ADVERTISEMENT

ಶ್ರೀಶೈಲಗೌಡರ ಹೊಲದ ಆಳಿಗೂ ಬೋನಸ್

ಬಸವರಾಜ ಸಂಪಳ್ಳಿ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಸತತ 17 ವರ್ಷ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪ್ರತಿ ತಿಂಗಳು 40 ಸಾವಿರ ರೂಪಾಯಿ ಸಂಬಳ, ಪಿಎಫ್, ಬೋನಸ್ ಪಡೆಯುವ ಜೊತೆಗೆ ದೇಶ-ವಿದೇಶವನ್ನು ಸುತ್ತಿ ಹಾಯಾಗಿದ್ದ ಡಿಸೈನ್ ಎಂಜಿನಿಯರ್, ಆ ಐಷಾರಾಮವನ್ನೆಲ್ಲ ಬಿಟ್ಟು ನೆತ್ತಿ ಸುಡುವ ರಣಬಿಸಿಲಲ್ಲಿ ಬೆವರು ಸುರಿಸುತ್ತಿದ್ದಾರೆ! ಅದೂ ಯಾರದೋ ಬಲವಂತಕ್ಕಲ್ಲ; ಸ್ವ ಇಚ್ಛೆಯಿಂದ.

ಏಸಿ ಕೊಠಡಿಯೊಳಗಿನ ಕೆಲಸಕ್ಕೆ ರಾಜೀನಾಮೆ ನೀಡಿ, ತಂದೆಯ ಹೊಲದಲ್ಲಿ ಆದರ್ಶ ರೈತನಾಗಿ ದುಡಿಯುತ್ತ ವರ್ಷಕ್ಕೆ 40- 45 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅವರೇ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಅನಗವಾಡಿ ರೈತ ಶ್ರೀಶೈಲಗೌಡ ವಿರೂಪಾಕ್ಷ ಪಾಟೀಲ.

 ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಘಟಪ್ರಭಾ ನದಿ ಸಮೀಪದ 23.5 ಎಕರೆ ಹೊಲದಲ್ಲಿ ಶ್ರೀಶೈಲಗೌಡರು, 12 ವಿಭಿನ್ನ ತಳಿಯ ದ್ರಾಕ್ಷಿ, ತೈವಾನ್ ಪಪ್ಪಾಯಿ, ಜಿನೈನ್ ಬಾಳೆ, ದಾಳಿಂಬೆಯನ್ನು ಸಮೃದ್ಧವಾಗಿ ಬೆಳೆಯುತ್ತ, ಮಾರುಕಟ್ಟೆಯನ್ನೂ ಹುಡುಕಿಕೊಂಡು ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.

ಅವರು ದ್ರಾಕ್ಷಿ, ದಾಳಿಂಬೆ, ಪಪ್ಪಾಯಿ ಬೆಳೆದು ಮಾರಿ ಲಾಭ ಗಳಿಸಿದ್ದರೆ ಅವರಿಗೂ ಇತರ ರೈತರಿಗೂ ಅಂಥ ವ್ಯತ್ಯಾಸವೇನೂ ಇರುತ್ತಿರಲಿಲ್ಲ. ಆದರೆ ಕೃಷಿರಂಗದಲ್ಲಿ ಅಳವಡಿಸಿಕೊಂಡಿರುವ ವೈಜ್ಞಾನಿಕ ವಿಧಾನ ಹಾಗೂ ಕೃಷಿ ಕಾರ್ಮಿಕರಿಗೆ ನೀಡುತ್ತಿರುವ ಸೌಕರ್ಯ, ಸೌಲಭ್ಯಗಳು, ಕಲ್ಯಾಣ ಯೋಜನೆಗಳಿಂದ ಬೇರೆಯವರಿಗಿಂತ ವಿಭಿನ್ನವಾಗಿದ್ದಾರೆ.

ಏನೇನು
ತಮ್ಮ ಹೊಲದಲ್ಲಿ ದುಡಿಯುವ ರೈತಕೂಲಿಗಳಿಗೆ ಸಮವಸ್ತ್ರ, ತಿಂಗಳ ವೇತನ, ಪಿಎಫ್ (ಭವಿಷ್ಯನಿಧಿ) ಬೋನಸ್, ಮನೆ ನಿರ್ಮಾಣ, ಹಸು, ಆಡು, ಕುರಿ ಖರೀದಿಗೆ ಬಡ್ಡಿರಹಿತ ಸಾಲ ಸೌಲಭ್ಯ, ಮದುವೆ-ಮುಂಜಿಗೆ ಸಾಲ ನೀಡುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕಂಪೆನಿ ನೌಕರರಿಗೆ ಮಾತ್ರ ಗೊತ್ತಿರುವ ಭವಿಷ್ಯನಿಧಿ, ಲಾಭಾಂಶ ವಿತರಣೆಯಂತಹ ಶಬ್ದಗಳನ್ನು ಕೃಷಿ ಕ್ಷೇತ್ರದಲ್ಲೂ ಪರಿಚಯಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಹೊಲದಲ್ಲಿ ಕೂಲಿ ಕೆಲಸ ಮಾಡುವವರಿಗೆ ತಿರುಗಾಡಲು ಬೈಕ್, ಜೀಪು ವ್ಯವಸ್ಥೆಯಿದೆ. ಹಬ್ಬಹರಿದಿನಗಳನ್ನು ಎಲ್ಲರೂ ಸೇರಿ ಆಚರಿಸುತ್ತಾರೆ. ಆರೋಗ್ಯ ಕೆಟ್ಟರೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾರೆ.

