ADVERTISEMENT

ಸಾವಯವ - ಸಂಪತ್ತು: ಸೂರ್ಯನಿಂದ ಸಾವಯವ

ಎ.ಪಿ.ಚಂದ್ರಶೇಖರ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

‘ನಾವು ಹೊರಗಿನಿಂದ ತರುವುದು ಏನೂ ಇಲ್ಲ. ನಾವಿರುವಲ್ಲೇ ನಮಗೆ ಬೇಕಾದುದೆಲ್ಲವೂ ಇದೆ. ಹಾಗೊಂದು ವೇಳೆ ಸೂರ್ಯನಿಂದಲೋ, ಚಂದ್ರನಿಂದಲೋ, ಮಂಗಳನಿಂದಲೋ ತರುವ ಪ್ರಯತ್ನ ಮಾಡಿದರೆ ನಷ್ಟವೆ, ಕಷ್ಟವೆ’ ಎಂಬುದಾಗಿ ಈ ಮೊದಲ ಲೇಖನದಲ್ಲಿ ಬರೆದಿದ್ದೆ. ಆದರೆ ಇದೀಗ ನನ್ನ ಹೇಳಿಕೆಯನ್ನು ತಿದ್ದುಪಡಿ ಮಾಡುತ್ತಿದ್ದೇನೆ.

ನಾನು ಬರೆಯುವುದಾಗಿರಬಹುದು, ನೀವು ಓದುವುದಿರಬಹುದು, ತಿನ್ನುವುದಿರಬಹುದು, ಅಷ್ಟೇ ಏಕೆ? ನಾವೆಲ್ಲ ಇಲ್ಲಿ ಬದುಕಿರುವುದು, ನಮ್ಮ ಬದುಕಿಗೆ ಬೇಕಾದ ಎಲ್ಲವೂ ಇಲ್ಲಿರುವುದು ಆಮದು ಶಕ್ತಿಯಿಂದಲೇ.

 ಸೂರ್ಯನು ಇಲ್ಲದಿದ್ದರೆ ಇಲ್ಲಿ ನಾವೆಲ್ಲ ಇರುತ್ತಿರಲಿಲ್ಲ. ನಮ್ಮ ಸುತ್ತಣ ಪರಿಸರವೂ ಇರುತ್ತಿರಲಿಲ್ಲ. ಇಲ್ಲಿರುವ ಜೀವ, ನಿರ್ಜೀವ ವೈವಿಧ್ಯಗಳು ಸಾಮಾನ್ಯವೇ? ಇಲ್ಲಿರುವ ಸೌಂದರ್ಯ, ಸಂಪತ್ತುಗಳು ಸಾಮಾನ್ಯವೇ? ಇಲ್ಲಿರುವ ಸಾಹಿತ್ಯ, ಸಂಗೀತಗಳು ಸಾಮಾನ್ಯವೇ? ಇಲ್ಲಿರುವ ಜ್ಞಾನ,ವಿಜ್ಞಾನಗಳು ಸಾಮಾನ್ಯವೇ?

ಅಸಾಮಾನ್ಯವಾದ ಈ ಪ್ರಕೃತಿಯಲ್ಲಿ ಗರಿಕೆಯಿಂದ ಹಿಡಿದು ಆಲದವರೆಗೆ ಇರುವ ಲಕ್ಷಾಂತರ ಸಸ್ಯ ಪ್ರಭೇದಗಳಲ್ಲಿ ದೇವರನ್ನು ಕಾಣುವ ಆಸ್ತಿಕರಿದ್ದಾರೆ. ಅಣುವಿನಿಂದ ಆನೆಯವರೆಗಿನ ಜೀವರಾಶಿಗಳನ್ನೆಲ್ಲಾ ವಿಷ್ಣುವಿನ ಅವತಾರಗಳಲ್ಲೋ, ಮೂವತ್ಮೂರು ಕೋಟಿ ದೇವತೆಗಳಲ್ಲೊ, ಕೈಲಾಸದ ಗಣಗಳಲ್ಲೋ ಕಂಡು ನಮಿಸುವ ಶ್ರದ್ಧಾವಂತರಿದ್ದಾರೆ. ನಾಲ್ಕು ಮಾರ್ಗ ಸೇರುವಲ್ಲೊಂದು ಕಲ್ಲು ನೆಟ್ಟು, ಅದಕ್ಕೆ ನಿಷ್ಠೆಯನ್ನು ಪ್ರದರ್ಶಿಸುವ ದೈವ ಭೀರುಗಳಿದ್ದಾರೆ. ಈ ಎಲ್ಲಾ ನಂಬಿಕೆಗಳ ಹಿಂದೆ ಪ್ರಾಕೃತಿಕ ಸತ್ಯವಿದೆ, ವಿಜ್ಞಾನವಿದೆ, ವೇದಾಂತವಿದೆ ಎಂದು ವಾದಿಸುವ ಪಂಡಿತರಿದ್ದಾರೆ. ಇಂಥವರ ಪೈಕಿ ನೀವು ಇಲ್ಲದಿರಬಹುದು. ನೀವು ಪರಮ ನಾಸ್ತಿಕರಿರಬಹುದು. ಸ್ವಂತ ಸಾಮರ್ಥ್ಯದ ಮೇಲೆ ಭರವಸೆ ಉಳ್ಳವರಾಗಿರಬಹುದು. ಆದರೆ ಇಲ್ಲಿರುವ ಒಂದೊಂದು ವಸ್ತು ವೈವಿಧ್ಯಗಳನ್ನು ಒಪ್ಪಲೇಬೇಕಾದ ಅವುಗಳ ಹಿಂದಿರುವ ಶಕ್ತಿಯನ್ನು ದೇವರೆಂದು ಸ್ವೀಕರಿಸಲೇ ಬೇಕಾಗುವುದು.

