ADVERTISEMENT

ಸವಳು, ಕರ್ಲು ಮಣ್ಣಲ್ಲೂ ಭತ್ತ

ಬತ್ತದಿರಲಿ ಭತ್ತದ ಕಣಜ -5

ಡಾ.ಆರ್.ಕೃಷ್ಣ ಮೂರ್ತಿ
Published 23 ಜೂನ್ 2014, 19:30 IST
Last Updated 23 ಜೂನ್ 2014, 19:30 IST
ಹಸಿರೆಲೆ ಗೊಬ್ಬರವಾಗಿ ಬೆಳೆದ ಚಂಬೆ
ಹಸಿರೆಲೆ ಗೊಬ್ಬರವಾಗಿ ಬೆಳೆದ ಚಂಬೆ   

ಸದಾ ಜೌಗಾಗಿರುವ ತಗ್ಗು ಪ್ರದೇಶ ಅಥವಾ ನೀರಾವರಿ ಪ್ರದೇಶಗಳಲ್ಲಿ ಸೂಕ್ತ ಬಸಿಕಾಲುವೆ ಇಲ್ಲದಿದ್ದರೆ ಅಥವಾ ನಿಯಂತ್ರಣವಿಲ್ಲದ ನೀರಾವರಿಯಿಂದಾಗಿ ಆ ಪ್ರದೇಶ ಕ್ರಮೇಣ ಸವಳು (ಚೌಳು) ಆಗುತ್ತದೆ. ಇದನ್ನು ಹಾಗೆಯೇ ಬಿಟ್ಟಲ್ಲಿ ಸವಳಿನಂಶದ ಜೊತೆಗೆ ಸೋಡಿಯಂ ಲವಣ ಹೆಚ್ಚಾಗುತ್ತಾ ಹೋಗಿ ಕಡೆಗೆ ಮಣ್ಣು ಕರ್ಲು(ಕ್ಷಾರ) ಆಗುತ್ತದೆ.

ಈ ರೀತಿಯಾದ ಮಣ್ಣಿನಲ್ಲಿ ಕರಗುವ ಲವಣಗಳು ಹೆಚ್ಚಾಗಿ ಇರುವುದರಿಂದ, ಬೆಳೆಗಳ ಪೈರು ಒಣಗಿ ಹೋಗುತ್ತವೆ. ಕರ್ಲು ಮಣ್ಣಿನಲ್ಲಾದರೆ ನಾಟಿ ಮಾಡಿದ ಪೈರುಗಳು ಸುಟ್ಟು ಹೋಗುತ್ತವೆ. ಕರ್ಲು ಮಣ್ಣು ಒಣಗಿದಾಗ ಬಿರುಸಾಗಿದ್ದು, ಬಹಳ ಗಟ್ಟಿಯಾಗಿರುತ್ತವೆ. ನೀರುಣಿಸಿದಾಗ ಬಹಳ ಮೃದುವಾಗುತ್ತವೆ. ಇಂತಹ ಮಣ್ಣುಗಳಲ್ಲಿ ಕಾಲಿಟ್ಟಾಗ ಹೂತು ಹೋಗುವ ಸಾಧ್ಯತೆಯೂ ಇರುತ್ತದೆ. ಅಷ್ಟೇ ಅಲ್ಲದೇ, ಉಳುಮೆ, ನಾಟಿ ಮುಂತಾದ ಕಾರ್ಯಗಳಿಗೆ ಬಹಳ ತೊಡಕಾಗುತ್ತದೆ.

ತೀವ್ರ ಕ್ಷಾರತೆಯಿಂದ ಮಣ್ಣಿನ ಸಾವಯವ ಅಂಶಗಳು ಸುಟ್ಟು ಹೋಗಿ, ಮಣ್ಣು ಕಡಿಮೆ ಫಲವತ್ತತೆ ಹೊಂದುತ್ತದೆ. ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕುಗ್ಗುತ್ತದೆ. ಆದ್ದರಿಂದ ಈ ಮಣ್ಣುಗಳಲ್ಲಿ ಸಾರಜನಕದ ಜೊತೆಗೆ ಲಘು ಪೋಷಕಾಂಶಗಳಾದ ಸತು, ಕಬ್ಬಿಣ ಮತ್ತು ಗಂಧಕದ ಕೊರತೆಗಳು ಕಾಣಿಸಿಕೊಳ್ಳುತ್ತವೆ.