ಪ್ರತೀ ಕಾರ್ಮಿಕರ ದಿನದ ಕೂಲಿಯಲ್ಲಿ 5 ರೂ ಮುರಿದುಕೊಂಡು ಅದಕ್ಕೆ ಮಾಲೀಕರ ವತಿಯಿಂದ 5 ರೂ ಸೇರಿಸಿ ಭವಿಷ್ಯ ನಿಧಿಗೆ ಜಮಾ ಮಾಡುತ್ತಾರೆ. ಕೆಲಸಕ್ಕೆ ಬಂದ ದಿನವೊಂದಕ್ಕೆ 7 ರೂಪಾಯಿಯಂತೆ ಲೆಕ್ಕ ಹಾಕಿ ಪ್ರತಿ ಡಿಸೆಂಬರ್‌ಗೆ ಬೋನಸ್ ಕೊಡುತ್ತಾರೆ. ಕೃಷಿಯಲ್ಲಿ ಬಂದ ಲಾಭದಲ್ಲಿ ಪ್ರತಿಯೊಬ್ಬ ಕೂಲಿಯಾಳಿಗೂ ಮೇ ತಿಂಗಳಲ್ಲಿ ಸರಾಸರಿ 8 ರಿಂದ 11 ಸಾವಿರ ರೂಪಾಯಿ (ಆಯಾ ವರ್ಷದ ಇಳುವರಿ ಮತ್ತು ಲಾಭದ ಆಧಾರದ ಮೇಲೆ) ನೀಡುತ್ತಾರೆ.

ದೀಪಾವಳಿ ಸಂದರ್ಭದಲ್ಲಿ ಕೂಲಿಯಾಳುಗಳಿಗೆ ಮತ್ತು ಅವರ ಕುಟುಂಬಕ್ಕೆ ಹೊಸ ಬಟ್ಟೆ, ಸಿಹಿ ಹಂಚುತ್ತಾರೆ. ಇನ್ನೊಂದು ವಿಶೇಷ ಎಂದರೆ ಅವರ ಹೊಲದಲ್ಲಿ ಕೆಲಸ ಮಾಡುವ ಆಳುಗಳು ಮದ್ಯಪಾನ, ಧೂಮಪಾನ ಮಾಡುವಂತಿಲ್ಲ, ಗುಟ್ಕಾ ಹಾಕುವಂತಿಲ್ಲ. ಒಂದು ವೇಳೆ ದುಶ್ಚಟಗಳಿದ್ದರೆ ಅಂಥವರನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ.

ಪ್ರತೀ ದಿನ ಬೆಳಿಗ್ಗೆ 8.30ಕ್ಕೆ ಹೊಲಕ್ಕೆ ಬಂದ ಆಳುಗಳು ಸಂಜೆ 6ಕ್ಕೆ ಮನೆಗೆ ಮರಳುತ್ತಾರೆ. ಈ ನಡುವೆ ಬೆಳಿಗ್ಗೆ 11 ರಿಂದ 12 ಮತ್ತು ಮಧ್ಯಾಹ್ನ 2.30 ರಿಂದ 3.30ರ ವರೆಗೆ ಬಿಡುವು. ಎಲ್ಲರೂ ಅವರವರ ಮನೆಯಿಂದ ಮಧ್ಯಾಹ್ನದ ಊಟ ತರುತ್ತಾರೆ. ಹೊಲದಲ್ಲಿ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.