ನಾವು ದೇವರೆಂದು ಸ್ವೀಕರಿಸಬೇಕಾದ ಸೂರ್ಯನಾದರೂ ಎಂಥವನು? - ನಮಗಿಂತ ಕೋಟಿ ಕೋಟಿ ಪಾಲು ಶಕ್ತಿವಂತನಾದವನು. ನಮ್ಮ ಶಕ್ತಿಗಳಿಗೆಲ್ಲ ಆಧಾರವಾದವನು. ಅವನಿಲ್ಲದೆ ನಾವು ಇರುವ ಸಂಭವ ಇಲ್ಲ. ಎಲ್ಲದಕ್ಕೂ ಕಾರಣನೂ, ತೇಜೋಮಯನೂ ಆದ ಸೂರ್ಯನನ್ನು ದೇವರೆಂದು ಒಪ್ಪಿಕೊಳ್ಳುವುದರಲ್ಲಿ ಅಳುಕಾಗಲಿ, ಅನುಮಾನವಾಗಲಿ, ಅಸಡ್ಡೆಯಾಗಲಿ ಅಗತ್ಯವಿಲ್ಲ ಎಂದು ನನಗನ್ನಿಸುತ್ತದೆ.

ಎಲ್ಲಿ ನಿಷ್ಠೆ ಬೇಕಿತ್ತೋ ಅಲ್ಲಿ ಪ್ರತಿಷ್ಠೆಯನ್ನು ಮೆರೆದ ದೆಸೆಯಿಂದ, ಎಲ್ಲಿ ಆಸ್ತಿಕತೆಯ ಅಗತ್ಯವಿತ್ತೋ ಅಲ್ಲಿ ನಾಸ್ತಿಕತೆಯನ್ನು ಪ್ರದರ್ಶಿಸಿದ ಕಾರಣದಿಂದ, ಎಲ್ಲಿ ಕೃತಜ್ಞತೆ ಬೇಕಿತ್ತೋ ಅಲ್ಲಿ ದುರಹಂಕಾರವನ್ನು ವ್ಯಕ್ತಪಡಿಸಿರುವುದರಿಂದ, ಎಲ್ಲಿ ಶರಣಾಗತಿಯ ಅನಿವಾರ್ಯತೆ ಇತ್ತೋ ಅಲ್ಲಿ ಸಮರ ಸಾರಿದ್ದರಿಂದ ಎಲ್ಲಿ ವ್ಯವಸ್ಥೆಯೊಳಗಿನ ವಿಜ್ಞಾನವನ್ನು ಗೌರವಿಸಬೇಕಿತ್ತೋ ಅಲ್ಲಿ ವಸ್ತು ವಿನ್ಯಾಸದ ವಿಜ್ಞಾನವನ್ನು ಪ್ರತಿಷ್ಠಾಪಿಸಿದ್ದರಿಂದ ನಮಗಿಂದು ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರುತ್ತಿವೆ ಎಂದು ನನಗೆ ಅನ್ನಿಸುತ್ತದೆ.

‘ಎನಗಿಂತ ಕಿರಿಯರಿಲ್ಲ’ ಎಂಬ ಭಕ್ತಿ ಭಾವದಿಂದ ಅತ್ಯಂತ ಸರಳವಾಗಿ ಮಾಡಬೇಕಾದ ಕೆಲಸಗಳನ್ನು ‘ಆನು ಮಾಡಿದರೆ ಉಂಟು’ ಎಂಬ ಶಕ್ತಿ ಸಾಹಸಗಳಿಗೆ ವರ್ಗಾಯಿಸಿದ ಫಲವೇ ಜಟಿಲವಾದ ‘ರಾಸಾಯನಿಕ ಗೊಬ್ಬರಗಳು ಮತ್ತು ಆಧುನಿಕ ಕೃಷಿ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.