ADVERTISEMENT

ಮಲೆನಾಡಿಗೆ ಮತ್ತೆ ಬಂತು ಹಸಿಮೆಣಸು

ಅಶೋಕ ಉಚ್ಚಂಗಿ
Published 7 ಮೇ 2018, 19:30 IST
Last Updated 7 ಮೇ 2018, 19:30 IST
ಮಲೆನಾಡಿನ ಮಡಿಲಲ್ಲಿ ಮೆಣಸಿನಕಾಯಿ ಕೃಷಿ
ಮಲೆನಾಡಿನ ಮಡಿಲಲ್ಲಿ ಮೆಣಸಿನಕಾಯಿ ಕೃಷಿ   

ಸುಮಾರು ಹತ್ತು ವರುಷಗಳ ಹಿಂದೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಪ್ರಮುಖ ಬೇಸಿಗೆ ಬೆಳೆಯಾಗಿತ್ತು ಹಸಿರು ಮೆಣಸಿನಕಾಯಿ.ಇತ್ತೀಚಿನ ವರ್ಷಗಳಲ್ಲಿ ಈ ಕೃಷಿ ತೀರ ಕಡಿಮೆಯಾಗಿತ್ತು. ಕಾಫಿ, ಏಲಕ್ಕಿಗೆ ಹೆಸರಾದ ಮಲೆನಾಡಿನ ಸಕಲೇಶಪುರ ತಾಲ್ಲೂಕಿನ ಭತ್ತದ ಗದ್ದೆಗಳಲ್ಲಿ ಖುಷ್ಕಿ ಬೆಳೆಯಾಗಿ ಬೆಳೆಯುತ್ತಿದ್ದ ಈ ಬೆಳೆ ರೈತರ ಬಾಳಿನಲ್ಲಿ ಸಿಹಿ ಕಹಿ ಎರಡನ್ನೂ ತರುತ್ತಿತ್ತು. ಹೊಳೆ, ನದಿ ಪಾತ್ರ ಹಾಗೂ ನೀರಾವರಿ ಸೌಲಭ್ಯದ ಗದ್ದೆಗಳಲ್ಲಿ ಫೆಬ್ರುವರಿಯಿಂದ ಜೂನ್ ಆರಂಭದವರೆಗೂ ಬೆಳೆಯಲಾಗುತ್ತಿದ್ದ ಹಸಿರು ಮೆಣಸಿನಕಾಯಿಯ ರುಚಿ ಖಾರವಾದರೂ ರೈತರ ಪಾಲಿಗೆ ಸಿಹಿಯಾಗಿತ್ತು. ಸುಮಾರು 20 ವರ್ಷಗಳ ಕಾಲ ಕಿಲೋಗೆ ನಲವತ್ತು ರೂಪಾಯಿಯಿಂದ ಎಂಬತ್ತು ರೂಪಾಯಿವರಗೆ ಮಾರುಕಟ್ಟೆ ದರ ಪಡೆಯುತ್ತಿದ್ದ ಈ ಬೆಳೆ 2005ರ ವೇಳೆಗೆ ಕಿಲೋಗೆ ಒಂದು ರೂಪಾಯಿಯಾಗಿ ಮಾರುಕಟ್ಟೆಯಲ್ಲೆ ಸುರಿದು ಬರುವಂತಾಗಿತ್ತು. ಆನಂತರ ಈ ಬೆಳೆಯ ಬಗ್ಗೆ ಇಲ್ಲಿನ ರೈತರು ನಿರಾಸಕ್ತರಾಗಿದ್ದರು.

ದಿನವೊಂದಕ್ಕೆ 500 ಟನ್‍ನಷ್ಟು ಮಾರುಕಟ್ಟೆಗೆ ಬರುತ್ತಿದ್ದ ಹಸಿರು ಮೆಣಸಿನಕಾಯಿ ಇತ್ತೀಚಿನ ವರ್ಷಗಳಲ್ಲಿ 30 ಟನ್‍ಗೆ ಇಳಿದಿತ್ತು. ಇಂದಿನ ಪರಿಸ್ಥಿತಿಯಲ್ಲಿ ಲೆಕ್ಕಾಚಾರದ ಕೃಷಿ ಮಾಡಬೇಕಾದ ಅನಿವಾರ್ಯತೆ ಇದೆ. ಇಳುವರಿ, ಬೇಡಿಕೆ, ಪೂರೈಕೆ, ಹವಾಮಾನದ ಜೊತೆಗೆ ಮಾರುಕಟ್ಟೆಯ ಜ್ಞಾನವು ಅಷ್ಟೇ ಮುಖ್ಯ. ಸುಮಾರು 10 ವರ್ಷ ಮೆಣಸಿನಕಾಯಿ ಬೆಳೆ ಬೆಳೆಯಲು ಮನಸ್ಸು ಮಾಡದ ಈ ಭಾಗದ ರೈತರು ಈ ಹಂಗಾಮಿನಲ್ಲಿ ಮತ್ತೆ ಅದರ ರುಚಿ ನೋಡ ಹೊರಟಿದ್ದಾರೆ. ಸಕಲೇಶಪುರ ತಾಲ್ಲೂಕಿನ ವನಗೂರು, ಉಚ್ಚಂಗಿ, ಹೊಂಗಡಹಳ್ಳ, ಎಸಳೂರು ಹಾಗೂ ಕೊಡಗಿನ ಶನಿವಾರಸಂತೆ, ಕೊಡ್ಲಿಪೇಟೆಯಲ್ಲಿ ಹಸಿರು ಮೆಣಸಿನಕಾಯಿ ಈ ಬಾರಿ ಮತ್ತೆ ಪುಟಿದೆದ್ದಿದೆ.

ಈ ಭಾಗದ ಯಾವುದೇ ಮೆಣಸಿನಕಾಯಿ ಬೆಳಗಾರರನ್ನು ಮಾತಾಡಿಸಿದರೆ ತಕ್ಕ ಮಟ್ಟಿಗೆ ಬೆಲೆ ಬಂದರೆ ಸಾಕೆಂಬ ನಿರೀಕ್ಷೆ ಇವರದ್ದಾಗಿದೆ.

ADVERTISEMENT



ಇದಕ್ಕೆ ಕಾರಣವೂ ಇಲ್ಲದಿಲ್ಲ. 2016 ಹಾಗೂ 2017 ರ ಏಪ್ರಿಲ್-ಮೇ ತಿಂಗಳಲ್ಲಿ ಹಸಿರು ಮೆಣಸಿನಕಾಯಿ ಧಾರಣೆ 15 ಕಿಲೋ ಚೀಲಕ್ಕೆ ₹500-700 ಅಂದರೆ ಕೆಜಿಗೆ ₹30-40 ಸಿಕ್ಕಿದ್ದರಿಂದ ರೈತರಲ್ಲಿ ಆಶಾಭಾವನೆ ಮೂಡಿ ಈ ಸಲ ಭಾರಿ ಪ್ರಮಾಣದಲ್ಲಿ ಆ ಬೆಳೆ ಮಲೆನಾಡಿನ ಗದ್ದೆಗಳಲ್ಲಿ ಕಾಣಬಹುದಾಗಿದೆ. ಈ ಭಾಗದಲ್ಲಿ ಬೆಳೆದ ಹಸಿರು ಮೆಣಸಿನಕಾಯಿ ಸಾಗಾಣಿಕೆಯಾಗುತ್ತಿದ್ದದ್ದು ಬೆಂಗಳೂರು, ಶಿವಮೊಗ್ಗ ಹಾಗೂ ಮುಂಬೈ ಮಾರುಕಟ್ಟೆಗೆ. ಕಳೆದ ಎರಡು ತಿಂಗಳಲ್ಲಿ ತಮಿಳುನಾಡಿನಲ್ಲಿ ಹದಮಳೆ ಬಿದ್ದು ಕೊಯಮತ್ತೂರು, ತೂತ್ತುಕುಡಿ, ಅಟ್ಟೂರು, ಸಂಕರಿ ಈ ಭಾಗಗಳಲ್ಲಿ ಮೆಣಸಿನಕಾಯಿ ಇಳುವರಿ ಹೆಚ್ಚಾಗಿದೆ.

ಬೆಂಗಳೂರು, ಮೈಸೂರು, ಶಿವಮೊಗ್ಗದ ಮಾರುಕಟ್ಟೆಗಳಿಗೆ ತಮಿಳುನಾಡಿನಿಂದ ಹಸಿರು ಮೆಣಸಿನಕಾಯಿ ಹೇರಳವಾಗಿ ಬರುತ್ತಿರುವುದರಿಂದ ಇಲ್ಲಿ ಬೆಳೆದ ಬೆಳೆಗೆ ಸದ್ಯ ಕಿಲೋಗೆ ₹8 ರಿಂದ 10ರಷ್ಟೇ ದರ ಸಿಗುತ್ತಿದೆ. ‘ಕೆಜಿಗೆ ₹25 ಬಂದರಷ್ಟೇ ಲಾಭವನ್ನು ನೋಡಬಹುದು,ಈಗ ಆರಂಭದಲ್ಲಿ ಫಸಲು ಅಧಿಕವಾಗಿದೆ, ಮಧ್ಯವರ್ತಿಗಳೇ ಮನೆ ಬಾಗಿಲಿಗೆ ಬಂದು ಖರೀದಿ ಮಾಡುತ್ತಿರುವುದರಿಂದ ಲಾಭವೂ ಇಲ್ಲ; ನಷ್ಟವೂ ಇಲ್ಲ ಎಂಬ ಪರಿಸ್ಥಿತಿ ಇದೆ’ ಎನ್ನುತ್ತಾರೆ ಉಚ್ಚಂಗಿಯ ಸುನೀಲ್.

‘ನಮ್ಮಲ್ಲಿ ಮೇ ತಿಂಗಳ ಕೊನೆಯವರೆಗೂ ಮೆಣಸಿನಕಾಯಿ ಫಸಲಿರುತ್ತದೆ. ಆದರೆ ತಮಿಳುನಾಡಿನಲ್ಲಿ ಏಪ್ರಿಲ್ ಕೊನೆಗೆ ಫಸಲು ಮುಗಿಯುವ ಕಾರಣ ನಾವು ಮೇ ತಿಂಗಳಲ್ಲಿ ಅಧಿಕ ಬೆಲೆ ನಿರೀಕ್ಷಿಸುತ್ತಿದ್ದೀವೆ. ಕಳೆದ ಎರಡು ವರ್ಷದಂತೆ ನಡೆದರೆ ಹಸಿರು ಮೆಣಸಿನಕಾಯಿಗೆ ಕೆಜಿಗೆ 50 ರೂ ದೊರೆಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅಜ್ಜಿಗದ್ದೆಯ ಪುರುಷೋತ್ತಮ. ರೈತರ ನಿರೀಕ್ಷೆಯಂತೆ ಕಿಲೋಗೆ ₹40-50 ಸಿಕ್ಕರೂ ಮೂರೂವರೆ ತಿಂಗಳ ಈ ಕೃಷಿಯಿಂದ ಎಕರಗೆ ದೊರಕುವ ಲಾಭ ಕೇವಲ 50–60 ಸಾವಿರವಷ್ಟೇ, ಹಗಲಿರುಳು ಮನೆಯ ಮೂರ್ನಾಲ್ಕು ಮಂದಿಯ ಪರಿಶ್ರಮಕ್ಕೆ ಸಿಗುವ ಸೂಕ್ತ ಲಾಭವೇನಲ್ಲ. ಅಧಿಕ ಪ್ರಮಾಣದಲ್ಲಿ ಗೊಬ್ಬರ,ಕ್ರಿಮಿನಾಶಕಗಳನ್ನು ಬಳಸಲಾಗುತ್ತದೆ. ಎಲೆ ಮುಜುಗು, ಕಾಯಿಕೊರಕ ಹುಳಗಳು, ರಸಹೀರುವ ಕೀಟಗಳು, ಶಿಲೀಂಧ್ರಗಳ ಬಾಧೆ ಹೇಳತೀರದು.


ರೈತರ ಪಾಲಿಗೆ ಸಿಹಿಯಾದೀತೇ ಈ ಖಾರದ ಬೆಳೆ?

‘ಮಂಡಿಗೆ ಸಾಗಿಸಲಾಗುತ್ತಿರುವ ಇಲ್ಲಿನ ಹಸಿರು ಮೆಣಸಿನಕಾಯಿಗೆ ಕಿಲೋಗೆ ₹15 ರಿಂದ 20 ಸರಾಸರಿ ಬೆಲೆ ಲಭಿಸುತ್ತಿದೆ. ಆದರೆ ಮುಂಬೈ ಮಾರುಕಟ್ಟೆಯಲ್ಲಿ ಕಿಲೋಗೆ 50 ರೂನಂತೆ ಬಿಕರಿಯಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ಬೆಲೆ ರೈತರಿಗೆ ಸಿಗದೇ ಅನ್ಯಾಯವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕೋವಳ್ಳಿಯ ಸುಮಂತ್.

ಈ ಭಾಗದಲ್ಲಿ ಭತ್ತಕ್ಕೆ ಪರ್ಯಾಯ ಬೆಳೆಯಾಗಿ ಹಸಿರು ಮೆಣಸಿನಕಾಯಿ ಮಾತ್ರವೇ. ತರಕಾರಿಗಳನ್ನು ಬೆಳೆಯಲು ನೀರಿನ ಅಭಾವ. ಕೆಲವರು ಸೋಲಾರ್ ಬೀನ್ಸ್, ಅಲಸಂದೆ ಬೆಳೆಯುತ್ತಾರಾದರೂ ಅದೂ ಲಾಭದಾಯಕವೆನಿಸಿಲ್ಲ.

ಇಲ್ಲಿನ ವಾತಾವರಣಕ್ಕೆ ಸೂಕ್ತವಾದ ಪರ್ಯಾಯ ಬೆಳೆಯೂ ಕಾಣದೆ, ಮೂರು ತಿಂಗಳು ಕೃಷಿ ಚಟುವಟಿಕೆ ನಿಲ್ಲಿಸಲಾಗದೆ ಮೆಣಸಿನಕಾಯಿ ಬೆಳೆಯನ್ನು ನಂಬಿರುವ ಇಲ್ಲಿನ ರೈತರು ಈ ಖಾರದ ಬೆಳೆ ಸಿಹಿ ತರುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.