ಏನು ಮಾಡಬೇಕು?
ಸವಳು ಮಣ್ಣಿನಲ್ಲಿ ಲವಣಾಂಶಗಳು ಅಧಿಕವಾಗಿರುವುದರಿಂದ ಇವುಗಳನ್ನು ಕರಗಿಸಿ ಬಸಿಕಾಲುವೆ ಮಾಡಿ ನೀರನ್ನು ಬಸಿಯುವಂತೆ ಮಾಡಬೇಕು. ಕರ್ಲು ಮಣ್ಣಿನಲ್ಲಿ ಲವಣಗಳಾದ ಸೋಡಿಯಂ ಕಾರ್ಬೋನೇಟ್ ಮತ್ತು ಬೈಕಾರ್ಬೋನೇಟುಗಳು ಗಟ್ಟಿಯಾಗಿ ಅಂಟಿಕೊಂಡಿರುವುದರಿಂದ ಸುಲಭವಾಗಿ ಕರಗಿಸಿ ಬಸಿದು ಹಾಕಲು ಸಾಧ್ಯವಿಲ್ಲ. ಆದುದರಿಂದ ಬೇಸಿಗೆ ಕಾಲದಲ್ಲಿ ಮಣ್ಣು ಪರೀಕ್ಷೆಗನುಗುಣವಾಗಿ ಜಿಪ್ಸಂ ಅನ್ನು ಹಾಕಿ ಉಳುಮೆ ಮಾಡಿ, ನೀರು ಕಟ್ಟಿ ಕರಗಿಸಿ, ಬಸಿ ಕಾಲುವೆಗಳಿಂದ ನೀರಿನ ಮುಖಾಂತರ ಹೊರ ಹಾಕಬೇಕು.

ಸಾವಯವ ಗೊಬ್ಬರಗಳ ಬಳಕೆ
ಮಣ್ಣು ಪರೀಕ್ಷೆಯನ್ನು ಮಾಡಿಸಿ ಅದರ ಆಧಾರದ ಮೇಲೆ ಜಿಪ್ಸಂ ಅಥವಾ ಗಂಧಕವನ್ನು ಕ್ಷಾರಮಣ್ಣಿಗೆ ಹಾಕಿ ಸುಧಾರಣೆ ಮಾಡಬಹುದು. ಭತ್ತವನ್ನು ಬೆಳೆಯುವುದಕ್ಕಿಂತ ಮುಂಚೆ ಚಂಬೆ, ಹೊಂಗೆ, ಗ್ಲಿರಿಸಿಡಿಯಾ ಮುಂತಾದ ಹಸಿರೆಲೆ ಗೊಬ್ಬರಗಳನ್ನು ಮಣ್ಣಿನಲ್ಲಿ ಸೇರಿಸಬೇಕು.  

ಸಾಮಾನ್ಯ ಮಣ್ಣಿಗೆ ನಾಲ್ಕು ಟನ್ ಕೊಟ್ಟಿಗೆ ಗೊಬ್ಬರ ಹಾಕಬೇಕು. ಆದರೆ ಈ ಮಣ್ಣಿಗೆ ಅದಕ್ಕಿಂತ ಹೆಚ್ಚಿಗೆ ಸಾವಯವ ಗೊಬ್ಬರ ಹಾಕಬೇಕು. ಸಕ್ಕರೆ ಕಾರ್ಖಾನೆಯ ಮಡ್ಡಿ ಗೊಬ್ಬರವನ್ನು ಸಾವಯವ ಗೊಬ್ಬರವಾಗಿ ಮತ್ತು ಕರ್ಲು ಮಣ್ಣನ್ನು ಸರಿ ಮಾಡಲೂ ಬಳಸಬಹುದು. ಕರ್ಲು ಮಣ್ಣಿನಲ್ಲಿ ಸುಣ್ಣದ ಕಲ್ಲುಗಳು ಹೆಚ್ಚಾಗಿದ್ದರೆ ಜಿಪ್ಸಂ ಬದಲು ಗಂಧಕ ಅಥವಾ ಕಬ್ಬಿಣದ ಸಲ್ಫೇಟ್ ಬಳಸಿ ಕರ್ಲು ಮಣ್ಣನ್ನು ಸರಿ ಮಾಡಬಹುದು.

