ADVERTISEMENT

ಬದುಕಿಗೆ ಸಿಹಿಯಾದ ಖಾರದ ಮೆಣಸಿನಕಾಯಿ!

ಎಂ.ಎಸ್.ಶೋಭಿತ್ ಮೂಡ್ಕಣಿ
Published 10 ಸೆಪ್ಟೆಂಬರ್ 2018, 19:30 IST
Last Updated 10 ಸೆಪ್ಟೆಂಬರ್ 2018, 19:30 IST
ಮೆಣಸು
ಮೆಣಸು   

ಹುಕ್ಕೇರಿ ತಾಲೂಕಿನಲ್ಲಿ ಹಿರಣ್ಯಕೇಶಿ ಹಾಗೂ ಘಟಪ್ರಭಾ ನದಿಗಳು ಹರಿದರೂ ಬಹುತೇಕ ಗ್ರಾಮಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿವೆ. ಆ ಗ್ರಾಮಗಳಲ್ಲಿ ರಕ್ಷಿಯೂ ಒಂದು.

ರಕ್ಷಿ ಗ್ರಾಮ ಹಿರಣ್ಯಕೇಶಿ ನದಿಯಿಂದ ಎರಡ್ಮೂರು ಕಿಮೀ ದೂರದಲ್ಲಿದೆ. ಆದರೆ, ನದಿ ಮಳೆಗಾಲದಲ್ಲಿ ಮಾತ್ರ ಹರಿಯುವುದರಿಂದ ಈ ಭಾಗದ ರೈತರು ತರಕಾರಿ ಬೆಳೆಯಲು ಹಿಂದೇಟು ಹಾಕುತ್ತಾರೆ. ಆದರೆ, ರೈತ ನಾಗರಾಜ ಹುಂಡೇಕಾರ, ಇರುವ ನೀರಿನಲ್ಲೇ ತುಸು ಶ್ರಮವಹಿಸಿ ಮೂರ್ನಾಲ್ಕು ವರ್ಷಗಳಿಂದ ಬಗೆ ಬಗೆಯ ತರಕಾರಿ ಬೆಳೆಯುತ್ತಿದ್ದಾರೆ. ಆದರೆ, ಅವರನ್ನು ಕೈಹಿಡಿದಿರುವುದು ಹಸಿ ಮೆಣಸಿನಕಾಯಿ ಕೃಷಿ.

ನಾಗರಾಜ ಅವರದ್ದು ಒಟ್ಟು ಐದು ಎಕರೆ ಜಮೀನು. ಅದು ಎತ್ತರ ಪ್ರದೇಶದಲ್ಲಿರುವ ಮಡ್ಡಿ (ಮಸಾರಿ) ಭೂಮಿ. ಅದರಲ್ಲಿ ನಾಲ್ಕು ಎಕರೆಯಲ್ಲಿ ಸೋನಲ್ ಎಂಬ ಹಸಿ ಮೆಣಸಿನಕಾಯಿ ತಳಿ ಬೆಳೆದಿದ್ದಾರೆ. ಉಳಿದ ಜಮೀನಿನಲ್ಲಿ ಫಾಲಿಹೌಸ್ ನಿರ್ಮಿಸಿ ವಿವಿಧ ಬಗೆಯ ತರಕಾರಿ ಸಸಿಗಳನ್ನು ನಾಟಿ ಮಾಡುತ್ತಾರೆ.

ADVERTISEMENT

ತರಕಾರಿ ಬೆಳೆಯುವುದಕ್ಕಾಗಿಯೇ ಈ ಹಿಂದೆ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿದರು. ನೀರು ಸಿಗಲಿಲ್ಲ. ಹಾಕಿದ ಹಣ ವ್ಯರ್ಥವಾಯಿತು. ಆದರೂ ಎದೆಗುಂದದ ನಾಗರಾಜ್, ಪಕ್ಕದ ಊರಿನ ತಗ್ಗು ಪ್ರದೇಶದಲ್ಲಿ ಬಾವಿ ತೋಡಿಸಿ, ಅಲ್ಲಿಂದ ಪೈಪ್‌ಲೈನ್‌ ಅಳವಡಿಸಿ ಜಮೀನಿಗೆ ನೀರಿನ ಸೌಲಭ್ಯ ಮಾಡಿಕೊಂಡಿದ್ದಾರೆ.