ಒಲವು
ಶ್ರೀಶೈಲಗೌಡ ಅವರು ಮೂಲತಃ ರೈತ ಕುಟುಂಬದಲ್ಲೇ ಜನಿಸಿದವರು. ಎಂಜಿನಿಯರಿಂಗ್ ಪದವಿ ಪಡೆದು ಪುಣೆಯ ಕಿರ್ಲೋಸ್ಕರ್ ಬ್ರದರ್ಸ್  ಕಂಪೆನಿಯಲ್ಲಿ ಡಿಸೈನ್ ಎಂಜಿನಿಯರ್ ಆಗಿ ಕೆಲಸ ಮಾಡಿದರು. ಅಲ್ಲಿದ್ದಾಗಲೇ ಆಸುಪಾಸಿನಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆಯುವ ದ್ರಾಕ್ಷಿ ತೋಟಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು. ಅಲ್ಲಿಯ ಕೃಷಿಕರು ದ್ರಾಕ್ಷಿ ತೋಟದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುವುದು ಅವರನ್ನು ಸೆಳೆಯಿತು.

ಬಳಿಕ ಹವಾನಿಯಂತ್ರಿತ ಬದುಕು, ದುಡ್ಡಿನಲ್ಲೇ ಸುಖ ಹುಡುಕುವ ಜೀವನ ಬೇಸರ ಎನಿಸಿ, ಕೆಲಸಕ್ಕೆ ವಿದಾಯ ಹೇಳಿದರು. ಸಾಕಷ್ಟು ಹಣ ಸಂಪಾದಿಸಲು ಅವಕಾಶವಿದ್ದ ಡಿಸೈನ್ ಎಂಜಿನಿಯರ್ ಹುದ್ದೆ ತ್ಯಜಿಸುವ ಸಂದರ್ಭದಲ್ಲಿ ಪತ್ನಿ ಆಂಧ್ರಪ್ರದೇಶದ ಗೀತಾ ಪಾಟೀಲ ಎದೆಗುಂದದೇ ಪತಿಯ ಹುಚ್ಚು ಸಾಹಸಕ್ಕೆ ಜೊತೆಯಾದರು.
 
ಪುಣೆ ತೊರೆದು ಬಂದ ಶ್ರೀಶೈಲಗೌಡ ದಂಪತಿ ಬಾಗಲಕೋಟೆಯಲ್ಲಿ ನೆಲೆ ನಿಂತು ಸಮೀಪದ ಅನಗವಾಡಿಯಲ್ಲಿರುವ ತಂದೆಯ ಭೂಮಿಯಲ್ಲಿ ಹೊಸ ಕೃಷಿ ಪ್ರಯೋಗಕ್ಕೆ ಅಣಿಯಾದರು.

 ಆರಂಭದಲ್ಲಿ ಹೊಲದಲ್ಲಿ ಎರಡು ಕೊಳವೆ ಬಾವಿಗಳನ್ನು ತೆಗೆಸಿ ನೀರಿನ ಕೊರತೆ ಇಲ್ಲದಂತೆ ಮಾಡಿದರು. ತಮ್ಮ ಹೊಲಕ್ಕೆ `ನಿರುತ್ತರ~ (12 ಎಕರೆಯಲ್ಲಿ ದ್ರಾಕ್ಷಿ, ಕೇಸರ್ ತಳಿಯ ದಾಳಿಂಬೆ, ಪಪ್ಪಾಯಿ), `ಅನಿವಾರ್ಯ~ (6.5.ಎಕರೆಯಲ್ಲಿ  ಕೃಷ್ಣಾ, ಶರದ್, ಪ್ಲೇಮ್, ಕ್ರೀಮ್‌ಸನ್, ರೆಡ್ ಲೊಬೊ, ಬ್ಲಾಕ್‌ಗ್ಲೋಬ್, ಸೂಪರ್ ಸೊನಗ, ಕಾಜು

ಸೋನಾ, ಅಂಬಾಸೋನಾ, ಕ್ಲೋನ್ 2ಎ, ಮಾಣಿಕ್ ಚಮನ್ ಇತ್ಯಾದಿ 12 ತಳಿಯ ದ್ರಾಕ್ಷಿ ಬೆಳೆಯಲಾಗಿದೆ) ಮತ್ತು `ನಿರಂತರ~ (5 ಎಕರೆಯಲ್ಲಿ ಈಗ ತಾನೇ ಕೃಷಿ ಕಾರ್ಯ ಆರಂಭಗೊಂಡಿದೆ) ಎಂದು ವಿಭಿನ್ನ ಮತ್ತು ಅರ್ಥಗರ್ಭಿತ ಹೆಸರಿಟ್ಟರು. ಪ್ರತಿಫಲಾಪೇಕ್ಷೆ ಇಲ್ಲದೇ ಕೃಷಿ ಮಾಡುವ ಹೊಲ `ನಿರುತ್ತರ~. ಬೆಳೆ ಬರಲಿ, ಬಾರದಿರಲಿ ಬದುಕಿನ ನಿರ್ವಹಣೆಗೆ ಕೃಷಿ ಮಾಡಲೇ ಬೇಕಾದ ಹೊಲ `ಅನಿವಾರ್ಯ~.
 
ಲಾಭ ಬರಲಿ ಬಿಡಲಿ; ಚಳಿ, ಬಿಸಿಲು ಮಳೆಗೆ ಅಂಜದೇ ಕೃಷಿ ಮಾಡುವ ಜಮೀನು `ಅನಿವಾರ್ಯ~ ಎಂಬುದು ಅವರ ವಿವರಣೆ. ಅವರ ಹೊಲದಲ್ಲಿ ಬಸವರಾಜ, ಹನುಮಂತ, ಆನಂದ, ವೆಂಕಪ್ಪ, ಗುರು, ಹನುಮಂತ, ರತ್ನಾ, ಗೌರವ್ವ, ಶ್ಯಾವಕ್ಕ ಎಂಬ ರೈತ ಕೂಲಿಯಾಳುಗಳು ಅನೇಕ ವರ್ಷದಿಂದ ದುಡಿಮೆಯಲ್ಲಿ ತೊಡಗಿದ್ದಾರೆ. ಎರಡು ಟ್ರಾಕ್ಟರ್ ಇವೆ.

ಹೊಲದಲ್ಲಿ ವಾರ್ಷಿಕ 40 ರಿಂದ 45 ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ. ಎಕರೆಗೆ 10 ರಿಂದ 12 ಟನ್ ದ್ರಾಕ್ಷಿ, 5 ಟನ್ ದಾಳಿಂಬೆ, 40 ರಿಂದ 50 ಟನ್ ಪಪ್ಪಾಯಿ, 15 ರಿಂದ 20 ಟನ್ ಬಾಳೆ ಬೆಳೆಯುತ್ತಾರೆ. ಕೃಷಿಯಲ್ಲಿ ರಾಸಾಯನಿಕ ಮತ್ತು ಸಾವಯವ ಎರಡೂ ಗೊಬ್ಬರವನ್ನು ಹಿತಮಿತವಾಗಿ ಬಳಸುತ್ತಾರೆ. 

ತಮ್ಮ ಬೆಳೆಗೆ ಮಾರುಕಟ್ಟೆ ಸಮಸ್ಯೆ ಇಲ್ಲ ಎನ್ನುವ ಶ್ರೀಶೈಲಗೌಡರು, ದ್ರಾಕ್ಷಿಯನ್ನು ಸ್ಥಳೀಯ ಮಾರುಕಟ್ಟೆ ಜೊತೆಗೆ ಹೈದರಾಬಾದ್, ಬೆಂಗಳೂರು, ಪಪ್ಪಾಯಿಯನ್ನು ಮುಂಬೈ, ಗೋವಾ, ಇಂದೋರ್‌ಗೆ ಮತ್ತು ದಾಳಿಂಬೆಯನ್ನು ಬೆಂಗಳೂರು ಹಾಪ್‌ಕಾಮ್ಸಗೆ ಮತ್ತು ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ.

`ನೀವೂ ಗೆಲ್ಲಿರಿ ನಾನೂ ಗೆಲ್ಲುತ್ತೇನೆ, ನೀವೂ ಬದುಕಿರಿ ನಾನೂ ಬದುಕುತ್ತೇನೆ~ ಎನ್ನುವ ಅವರದು `ಏನನ್ನಾದರೂ ಮಾಡಿ ವಿಭಿನ್ನವಾಗಿ ಮಾಡಿ~ ಎನ್ನುವ ಧ್ಯೇಯ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಬಾಗಲಕೋಟೆ ತೋಟಗಾರಿಕಾ ವಿವಿ ಜತೆ ಸಮನ್ವಯ ಸಾಧಿಸಿ ಮಾಹಿತಿ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಅಕ್ಕಪಕ್ಕದ ಹೊಲಗಳ ರೈತರಿಗೆ ಸಲಹೆ- ಸಹಕಾರ ನೀಡುತ್ತಾರೆ.

 ಯುವ ಜನಾಂಗ ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು, ಹೊಸ ಪ್ರಯೋಗ ಮಾಡಬೇಕು, ರಾಜಕೀಯದತ್ತ ತೋರುವ ಒಲವನ್ನು ಕಡಿಮೆ ಮಾಡಿ ಕೃಷಿಯತ್ತ ತೋರಿಸಿ ಎನ್ನುವುದು ಅವರ ಹಿತವಚನ. ಕೃಷಿ ಕಾಲ್‌ಸೆಂಟರ್ ತೆರೆದು ತಮ್ಮ ಮಗನನ್ನು ಅದರಲ್ಲಿ ತೊಡಗಿಸಬೇಕೆಂಬುದು ಅವರ ಬಯಕೆ. ಅವರ ಮೊಬೈಲ್ ಸಂಖ್ಯೆ 97318 83868.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.