ADVERTISEMENT

ಬನವಾಸಿ ಬದಿಯಲ್ಲೊಂದು ಕೃಷಿ ಪಾಠಶಾಲೆ

ಸಂಧ್ಯಾ ಹೆಗಡೆ
Published 5 ನವೆಂಬರ್ 2018, 19:45 IST
Last Updated 5 ನವೆಂಬರ್ 2018, 19:45 IST
a
a   

ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕಿನ ಬಂಡಿ ಓಡಿಸುತ್ತಿದ್ದ ಹಾವೇರಿ ಜಿಲ್ಲೆ ಮಡ್ಲೂರಿನ ಹನುಮಂತಪ್ಪ ಅವರನ್ನು ಬಡತನ ಇನ್ನಷ್ಟು ಹಿಂಡಿತು. ನಿತ್ಯ ಸಿಗುವ ಕೆಲಸವೂ ಅಪರೂಪವಾಗಿ ಊಟಕ್ಕೇನು ಎನ್ನುವ ಪ್ರಶ್ನೆ ಕಾಡತೊಡಗಿತು. ಗದ್ದೆ ಕೆಲಸ ಹುಡುಕುತ್ತ ಬಂದ ಅವರಿಗೆ, ಬನವಾಸಿಯ ಗೌಡರ ಹೊಲ ಆಶ್ರಯ ನೀಡಿತು. ಈ ಹೊಲ ಮುಂದೊಮ್ಮೆ ತನ್ನದೇ ಕೃಷಿ ಪಾಠಶಾಲೆ ಆಗಬಹುದೆಂದು ಅವರು ಒಂದು ಕ್ಷಣವೂ ಯೋಚಿಸಿರಲಿಲ್ಲ.

ಹೌದು, 1980ರ ದಶಕದಲ್ಲಿ ಕೂಲಿ ಮಾಡಲು ಕದಂಬರ ರಾಜಧಾನಿ, ಶಿರಸಿ ತಾಲ್ಲೂಕಿನ ಬನವಾಸಿಗೆ ಬಂದಿದ್ದ ಹನುಮಂತಪ್ಪ ಅವರು, ತಾವು ಕೂಲಿ ಮಾಡಿದ ಗೌಡರ ಭೂಮಿಯನ್ನೇ ಖರೀದಿಸಿ, ಮೂರು ಎಕರೆ ಜಮೀನಿನಲ್ಲಿ ತರಹೇವಾರಿ ಬೆಳೆ ತೆಗೆಯುತ್ತಿದ್ದಾರೆ. ಈಗ ಅವರ ಹೊಲದಲ್ಲಿರುವ ಬೆಳೆ ವೈವಿಧ್ಯ ಎಣಿಸುತ್ತ ಹೋದರೆ ಐವತ್ತು ದಾಟುತ್ತದೆ.

‘ಮೂಲತಃ ನಾನು ರೈತನಲ್ಲ, ಆದರೆ ಕೃಷಿ ಬಗ್ಗೆ ನನಗೆ ಗೊತ್ತಿತ್ತು. ಸ್ವಂತ ಜಮೀನು ಖರೀದಿಸಿದ ಮೇಲೆ ಮೊದಲ ವರ್ಷವೇ 25 ಜಾತಿಯ ಬೆಳೆ ಬೆಳೆದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಇದಕ್ಕೆ ನೆರವಾದರು. ಅವರೊಂದಿಗೆ ಮಹಾರಾಷ್ಟ್ರಕ್ಕೆ ಅಧ್ಯಯನ ಪ್ರವಾಸ ಹೋದಾಗ, ಅಲ್ಲಿನ ರೈತರೊಬ್ಬರು ಬೆಳೆದಿದ್ದ ಮಿಶ್ರ ಬೆಳೆ ನನ್ನನ್ನು ಸೆಳೆಯಿತು. ಇದಾಗಿ ಎರಡೇ ವರ್ಷಗಳಲ್ಲಿ ನನ್ನ ಹೊಲದಲ್ಲಿ ಅರವತ್ತು ಜಾತಿಯ ಬೆಳೆ ಬೆಳೆದೆ’ ಎನ್ನುತ್ತಾರೆ ಹನುಮಂತಪ್ಪ.

