ಸೋರೆಕಾಯಿ ಇಂದು ಸಾಕಷ್ಟು ಬೇಡಿಕೆಯುಳ್ಳ ತರಕಾರಿ. ತಂಪು ಗುಣವನ್ನು ಹೊಂದಿರುವ ಇದು ದೇಹಕ್ಕೆ ಹಾನಿ ಮಾಡುವ ಕೊಲೆಸ್ಟರಾಲ್ ನಿವಾರಕವೂ ಹೌದು. ಹೃದಯದ ತೊಂದರೆ ಮತ್ತು ಕಾಮಾಲೆ ಕಾಯಿಲೆಯವರಿಗೆ ಬಹಳ ಉಪಕಾರಿ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಮತ್ತು ಧಾರಣೆಯೂ ಇದೆ.
ತರಕಾರಿ ಕೃಷಿ ಅಷ್ಟೇನೂ ಕಷ್ಟದ ಕೆಲಸವಲ್ಲ. ಹಾಗೆಂದು ಕೈಕಟ್ಟಿ ಕುಳಿತರೆ ಯಾವ ತರಕಾರಿ ಸಸ್ಯವೂ ತಾನಾಗಿ ಬೆಳೆದು ಫಲ ಕೊಡಲಾರದು. `ಕೈ ಕೆಸರಾದರೆ ಬಾಯಿ ಮೊಸರು~ ಎಂಬ ನಾಣ್ಣುಡಿಯಂತೆ ಆಸಕ್ತಿ, ಸರಿಯಾದ ಮಾಹಿತಿ ಮತ್ತು ನಿರಂತರ ಶ್ರಮ, ಕಾಳಜಿ ಇದ್ದರೆ ತರಕಾರಿ ಕೃಷಿಯಿಂದಲೂ ಉತ್ತಮ ಫಸಲು ಪಡೆಯಬಹುದು ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ರಾಮಕುಂಜ ಗ್ರಾಮದ ಪ್ರಗತಿಪರ ರೈತರಾದ ಬಾಂತೊಟ್ಟು ಪೂವಪ್ಪ ಕುಲಾಲ್.
ಇವರು ಸುಮಾರು ಹತ್ತು ವರ್ಷದಿಂದ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಸಂಪೂರ್ಣ ಸಾವಯವ ಕೃಷಿಯನ್ನೇ ಅನುಸರಿಸಿ ಯಶಸ್ಸು ಪಡೆದಿದ್ದಾರೆ. ಮೊದಲು ಗಾಣಂತಿ ವೆಂಕಪ್ಪ ಗೌಡರ ಮನೆಯಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು.
ಅಲ್ಲಿ ಪಡೆದ ಅನುಭವದಿಂದ ಆಸಕ್ತಿ ಹೊಂದಿ ತಮ್ಮದೇ ಆದ ಮುಕ್ಕಾಲು ಎಕರೆ ಜಾಗದಲ್ಲಿ ಸ್ವತಃ ಶ್ರಮವಹಿಸಿ ವಿವಿಧ ತರಕಾರಿ, ವೀಳ್ಯದೆಲೆ, ಅಡಿಕೆ, ತೆಂಗು ಇತ್ಯಾದಿ ಬೆಳೆಯಲು ಪ್ರಾರಂಭಿಸಿದರು. ಸುಮಾರು ಹತ್ತು ವರ್ಷದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧದ ಸದಸ್ಯರಾಗಿದ್ದುದು ಕೂಡ ಇವರಿಗೆ ಸಾಕಷ್ಟು ಸಹಾಯ ಮಾಡಿತು.
ತಮ್ಮ ಜಮೀನಿನಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಸೋರೆಕಾಯಿ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ. ಇದಕ್ಕಾಗಿ ಬೀಜ ಬಿತ್ತಿ ಸಸಿ ಮೇಲೆ ಬರುತ್ತಿದ್ದಂತೆಯೇ ಅವುಗಳಿಗೆ ಆಧಾರ ಕೊಟ್ಟು ಚಪ್ಪರಕ್ಕೆ ಹಬ್ಬಿಸಿದರು. ಬುಡಕ್ಕೆ ಹಸಿರುಸೊಪ್ಪು, ಕೊಟ್ಟಿಗೆ ಗೊಬ್ಬರ, ಬೂದಿ, ಸೆಗಣಿ ಮತ್ತು ಕಹಿಬೇವಿನ ಹಿಂಡಿಯನ್ನು ಕೊಡುತ್ತಾ ಬಂದರು.
