ADVERTISEMENT

ಬಹು ಬೇಡಿಕೆಯ ಬಟನ್ಸ್

ಚಂದ್ರಹಾಸ ಚಾರ್ಮಾಡಿ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST
ಬಹು ಬೇಡಿಕೆಯ ಬಟನ್ಸ್
ಬಹು ಬೇಡಿಕೆಯ ಬಟನ್ಸ್   

ಮಿಶ್ರ ಬೆಳೆಯಾಗಿ ಸೇವಂತಿಗೆ, ಮಲ್ಲಿಗೆ, ಚೆಂಡು ಮತ್ತಿತರ ಹೂಗಳನ್ನು ಬೆಳೆದು ಸಾಕಷ್ಟು ಆದಾಯ ಪಡೆಯುತ್ತಿರುವ ರೈತರ ಸಂಖ್ಯೆ ದೊಡ್ಡದು. ಇತ್ತೀಚಿನ ವರ್ಷಗಳಲ್ಲಿ ಅನೇಕ ಸಣ್ಣ ರೈತರು ಹೂವಿನ ಬೆಳೆಗಳನ್ನು ಪ್ರಧಾನ ಬೆಳೆಯಾಗಿ ಬೆಳೆಯಲು ಮುಂದಾಗಿದ್ದಾರೆ. ಕೆಲವು ಹೂಗಳಿಗೆ ವರ್ಷವಿಡೀ ಬೇಡಿಕೆ ಇರುತ್ತದೆ. ಸೇವಂತಿಗೆ, ಬಟನ್ಸ್ ಹೂಗಳಿಗೆ ಬೇಡಿಕೆ ಇದೆ.

ಕಪ್ಪು ಮತ್ತು ಕೆಂಪು ಮಣ್ಣಿನಲ್ಲಿ ಬೆಳೆಯುವ ಬಟನ್ಸ್ ಹೂವನ್ನು ಸೇವಂತಿಗೆ ಜತೆಯಲ್ಲಿ ಮಿಶ್ರ ಬೆಳೆಯಾಗಿ ಅಥವಾ ಏಕ ಬೆಳೆಯಾಗಿ ಬೆಳೆಯಬಹುದು. ರಾಜ್ಯದ ಚಿಕ್ಕಮಗಳೂರು, ಕಡೂರು, ಹಾಸನ, ಗದಗ, ಕೊಡಗು ಮುಂತಾದ ಜಿಲ್ಲೆಗಳಲ್ಲಿ ಬಟನ್ಸ್ ಹೂವನ್ನು ಬೆಳೆದು ಸಾಕಷ್ಟು ಲಾಭ ಪಡೆಯುವ ಅನೇಕ ರೈತರಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಅರ್ತಿಕೆರೆ ಗ್ರಾಮದ ಬೈರಪುರದ ನಾಗರಾಜ್ ಬಟನ್ಸ್ ಹೂವಿನ ಬೇಸಾಯದಲ್ಲಿ ಯಶಸ್ವಿಯಾಗಿದ್ದಾರೆ.

ನೋಡಲು ಸೇವಂತಿಗೆಯಂತೆ ಕಾಣುವ ಬಟನ್ಸ್ ಹೂವಿನಲ್ಲಿ ಕೆಂಪು, ಗುಲಾಬಿ, ಬಿಳಿ, ನೀಲಿ ಹೀಗೆ ನಾಲ್ಕೈದು ಬಣ್ಣಗಳಿವೆ. ಪಟ್ಟೆ, ಕಾರ್ನಲ್, ಬೆಳ್ಳಟ್ಟಿ, ಚಾಂದಿನಿ ಹೆಸರಿನ ತಳಿಗಳಿವೆ. ಹೈಬ್ರಿಡ್ ಜಾತಿಗೆ ಸೇರಿದ ಚೆಂಡು ಹೂವಿನ ಗಾತ್ರದ ಬಟನ್ಸ್ ತಳಿಗಳಿವೆ. ಆದರೆ ಇವಕ್ಕೆ ಬೇಡಿಕೆ ಕಡಿಮೆ. ರಾಜ್ಯದ ಹೆಚ್ಚಿನ ರೈತರು ಸಾಮಾನ್ಯ ತಳಿಯ ಬಟನ್ಸ್ ಬೆಳೆಯುತ್ತಾರೆ.

ನಾಗಾರಾಜ್ ಒಂದು ಎಕರೆಯಲ್ಲಿ ಬಟನ್ಸ್ ಬೆಳೆಯುತ್ತಾರೆ. ಮೂರರಿಂದ ನಾಲ್ಕು ತಿಂಗಳಲ್ಲಿ ಆದಾಯ ಪಡೆಯಬಹುದು. ಬಟನ್ಸ್ ಸಸಿ ಬೆಳೆಸಿಕೊಂಡು ಫೆಬ್ರುವರಿ ತಿಂಗಳಲ್ಲಿ ನಾಟಿ ಮಾಡಿದರೆ ಮೇ ಅಂತ್ಯದ ವೇಳೆಗೆ ಹೂ ಕಟಾವಿಗೆ ಬರುತ್ತವೆ. ವಾರಕ್ಕೆ ಎರಡು ಸಲ ನಾಗರಾಜ್ ಹೂಗಳನ್ನು ಕೊಯ್ಲು ಮಾಡುತ್ತಾರೆ.

ಒಂದು ಎಕರೆ ಭೂಮಿಯಲ್ಲಿ ಆರು ಸಾವಿರ ಗಿಡಗಳನ್ನು ನಾಟಿ ಮಾಬಹುದು. ಒಂದು ಕೇಜಿ ಹೂವಿಗೆ 20 ರಿಂದ 25 ರೂ ಬೆಲೆ ಇದೆ. ಬೇಡಿಕೆ ಇದ್ದಾಗ ಒಂದು ಕೇಜಿ ಹೂವಿಗೆ 60 ರಿಂದ 100 ರೂವರೆಗೆ ದರ ಏರುತ್ತದೆ.

ನಾಗರಾಜ್ ಬೆಳೆದ ಹೂಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಲ್ಲದೆ ಹಾಸನ, ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಊರುಗಳಿಗೆ ಕಳುಹಿಸುತ್ತಾರೆ. ಒಂದು ಎಕರೆಯಲ್ಲಿ ಬಟನ್ಸ್ ಬೆಳೆದು ಒಂದು ಲಕ್ಷ ರೂವರೆಗೆ ಆದಾಯ ಗಳಿಸಬಹುದು. ಕನಿಷ್ಟ ಐವತ್ತು ಸಾವಿರ ರೂ ಗ್ಯಾರಂಟಿಯಾಗಿ ಸಿಗುತ್ತದೆ.

ನಾಟಿಗೆ ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ನೀರುಣಿಸಿ ನಂತರ ಒಂದು ಅಡಿ ಅಂತರ ಕೊಟ್ಟು ಸಸಿಗಳನ್ನು ನಾಟಿ ಮಾಡಬೇಕು. ಹೂವಿನ ಗಿಡಗಳಿಗೆ ಹಸಿರು ಬಣ್ಣದ ಹುಳುಗಳು ಕಾಡುತ್ತವೆ. ಹುಳುಗಳು ಕಾಣಿಸಿದರೆ ಅವುಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬೇಕು. ಹೂ ಬಿಡುವ ಸಂದರ್ಭದಲ್ಲಿ ಚೆಂಡು ರೋಗ ಬರುತ್ತದೆ. ರೈತರು ಅದರ ನಿಯಂತ್ರಣಕ್ಕೆ ಗಮನ ಕೊಡಬೇಕು.

ಬಹುತೇಕ ರೈತರು ತಾವೇ ಬೆಳೆಸಿದ ಗಿಡಗಳು ಆರಂಭದಲ್ಲಿ ಬಿಡುವ ದೊಡ್ಡ ಹೂಗಳನ್ನು ಕೊಯ್ಲು ಮಾಡದೆ ಹಾಗೇ ಬಿಟ್ಟು ಒಣಗಿಸಿ ಅವುಗಳ ಬೀಜಗಳನ್ನು ಸಂಗ್ರಹಿಸಿ ಬಿತ್ತನೆ ಮಾಡುತ್ತಾರೆ.

ಜನವರಿ ತಿಂಗಳಲ್ಲಿ ಬೀಜಗಳನ್ನು ಒಟ್ಟಲು ಪಾತಿಗಳಲ್ಲಿ ಬಿತ್ತನೆ ಮಾಡಿಕೊಂಡು ಒಂದು ತಿಂಗಳ ಸಣ್ಣ ಸಸಿಗಳನ್ನು ಕಿತ್ತು ನಾಟಿ ಮಾಡುತ್ತಾರೆ. ನೀರಿನ ಸೌಲಭ್ಯ ಇರುವ ಸಣ್ಣ ರೈತರಿಗೆ ಬಟನ್ಸ್ ಹೂವಿನ ಬೇಸಾಯ ಉತ್ತಮ. ಕಡಿಮೆ ಬಂಡವಾಳ ಹಾಕಿ ಹೆಚ್ಚು ಆದಾಯ ಪಡೆಯಬಹುದು. ಹೆಚ್ಚಿನ ಮಾಹಿತಿಗೆ  ನಾಗರಾಜ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್: 9986508667.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.