ADVERTISEMENT

ಮಿಶ್ರ ಬೆಳೆಯೇ ಇವರ ಕೃಷಿಯ ಗೆಲುವಿನ ಗುಟ್ಟು. ಬೆಂಡೆ ಬೀಜದ ಜತೆಗೆ ಮೂಲಂಗಿ ಬಿತ್ತುತ್ತಾರೆ. ‘20–25 ದಿನಕ್ಕೆ ಮೂಲಂಗಿ ಕಿತ್ತು ಮಾರಾಟ ಮಾಡುತ್ತಾರೆ. ಅಷ್ಟೊತ್ತಿಗೆ ಬೆಂಡೆ ಗಿಡ ಕಾಯಿ ಬಿಡುವ ಹಂತಕ್ಕೆ ಬರುತ್ತದೆ. ಅದರ ಬದಿಯಲ್ಲೇ ಶೇಂಗಾ, ಸಣ್ಣ ಜೋಳ ಬಿತ್ತಿ, ಅವುಗಳ ನಡುವೆ ಹರಿವೆ, ಸಬ್ಬಸಿಗೆ, ಮೆಂತೆ ಸೊಪ್ಪು ಬೆಳೆಯುತ್ತಾರೆ. ದಾರಿ ಅಂಚಿನಲ್ಲಿ ನಾಟಿ ಮಾಡಿರುವ ಚೌಳಿಕಾಯಿ ಗಿಡಗಳು ಮೈತುಂಬ ಕಾಯಿ ಬಿಡುತ್ತವೆ. ‘ಇವೆಲ್ಲ ಪ್ರತಿ ವಾರ ಆದಾಯ ತಂದುಕೊಡುವ ಬೆಳೆಗಳು’ ಎನ್ನುತ್ತ ಅವರು, ಬದಿಯಲ್ಲಿ ಬಳ್ಳಿಯನ್ನು ಮುತ್ತಿದ್ದ ಮೀಟರ್ ಅವರೆಯನ್ನು ತೋರಿಸಿದರು.

‘ಮಧ್ಯವರ್ತಿಗಳಿಗೆ ತರಕಾರಿ ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ. ಶಿರಸಿ, ಸೊರಬ, ದಾಸನಕೊಪ್ಪ, ಬನವಾಸಿ ಇಲ್ಲೆಲ್ಲ ನಮ್ಮ ಹೊಲದ ತರಕಾರಿಗಳು ಸಿಗುತ್ತವೆ. ನನ್ನ ಅರ್ಧಾಂಗಿ ಕಮಲಾ ಮಾರಾಟಕ್ಕೆ ಕುಳಿತುಕೊಳ್ಳುತ್ತಾರೆ. ನಾವೇ ಬೆಳೆಗಾರರು ಮತ್ತು ಮಾರಾಟಗಾರರೂ ಆಗಿರುವುದರಿಂದ ಬಂದಿದ್ದೆಲ್ಲ ಲಾಭವೇ' - ಮತ್ತೆ ತರಕಾರಿ ಮಾರಾಟದ ಪ್ರಕ್ರಿಯೆಯತ್ತ ಅವರ ಮಾತು ಸಾಗಿತ್ತು.

‘ಹೊಲದಲ್ಲಿ ಓಡಾಡಲು ದಾರಿ ಬೇಕಲ್ಲ, ಮುಂಗಾರು ಶುರುವಾಗುತ್ತಲೇ ಅದರ ಬದಿಯಲ್ಲಿ ಡೇರೆ ಗಡ್ಡೆ ನಾಟಿ ಮಾಡುತ್ತೇನೆ. ಸುಮಾರು 100 ಮೀಟರ್ ಉದ್ದದಲ್ಲಿ 380 ಡೇರೆ ಗಿಡಗಳು ಚಿಗುರುತ್ತವೆ. ಶ್ರಾವಣ ಹೂವಿನ ತಿಂಗಳು. ಈ ಹೊತ್ತಿಗೆ ಸರಿಯಾಗಿ ಹೂ ಬಿಡುವ ಗಿಡಗಳು ಪ್ರತಿ ವರ್ಷ ₹ 18ರಿಂದ 22ಸಾವಿರದವರೆಗೆ ಆದಾಯ ಕೊಡುತ್ತವೆ. 28 ಬಣ್ಣದ ಹೂಗಳಿವೆ. ಮಧ್ಯವರ್ತಿಗಳು ₹ 5ಕ್ಕೆ ಎರಡು ಹೂ ಖರೀದಿಸುತ್ತಾರೆ. ಕಮಲಾ ₹ 5ಕ್ಕೆ ಒಂದು ಹೂ ಮಾರಾಟ ಮಾಡುತ್ತಾಳೆ. ನಡುವೆ ಒಂದು ಮಳೆ ಸುರಿದರಂತೂ ನವರಾತ್ರಿವರೆಗೆ ಹೂವಿಗೆ ಕೊರತೆಯಿಲ್ಲ’ ಎಂದ ಹನುಮಂತಪ್ಪ, ಮಾತನ್ನು ಸಿರಿಧಾನ್ಯದ ಕಡೆಗೆ ಹೊರಳಿಸಿದರು.

