ADVERTISEMENT

ಮೊಟ್ಟೆಗೂ `ತೂಗು ಕಪಾಟು'

ಗಾಣಧಾಳು ಶ್ರೀಕಂಠ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

 `ಕೋಳಿಮೊಟ್ಟೆಯ ಉದ್ಯಮ' ಲಾಭದಾಯಕ ಎನ್ನುತ್ತಾರೆ ಉದ್ಯಮಿಗಳು. ಆದರೆ ಮೊಟ್ಟೆ ಮಾರಾಟಗಾರರು ಮಾತ್ರ ಇದು ನಷ್ಟದ ವ್ಯಾಪಾರ ಎನ್ನುತ್ತಿದ್ದಾರೆ !

ಎರಡೂ ನಿಜ. ಕೋಳಿ ಮೊಟ್ಟೆಯನ್ನು ಖರೀದಿಸಿದ ಕೂಡಲೇ ಮಾರಾಟ ಮಾಡಬೇಕು. ಕ್ರೇಟ್‌ನಲ್ಲೇ ಇರಿಸಿದ್ದರೆ ಕೈಗೋ - ಕಾಲಿಗೋ ಸೋಕಿ ಮೊಟ್ಟೆಗಳು ಕೆಳಗೆ ಬಿದ್ದು ಒಡೆದು ಹೋಗುತ್ತವೆ. ಅಂಗಡಿಗಳ ಆವರಣ ಕಿರಿದಾಗಿದ್ದರಂತೂ ಕ್ರೇಟ್ ಇಡುವುದಕ್ಕೂ ಜಾಗವಿರುವುದಿಲ್ಲ.

ಈ ಎಲ್ಲ ಪೇಚಾಟಕ್ಕೆ ಪರಿಹಾರ ನೀಡುವುದಕ್ಕಾಗಿ ಗಾಂಧಿ ಕೃಷಿ ವಿಶ್ವವಿದ್ಯಾಲಯದ (ಜಿ.ಕೆ.ವಿ.ಕೆ) ಸೂಪರಿಂಟೆಂಡ್ ಎಂ.ವಿ.ಪದ್ಮನಾಭಸ್ವಾಮಿ `ಕೋಳಿ ಮೊಟ್ಟೆ ಕಪಾಟು' ಕಂಡು ಹಿಡಿದಿದ್ದಾರೆ. ಮೊಟ್ಟೆಗಳ ಸಂರಕ್ಷಣೆಗಾಗಿ ತಯಾರಿಸಿರುವ ಈ `ತೂಗು ಕಪಾಟು' ತಯಾರಿಕೆಯ ಯೋಚನೆ ಹೊಳೆದಿದ್ದು ತೀರಾ ಆಕಸ್ಮಿಕ ಎನ್ನುವುದು ಅವರ ಅಭಿಪ್ರಾಯ. `ಒಂದೂಕಾಲು ಅಡಿ ಅಗಲ, ಒಂದು ಅಡಿ ಉದ್ದವಿರುವ ಈ ಕಪಾಟಿನಲ್ಲಿ ಸುಮಾರು ಮೂವತ್ತು ಕೋಳಿ ಮೊಟ್ಟೆಗಳನ್ನು ಸುರಕ್ಷಿತವಾಗಿ ಜೋಡಿಸಬಹುದು. ಈ ಕಪಾಟಿನ ತಯಾರಿಕೆ ಸುಲಭ, ಬಳಕೆಯೂ ಸರಳ. ಕಪಾಟಿನಲ್ಲಿಡುವ ಮೊಟ್ಟೆಯೂ ಸುರಕ್ಷಿತ' ಎನ್ನುತ್ತಾರೆ ಅವರು.

ತಯಾರಿಕೆ ವಿಧಾನ
ಒಂದೂಕಾಲು ಅಡಿ ಅಗಲದ ಪಿವಿಸಿ ಪ್ಲಾಸ್ಟಿಕ್ ಬೋರ್ಡ್ ತೆಗೆದುಕೊಳ್ಳಿ. ಅದರ ಮೇಲೆ ಒಂದು ಅಡಿ ಉದ್ದ, 2 ಇಂಚಿನಷ್ಟು ಅಗಲದ ಆರು ಪಿವಿಸಿ ಪೈಪ್‌ಗಳನ್ನು ಅರ್ಧ ಕತ್ತರಿಸಿ ಒಂದರ ಪಕ್ಕ ಒಂದನ್ನು ಜೋಡಿಸಿ. ಪ್ರತಿ ಪೈಪಿನ ನಡುವೆ ಸ್ವಲ್ಪ ಜಾಗ ಬಿಡಿ. ಪೈಪುಗಳ ಉದ್ದಕ್ಕೂ ಒಳಭಾಗದಲ್ಲಿ 60 ಡಿಗ್ರಿ ಅಂತರದಲ್ಲಿ ರಬ್ಬರ್ ಪಟ್ಟಿಯನ್ನು ಜೋಡಿಸಿ. ಈ ರಬ್ಬರ್ ಪಟ್ಟಿಯು ಮೊಟ್ಟೆಗಳು ಅಲುಗಾಡದಂತೆ ಹಿಡಿದಿಟ್ಟುಕೊಳ್ಳುತ್ತದೆ. ಹೀಗೆ ಜೋಡಿಸುವುದರಿಂದ ಮೊಟ್ಟೆಗಳಿಗೆ ಗಾಳಿಯಾಡಲು ಸಹಾಯವಾಗುತ್ತದೆ.