ಮೆಣಸಿನಕಾಯಿ ಕೃಷಿ ಮಾಡಿದ್ದು: ಮೆಣಸಿನಕಾಯಿ ಸಸಿ ನಾಟಿಗೆ ಮುನ್ನ ನಾಲ್ಕೂ ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರ, ಮೂರು ಲಾರಿ ಬೂದಿ ಗೊಬ್ಬರ ಹಾಕಿಸಿದರು. ಮಣ್ಣಿಗೆ ಗೊಬ್ಬರ ಹರಗಿಸಿ, ಭೂಮಿ ಹದಗೊಳಿಸುವಾಗ ಫಾಸ್ಟೆಟ್ ರೀಚ್, ಆರ್ಗ್ಯಾನಿಕ್ ಮೆನ್ಯೂರ್ (ಎಕರೆಗೆ 500 ಕೆಜಿ), 40 ಕೆಜಿ ಸಲ್ಪರ್, 60 ಕೆಜಿ ಬೇವಿನಹಿಂಡಿ, ಸೂಕ್ಷ್ಮ ಪೋಷಕಾಂಶ ಗೊಬ್ಬರ, ವಿನಿಕಾಮ್ (ಎಕರೆಗೆ 2 ಕೆಜಿ) ಮಣ್ಣಿಗೆ ಸೇರಿಸಿದರು. ಸಸಿ ನಾಟಿಯಾದ ಬಳಿಕ ಅಮೋನಿಯಂ ಸಲ್ಪೇಟ್ ನೀಡಿದ್ದಾರೆ. ಸಸಿಗಳು ಬೆಳವಣಿಗೆಯ ಆರಂಭದಿಂದಲೂ ಪ್ರತಿದಿನ ಡ್ರಿಫ್ ಮೂಲಕ ನೀರಿನೊಂದಿಗೆ ಗೊಬ್ಬರವನ್ನು ಪೂರೈಸಿದರು.

ಸಸಿ ನಾಟಿ ಮಾಡಿದ ನಾಲ್ಕು ದಿನಗಳ ಬಳಿಕ ಟ್ರೖಕೋಡರ್ಮ, ಸೂಡೋಮಾನಸ್ ಮಿಶ್ರಣ ಮಾಡಿ ಸಸಿಗಳ ಬೇರಿಗೆ ಪೂರೈಕೆ ಮಾಡಿದರು. ನಂತರ ಪ್ರತಿ 15 ದಿನಗಳಿಗೊಮ್ಮೆ ಕೀಟನಾಶಕ ಸಿಂಪಡಣೆ ಮೂಲಕ ಆರೈಕೆ, 50 ದಿನಗಳ ಬಳಿಕ 0.0.50 ಫೋಟ್ಯಾಷ್ ಗೊಬ್ಬರ, ಗ್ರೀನ್ ಮೆರ್ಯಾಕಲ್ ಹಾಕಿದರು. ‘ಸಮರ್ಪಕ ನಿರ್ವಹಣೆ, ಸಕಾಲಕ್ಕೆ ಗೊಬ್ಬರ ಪೂರೈಕೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಪಡೆಯಲು ಸಾಧ್ಯ’ ಎನ್ನುವುದು ನಾಗರಾಜ್ ಅವರ ಅನುಭವದ ನುಡಿ.