ಅವರ ಹೊಲದಲ್ಲಿನ ಓಡಾಟವೇ ಉದ್ಯಾನ ಸುತ್ತಿದ ಅನುಭವ. ಎಲ್ಲೂ ಕಳೆ ಗಿಡಗಳು ಕಾಣಸಿಗಲಾರವು. ಅರೆ ಬಯಲು ಸೀಮೆಯ ಭೂಮಿಯಲ್ಲೂ ಓಲಾಡುವ ಜೋಳದ ತೆನೆಗಳು ತಣ್ಣನೆ ಗಾಳಿ ಬೀಸುತ್ತವೆ. ಹೀರೆ, ತೊಂಡೆ, ಹಾಗಲ ಚಪ್ಪರಗಳು ನೆರಳಾಗುತ್ತವೆ. ಪೆಟ್ಟಿಗೆಯಲ್ಲಿರುವ ಜೇನು ನೊಣಗಳು ಹಿನ್ನೆಲೆ ಸಂಗೀತ ನೀಡುತ್ತವೆ.

ಮಳೆಯೇ ಆಧಾರ
‘ನಮ್ಮ ಜಮೀನಿನಲ್ಲಿ ಕೆರೆ, ಬಾವಿ, ಹಳ್ಳ, ಕೊಳವೆಬಾವಿ ಯಾವುದೊಂದೂ ಇಲ್ಲ. ಮಳೆಯೇ ನಮಗೆ ನೀರಾವರಿ. ಚಳಿಗಾಲಕ್ಕೆ ತರಕಾರಿ ಗಿಡಗಳು ಚೆನ್ನಾಗಿ ಕಾಯಿ ಕಚ್ಚುತ್ತವೆ. ಗದ್ದೆಯಿಂದ ಅರ್ಧ ಕಿ.ಮೀ ದೂರದ ಹಳ್ಳದಿಂದ ರಿಕ್ಷಾ ಮೇಲೆ 200 ಲೀಟರ್ ಕ್ಯಾನ್‌ನಲ್ಲಿ ವಾರಕೊಮ್ಮೆ ನೀರು ತಂದು ಗಿಡಗಳಿಗೆ ಹಾಕುತ್ತೇವೆ. ಮಾರ್ಚ್‌ವರೆಗೆ ಬೆಳೆ ತೆಗೆಯಲು ತೊಂದರೆಯಿಲ್ಲ. ಮತ್ತೆ ಮಳೆಗಾಲದವರೆಗೆ ಭೂಮಿಗೆ ಬಿಡುವು’ ಎಂದ ಅವರು, ಗಂಗಾ ಕಲ್ಯಾಣ ಯೋಜನೆಯಡಿ ನೀರಾವರಿ ವ್ಯವಸ್ಥೆ ಮಾಡಿಸಿಕೊಡುವಂತೆ ಅಧಿಕಾರಸ್ಥರ ಬಳಿ ವಿನಂತಿಸಿಕೊಂಡು ಸಾಕಾಗಿ ಹೋಗಿದೆ ಎಂದು ಕೊಂಚ ಬೇಸರಿಸಿಕೊಂಡರು.

ಹನುಮಂತಪ್ಪ ಅವರ ಬಳಿ ಎತ್ತುಗಳಿಲ್ಲ. ಮೇ ಕೊನೆಯಲ್ಲಿ ಟ್ರ್ಯಾಕ್ಟರ್ ಮೂಲಕ ಒಮ್ಮೆ ಇಡೀ ಗದ್ದೆ ಹೂಳಿಸಿದರೆ, ನಂತರದ ಕೆಲಸವೆಲ್ಲ ಕುಟುಂಬದ ಆರು ಸದಸ್ಯರದ್ದೇ.

‘ಬರ್ಗು, ಹೂದ್ಲು, ಟೆಫ್, ಸಿಯಾ ಮೊದಲಾದ ಸಿರಿಧಾನ್ಯಗಳ ಪ್ರಯೋಗ ಮಾಡಿದ್ದೇನೆ. ಅಲಸಂದಿ, ಸೂರ್ಯಕಾಂತಿ, ಸಜ್ಜೆ, ನವಣೆ, ಶಾಮೆ, ಹತ್ತಿ, ಬಿಳಿ ಅವರೆ, ಕನಕಾಂಬರ, ಸುಗಂಧರಾಜ, ಸೋಯಾಬಿನ್, ಮೆಕ್ಕೆ ಜೋಳ, ಬಿಜಾಪುರ ಜೋಳ ಹೀಗೆ ಬೆಳೆಯದ ಬೆಳೆಗಳಿಲ್ಲ. ಕೊಟ್ಟಿಗೆ ಗೊಬ್ಬರದ ಬಳಕೆ ಹೆಚ್ಚು, ರಾಸಾಯನಿಕ ಬಳಕೆ ಅತಿ ಕಡಿಮೆ. ಧರೆಯ ಬದಿಯಲ್ಲಿ ಹುಣಸೆ, ಸಾಗುವಾನಿ, ಅಂಟುವಾಳದಂತಹ ಮರಗಳು ಇವೆ. ಸರ್ವಋತು ನೀರು ಸಿಕ್ಕರೆ ಬಂಗಾರವನ್ನೇ ಬೆಳೆಯಬಲ್ಲೆ’ ಎನ್ನುವಾಗ ಅವರೊಳಗಿನ ಆತ್ಮವಿಶ್ವಾಸ ನಮ್ಮನ್ನು ದಿಗಿಲಾಗಿಸುತ್ತದೆ.