ADVERTISEMENT

ತಳಿಗಳು ಮತ್ತು ನಾಟಿ
ಸವಳು ಮತ್ತು ಕರ್ಲು ಮಣ್ಣನ್ನು ಸುಧಾರಣೆ ಮಾಡುವ ಹಂತದಲ್ಲಿ ವಿಕಾಸ್, ಐ.ಆರ್-30864, ಪ್ರಕಾಶ್, ರಾಶಿ ಮತ್ತು ಮಂಗಳ ತಳಿಗಳನ್ನೇ ಬೆಳೆಯಿರಿ. ಸಸಿ ಮಡಿಗಳನ್ನು ಸಾಮಾನ್ಯ ಅಥವಾ ಒಳ್ಳೆಯ ಮಣ್ಣಿನಲ್ಲಿ ಬೆಳೆಸಿ 30 ರಿಂದ 35 ದಿನಗಳ ಪೈರನ್ನು ಪ್ರತಿ ಗುಣಿಗೆ 3–4 ಪೈರುಗಳು ಬರುವಂತೆ 15–10 ಸೆಂ.ಮೀ ಅಂತರದಲ್ಲಿ ನಾಟಿ ಮಾಡುವುದರಿಂದ ಪೈರುಗಳು ಸದೃಢವಾಗಿರುತ್ತವೆ ಮತ್ತು ಸಸಿಗಳ ಸಂಖ್ಯೆಯನ್ನು ಹೆಚ್ಚಿಸಿದಂತಾಗಿ ಇಳುವರಿ ಹೆಚ್ಚು ಬರುತ್ತದೆ.

ಸವಳು ಮಣ್ಣಿನಲ್ಲಿ ಒಂದೇ ಬಾರಿಗೆ ನೀರನ್ನು ಕಟ್ಟುವ ಬದಲು ಪದೇ ಪದೇ ಸ್ವಲ್ಪ ಸ್ವಲ್ಪ ನೀರನ್ನು ಕೊಟ್ಟು ಮಣ್ಣನ್ನು ಯಾವಾಗಲೂ ತೇವವಾಗಿಡಬೇಕು. ನೀರಾವರಿ ನೀರಿನಲ್ಲಿ ಲವಣಾಂಶ ಹೆಚ್ಚಾಗಿದ್ದರೆ ಅಂತಹ ನೀರನ್ನು ಒಳ್ಳೆಯ ನೀರಿನೊಂದಿಗೆ ಬೆರೆಸಿಕೊಂಡು ಬಳಸುವುದು ಸೂಕ್ತ.

ಸತುವಿನ ಕೊರತೆ ಈ ಮಣ್ಣುಗಳಲ್ಲಿ ಸಾಮಾನ್ಯವಾಗಿ ಇರುವುದರಿಂದ ಸುಧಾರಣಾ ಕಾಲದಲ್ಲಿ ಪ್ರತಿ ಮೂರು ಬೆಳೆಗೆ ಪ್ರತಿ ಎಕರೆಗೆ 16 ಕಿ. ಗ್ರಾಂ ಸತುವಿನ ಸಲ್ಫೇಟನ್ನು ನಾಟಿ ಮಾಡುವ ಒಂದು ವಾರ ಮುಂಚಿತವಾಗಿಯೇ ಮಣ್ಣಿನಲ್ಲಿ ಸೇರಿಸಬೇಕು. ಮೊದಲ ಒಂದೆರಡು ವರ್ಷಗಳು ನಾಟಿ ಮಾಡಿದ ಪೈರುಗಳು ಈ ಮಣ್ಣಿನಲ್ಲಿ ಕುಂಠಿತಗೊಂಡರೂ, ನಂತರದ ವರ್ಷಗಳಲ್ಲಿ ಭತ್ತದ ಬೆಳೆಯ ಅಭಿವೃದ್ಧಿಯನ್ನು ನೋಡಬಹುದು.

ಮೇಲೆ ತಿಳಿಸಿರುವಂತೆ ಸುಧಾರಕ ಕ್ರಮಗಳ ಜೊತೆಗೆ ಸೂಕ್ತವಾದ ತಳಿಗಳನ್ನು ಕ್ರಮವಾಗಿ ಅಳವಡಿಸಿದಲ್ಲಿ ಕ್ರಮೇಣ ಹೆಚ್ಚಿನ ಭತ್ತದ ಇಳುವರಿಯನ್ನು ಪಡೆಯಬಹುದಲ್ಲದೆ ಮಣ್ಣಿನ ಫಲವತ್ತತೆಯನ್ನು ಸಹ ಕಾಪಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಲೇಖಕರ ಸಂಪರ್ಕ ಸಂಖ್ಯೆ 9632202521.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.