ಕಾರ್ಮಿಕರ ಕೊರತೆಗೆ ಪರಿಹಾರ: ಮೆಣಸಿನಕಾಯಿ ಕಟಾವಿಗೆ ಬಂದಾಗ, ಕಾಯಿ ಬಿಡಿಸಲು ಪ್ರತಿ ದಿನ 20ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಬೇಕಿತ್ತು. ಆದರೆ, ನೀರಾವರಿ ಗ್ರಾಮಗಳು ಸಮೀಪವಿರುವುದರಿಂದ, ಎಲ್ಲ ಕಾರ್ಮಿಕರು ಆ ಕಡೆಗೆ ತೆರಳುತ್ತಾರೆ. ದಿನಕ್ಕೆ 150 ರೂಪಾಯಿ ಕೊಟ್ಟರೂ ಆಳುಗಳು ಸಿಗುವುದು ಕಷ್ಟವಾಯಿತು. ಇದನ್ನೆಲ್ಲ ಅರಿತ ನಾಗರಾಜ್, ಪ್ರತಿ ಕೆಜಿ ಮೆಣಸಿನ ಕಾಯಿ ಕಟಾವಿಗೆ ₹3 ರಂತೆ ಗುತ್ತಿಗೆ ನೀಡಿದರು. ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಂಡರು.

ಈಗ 4 ತಿಂಗಳಿನಿಂದ ಮೆಣಸಿನಕಾಯಿ ಕಟಾವು ಮಾಡಿಸುತ್ತಿದ್ದಾರೆ. ಮೊದಮೊದಲು ಮಾರುಕಟ್ಟೆಯಲ್ಲಿ ಕೆಜಿಗೆ ₹15 ರಿಂದ ₹20ವರೆಗೆ ಬೆಲೆ ಸಿಕ್ಕಿತ್ತು. ಈಗ ₹25 ರಿಂದ ₹30ವರೆಗೆ ಮಾರಾಟವಾಗುತ್ತಿದೆ. ಗೊಬ್ಬರ, ಔಷಧ, ಮಲ್ಚಿಂಗ್ ಪೇಪರ್ ಅಳವಡಿಕೆ, ಆಳುಗಳ ಖರ್ಚು, ಮಾರುಕಟ್ಟೆ ಸಾಗಣೆ ವೆಚ್ಚ ಸೇರಿ ಈವರೆಗೆ ಸುಮಾರು ಐದು ಲಕ್ಷ ರೂಪಾಯಿ ಖರ್ಚು ಆಗಿದೆ. ಇಲ್ಲಿಯವರೆಗೆ ಸುಮಾರು 80 ಟನ್ ಮೆಣಸಿನಕಾಯಿ ಇಳುವರಿ ಬಂದಿದೆ. ₹20 ಲಕ್ಷ ಆದಾಯ ಬಂದಿದೆ. ಇನ್ನೂ 20 ಟನ್ ಇಳುವರಿ ಬರುವ ನಿರೀಕ್ಷೆ ಇದೆ ಎಂದು ಕೃಷಿಯ ಸಮಸ್ಯೆಗಳು, ಮಾರುಕಟ್ಟೆ ವಿಚಾರಗಳನ್ನು ನಾಗರಾಜ ವಿವರವಾಗಿ ಹಂಚಿಕೊಳ್ಳುತ್ತಾರೆ

‘ಧಾರಣೆ ಕಡಿಮೆ ಇದ್ದಾಗ ನಾವೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಪರಿಸ್ಥಿತಿ ಇತ್ತು. ಆದರೆ, ಈಗ ಆ ಸಮಸ್ಯೆ ಇಲ್ಲ. ನಮ್ಮ ತೋಟ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿದೆ. ಹೀಗಾಗಿ ವ್ಯಾಪಾರಸ್ಥರು ಹೊಲಕ್ಕೇ ಬಂದು ಖರೀದಿ ಮಾಡುತ್ತಿದ್ದಾರೆ ಎನ್ನುತ್ತಾರೆ’ ನಾಗರಾಜ. ತರಕಾರಿ ಮತ್ತು ಮೆಣಸಿನಕಾಯಿ ಕೃಷಿಯ ಹೆಚ್ಚಿನ ಮಾಹಿತಿಗೆ 9448875641 ಸಂಖ್ಯೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.