ADVERTISEMENT

ರೋಗ ನಿವಾರಣೆಗೆ ಥರಾವರಿ ಸೂಕ್ಷ್ಮಾಣುಗಳು

ವಿಜಯ ಅಂಗಡಿ
Published 10 ಜುಲೈ 2017, 19:30 IST
Last Updated 10 ಜುಲೈ 2017, 19:30 IST
ಪ್ರಯೋಗಾಲಯದಲ್ಲಿ ಪತ್ನಿಯೊಂದಿಗೆ ಸುಹಾಸ್‌, ಚಿತ್ರಗಳು: ಲೇಖಕರದು
ಪ್ರಯೋಗಾಲಯದಲ್ಲಿ ಪತ್ನಿಯೊಂದಿಗೆ ಸುಹಾಸ್‌, ಚಿತ್ರಗಳು: ಲೇಖಕರದು   

ಚಿಕ್ಕಮಗಳೂರಿನ ಹೊರವಲಯದಲ್ಲಿ ಹೋಗುವಾಗ ಬ್ಲೂಮ್ ಬಯೋಟೆಕ್ ಎಂಬ ಸಂಸ್ಥೆ ಕಾಣಸಿಗುತ್ತದೆ. ‘ಏನಪ್ಪಾ ಇದರ ವಿಶೇಷ’ ಅಂತೀರಾ? ಕೃಷಿ ಚಟುವಟಿಕೆಗೆ ಪೂರಕವಾದ ಸೂಕ್ಷ್ಮಾಣು ಜೀವಿಗಳನ್ನು ಈ ಸಂಸ್ಥೆಯ ಪ್ರಯೋಗಾಲಯದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ.

ಪರಿಸರ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿರುವ ಸುಹಾಸ್ ಮೋಹನ್ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದಿರುವ ಅವರ ಪತ್ನಿ ಪ್ರೀತಿ ಈ ಪ್ರಯೋಗಾಲಯದ ಮುಖ್ಯಸ್ಥರು. ಸುಹಾಸ್‌ ಅವರು ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮಾಡಿಕೊಂಡು ಅಲ್ಲಿಯೇ ಕಂಪೆನಿಯೊಂದರಲ್ಲಿ ಕೆಲಸ ಮಾಡಿದರು. ಅವರ ತಂದೆ ಡಾ. ಡಿ.ಪಿ.ಮೋಹನ್‌ ವೃತ್ತಿಯಿಂದ ವೈದ್ಯರು. ಲಕ್ಯಾ ಗ್ರಾಮಕ್ಕೆ ಪ್ರತಿ ಭಾನುವಾರ ಭೇಟಿ ನೀಡುತ್ತಾ, ಅಲ್ಲಿನ ಜನರಿಗೆ ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡುತ್ತಾ ಬಂದವರು.

ಸುಹಾಸ್‌ ಅವರು ವಿದೇಶದಿಂದ ಬಂದ ಬಳಿಕ ತೆಂಗಿನ ನಾರಿನಿಂದ ಗೊಬ್ಬರ ತಯಾರಿಸುವ ಸಂಬಂಧಿಕರ ಕಂಪೆನಿಯಲ್ಲಿ ಅಲ್ಪ ಅವಧಿವರೆಗೆ ದುಡಿದರು. ಹೀಗೆ ಕೆಲಸ ಮಾಡುವಾಗ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಸಂಪರ್ಕ ಬಂತು. ವಿಜ್ಞಾನಿಗಳೊಂದಿಗೆ ಚರ್ಚೆ ಮಾಡಿದ ಪರಿಣಾಮವಾಗಿ ಸೂಕ್ಷ್ಮಜೀವಿಗಳ ಉತ್ಪಾದನೆಗಾಗಿಯೇ ಪ್ರಯೋಗಾಲಯವನ್ನು ಸ್ಥಾಪಿಸಲು ಅವರಿಗೆ ಪ್ರೇರಣೆ ಸಿಕ್ಕಿತು. ಇದರ ಪ್ರಯತ್ನವೇ 2013ರಲ್ಲಿ ಬ್ಲೂಮ್ ಬಯೋಟೆಕ್ ಸಂಸ್ಥೆಯ ಉದಯ.

ADVERTISEMENT

ಸುಹಾಸ್ ಮತ್ತು ಪ್ರೀತಿ ಇಬ್ಬರೂ ಸೇರಿಕೊಂಡು ಬ್ಲೂಮ್ ಬಯೋಟೆಕ್ ಪ್ರಯೋಗಾಲಯದಲ್ಲಿ ಟ್ರೈಕೋಡರ್ಮ, ಸುಡೋಮೊನಸ್, ರಂಜಕ ಕರಗಿಸುವ ಬ್ಯಾಕ್ಟಿರಿಯಾ ಸೇರಿದಂತೆ ಹಲವು ಸೂಕ್ಷ್ಮಜೀವಿಗಳ ಉತ್ಪಾದನೆ ಮಾಡುತ್ತಿದ್ದಾರೆ. ಪ್ರಯೋಗಾಲಯದ ಸ್ಥಾಪನೆಗಾಗಿ ₹ 1 ಕೋಟಿಯಷ್ಟು ಖರ್ಚು ಮಾಡಿದ್ದಾರೆ.