ಇವರ ಸಾವಯವ ವಿಧಾನ ಹೀಗಿದೆ. 5 ಕಿಲೊ ಕಹಿಬೇವಿನ ಹಿಂಡಿಗೆ ಎಂಟು ಕಿಲೊ ಸೆಗಣಿ ಸೇರಿಸುತ್ತಾರೆ. ಅದಕ್ಕೆ ನೂರು ಲೀಟರ್ ನೀರು ಮಿಶ್ರ ಮಾಡಿ ಪ್ಲಾಸ್ಟಿಕ್ ಡ್ರಂನಲ್ಲಿ 48 ದಿನ ಇಡುತ್ತಾರೆ. ನಂತರ ಈ ಮಿಶ್ರಣಕ್ಕೆ ಎರಡು ಪಟ್ಟು ನೀರು ಸೇರಿಸಿ ಸಸ್ಯಗಳ ಬುಡಕ್ಕೆ ಕ್ರಮಬದ್ಧವಾಗಿ ಹಾಕಿ ಚೆನ್ನಾಗಿ ನೀರುಣಿಸುತ್ತಾರೆ. ಗಿಡಗಳಿಗೆ ತಿಂಗಳಿಗೊಮ್ಮೆ ಹಟ್ಟಿಗೊಬ್ಬರ ಕೊಡುತ್ತಾರೆ.
ಇದಲ್ಲದೆ ಸಸ್ಯಗಳಿಗೆ ರೋಗ ಬಾರದಂತೆ ತಡೆಯಲು ಯಾವುದೇ ರಾಸಾಯನಿಕ ಸಿಂಪಡಿಸುವುದಿಲ್ಲ. ಸಸ್ಯಗಳಿಗೆ ಸಿಂಪಡಿಸುವುದಕ್ಕಾಗಿ ಸಾವಯವ ರೀತಿಯಲ್ಲಿಯೇ ಔಷಧಿಯನ್ನು ತಯಾರಿಸುತ್ತಾರೆ.
ಇದಕ್ಕಾಗಿ ಹೇರಳ ಕ್ರಿಮಿನಾಶಕ ಗುಣ ಹೊಂದಿದ ಕಾಸರಕ್ಕಾನ ಮರದ ಎಲೆ, ಕಹಿಬೇವಿನ ಹಿಂಡಿ ಮತ್ತು ಆಟಿಸೋಗೆ ಇವನ್ನು ಜಜ್ಜಿ ಐದು ಲೀಟರು ನೀರು ಸೇರಿಸಿ ಹಿಂಡಿ ರಸ ತೆಗೆದು ಇದಕ್ಕೆ ನೂರು ಲೀಟರು ನೀರು ಸೇರಿಸಿ ವಾರಕ್ಕೊಮ್ಮೆ ಸಸ್ಯಗಳಿಗೆ ಸಿಂಪಡಿಸುತ್ತಾರೆ. ಈ ರೀತಿ ಮಾಡುವುದರಿಂದ ಗಿಡವು ರೋಗ ಮುಕ್ತವಾಗುವುದರ ಜೊತೆಗೆ ಚೆನ್ನಾಗಿ ಚಿಗುರಿ ನಳನಳಿಸಿ ಉತ್ತಮ ಇಳುವರಿ ಬರುತ್ತದೆ ಎಂದು ತಮ್ಮ ಬೇಸಾಯದ ಬಗ್ಗೆ ಮಾಹಿತಿ ನೀಡುತ್ತಾರೆ.
ಪ್ರತೀ ವಾರ ಸ್ಥಳೀಯ ಪೇಟೆಯಲ್ಲಿ ನಡೆಯುವ ಸಂತೆಗೆ ತಾವು ಬೆಳೆದ ತರಕಾರಿ ಒಯ್ದು ಮಾರಿ ಉತ್ತಮ ಧಾರಣೆ ಪಡೆಯುತ್ತಿದ್ದಾರೆ. ಸಾವಯವದಲ್ಲಿ ಬೆಳೆಸಿದ್ದರಿಂದ ಇವರ ತರಕಾರಿಗಳಿಗೆ ಉತ್ತಮ ಬೇಡಿಕೆ ಮತ್ತು ಧಾರಣೆ ಇದ್ದು ಸ್ಥಳೀಯರು ಮನೆಗೇ ಬಂದು ಕೊಂಡೊಯ್ಯುವುದೂ ಇದೆ.
ಆಸಕ್ತ ರೈತರಿಗೆ ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡುತ್ತ ಸ್ಫೂರ್ತಿ ತುಂಬುತ್ತಿದ್ದಾರೆ. ಇವರ ಪತ್ನಿ ಕಮಲ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ್ದ್ದಿದರೆ, ಮಕ್ಕಳೂ ಕೃಷಿಯಲ್ಲಿ ಆಸಕ್ತಿ ಹೊಂದಿದ್ದಾರೆ. ಅದು ಇವರ ಉತ್ಸಾಹವನ್ನು ನೂರ್ಮಡಿಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.