ADVERTISEMENT

ವೃತ್ತಿಯಲ್ಲಿದ್ದರೂ, ಕೃಷಿ ಪ್ರವೃತ್ತಿ

ವೈದ್ಯ, ಅಧಿಕಾರಿ, ಉಪನ್ಯಾಸಕರಾಗಿರುವ ಪುರಕುಂಡಿಕೊಪ್ಪದ ಸಹೋದರರು

ರಾಜೇಂದ್ರಪ್ಪ ನಾಯಕ
Published 8 ಜನವರಿ 2019, 6:30 IST
Last Updated 8 ಜನವರಿ 2019, 6:30 IST
ತಾವು ಬೆಳೆದ ಬಾಳೆ ತೋಟದಲ್ಲಿ ಪುರಕುಂಡಿಕೊಪ್ಪದ ನಾಗಭೂಷಣ ಪಾಟೀಲ್ ಕುಟುಂಬ
ತಾವು ಬೆಳೆದ ಬಾಳೆ ತೋಟದಲ್ಲಿ ಪುರಕುಂಡಿಕೊಪ್ಪದ ನಾಗಭೂಷಣ ಪಾಟೀಲ್ ಕುಟುಂಬ   

ಹಂಸಭಾವಿ: ಇಲ್ಲಿಗೆ ಸಮೀಪದ ಪುರಕುಂಡಿಕೊಪ್ಪ ಗ್ರಾಮದ ಸಹೋದರರಾದ ಡಾ. ನಾಗಭೂಷಣ ಪಾಟೀಲ್, ಜಗದೀಶ ಪಾಟೀಲ್ ಮತ್ತು ರುದ್ರಗೌಡ ಪಾಟೀಲ್‌ ಅವರು ಉದ್ಯೋಗ ದೊರೆತರೂ, ‍ಪಿತ್ರಾರ್ಜಿತವಾಗಿ ಬಂದ ಭೂಮಿಯನ್ನು ಪಾಳು ಬಿಡದೇ, ಸಮಗ್ರ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ.

ಡಾ. ನಾಗಭೂಷಣ ಪಾಟೀಲ್ ವೈದ್ಯರಾಗಿದ್ದರೆ, ಜಗದೀಶ ಪಾಟೀಲ್‌ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿ. ಕಿರಿಯ ಸಹೋದರ ರುದ್ರಗೌಡ ಪಾಟೀಲ್ ಉಪನ್ಯಾಸಕರು.ಉದ್ಯೋಗ ಸಿಕ್ಕ ತಕ್ಷಣವೇ ನಗರ ಸೇರಿ, ಜಮೀನನ್ನು ಪಾಳು ಬಿಡುವವರೇ ಹೆಚ್ಚು. ಆದರೆ, ಈ ಸಹೋದರರಿಗೆ ಕೃಷಿ ಅಚ್ಚುಮೆಚ್ಚು.

ತಮಗೆ ಪಿತ್ರಾರ್ಜಿತವಾಗಿ ಬಂದ ಹೊಲದಲ್ಲಿ ಈ ಹಿಂದೆ ಮಳೆಯಾಶ್ರಿತವಾಗಿ ಮೆಕ್ಕೆಜೋಳ, ಹತ್ತಿ, ಭತ್ತ ಬೆಳೆಯಲಾಗುತ್ತಿತ್ತು. ಆಗ ಆದಾಯಕ್ಕಿಂತ ಖರ್ಚು ಬರುತ್ತಿತ್ತು. ಅದಕ್ಕಾಗಿ, ಸಹೋದರರು ನೀರಾವರಿ ಮೂಲಕ ತೋಟಗಾರಿಕೆ ಬೆಳೆ ಬೆಳೆಯಲು ತೀರ್ಮಾನಿಸಿದರು.

ADVERTISEMENT

‘ಮೊದಲಿಗೆ ನಮ್ಮ ಜಮೀನಿನಲ್ಲಿ 5 ಕೊಳವೆಬಾವಿಗಳನ್ನು ಕೊರೆಯಿಸಲಾಯಿತು. ಇದರಿಂದ ನೀರು ಲಭ್ಯವಾಯಿತು. ಸುಮಾರು ₹2.50 ಲಕ್ಷ ವೆಚ್ಚದಲ್ಲಿ ಜಮೀನು ಸಮತಟ್ಟುಗೊಳಿಸಿ, ಹಸನು ಮಾಡಲಾಯಿತು. ನಂತರ ₹25 ಸಾವಿರ ಖರ್ಚು ಮಾಡಿ ಉತ್ತಮ ತಳಿಯ 1,700 ಬಾಳೆ ಸಸಿಗಳನ್ನು ಬೆಂಗಳೂರಿನಿಂದ ತರಿಸಿ, ನಾಟಿ ಮಾಡಿದೆವು. ನಾಟಿ ಮಾಡಿದ 11 ತಿಂಗಳಲ್ಲಿ ಫಲ ಬರಲಾರಂಭಿಸಿತು. ಈಗಾಗಲೇ ಶೇ 80ರಷ್ಟು ಫಸಲು ಬಂದಿದ್ದು, ಇದರಿಂದ ₹2 ಲಕ್ಷ ನಿವ್ವಳ ಲಾಭದ ನಿರೀಕ್ಷೆ ಇದೆ ಎನ್ನುತ್ತಾರೆ ವೈದ್ಯ ಡಾ.ನಾಗಭೂಷಣ ಪಾಟೀಲ್.

ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ₹35 ಸಾವಿರ ಖರ್ಚು ಮಾಡಿ 1,750 ಅಡಿಕೆ ಸಸಿಗಳನ್ನು ತಂದು, ನಾಟಿ ಮಾಡಿದೆವು. ಮಳೆಗಾಲದಲ್ಲಿ ಬಾಳೆಯ ಮಧ್ಯೆ ತರಕಾರಿ ಬೆಳೆದೆವು. ಈ ಟೊಮೆಟೊ ಬೆಳೆಯಲಾಗುತ್ತಿದೆ. ಪಕ್ಕದ ನಾಲ್ಕು ಎಕರೆಯಲ್ಲಿ ಮಾವು, ಮೂರು ಎಕರೆಯಲ್ಲಿ ಚಿಕ್ಕು ಸಸಿಗಳನ್ನು ನಾಟಿ ಮಾಡಲಾಗಿದೆ. ಈ ಎಲ್ಲ ಬೆಳೆಗಳಿಗೂ ಸುಮಾರು ₹2.50 ಲಕ್ಷ ಖರ್ಚು ಮಾಡಿ ಹನಿ ನೀರಾವರಿ ಮಾಡಿದ್ದೇವೆ. ಇದರಿಂದಾಗಿ, ನೀರಿನ ಉಳಿತಾಯವಾಗಿದೆ. ಅಲ್ಲದೇ, ಜಮೀನು ಸದಾ ಹಚ್ಚ ಹಸಿರು ಹಾಗೂ ತೇವಾಂಶದಿಂದ ಕೂಡಿರುತ್ತದೆ ಎಂದು ಜಗದೀಶ ಪಾಟೀಲ್ ವಿವರಿಸಿದರು.

ನಮ್ಮ ಜಮೀನಿಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ. ಸಂಪೂರ್ಣ ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದೇವೆ. ಕೃಷಿ ತ್ಯಾಜ್ಯವನ್ನು ಬಳಸಿಕೊಂಡು, ಜಮೀನಿನಲ್ಲಿಯೇ ಗೊಬ್ಬರ ತಯಾರು ಮಾಡಿಕೊಳ್ಳುತ್ತೇವೆ. ರೋಗ ಹತೋಟಿಗೆ ಬಾರದ ಕೆಲವು ತುರ್ತು ಸಂದರ್ಭದಲ್ಲಿ ಮಾತ್ರ ಔಷಧಿ (ರಾಸಾಯನಿಕ) ಬಳಸಿದ್ದೇವೆ ಎಂದರು.

ಜೂನ್ ತಿಂಗಳಿನಲ್ಲಿ ನಾಲ್ಕು ಎಕರೆ ಬಾಳೆ ಮತ್ತು ಅದರ ಮಧ್ಯೆ ಅಡಿಕೆ ಸಸಿಗಳನ್ನು ನಾಟಿ ಮಾಡಲಾಗುವುದು. ಇದರ ಜೊತೆಗೆ ನಾಲ್ಕು ಎಕರೆ ಮಾವು, ಚಿಕ್ಕು ನಾಟಿ ಮಾಡಿ, ಒಟ್ಟು 30 ಎಕರೆಯನ್ನೂ ಸಂಪೂರ್ಣ ತೋಟಗಾರಿಕೆ ಬೆಳೆಯನ್ನಾಗಿ ಮಾಡುವ ಗುರಿ ಇದೆ. ಆರಂಭದಲ್ಲಿ ಸ್ವಲ್ಪ ಖರ್ಚು ಬಿದ್ದರೂ, ಬಳಿಕ ನಿರಂತರ ಆದಾಯವನ್ನು ನಿರೀಕ್ಷಿಸಬಹುದು. ಮಳೆಯಾಶ್ರಿತ ಮತ್ತು ಋತುಮಾನ ಆಧರಿತ ಬೆಳೆಗಿಂತ ಇಲ್ಲಿ ನಷ್ಟ ಕಡಿಮೆ ಎನ್ನುತ್ತಾರೆ ಸಹೋದರರು.

ಆಧುನಿಕ ಕೃಷಿ ಪದ್ದತಿಯನ್ನು ಅನುಸರಿಸಿ, ಇವರು ಬೆಳೆದ ಬಾಳೆಯನ್ನು ಇತ್ತೀಚೆಗೆ ಹಿರೇಕೆರೂರಿನಲ್ಲಿ ನಡೆದ ಕೃಷಿಮೇಳದಲ್ಲಿ ಪ್ರದರ್ಶಿಸಿ, ಇತರ ರೈತರಿಗೂ ಮಾರ್ಗದರ್ಶನ ನೀಡಿದ್ದಾರೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಂಗಪ್ಪ.ಸಿ.ಎನ್.

ಹೊಲದ ರಕ್ಷಣೆಗಾಗಿ ಸುತ್ತ ಬೇಲಿ ಹಾಕಿಸಿಕೊಂಡಿದ್ದರೆ, ಕೃಷಿ ಇಲಾಖೆ ನೆರವಿನ ಮೂಲಕ ಕೃಷಿ ಹೊಂಡ ನಿರ್ಮಿಸಿದ್ದಾರೆ. ಆ ಬಳಿಕ ಅಂತರ್ಜಲ ಮಟ್ಟವೂ ಹೆಚ್ಚಿದೆ. ಈ ಸಾಧನೆಗೆ ಉಪನ್ಯಾಸಕ ವೃತ್ತಿಯಲ್ಲಿರುವ ಮತ್ತೊಬ್ಬ ಸಹೋದರ ರುದ್ರಗೌಡ ಪಾಟೀಲ್ ಹಾಗೂ ತಂದೆ ರಾಜಶೇಖರಮೂರ್ತಿ ಪಾಟೀಲ್ ಕೂಡಾ ನೆರವಾಗಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.