ವಿಶೇಷವಾಗಿ ಕಾಳುಮೆಣಸು, ಅಡಿಕೆ, ಶುಂಠಿ, ದಾಳಿಂಬೆ, ತರಕಾರಿ, ಹೂವಿನ ಬೆಳೆಗಳಲ್ಲಿ ಕಾಣಿಸುವ ಶಿಲೀಂಧ್ರ ರೋಗಗಳ ನಿಯಂತ್ರಣ ಹಾಗೂ ಮಣ್ಣಿನ ಸತ್ವ ಹೆಚ್ಚಿಸುವುದಕ್ಕೆ ಈ ಪ್ರಯೋಗಾಲಯದಲ್ಲಿ ಅಭಿವೃದ್ಧಿ ಮಾಡಲಾದ ಸೂಕ್ಷ್ಮಜೀವಿಗಳು ನೆರವಿಗೆ ಬಂದಿವೆ. ಕಾಂಪೋಸ್ಟ್ ಗೊಬ್ಬರ ಮಾಡಿಕೊಳ್ಳುವ ರೈತರು, ಕಾಫಿ ಬೆಳೆಗಾರರು ಕಾಂಪೋಸ್ಟ್ ಕಲ್ಚರ್‌ ಬಳಸುತ್ತಿದ್ದಾರೆ.

ರೈತರಿಗೆ ನೇರವಾಗಿ ಸೂಕ್ಷ್ಮಾಣು ಜೀವಿಗಳನ್ನು ಪೂರೈಸುತ್ತಿದ್ದಾರೆ. ಹಣ ಗಳಿಕೆಯ ದಾಹವಿಲ್ಲದೆ ಭೂಮಿ, ರೈತರ ಸೇವೆ ಮಾಡುತ್ತಿರುವ ಧನ್ಯತಾಭಾವ ಅವರಲ್ಲಿದೆ. ಸರ್ಕಾರಿ ಇಲಾಖೆಗಳ ಸಹಾಯಧನವನ್ನು ಅವರು ತೆಗೆದುಕೊಂಡಿಲ್ಲ. ಹಾಗೆಯೇ ಇವರ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರಿ ಇಲಾಖೆಗಳನ್ನೂ ಅವಲಂಬಿಸಿಲ್ಲ.

ಬ್ಲೂಮ್ ಬಯೋಟೆಕ್ ಸಂಸ್ಥೆಯಲ್ಲಿ ಪತಿ-ಪತ್ನಿಯೇ ಮುಖ್ಯ ಕೆಲಸಗಾರರು. ಅವರ ಉಸ್ತುವಾರಿಯಲ್ಲಿ ಸೂಕ್ಷ್ಮಜೀವಿಗಳ ಉತ್ಪಾದನೆ ಬಹು ಕಾಳಜಿ ಹಾಗೂ ಎಚ್ಚರಿಕೆಯಿಂದ ಆಗುತ್ತದೆ. ಅವರೊಂದಿಗೆ ಆರು ಜನ ಕೆಲಸಗಾರರು ದುಡಿಯುತ್ತಿದ್ದಾರೆ. ಬಯೋಫೆರ್ಮಂಟರ್, ಆಟೋಕ್ಲೇವ್, ಓವನ್, ಶೇಕರ್, ಮಿಕ್ಸಿಂಗ್ ಮಿಷನ್, ಆರ್‍ಓ ಫಿಲ್ಟರ್, ಪಿ.ಎಚ್. ಮೀಟರ್, ಕಂಡಕ್ಟಿವಿಟಿ ಮೀಟರ್ ಮತ್ತಿತರ ಉಪಕರಣಗಳು ಪ್ರಯೋಗಾಲಯದಲ್ಲಿವೆ. ತಮ್ಮದೇ ಬ್ರ್ಯಾಂಡ್‌ನಲ್ಲಿ ಬಳಕೆದಾರರ ಕೈಗೆ ನೀಡುತ್ತಿರುವ ಇವರ ಉತ್ಪನ್ನಗಳ ಹೆಸರುಗಳು ಹೀಗಿವೆ; ಬಯೋ ಸಂಜೀವಿನಿ, ಭೂ ಸಮೃದ್ಧಿ, ಬ್ಲೂಡರ್ಮ, ಬ್ಲೂಸಾಲ್, ಬ್ಲೂಫೀಕ್ಸ್, ಬ್ಲೂಮೊನಾಸ್, ಬ್ಲೂಕಾಮ್, ಕೋಕೋ ಮಿರಾಕಲ್, ಬ್ಲೂರಿಚ್.

ಗುಣಮಟ್ಟವನ್ನು ಕಾಪಾಡಿಕೊಂಡು ರೈತರಿಗೆ ಉಪಯುಕ್ತವಾಗಿರುವ ಜೈವಿಕ ಪದಾರ್ಥಗಳನ್ನು ಅಭಿವೃದ್ಧಿಪಡಿಸಿ ಪರಿಸರಪ್ರಿಯ ಕೃಷಿಯಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುವುದು ಈ ದಂಪತಿಯ ಕನಸು. ಕಾಳುಮೆಣಸಿನ ಸೊರಗು ರೋಗ, ಶುಂಠಿಯ ಕೊಳೆರೋಗ, ಅಡಿಕೆಯಲ್ಲಿ ಅಣಬೆ ರೋಗ, ದಾಳಿಂಬೆಯಲ್ಲಿ ಬ್ಯಾಕ್ಟಿರಿಯಲ್ ಬ್ಲೈಟ್ ಮತ್ತು ಸೊರಗು ರೋಗ, ತರಕಾರಿಗಳಲ್ಲಿ ಅಂಗಮಾರಿ ರೋಗ, ಹೂವಿನ ಬೆಳೆಗಳಲ್ಲಿ ಕೊಳೆ ರೋಗಗಳ ಹತೋಟಿಗೆ ಇವರ ಜೈವಿಕ ಉತ್ಪನ್ನಗಳು ಪರಿಣಾಮಕಾರಿಯಾಗಿವೆ.

ಮೈಕ್ರೋಬಿಯಲ್ ಕನ್ಸಾರ್ಷಿಯಂ (ಮೈಕ) ಎಂಬುದು ಬೆಳೆವರ್ಧಕ, ರೋಗನಿವಾರಕ, ಸಾರಜನಕ ಸ್ಥಿರೀಕಾರಕ, ರಂಜಕ ಮತ್ತು ಸತು ಕರಗಿಸುವ ನಾಲ್ಕು ಸೂಕ್ಷ್ಮಜೀವಿಗಳ ಸಮ್ಮಿಶ್ರಣ. ಇದರ ಬಗ್ಗೆ ತಿಳಿದಿರುವವರು ಕಮ್ಮಿ. ಗೋಣಿಕೊಪ್ಪದ ಕೃಷ್ಣ ಎಸ್ಟೇಟ್‌ನ ಕಾಫಿ ಬೆಳೆಗಾರರಾದ ಎಂ.ಎಂ. ಅಯ್ಯಪ್ಪ ಅವರು ಈ ಸೂಕ್ಷ್ಮಜೀವಿಯನ್ನು ತಮ್ಮ 2,000 ಕಾಳುಮೆಣಸು ಬಳ್ಳಿಗಳಿಗೆ ನೀರಿನೊಂದಿಗೆ ಉಣಿಸಿದರು.

ನೀರಿನಲ್ಲಿ ಐದು ಕೆ.ಜಿ ಮೈಕವನ್ನು ಬೆರಸಿ ಒಂದೊಂದು ಬಳ್ಳಿಗೆ ಐದು ಲೀಟರ್‌ನಂತೆ ಹಾಕಿದರು. ಕಾಳುಮೆಣಸು ಬಳ್ಳಿಗಳು ಬಹುಬೇಗ ಚೇತರಿಸಿಕೊಂಡವು. ಒಳ್ಳೆಯ ಫಸಲು ಸಹ ಸಿಕ್ಕಿತು. ಇವರಂತೆ ಮಾದಾಪುರದ ಬೋಸ್ ಮಂದಣ್ಣ ಅವರೂ ತಮ್ಮ 30 ಎಕರೆಯ ಕಾಫಿತೋಟದ ಕಾಳುಮೆಣಸು ಬಳ್ಳಿಗಳಿಗೆ 2013ರಿಂದ ಮೈಕ್ರೋಬಿಯಲ್ ಕನ್ಸಾರ್ಷಿಯಂ ಉಣಿಸುತ್ತಿದ್ದಾರೆ.

ಲೈಸನ್ಸ್ ಪಡೆದು ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ತಜ್ಞ ವಿಜ್ಞಾನಿಗಳ ನಿರಂತರ ಮಾರ್ಗದರ್ಶನದಲ್ಲಿ ಸೂಕ್ಷ್ಮಜೀವಿಗಳ ಉತ್ಪಾದನೆ ನಡೆಯುತ್ತದೆ. ಸುಹಾಸ್ ಅವರು ರೈತರ ತಾಕುಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸಲಹೆಗಳನ್ನು ನೀಡುತ್ತಿದ್ದಾರೆ. ಸಂಪರ್ಕಕ್ಕೆ: 88845 68019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.