ಜೀವನ ದುಬಾರಿ. ವಸ್ತುಗಳ ಬೆಲೆ ಏರಿಕೆ. ಇವುಗಳ ನಡುವೆಯೂ ರೈತಾಪಿ ವರ್ಗಕ್ಕೆ ಪಶುಪಾಲನೆ ಅನಿವಾರ್ಯತೆ. ಇಂತಹ ಸಂದರ್ಭದಲ್ಲಿ ಪಶುಗಳಿಗೆ ಕಡಿಮೆ ಖರ್ಚಿನಲ್ಲಿ ಅತ್ಯಧಿಕ ಪೌಷ್ಠಿಕಾಂಶದ ಸತ್ವಭರಿತ ಆಹಾರ ನೀಡುವುದು ಅಸಾಧ್ಯವೆನ್ನುವುದೇ ಹಲವರ ನಂಬಿಕೆ.
ಈ ನಂಬಿಕೆಯನ್ನು ಹುಸಿ ಮಾಡಿದ್ದಾರೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಲವಾಟದ ಅನ್ನಪೂರ್ಣ ರಮಾನಂದ. ಅದಕ್ಕೆ ಅವರು ಕಂಡುಕೊಂಡಿರುವುದು ಹಸಿರೆಲೆಗಳ ಸಾಂಪ್ರದಾಯಕ ಪಶು ಆಹಾರ `ಮುರ'. ಇದು ರೈತಾಪಿ ವರ್ಗಕ್ಕೆ ಹೊಸ ವಿಷಯವೇನಲ್ಲ. ಆದರೆ ಆಧುನಿಕ ಆಹಾರಗಳ ಮುಂದೆ `ಮುರ' ಮೂಲೆಗುಂಪಾಗಿ ಬಿಟ್ಟಿದೆ. ಜಾನುವಾರುಗಳ ದೇಹಬಲವರ್ಧನೆಗೆ ಮತ್ತು ಸತ್ವಭರಿತ ಹಾಲು ಉತ್ಪಾದನೆಗೆ ಸಹಕಾರಿಯಾಗಿರುವ ಈ ಮಿಶ್ರಣವನ್ನು ಕಡಿಮೆ ವೆಚ್ಚದಲ್ಲಿ ತಯಾರಿ ಇದಕ್ಕೆ ಹೊಸ ರೂಪು ನೀಡಿದ್ದಾರೆ ಅನ್ನಪೂರ್ಣ ಅವರು.
ತಮ್ಮ ತೋಟದ ಅಡಿಕೆ ಮರಗಳ ಹಸಿ ಹಾಳೆಗಳು, ಕೋಕೋ ಎಲೆಗಳು, ಹಸಿರು ಹುಲ್ಲು, ಸೊಪ್ಪು, ಹೂಗಳು, ಬಾಳೆದಿಂಡು, ಬಾಳೆ ಎಲೆಗಳನ್ನು ಸಂಗ್ರಹಿಸಿ ತಂದು ಅವುಗಳನ್ನು ಸಣ್ಣದಾಗಿ ಕತ್ತರಿಸುತ್ತಾರೆ. ಅದಕ್ಕೆ ಕಡ್ಡಿ ಹಿಂಡಿ, ಗೋಧಿ ತೌಡು ಸೇರಿಸಿ ಸಮಪ್ರಮಾಣದಲ್ಲಿ ಬೆರೆಸಿ ಕೊಟ್ಟಿಗೆಯಲ್ಲಿರುವ 3-4 ಹಸು ಕರುಗಳಿಗೆ ತಿನ್ನಲು ಕೊಡುತ್ತಾರೆ. ಅದರ ಜೊತೆಗೆ ಒಂದಿಷ್ಟು ನೀರು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಈ ಆಹಾರ ನೀಡುತ್ತಾರೆ. ಅಷ್ಟೇ ಅಲ್ಲದೇ ಹಾಲಿನ ಡೇರಿಗೆ ಪ್ರತಿನಿತ್ಯ ಹಾಲು ಕೊಡುತ್ತಾರೆ. `ಮುರ' ದ ಸಹಾಯದಿಂದ ಆರ್ಥಿಕವಾಗೂ ಸಬಲರಾಗಬಹುದು ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.