ADVERTISEMENT

ಮೆಣಸಿನ ನರ್ಸರಿ: ಬೆಳೆಸಿರಿ, ಗಳಿಸಿರಿ

ಪೂರ್ಣಿಮ ಕಾನಹಳ್ಳಿ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಕಾಳುಮೆಣಸಿಗೆ ಈ ವರ್ಷ ದಾಖಲೆಯ ಬೆಲೆ ಬಂದಿದೆ. ಕಾಫಿ ತೋಟಗಳ ನಡುವೆ ಉಪ ಬೆಳೆಯಾಗಿದ್ದ ಇದು ಈಗ ಮುಖ್ಯ ಬೆಳೆಯಷ್ಟೇ ಪ್ರಾಮುಖ್ಯತೆ ಗಳಿಸಿಕೊಂಡಿದೆ. ಆದರೆ ಸೊರಗು ರೋಗದ ತೀವ್ರ ಹಾವಳಿಯಿಂದ ಅನೇಕ ತೋಟಗಳಲ್ಲಿ ಬೀಳುಗಳ ಸಂಖ್ಯೆ ಇಳಿಮುಖವಾದರೆ, ಇನ್ನು ಕೆಲವೆಡೆ ಗುರುತೇ ಇಲ್ಲದಂತೆ ತೋಟಗಳೇ ನಾಶವಾಗಿವೆ.

ಕಾಳುಮೆಣಸಿಗೆ ನೀರು ಬಹು ಮುಖ್ಯ. ಈ ಸಲ ಮಳೆ ವಿಫಲವಾದ್ದರಿಂದ, ಇನ್ನಷ್ಟು ಬೀಳುಗಳು ರೋಗಕ್ಕೆ ತುತ್ತಾಗುವ ಅಪಾಯವಿದೆ. ಈ ಎಲ್ಲ ಕಾರಣದಿಂದ ಕಾಳುಮೆಣಸಿನ ಸಸಿಗಳಿಗೆ ವಿಪರೀತ ಬೇಡಿಕೆಯಿದೆ. ನರ್ಸರಿ ಮಾಡಿದವರಿಗಂತೂ ಕೇವಲ 4 ತಿಂಗಳಲ್ಲಿ ಲಕ್ಷಾಂತರ ಆದಾಯವಿದೆ.

ಇಂಥವರಲ್ಲಿ ಒಬ್ಬರು ಮೂಡಿಗೆರೆ ತಾಲ್ಲೂಕು ಹಿರಿಸಿಗರ ಗ್ರಾಮದ ಗುರುಮೂರ್ತಿ. ಐಟಿಐ ಮುಗಿಸಿ ಬೆಂಗಳೂರಿನ ಫ್ಯಾಕ್ಟರಿಯೊಂದರಲ್ಲಿ ಒಳ್ಳೆಯ ಸಂಬಳದ ಕೆಲಸದಲ್ಲಿದ್ದರು.ಆದರೆ ಹುಟ್ಟೂರಿನಲ್ಲೇ ಏನಾದರೂ ಸಾಧಿಸಬೇಕೆಂದು ಕೆಲಸಕ್ಕೆ ವಿದಾಯ ಹೇಳಿ ಕೃಷಿಯಲ್ಲಿ ತಂದೆಯೊಂದಿಗೆ ಹೆಗಲು ಕೊಟ್ಟರು. 4 ಎಕರೆ ಕಾಫಿ ತೋಟ ಮತ್ತು ಗದ್ದೆ ಕೆಲಸದ ಜೊತೆ ಮನೆಯ ಸುತ್ತ ಇರುವ ಸ್ವಲ್ಪ ಜಾಗದಲ್ಲಿ ಕಾಫಿ ಮತ್ತು ಕಾಳುಮೆಣಸಿನ ನರ್ಸರಿಯನ್ನೂ ಯಶಸ್ವಿಯಾಗಿ 5 ವರ್ಷಗಳಿಂದ ಮಾಡುತ್ತಿದ್ದಾರೆ.

`ಕಾಳುಮೆಣಸಿನ ನರ್ಸರಿಯೆಂದರೆ ಇತರ ಗಿಡಗಳನ್ನು ಬೆಳೆಸಿದಂತಲ್ಲ. ತೀವ್ರ ನಿಗಾ ವಹಿಸಿದರೆ ಮಾತ್ರ ಸಸಿ ಬದುಕುತ್ತದೆ. ಇಲ್ಲದಿದ್ದರೆ ಶಿಲೀಂದ್ರ ರೋಗದಿಂದ ಸಂಪೂರ್ಣ ನರ್ಸರಿಯೇ ನಾಶವಾಗುತ್ತದೆ. ಮಾರ್ಚ್ ತಿಂಗಳಲ್ಲಿ ನರ್ಸರಿ ಆರಂಭಿಸಿದರೆ, ಜೂನ್ 2ನೆ ವಾರಕ್ಕೆ ಸಸಿಗಳು ಸಿದ್ಧವಾಗುತ್ತವೆ~ ಎನ್ನುವ ಗುರುಮೂರ್ತಿ, ಈ ಸಲ 10,000ಕ್ಕೂ ಅಧಿಕ ಕಾಳುಮೆಣಸಿನ ಸಸಿಗಳನ್ನು ಬೆಳೆಸಿದ್ದಾರೆ. ಬೇಡಿಕೆ ನೋಡಿ ಮುಂದೆ ದ್ವಿಗುಣಗೊಳಿಸುವ ಆಲೋಚನೆಯಲ್ಲಿದ್ದಾರೆ.

ತಮ್ಮದೆ ತೋಟದ ಕಾಡುಮಣ್ಣನ್ನು (ತೋಟದ ಕಾಡುಜಾತಿಯ ಮರಗಳ ಉದುರಿದ ಎಲೆಗಳು ಮಣ್ಣಿನೊಂದಿಗೆ ಬೆರೆತು ತಯಾರಾದ ಉತ್ಕೃಷ್ಟ ಗೊಬ್ಬರದಂಥ ಮಣ್ಣು) ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರ ಮಾಡಿ ಪಾಲಿಥಿನ್ ಚೀಲಕ್ಕೆ ತುಂಬಿಸುತ್ತಾರೆ. ನಂತರ ಎಚ್ಚರಿಕೆಯಿಂದ ಬೀಳಿನ ಆಯ್ಕೆ ಮಾಡುತ್ತಾರೆ.

ರೋಗವಿಲ್ಲದ ತೋಟಗಳಿಂದ ಬೀಳುಗಳನ್ನು ಆಯ್ದು ತಂದ ಮೆಣಸಿನ ಕಡ್ಡಿಗಳನ್ನು 2 ಗೆಣ್ಣುಗಳಿರುವಂತೆ  ಕತ್ತರಿಸಿ ಬಾವಿಸ್ಟಿನ್ ದ್ರಾವಣದಲ್ಲಿ ಅದ್ದುತ್ತಾರೆ. ಒಂದು ಪಾಲಿಥಿನ್ ಚೀಲಕ್ಕೆ  3 ಕಡ್ಡಿಗಳಿರುವಂತೆ ನಾಟಿ ಮಾಡುತ್ತಾರೆ.
 
ನಂತರ ಹದವಾಗಿ ನೀರು ನೀಡಿ ಪಾಲಿಥಿನ್ ಶೀಟ್‌ನಿಂದ ಸ್ವಲ್ಪವೂ ಗಾಳಿಯಾಡದಂತೆ 15 ದಿನ ಮುಚ್ಚಿಡುತ್ತಾರೆ. 16ನೇ ದಿನ ಹೊದಿಕೆ ತೆಗೆದು ನೀರು ಹಾಕಿ  ಸ್ವಲ್ಪ ಸಮಯ ಗಾಳಿಯಾಡಲು ಬಿಟ್ಟು ಮತ್ತೆ ಮುಚ್ಚುತ್ತಾರೆ. ಒಂದು ತಿಂಗಳ ಬಳಿಕ ಪಾಲಿಥಿನ್ ಹೊದಿಕೆ ತೆಗೆದಾಗ ಕಡ್ಡಿಗಳ ಗೆಣ್ಣುಗಳು ಚೆನ್ನಾಗಿ ಚಿಗುರಿರುತ್ತವೆ.

ಈ ವಿಧಾನದಲ್ಲಿ, ಹೊದಿಕೆ ತೆಗೆದು ಮುಚ್ಚುವುದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನರ್ಸರಿ ರೋಗ ಪೀಡಿತವಾಗುತ್ತದೆ. ಚುಕ್ಕಿರೋಗ ಏನಾದರೂ ಕಂಡು ಬಂದರೆ ಕಾಂಟಾಫ್ ಔಷಧ ಸಿಂಪಡಿಸುತ್ತಾರೆ. ಸಸಿಯೊಂದಕ್ಕೆ ಸರಾಸರಿ 3 ರೂಪಾಯಿ ಖರ್ಚು ಬರುತ್ತದೆ. ಆದರೆ ತಲಾ 13 ರೂಗಳಂತೆ ಮಾರಾಟ ಮಾಡುತ್ತಾರೆ.

ಇದರ ಜೊತೆಯಲ್ಲೇ ಕಾಫಿ ಸಸಿಗಳನ್ನು ಬೆಳೆಸಿ ಮಾರಾಟ ಮಾಡುತ್ತಾರೆ. ಸ್ಥಳೀಯವಾಗಿ ಇವರು ಬೆಳೆಸಿದ ಸಸಿಗಳಿಗೆ ಉತ್ತಮ ಬೇಡಿಕೆಯಿದೆ. ಕಾರ್ಮಿಕರ ಅವಲಂಬನೆಯಿಲ್ಲ. ತಾಯಿ ರುಕ್ಮಿಣಿ, ತಂದೆ ಚಂದ್ರಶೇಖರಾಚಾರ್ ಅವರ ಸಹಕಾರ ಇರುವುದರಿಂದ ತೊಂದರೆಯಿಲ್ಲ. ಅವರ ಸಂಪರ್ಕ ಸಂಖ್ಯೆ 99729 88414.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.