ADVERTISEMENT

ನಕಲಿ ಬೀಜಗಳಿಂದ ಬ್ಯಾಡಗಿಗೆ ಕುತ್ತು: ಎಚ್ಚರ ವಹಿಸಲು ರೈತರಿಗೆ ಸಲಹೆ

ಮೆಣಸಿನಕಾಯಿ ವ್ಯಾಪಾರಿಗಳ ಆತಂಕ, ಎಚ್ಚರ ವಹಿಸಲು ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 11:47 IST
Last Updated 6 ಫೆಬ್ರುವರಿ 2021, 11:47 IST
ಬ್ಯಾಡಗಿ ಮೆಣಸಿನಕಾಯಿ
ಬ್ಯಾಡಗಿ ಮೆಣಸಿನಕಾಯಿ   

ಹುಬ್ಬಳ್ಳಿ: ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಬ್ಯಾಡಗಿ ಮೆಣಸಿನಕಾಯಿ ಬೆಳೆಯುವ ರೈತರಿಗೆ ನಕಲಿ ಬೀಜಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಬ್ಯಾಡಗಿ ತಳಿಯೇ ನಾಶವಾಗುವ ಭೀತಿ ಎದುರಾಗಿದೆ ಎಂದು ಇಲ್ಲಿನ ಎಪಿಎಂಸಿ ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ ಜಗದೀಶಗೌಡ ಪಾಟೀಲ ಆತಂಕ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಮರಗೋಳದ ಎಪಿಎಂಸಿಯಲ್ಲಿ ಪ್ರತಿ ಸೋಮವಾರ, ಗುರುವಾರ ಮತ್ತು ಶನಿವಾರ ಒಣಮೆಣಸಿನಕಾಯಿ ಆವಕ ನಡೆಯಲಿದ್ದು, ಒಂದು ವಾರಕ್ಕೆ ಎರಡೂವರೆ ಲಕ್ಷ ಚೀಲಗಳು ಬರುತ್ತವೆ. ಅದರಲ್ಲಿ ಗರಿಷ್ಠವೆಂದರೂ 10 ಸಾವಿರ ಚೀಲಗಳು ಮಾತ್ರ ನೈಜ ಬ್ಯಾಡಗಿ ಮೆಣಸಿನಕಾಯಿ ಇರುತ್ತವೆ. ಒಂದು ಅಥವಾ ಎರಡು ಬ್ಯಾಡಗಿ ಮೆಣಸಿನಕಾಯಿ ಚೀಲಗಳಿಗಷ್ಟೇ ಗರಿಷ್ಠ ಬೆಲೆ ಲಭಿಸಿದರೆ ಅದು ದೊಡ್ಡ ಸುದ್ದಿಯಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕಂಪನಿಗಳು ಹಾಗೂ ಕಿಡಿಗೇಡಿಗಳು ರೈತರಿಗೆ ನಕಲಿ ಬ್ಯಾಡಗಿ ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮಾರುಕಟ್ಟೆಗೆ ಎಷ್ಟೇ ನಕಲಿ ತಳಿಗಳು ಬಂದರೂ ನೈಜ ಬ್ಯಾಡಗಿ ಮೆಣಸಿನಕಾಯಿಯಷ್ಟು ಗುಣಮಟ್ಟ ಹೊಂದಲು ಸಾಧ್ಯವಿಲ್ಲ. ರೈತರು ನಕಲಿ ಬೀಜಗಳನ್ನು ಖರೀದಿಸುತ್ತಿರುವ ಪರಿಣಾಮ ಸಿಗಬೇಕಾದಷ್ಟು ಇಳುವರಿಯೂ ಲಭಿಸುತ್ತಿಲ್ಲ. ನಕಲಿ ಬೀಜಗಳ ಅರಿವಿಲ್ಲದೆ ಮುಗ್ದ ರೈತರು ನಷ್ಟ ಅನುಭವಿಸುತ್ತಿದ್ದಾರೆ’ ಎಂದರು.

ADVERTISEMENT

’ಬಳ್ಳಾರಿ, ರಾಯಚೂರು, ಕರ್ನೂಲ್‌ನಲ್ಲಿ ಮೆಣಸಿನಕಾಯಿ ಬೆಳೆಯುವ ರೈತರ ನೇರವಾಗಿ ಅಣ್ಣಿಗೇರಿ, ಕುಂದಗೋಳ ಮತ್ತು ಸುತ್ತಮುತ್ತಲ ಹಳ್ಳಿಗಳ ರೈತರಲ್ಲಿ ಬೀಜಗಳನ್ನು ಖರೀದಿಸಿ ಉತ್ತಮ ಬೆಳೆ ಪಡೆಯುತ್ತಿದ್ದಾರೆ. ಮೂರ್ನಾಲ್ಕು ವರ್ಷಗಳಿಂದ ರೋಣ ತಾಲ್ಲೂಕಿನ ಮಲ್ಲಾಪುರ, ಬೆಳವಣಿಕಿ, ಸೂಡಿ, ಯಾವಗಲ್‌, ಬಳಗಾನೂರು ಸೇರಿದಂತೆ ಹಲವು ಗ್ರಾಮಗಳ ರೈತರು ಹುಬ್ಬಳ್ಳಿ ಹಾಗೂ ಬ್ಯಾಡಗಿಯಲ್ಲಿ ಚಿಲ್ಲರೆ ಬೀಜಗಳನ್ನು ಖರೀಸುತ್ತಿದ್ದಾರೆ. ಇದರಿಂದ ಇಳುವರಿಯೂ ಚೆನ್ನಾಗಿ ಬರುತ್ತಿಲ್ಲ. ರೈತರಿಗೂ ಲಾಭವಿಲ್ಲ’ ಎಂದರು.

ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ, ಉಪಾಧ್ಯಕ್ಷ ಶಂಕರ ನೇಗಿನಹಾಳ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಸಂಘದಿಂದಲೇ ಮಾರಾಟಕ್ಕೆ ಚಿಂತನೆ

ಬ್ಯಾಡಗಿ ತಳಿಯ ಖ್ಯಾತಿ ಉಳಿಸಲು, ಇದನ್ನು ವಿಶ್ವವ್ಯಾಪಿ ಇನ್ನಷ್ಟು ರಫ್ತು ಹೆಚ್ಚಿಸಲು ರೈತರಿಗೆ ಅಸಲಿ ಬೀಜಗಳನ್ನು ವಿತರಿಸಲು ಎಪಿಎಂಸಿ ವ್ಯಾಪಾರಸ್ಥರ ಸಂಘದಿಂದಲೇ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ. ಈ ಕುರಿತು ಬ್ಯಾಡಗಿ ಹಾಗೂ ಹುಬ್ಬಳ್ಳಿಯಲ್ಲಿ ಮುಂಬರುವ ದಿನಗಳಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೆಣಸಿನಕಾಯಿ ವ್ಯಾಪಾರಿಯೂ ಆದ ಜಗದೀಶಗೌಡ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.