ಒಂದು ಮೊಟ್ಟೆಯಿಂದ ಇನ್ನೊಂದು ಮೊಟ್ಟೆಗೆ ಅಂತರದಲ್ಲಿ ವೃತ್ತಾಕಾರದ ರಬ್ಬರ್ ತುಂಡನ್ನು ಜೋಡಿಸಿ. ಈ ರಬ್ಬರ್ ತುಂಡು ಎರಡು ಮೊಟ್ಟೆಗಳ ನಡುವೆ ಉಂಟಾಗುವ ಘರ್ಷಣೆಯನ್ನು ತಪ್ಪಿಸುತ್ತದೆ. ಮಾತ್ರವಲ್ಲ, ಮೊಟ್ಟೆ ಕೆಡುವುದನ್ನು ನಿಯಂತ್ರಿಸುತ್ತದೆ.

`ಮೊಟ್ಟೆ ಕಪಾಟಿ'ಗೆ ಅಳವಡಿಸಿರುವ ಪೈಪ್‌ಗಳ ಕೆಳಭಾಗದಲ್ಲಿ ಪೈಪ್‌ನ ಅಗಲಕ್ಕೆ ತಕ್ಕಂತೆ ಪಟ್ಟಿಯನ್ನು ಜೋಡಿಸಿ. ಮೊಟ್ಟೆಗಳನ್ನು ಹಿಡಿದಿಟ್ಟುಕೊಳ್ಳಲು ಈ ಪಟ್ಟಿ ನೆರವಾಗುತ್ತದೆ. ಇಡೀ ಕಪಾಟಿನ ಮೇಲ್ಭಾಗಕ್ಕೆ ತಂತಿಗಳಿಂದ ಮಾಡಿದ ಪುಟ್ಟ ಬಾಗಿಲನ್ನು ಜೋಡಿಸಿ. ಈ ಬಾಗಿಲು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು.

ಮೊಟ್ಟೆ ಇಡುವ ತೂಗು ಕಪಾಟನ್ನು ಇದೇ ತಂತ್ರಜ್ಞಾನದ ನೆರವಿನೊಂದಿಗೆ ಅವರವರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಬಹುದು. ವಿನ್ಯಾಸ, ಅಲಂಕಾರ ಅಂದವಾಗಿದ್ದರೆ, ಈ ಕಪಾಟು ನಮ್ಮ ಮನೆಯ ಒಳಾಂಗಣ ಸೌಂದರ್ಯವನ್ನೂ ಇಮ್ಮಡಿಗೊಳಿಸುತ್ತದೆ.

ಗೋಡೆಗೂ ಹಾಕಬಹುದು
`ಮೊಟ್ಟೆ ಕಪಾಟ'ನ್ನು ಗೋಡೆಗೆ ನೇತುಹಾಕಬಹುದು. ಇದರಿಂದ ಕೆಳಗಡೆ ಕ್ರೇಟ್‌ಗಳಲ್ಲಿ ಮೊಟ್ಟೆಗಳನ್ನಿಡುವುದು ತಪ್ಪುತ್ತದೆ. ಜೊತೆಗೆ ಜಾಗ ಉಳಿತಾಯವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಅಂಗಡಿ ಮಳಿಗೆಗೆ ಈ ವಿಧಾನ ಸೂಕ್ತವಾಗಬಹುದು.

`ಗಮನಿಸಿ, ಈ ಮೊಟ್ಟೆ ಕಪಾಟನ್ನು ತಂಪಾದ ಜಾಗದಲ್ಲಿ ಸಮತಟ್ಟಾದ ಗೋಡೆಗೆ ತೂಗು ಹಾಕಿ. ಗೋಡೆಗೆ ನೇತು ಹಾಕುವುದರಿಂದ ಪ್ರಾಣಿಗಳು, ಮಕ್ಕಳಿಂದ ಮೊಟ್ಟೆಗಳನ್ನು ರಕ್ಷಿಸಬಹುದು' ಎನ್ನುವ ಪದ್ಮನಾಭಸ್ವಾಮಿ, ಮೊಟ್ಟೆ ಕಪಾಟಿನ ಸಾಮರ್ಥ್ಯವನ್ನು ಅಗತ್ಯಕ್ಕೆ ತಕ್ಕಂತೆ ವಿಸ್ತರಿಸಿಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ.

ಕೃಷಿ ವಿವಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ರೈತರ ಬದುಕಿಗೆ ನೆರವಾಗುವಂತಹ ಸಣ್ಣ ಸಣ್ಣ ಉಪಕರಣಗಳನ್ನು ಆವಿಷ್ಕರಿಸುವುದು ಪದ್ಮನಾಭಸ್ವಾಮಿ ಯವರ ಹವ್ಯಾಸ. ಇದಕ್ಕೂ ಮೊದಲು ಕಡಿಮೆ ಸದ್ದು ಮಾಡುವ ಪಂಪ್ ಸ್ಟೌವ್ ಆವಿಷ್ಕರಿಸಿದ್ದರು. ಎಳನೀರು ಕೊರೆಯಲು ಸುಲಭ ಸಾಧನ, ತೆಂಗಿನ ಸಿಪ್ಪೆಯನ್ನು ಸುಲಭವಾಗಿ ಸುಲಿಯುವಂತಹ ಕತ್ತರಿ ಹಾಗೂ ಟ್ಯೂಬ್‌ಲೈಟ್ ದೀರ್ಘ ಬಾಳಿಕೆಗಾಗಿ `ಬ್ಯಾಂಡೇಜ್' ಎಂಬ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದರು. ಈ ಎಲ್ಲ ಉಪಕರಣಗಳನ್ನು ಕೃಷಿ ಮೇಳಗಳಲ್ಲಿ ಪ್ರದರ್ಶನಕ್ಕಿಟ್ಟು ಮೇಳಕ್ಕೆ ಭಾಗವಹಿಸಿದ ಗಣ್ಯರಿಂದ `ಭೇಷ್' ಎನ್ನಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ: 9980120239
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT