ADVERTISEMENT

ಬಾಳೆ ಬಂಗಾರ

ಭೂರಮೆ -11

ಕಲಾ ಹೆಗಡೆ
Published 29 ಡಿಸೆಂಬರ್ 2014, 19:30 IST
Last Updated 29 ಡಿಸೆಂಬರ್ 2014, 19:30 IST

ಪತಿಯ ಅಕಾಲಿಕ ಮರಣ, ಹೆಗಲ ಮೇಲೆ ಇಬ್ಬರು ಮಕ್ಕಳ ಜವಾಬ್ದಾರಿ, ಅವರ ಓದು- ಮದುವೆ... ಚಿಕ್ಕ ಗುಡಿಸಲು ಬಿಟ್ಟು ಪುಟ್ಟ ಮನೆಯಲ್ಲಿ ಸಂಸಾರ ಹೂಡಬೇಕೆಂದು ಪತಿ ಆಸೆಪಟ್ಟು ಕಟ್ಟುತ್ತಿರುವ ಮನೆ ಅರ್ಧಕ್ಕೇ ನಿಂತು ಅದನ್ನು ಪೂರ್ಣಗೊಳಿಸುವ ಹಂಬಲ...
ಇಂತಹ ಹತ್ತು ಹಲವು ನೋವು, ಆಸೆ, ಗುರಿಯನ್ನು ಇಟ್ಟುಕೊಂಡು ಕೃಷಿ ಕ್ಷೇತ್ರಕ್ಕೆ ಬಂದ ಈ ಮಹಿಳೆ ಇಂದು ಎಲ್ಲವನ್ನೂ ಸಾಧಿಸಿದ್ದಾರೆ.  ಮನೆಯಲ್ಲಿ ರೊಟ್ಟಿ- ಚಟ್ನಿ, ಅನ್ನ- ಸಾರು ಮಾಡುವ ಕೈಗಳು ರೆಂಟೆ, ಕುಂಟೆ ಹಿಡಿದುದರ ಪರಿಣಾಮ ಅಡಿಪಾಯ ಹಾಕಿಟ್ಟ ಮನೆ ಸಂಪೂರ್ಣ ಮುಗಿದಿದೆ, ಮಕ್ಕಳನ್ನೂ ಚೆನ್ನಾಗಿ ಬೆಳೆಸಲು ಸಾಧ್ಯವಾಗಿದೆ. ಇಂಥ ಕೃಷಿ ಸಾಧನೆ ಮಾಡಿರುವವರು ಶಿವಮೊಗ್ಗದ ಸಾಗರ ತಾಲ್ಲೂಕಿನ ಸಂಪಳ್ಳಿ ಗ್ರಾಮದ ಸೀತಮ್ಮ. ಇದಕ್ಕೆ ಇವರು ಆಯ್ದುಕೊಂಡದ್ದು ಅಂತರಬೆಳೆ ಪ್ರಯೋಗ.

‘ಐದಾರು ವರ್ಷಗಳ ಹಿಂದೆ ನನ್ನ ಪತಿ ತೀರಿಹೋದಾಗ ದಿಕ್ಕೇ ತೋಚದಾಯಿತು. ಆದರೆ ಸುಮ್ಮನೆ ಕುಳಿತರೆ ಬದುಕು ಸಾಗುವುದಿಲ್ಲ ಎಂಬ ಮನವರಿಕೆಯಾಯಿತು. ಇಬ್ಬರು ಮಕ್ಕಳ ಭವಿಷ್ಯ ಕಣ್ಣಮುಂದೆ ಇತ್ತು. ಇದನ್ನೆಲ್ಲ ಯೋಚನೆ ಮಾಡಿ ಕೃಷಿಯಲ್ಲಿ ತೊಡಗಿಸಿಕೊಂಡೆ. ಈಗ ನಮ್ಮ ಕುಟುಂಬಕ್ಕೆ ತೃಪ್ತಿ ತರುವಷ್ಟು ಆದಾಯ ಗಳಿಸುತ್ತಿದ್ದೇನೆ’ ಎನ್ನುತ್ತಾರೆ ಸೀತಮ್ಮ.

ಮೊದಲು ಇವರು ಅಡಿಕೆ ಕೃಷಿ ಕೈಗೊಂಡರು. ಇದಕ್ಕೆ ಅಂತರ್ ಬೆಳೆಯಾಗಿ ಶುಂಠಿ ಕೃಷಿ ನಡೆಸಿ ಸಾಕಷ್ಟು ಹಣ ಸಂಪಾದಿಸಿದರು. ಮನೆ ನಿರ್ಮಾಣ ಕಾರ್ಯ ಮುಂದುವರಿಕೆಗೆ ಈ ಆದಾಯ ಅವರ ನೆರವಿಗೆ ಬಂತು.

ಬಾಳೆ ಕೃಷಿ
ತೋಟದಲ್ಲಿ ಬೆಳೆಯುತ್ತಿರುವ ರಬ್ಬರ್‌ ಬೆಳೆಗೆ ಅಂತರ ಬೆಳೆಯಾಗಿ ಈಗ ಬಾಳೆ ಬೆಳೆಸುತ್ತಿದ್ದಾರೆ. ರಬ್ಬರ್‌ ಬೆಳೆ ಫಸಲು ನೀಡಿ ಆದಾಯ ಗಳಿಸಲು ಕೆಲವು ವರ್ಷಗಳೇ ಬೇಕು. ಇದಕ್ಕಾಗಿ ಶೀಘ್ರ ಫಲ ನೀಡುವ ಬಾಳೆ ಅವರು ಆಯ್ಕೆ ಮಾಡಿಕೊಂಡರು. ಇತರ ಬೆಳೆಗಳಿಗೆ ಹೋಲಿಸಿದರೆ ಬಾಳೆ ಬೆಳೆಯುವುದು ಸ್ವಲ್ಪ ಸುಲಭ ಎನ್ನಬಹುದು. ಅಷ್ಟೇ ಅಲ್ಲದೇ ಖಿನ್ನತೆ, ರಕ್ತಹೀನತೆ, ರಕ್ತದೊತ್ತಡ, ಮಲಬದ್ಧತೆ, ಎದೆಯುರಿ ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುವ ಔಷಧೀಯ ಗುಣಗಳನ್ನು ಹೊಂದಿರುವ ಬಾಳೆಹಣ್ಣಿಗೆ ವರ್ಷಪೂರ್ತಿ ಬೇಡಿಕೆ ಇದೆ. ಮೇಲಿಂದ ಮೇಲೆ ಇದರ ದರದಲ್ಲಿ ವ್ಯತ್ಯಾಸ ಆಗುತ್ತಿದ್ದರೂ  ಕೃಷಿಕರು ಹಾಕಿರುವ ಬಂಡವಾಳಕ್ಕೆ ಮೋಸ ಇಲ್ಲದಂತೆ ಲಾಭ ಗಳಿಸಬಹುದು. ಅದಕ್ಕಾಗಿಯೇ ಸೀತಮ್ಮ ಅವರು ಬಾಳೆ ಕೃಷಿಯ ಮೊರೆ ಹೋದರು. ಈಗ ಅವರ ಮನೆ ಎದುರಿನ ಎರಡು ಎಕರೆ ವಿಸ್ತೀರ್ಣದ ಹೊಲದಲ್ಲಿ ಜಿ 9 ತಳಿಯ ಬಾಳೆ ಮೈದುಂಬಿ ನಿಂತಿವೆ.

