ADVERTISEMENT

ಮೈತುಂಬ ಮುಳ್ಳಿನ ನೆಲಗುಳ್ಳ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST
ಮೈತುಂಬ ಮುಳ್ಳಿನ ನೆಲಗುಳ್ಳ
ಮೈತುಂಬ ಮುಳ್ಳಿನ ನೆಲಗುಳ್ಳ   

ನೆಲಗುಳ್ಳದ ಶಾಸ್ತ್ರೀಯ ಹೆಸರು Solanum xanthocarpum.  ಕಾಂಡ, ಎಲೆ, ತೊಟ್ಟಿನಲ್ಲೂ ಮುಳ್ಳನ್ನು ಹೊಂದಿರುವ ಇದರ ಹೂ ತಿಳಿನೇರಳೆ ಬಣ್ಣದ್ದು. ಕಾಯಿಗಳು ಒಣಗಿರುವ ಅಡಿಕೆ ಉಂಡೆಯ ಗಾತ್ರವಿದ್ದು ಬಿಳಿ ಮಿಶ್ರಿತ ಹಸಿರು ಬಣ್ಣಹೊಂದಿವೆ.

 ಸಂಪೂರ್ಣ ಬೀಜದಿಂದ ತುಂಬಿರುವ ಒಳಮೈ ಹೊಂದಿರುವ ಈ ಕಾಯಿಯನ್ನು ಜಜ್ಜಿ ಉಪ್ಪು ನೀರಿನಲ್ಲಿ ತೊಳೆದು ಬೀಜ ತೆಗೆದು ಮೇಲಿನ ತಿರುಳನ್ನು ಅಡುಗೆಗೆ ಬಳಸುತ್ತಾರೆ.

ಬಸ್ಸಾರು, ಹುಳಿಸಾರು, ಚಟ್ನಿ, ಬಜ್ಜಿ, ಪಲ್ಯ ಹೀಗೆ ಬದನೆಕಾಯಿಯಲ್ಲಿ ಮಾಡುವ ಎಲ್ಲಾ ಅಡುಗೆಗಳನ್ನು ಇದರಿಂದಲೂ ಮಾಡಬಹುದು. ಗಾತ್ರ ಚಿಕ್ಕದಿರುವುದರಿಂದ ಹೆಚ್ಚಿನ ಪ್ರಮಾಣದ ಕಾಯಿ ಬೇಕಾಗುತ್ತದಷ್ಟೆ. 

ಗ್ರಾಮೀಣ ಪ್ರದೇಶದಲ್ಲಿ ಕದ ಸಮಸ್ಯೆ ಇರುವವರಿಗೆ ನೆಲಗುಳ್ಳದ ಖಾದ್ಯಗಳನ್ನು ಪ್ರಧಾನವಾಗಿ ಉಣಬಡಿಸುವಂತೆ ಈಗಲೂ ನಾಟಿವೈದ್ಯರು ಸಲಹೆ ನೀಡುತ್ತಾರೆ. ಅಮೃತಬಳ್ಳಿಯೊಂದಿಗೆ ಈ ಕಾಯನ್ನು ಕುದಿಸಿದ ಕಷಾಯ ಸೇವಿಸಿದರೆ ಜ್ವರ ವಾಸಿ.

ಕೆಮ್ಮಿಗೆ ಇದರ ಬೇರನ್ನು ಲವಂಗ, ಕಾಳುಮೆಣಸು, ಜೇನುತುಪ್ಪದೊಂದಿಗೆ ಸೇವಿಸಬಹುದು. ಕಿವಿ ನೋವಿಗೆ ಇದರ ಬೀಜದ ಹೊಗೆಯನ್ನು ಕೊಳವೆ ಮೂಲಕ ನೋವಿರುವೆಡೆ ಕೊಡುತ್ತಾರೆ. ಈ ಚಿಕಿತ್ಸೆಗೆ ಅನುಭವಿಗಳೇ ಆಗಬೇಕು.