ಬೆಳಿಗ್ಗೆ 6 ಗಂಟೆಗೆ ಹೊಲಕ್ಕೆ ಬರುವ ಹನುಮಂತಪ್ಪ, ನಡುವೆ 8.30ರ ವೇಳೆಗೆ ನಾಲ್ಕು ಆಕಳುಗಳು ನೀಡುವ ಹಾಲನ್ನು ಡೇರಿಗೆ ತಲುಪಿಸಲು ಮನೆಗೆ ಹೋಗುತ್ತಾರೆ. ಮತ್ತೆ ಜಮೀನಿಗೆ ಬಂದರೆ, ಮರಳುವುದು ಕತ್ತಲಾಗುವ ಹೊತ್ತಿಗೆ. ಊಟವೂ ಹೊಲದ ಮನೆಯಲ್ಲೇ. ಇಲ್ಲಿಂದ 8 ಕಿ.ಮೀ ದೂರದಲ್ಲಿ ತೀರಾ ಇತ್ತೀಚೆಗೆ, 6 ಎಕರೆ ಜಮೀನನನ್ನು ಲೀಸ್‌ನಲ್ಲಿ ತೆಗೆದುಕೊಂಡಿರುವ ಅವರ ಕುಟುಂಬ, ಅಲ್ಲಿ ಅನಾನಸ್, ಶುಂಠಿ, ಕಲ್ಲಂಗಡಿ, ಬಾಳೆ ಬಿತ್ತನೆ ಮಾಡಿದೆ.

‘ರೈತರು ಒಂದೇ ಬೆಳೆಯನ್ನು ನಂಬಿ ಕೃಷಿ ನಡೆಸಬಾರದು. ಆರೆಂಟು ಬೆಳೆ ಬೆಳೆದರೆ, ಒಂದೆರಡು ಕೈಕೊಟ್ಟರೂ ಇನ್ನುಳಿದವು ಕೈ ಹಿಡಿಯುತ್ತವೆ, ಪ್ರಕೃತಿಯ ನಡೆ ನಮಗೆ ಅರ್ಥವಾಗದು. ಅತಿವೃಷ್ಟಿಯಾದರೂ, ಅನಾವೃಷ್ಟಿಯಾದರೂ ಒಂದಿಷ್ಟು ಆದಾಯಕ್ಕೆ ಕೊರತೆಯಿಲ್ಲ. ನಾವು ಸೋಮಾರಿಯಾಗಬಾರದು. ಪ್ರಯೋಗಶೀಲತೆ ನಮ್ಮ ಕನಸಾಗಬೇಕು’ ಎಂದು ಅವರು ಸಲಹೆ ಮಾಡಿದರು.

ಬನವಾಸಿ ಮಧುಕೇಶ್ವರ ದೇವಾಲಯದ ಧರ್ಮದರ್ಶಿ ಮಂಡಳಿ ಸದಸ್ಯರಾಗಿರುವ ಹನುಮಂತಪ್ಪ, ದೇವಾಲಯದ ಚಟುವಟಿಕೆಗಳಲ್ಲೂ ಸಕ್ರಿಯರು. ವಾರಕ್ಕೆ ಕನಿಷ್ಠ 4 ತಂಡಗಳಾದರೂ ಅವರ ಹೊಲಕ್ಕೆ ಕೃಷಿ ಪ್ರವಾಸಕ್ಕೆ ಬರುತ್ತವೆ. ಎಲ್ಲವನ್ನೂ ಸಾವಧಾನದಿಂದ ನಿಭಾಯಿಸುವ ಅವರಿಗೆ ಕೃಷಿ ಸಾಧಕ, ಶ್ರೇಷ್ಠ ಕೃಷಿಕ ಇನ್ನೂ ಹಲವಾರು ಪ್ರಶಸ್ತಿಗಳು ದೊರೆತಿವೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.