ಕೃಷಿ ಹೀಗೆ
ಬೆಂಗಳೂರಿನ ನರ್ಸರಿಯಿಂದ ಒಂದು ಗಿಡಕ್ಕೆ ₨ 14 ರಂತೆ 2 ಸಾವಿರ ಬಾಳೆ ಗಿಡಗಳನ್ನು ತರಿಸಿ ಕಳೆದ ವರ್ಷ ಡಿಸೆಂಬರ್ ಅಂತ್ಯದ ಸುಮಾರಿಗೆ ಕೃಷಿ ಆರಂಭಿಸಿದರು. ಎರಡು ಎಕರೆ ವಿಸ್ತೀರ್ಣದಲ್ಲಿ ಬೆಳೆಸಿದ ಒಂದು ವರ್ಷದ ರಬ್ಬರ್ ಗಿಡಗಳ ನಡುವೆ ಗಿಡದಿಂದ ಗಿಡಕ್ಕೆ ಆರು ಅಡಿ ಅಂತರದಲ್ಲಿ ಬಾಳೆ ಸಸಿ ನೆಟ್ಟರು. 1.5 ಅಡಿ ಉದ್ದ, ಅಗಲ ಮತ್ತು ಆಳದ ಗುಂಡಿ ನಿರ್ಮಿಸಿ ಗಿಡ ನೆಟ್ಟರು. ಗಿಡ ನೆಡುವಾಗ ಸ್ವಲ್ಪ ಥಿಮೇಟ್ ಹಾಕಿ ಮಣ್ಣು ಬೀರಿ ಗಿಡ ನೆಟ್ಟು ಸರಾಸರಿ 50 ಗ್ರಾಂ.ನಷ್ಟು ಗೊಬ್ಬರ ಹಾಕಿದರು. ಗಿಡ ನೆಟ್ಟ ನಂತರ ಒಂದು ತಿಂಗಳಿಗೆ ಸರಾಸರಿ 100 ಗ್ರಾಂನಷ್ಟು 19:19:19 ಕಾಂಪ್ಲೆಕ್ಸ್ ಗೊಬ್ಬರ ನೀಡಿದರು. ಇದೇ ರೀತಿ ಪ್ರತಿ 25 ದಿನಕ್ಕೆ ಒಮ್ಮೆಯಂತೆ ಒಟ್ಟು 6 ಸಲ ಗೊಬ್ಬರ ನೀಡಿದರು. ಗಿಡ ನೆಟ್ಟ 9 ತಿಂಗಳ ಸುಮಾರಿಗೆ ಬಾಳೆ ಫಸಲು ಆರಂಭವಾಯಿತು. ಈಗ ಇವರ ಬಾಳೆ ತೋಟದಲ್ಲಿ ಪ್ರತಿ ಗಿಡದಿಂದಲೂ ಬಂಪರ್ ಫಸಲಿನ ಬಾಳೆಗೊನೆ ದೊರೆತಿದೆ.

ನಿತ್ಯ ಬೆಳಿಗ್ಗೆ ಮನೆಯ ಅಡುಗೆ ಕಾರ್ಯ ಇತ್ಯಾದಿಗಳನ್ನು ಮುಗಿಸಿ ತೋಟದತ್ತ ತೆರಳುತ್ತಾರೆ. ಅಲ್ಲಿಂದ ಅವರ ಕೃಷಿ ಕಾರ್ಯ ಆರಂಭ. ಕೊಳವೆ ಬಾವಿ ತೆಗೆಸಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿರುವ ಇವರು ಬೆಳೆಗಳಿಗೆ ಹನಿ ನೀರಾವರಿ ರೂಪಿಸಿಕೊಂಡಿದ್ದಾರೆ. ಈ ವಿಧಾನದಿಂದ ಸಂಪೂರ್ಣ ನೀರಿನ ಮಿತವ್ಯಯ ಸಾಧ್ಯವಾಗಿದೆ. ನೇರವಾಗಿ ಗಿಡಗಳಿಗೆ ನೀರು ಪೂರೈಕೆಯಾಗುವುದರಿಂದ ನೀರಿನ ವ್ಯಯ ಆಗುತ್ತಿಲ್ಲ. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ನೀರನ್ನು ಬಳಸಿಕೊಂಡು ಹೆಚ್ಚು ಗಿಡಗಳನ್ನು ಬೆಳೆಯಲು ಸಾಧ್ಯವಾಗಿದೆ. ಇದಕ್ಕೆ ಪೂರಕವಾಗಿ ಸೀತಮ್ಮ ಅವರು ಕೂಲಿಯಾಳುಗಳನ್ನು ಅವಲಂಬಿಸುವುದು ಕಡಿಮೆ. ‘ಖುದ್ದು ಪರಿಶ್ರಮದಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯ’ ಎನ್ನುವುದು ಅವರ ಧ್ಯೇಯ.

ಸಾಕಷ್ಟು ಲಾಭ
2 ಸಾವಿರ ಬಾಳೆ ಗಿಡ ಬೆಳೆಸಲು ಸಾಕಷ್ಟು ಹಣ ವ್ಯಯಿಸಿದ್ದಾರೆ. ಗಿಡ ಖರೀದಿ, ಗುಂಡಿ ನಿರ್ಮಾಣದ ಕೂಲಿ, ಥಿಮೆಟ್ ಮತ್ತು ಗೊಬ್ಬರ ಖರೀದಿ, ಟಾನಿಕ್ ಸಿಂಪಡಣೆ, ನೀರಾವರಿಗಾಗಿ ಮೈಕ್ರೊ ಸ್ಪ್ರಿಂಕ್ಲರ್ ಅಳವಡಿಕೆ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೆ ಇವರಿಗೆ ಒಂದು ಗಿಡದ ಕೃಷಿಗೆ ಸರಾಸರಿ ₨100 ಖರ್ಚು ತಗುಲಿದೆ. ಬಾಳೆ ಮರಗಳಿಂದ ಈಗ ಒಂದೊಂದು ಗಿಡದಿಂದ ಸರಾಸರಿ 35 ಕಿ.ಗ್ರಾಂ. ತೂಕದ ಬಾಳೆಗೊನೆ ಬಿಟ್ಟಿದೆ. ಬಾಳೆ ಕಾಯಿಗೆ ಮಾರುಕಟ್ಟೆಯಲ್ಲಿ ಕಿ.ಗ್ರಾಂ ಒಂದಕ್ಕೆ ₨10 ಧಾರಣೆ ದೊರೆತರೂ ಒಂದು ಗಿಡದಿಂದ ₨ 350 ಆದಾಯ ದೊರೆಯಲಿದೆ. ಕೃಷಿ ಕಾರ್ಯದ ವೆಚ್ಚ ಕಳೆದರೆ ಒಂದು ಗಿಡದಿಂದ 250 ಲಾಭ ದೊರೆಯಲಿದೆ. ಒಟ್ಟು ಎರಡು ಸಾವಿರ ಬಾಳೆ ಗಿಡ ಬೆಳೆಸಿರುವ ಇವರು ಜನವರಿ ಸುಮಾರಿಗೆ ಮೊದಲ ಫಸಲು ಕಟಾವು ಮಾಡಲಿದ್ದಾರೆ. ನಂತರ ಇದೇ ಬಾಳೆಗಿಡದ ಕಂದಿನಿಂದ ಇನ್ನೂ ಎರಡು ಫಸಲು ದೊರೆಯಲಿದ್ದು, ಅದರಿಂದ ಸಿಗುವ ಆದಾಯದಲ್ಲಿ ಲಾಭದ ಪ್ರಮಾಣ ಅಧಿಕವಾಗಲಿದೆ. ಸಸಿ ಖರೀದಿ,ಗುಂಡಿ ನಿರ್ಮಾಣ, ಸ್ಪ್ರಿಂಕ್ಲರ್ ಪೈಪ್ ಅಳವಡಿಕೆ ಇತ್ಯಾದಿ ಖರ್ಚು ಇಲ್ಲದ ಕಾರಣ ಎರಡು ಮತ್ತು ಮೂರನೇ ಫಸಲಿನಿಂದ ಲಾಭದ ಪ್ರಮಾಣ ಹೆಚ್ಚು ದೊರೆಯಲಿದೆ.

ಆರ್ಥಿಕ ಸಂಕಷ್ಟದ ನಡುವೆಯೂ  ಪರಿಶ್ರಮದಿಂದ ಕೃಷಿ ಕಾರ್ಯದಲ್ಲಿ ತೊಡಗಿ ಒಂದಿಷ್ಟು ಆದಾಯ ಗಳಿಸಿ ಜೊತೆಗೆ ಒಂದಿಷ್ಟು ಸಾಲ-ಸೋಲ ಮಾಡಿ ಸುಸಜ್ಜಿತ ಮನೆ ಕಟ್ಟಿದ್ದಾರೆ. ಅಡಿಕೆ, ರಬ್ಬರ್‌, ಬಾಳೆಯ ಜೊತೆಗೆ ಶುಂಠಿ, ಮೆಕ್ಕೆಜೋಳ ಇತ್ಯಾದಿ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ. ಸಂಪರ್ಕಕ್ಕೆ 9483127144.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT