 ದಿನಗಳವರೆಗೆ ಬೆಳೆಯುವ ತೊಗರಿ ಸಸಿ ಗುಣಮಟ್ಟದ್ದಾಗಿರುತ್ತದೆ ಎಂಬ ಮಾಹಿತಿಯನ್ನೂ ಸೇರಿಸುತ್ತಾರೆ.

ನಾಟಿ ಪದ್ಧತಿಯಲ್ಲಿ ಸಾಲಿನಿಂದ ಸಾಲಿಗೆ 6 ಅಡಿ ಅಂತರ ಜಾಗ ಬಿಟ್ಟಿರುತ್ತಾರೆ. ಈ ಜಾಗದಲ್ಲಿ ಅಲ್ಪಾವಧಿ ಬೆಳೆಗಳನ್ನು ರೈತರು ಬೆಳೆಯಬಹುದು. ಕಳೆದ ವರ್ಷ ಹೊಳಲ್ಕೆರೆ ತಾಲ್ಲೂಕು ಎಚ್.ಡಿ.ಪುರ ಸಮೀಪದ ರೈತ ಸತೀಶ್, ಸೋಯಾಬೀನನ್ನು ಅಂತರ ಬೆಳೆಯಾಗಿ ಬೆಳೆದಿದ್ದರು ಎಂದು ಉದಾಹರಣೆ ನೀಡುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಕೆಂಗೇಗೌಡ.

‘ನಮ್ಮದು ಹೊಲ ಫಲವತ್ತಾಗಿಲ್ಲ. ಆದರೂ, ಸ್ವಲ್ಪ ಮೆಹನತ್ ಮಾಡಿದ್ದರೆ, ಇನ್ನೂ ಒಂದೆರಡು ಕ್ವಿಂಟಲ್ ಹೆಚ್ಚಾಗಿ ಇಳುವರಿ ಬರ್ತಿತ್ತು’ ಎನ್ನುತ್ತಾರೆ ಶಂಕ್ರಪ್ಪ. ಮಳೆಗಾಲದಲ್ಲಿ ತುಂತುರು ಸೋನೆ ಬಂದರೆ ಸಾಕು, ಹೆಚ್ಚುವರಿಯಾಗಿ ನೀರು ಕೊಡುವ ಅಗತ್ಯವಿಲ್ಲ’ ಎಂಬುದು ಅವರ ಅಭಿಪ್ರಾಯ.

ನಾಟಿ ವಿಧಾನದಲ್ಲಿ ತೊಗರಿ ಕೃಷಿ ಮಾಡುವುದರಿಂದ ಕಳಪೆ ಬೀಜದ ಭಯವಿರುವುದಿಲ್ಲ. ಪ್ರತಿ ಸಸಿಯನ್ನೂ ಆರೈಕೆ ಮಾಡಬಹುದು. ಹೆಚ್ಚು ಕೂಲಿ ಕಾರ್ಮಿಕರ ಅಗತ್ಯವಿಲ್ಲ. ಸಮಯ ಮತ್ತು ನೀರಿನ ಉಳಿತಾಯವಾಗುತ್ತದೆ. ‘ಒಂದು ಎಕರೆಗೆ ಅಂದಾಜು 2,240 ಸಸಿಗಳು ಸಾಕಾಗುತ್ತದೆ. 5 ಕೆ.ಜಿ ಬೀಜ ಸಸಿ ಮಾಡಿದರೆ ಸಾಕಾಗುತ್ತದೆ’ ಎಂಬುದು ಕೃಷಿ ಇಲಾಖೆ ಲೆಕ್ಕಾಚಾರ.

ಹೊಳಲ್ಕೆರೆ, ಚಿಕ್ಕಬಳ್ಳಾಪುರದಲ್ಲೂ ಕೃಷಿ: ಸೇಡಂ, ಬೀದರ್ ಭಾಗದಲ್ಲಿ ನಾಟಿ ತೊಗರಿ ಕೃಷಿ ಯಶಸ್ವಿಯಾದ ಮೇಲೆ ಈ ವರ್ಷದ ಆರಂಭದಲ್ಲಿ ವಿಜಯಪುರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗೆ ವಿಸ್ತರಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಎಚ್.ಡಿ.ಪುರ, ಬೊಮ್ಮೇನಹಳ್ಳಿ, ಶಿವಗಂಗ ಗ್ರಾಮಗಳಲ್ಲಿ ಕೃಷಿ ಇಲಾಖೆ ಐದು ಎಕರೆಯಲ್ಲಿ ಪ್ರಾಯೋಗಿಕವಾಗಿ ನಾಟಿ ತೊಗರಿ ಪದ್ಧತಿ ಆರಂಭಿಸಿದೆ. ಚಿಕ್ಕಬಳ್ಳಾಪರ ಜಿಲ್ಲೆ ಗೌರಿಬಿದನೂರಿ­ನಿಂದ ತೊಗರಿ ಸಸಿಗಳನ್ನು ತರಿಸಿ ನಾಟಿ ಮಾಡಿಸಿದೆ.

‘ನಾಟಿ ಪದ್ಧತಿಯಲ್ಲಿ ಮಾಡಿದ್ದರಿಂದ ಬೇಗ ಕೆಲಸ ಮುಗಿ ಯಿತು. ನಾಟಿ ಮಾಡಿ ಒಂದೂವರೆ ತಿಂಗಳಾಗಿದೆ. ಒಂದೂವರೆ ಅಡಿ ಎತ್ತರಕ್ಕೆ ಸಸಿ ಬೆಳೆದಿವೆ. ನಾಲ್ಕು ಹನಿ ಮಳೆ ಬಿದ್ದಿದೆ. ನಡುವೆ ಅಂತರ ಬೆಳೆಯಾಗಿ ಅವರೆ ಹಾಕುತ್ತೇವೆ’ ಎನ್ನುತ್ತಾರೆ ಹೊಳಲ್ಕೆರೆ ಸಮೀಪದ ಶಿವಗಂಗ ಗ್ರಾಮದ ರೈತ ನಾಗರಾಜ್.

ನಾಗರಾಜ್ ಅವರಂತೆ, ಹತ್ತಾರು ರೈತರು ಈ ವರ್ಷ ನಾಟಿ ಪದ್ಧತಿಯಲ್ಲಿ ತೊಗರಿ ಕೃಷಿಗೆ ಮುಂದಾಗಿದ್ದಾರೆ. ಕಡಿಮೆ ನೀರು, ಉತ್ತಮ ಇಳುವರಿ ನೀಡುವಂತಹ ಈ ಪದ್ಧತಿ ಈ ವರ್ಷ ರಾಜ್ಯದ ಬೇರೆ ಬೇರೆ ಭಾಗಕ್ಕೂ ವಿಸ್ತರಣೆಯಾಗುತ್ತಿದೆ.

‘ಈಸಿ ಪ್ಲಾಂಟರ್’ ಬಳಕೆ
ತೊಗರಿ ಕೃಷಿಯಲ್ಲಿ ಕಾರ್ಮಿಕರ ಸಂಖ್ಯೆ ಕಡಿತಗೊಳಿಸಲು ಸಸಿ ನಾಟಿ ಮಾಡಲು ಹೊಳಲ್ಕೆರೆಯಲ್ಲಿ ರೈತರು ಈಸಿ ಪ್ಲಾಂಟರ್ ಉಪಕರಣ ಬಳಸಿದ್ದಾರೆ. ಹದವಾದ ಭೂಮಿಯಾಗಿದ್ದರೆ, ‘ಕೊಳವೆ ಆಕಾರದ ಈ ಉಪಕರಣದೊಳಗೆ ಸಸಿ ತೂರಿಸಿ, ತುದಿಯಿಂದ ನೆಲಕ್ಕೆ ರಂಧ್ರ ಮಾಡಿ, ಮೇಲ್ಭಾಗದ ಹ್ಯಾಂಡಲ್ ಒತ್ತಿದರೆ, ಸಸಿ ಭೂಮಿಗೆ ನಾಟಿಯಾಗುತ್ತದೆ’ ಎನ್ನುತ್ತಾರೆ ಶಿವಗಂಗ ಗ್ರಾಮದ ರೈತ ನಾಗರಾಜ್. ಮಹಿಳೆಯರೂ ಸುಲಭವಾಗಿ ಈ ಉಪಕರಣ ಬಳಸುತ್ತಿದ್ದಾರೆ.

‘ಮಣ್ಣಿನಲ್ಲಿ ತೇವ ಹೆಚ್ಚಾದರೆ, ಈ ಉಪಕರಣ ಕಿರಿಕಿರಿ ಮಾಡುತ್ತದೆ. ಇಂಥ ವೇಳೆ ರೈತರು ಸಸಿ ನಾಟಿಗೆ ದೇಸಿ ವಿಧಾನ (ಕೋಲಿನಲ್ಲಿ ರಂಧ್ರ ಮಾಡುವುದು) ಅನುಸರಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಮೂರು ಗಂಟೆಯೊಳಗೆ ಒಂದು ಎಕರೆಯಲ್ಲಿ ಸಸಿ ನಾಟಿ ಮಾಡುತ್ತಾರೆ.

ನಾಟಿ ತೊಗರಿ ಕೃಷಿ ಕುರಿತ ಅನುಭವದ ಮಾಹಿತಿಗೆ: ಶಂಕ್ರಪ್ಪ ಶೇರಿಕಾರ, 9482772157, ತಾಂತ್ರಿಕ ಮಾಹಿತಿಗೆ ಕೆಂಗೇಗೌಡ -8277931025 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.