ಹೀಗೆ ಆಹಾರ ಹಾಗೂ ಔಷಧ ಎರಡಕ್ಕೂ ಬಳಕೆಯಾಗುವ ನೆಲಗುಳ್ಳ ಕಾಯಿ ದೊರಕುವುದೇ ದುಸ್ತರವಾಗಿದೆ. `ಹಿಂದೆ ಬೋರಿರ‌್ಲಿಲ್ಲಾ,   ತ್ವಾಟ್‌ಗುಳ್ ಇರ‌್ಲಿಲ್ಲ.  ಬೀಳ್ ನೆಲ್‌ದಲ್ಲೆಲ್ಲಾ ಹುಟ್‌ಕಂತಿದ್ವು. ನಾವ್ ಎಮ್ಮೆಗೆ, ದನಿಗೆ, ಹೊಲ್‌ಕೆ ಹೋದಾಗ ಕಿತ್ಕಂಡ್ ಬರ‌್ತಿದ್ವಿ. 

ಈಗೆಲ್ಲ ತ್ವಾಟ, ಗೆಯಿಮೆ ಅಂತ ನೋಡಕ್ಕೂ ಒಂದ್ ನೆಲ್‌ಗುಳ್ ಕಾಯ್ ಬಡ್ಡೆ ಸಿಗಲ್ಲ~ ಎನ್ನುವ ಬೇಸರ ಎಂಭತ್ತೈದರ ಸಿದ್ಧಲಿಂಗಮ್ಮನವರದು. 

ಮುಳ್ಳೆ ಇದಕ್ಕೆ ವರವೂ ಹೌದು, ಶಾಪವೂ ಹೌದು. ಮುಳ್ಳಿನಿಂದಾಗಿ ಪ್ರಾಣಿಗಳು ತಿನ್ನದೇ ಹೋದರೂ, ಮುಳ್ಳಿನಿಂದಾಗಿಯೇ ಇದನ್ನು ಕಿತ್ತು ಹಾಕುತ್ತಾರೆ.

ಈ ದೇಸಿ ತರಕಾರಿಯ ಒಂದು ಬೀಜ, ಒಂದು ಬೇರು ಮಳೆಗಾಲದಲ್ಲಿ ಭೂಮಿಗೆ ಬಿದ್ದರೆ ಸಾಕು. ಹೆಚ್ಚಿನ ಆರೈಕೆ ಇಲ್ಲದೆ ತಂತಾನೆ ಬೆಳೆಯುತ್ತದೆ.     ಬೇಸಿಗೆಯಲ್ಲಿ ಎಲೆಗಳು ಉದುರಿದರೂ ಕಾಂಡ ಹಸಿರಾಗಿದ್ದು ಮಳೆಗಾಗಿ ಕಾದು ಮತ್ತೆ ಚಿಗುರೊಡೆಯುತ್ತದೆ.

ನೆಲಗುಳ್ಳ ಬೆಳೆಯಲು ಕುಂಡಕ್ಕಿಂತ  ನೆಲವೇ ಸೂಕ್ತ.  ಅದರಲ್ಲೂ ಮೈತುಂಬಾ ಮುಳ್ಳಿರುವುದರಿಂದ ಜಮೀನಿನ ಅಂಚಿನಲ್ಲಿ ನೆಡುವುದು ಒಳಿತು.  ತೋಟದ ಮೂಲೆಯಲ್ಲಿ ಎರಡು ಗಿಡಗಳಿದ್ದರೆ ಚಿಕ್ಕ ಕುಟುಂಬಕ್ಕೆ ವಾರಕ್ಕೆರಡು ದಿನದ ತರಕಾರಿ ಸಮಸ್ಯೆಗೆ ಪರಿಹಾರವಿದ್ದಂತೆ. 

ಇನ್ನಾದರೂ ಜಮೀನಿನಲ್ಲಿ ಅಂಗೈಯಗಲದ ಜಾಗ ನೆಲಗುಳ್ಳಕ್ಕೆ ಮೀಸಲಿಡಲು ಸಾಧ್ಯವೆ?
ಹಾಗಾದರೆ ಬನ್ನಿ ಹುಡುಕೋಣ. ಬೀಳು ನೆಲದಲ್ಲೋ, ಗುಡ್ಡದ ಮೇಲೆಲ್ಲೋ ಈ ಗಿಡ ದೊರೆಯಬಹುದೇನೋ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.