ADVERTISEMENT

ಬೀಜೋತ್ಪಾದನೆಯಿಂದ ಯಶ ಕಂಡ ರೈತ

ಸಿ.ಶಿವಾನಂದ
Published 17 ಡಿಸೆಂಬರ್ 2018, 20:00 IST
Last Updated 17 ಡಿಸೆಂಬರ್ 2018, 20:00 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಟ್ಟಮ್ಮನಹಳ್ಳಿಯ ಜಮೀನಿನಲ್ಲಿ ರೈತ ಹೆಗ್ಡಾಳ್ ರೇವಪ್ಪ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಟ್ಟಮ್ಮನಹಳ್ಳಿಯ ಜಮೀನಿನಲ್ಲಿ ರೈತ ಹೆಗ್ಡಾಳ್ ರೇವಪ್ಪ   

ಹಗರಿಬೊಮ್ಮನಹಳ್ಳಿ: ಬೀಜ ಉತ್ಪಾದನೆಯಿಂದ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ ತಾಲ್ಲೂಕಿನ ವಟ್ಟಮ್ಮನಹಳ್ಳಿ ಗ್ರಾಮದ ರೈತ ಹೆಗ್ಡಾಳ್‌ ರೇವಪ್ಪ.

ರೇವಪ್ಪನವರು ಮೆಣಸಿನಕಾಯಿ, ಟೊಮೆಟೊ, ಸೌತೆ, ಕಲ್ಲಂಗಡಿ ಮತ್ತು ಬದನೆಕಾಯಿ ಬೆಳೆಗಳ ಬೀಜ ಉತ್ಪಾದನೆ ಮಾಡಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ. ಹತ್ತಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಆರಂಭದ ಒಂದು ವರ್ಷ ಜಮೀನಿಗೆ ಬಂಡವಾಳ ತೊಡಗಿಸಿದ ಅವರು, ಸತತ ನಾಲ್ಕೈದು ವರ್ಷ ಅದೇ ಬಂಡವಾಳದಲ್ಲಿ ಅತ್ಯಧಿಕ ಲಾಭ ಗಳಿಸುತ್ತಿದ್ದಾರೆ.

ರೈತರ ಜೀವನಾಡಿ ಮಾಲವಿ ಜಲಾಶಯದಿಂದ ಐದು ಕಿ.ಮೀ ಅಂತರದಲ್ಲಿರುವ ವಟ್ಟಮ್ಮನಹಳ್ಳಿ ಗ್ರಾಮ ಸತತ ನಾಲ್ಕು ವರ್ಷಗಳಿಂದ ಬರಗಾಲಕ್ಕೆ ಒಳಗಾಗಿದೆ. ಸುತ್ತಲಿನ ಜಲಮೂಲಗಳು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿದು ಹೋಗಿದೆ. ರೇವಪ್ಪನವರು ತನ್ನ ಜಮೀನಿನಲ್ಲಿ ಹನ್ನೆರಡು ಕೊಳವೆ ಬಾವಿ ಕೊರೆಸಿ ಕೈ ಸುಟ್ಟುಕೊಂಡರು.

ADVERTISEMENT

ನಂತರ ಗ್ರಾಮದಲ್ಲೇ ಎರಡು ಎಕರೆ ಜಮೀನು ಗುತ್ತಿಗೆಗೆ ಪಡೆದು, ಹನಿ ನೀರಾವರಿ ಅಳವಡಿಸಿಕೊಂಡು ತೋಟಗಾರಿಕೆ ಬೆಳೆಗಳ ಬೀಜ ಉತ್ಪಾದನೆ ಮಾಡಲು ಆರಂಭಿಸಿದರು. ನಿಧಾನವಾಗಿ ಅದರಲ್ಲಿ ಯಶಸ್ಸು ಸಿಗುತ್ತ ಹೋಯಿತು. ಈಗ ಬೀಜ ಉತ್ಪಾದನೆಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇವರ ಯಶಸ್ಸು ನೋಡಿರುವ ಇತರೆ ರೈತರು ಅವರ ಹಾದಿಯಲ್ಲಿ ಮುನ್ನಡೆಯಲು ಯೋಚಿಸುತ್ತಿದ್ದಾರೆ.

‘ಬೀಜ ಉತ್ಪಾದನೆಗೆ ಚೇತನ್‌ಕಂಪನಿ ಗೊಬ್ಬರ, ಬೀಜ ಮತ್ತು ಅಗತ್ಯವಿರುವ ಸಲಕರಣೆಗಳನ್ನು ತಂದೆ. ಜಮೀನಿನಲ್ಲಿ ಅನುಕೂಲಕರವಾದ ತೇವಾಂಶ ಕಾಪಾಡಿಕೊಳ್ಳಲು ಮಲ್ಚಿಂಗ್ ವಿಧಾನ ಅನುಸರಿಸಿದೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಕಲ್ಲಂಗಡಿ, ಸೌತೆ, ಮೆಣಸಿನಕಾಯಿ ಬೀಜ ಉತ್ಪಾದನೆಗೆ ನೆರಳು ಚಪ್ಪರ ಅಳವಡಿಸಿದೆ. ಇದರಿಂದ ಬೆಳೆಗೆ ತಗಲುಬಹುದಾದ ಎಲೆ ಮುಟುರು, ಬೂದಿ ರೋಗದ ಅಪಾಯ ದೂರವಾಗಿ, ಇಳುವರಿ ಹೆಚ್ಚಿಗೆ ಬರುತ್ತಿದೆ’ ಎಂದು ರೇವಪ್ಪ ವಿವರಿಸಿದರು.

ಕಾಲು ಎಕರೆ ಪ್ರದೇಶದಲ್ಲಿ 83 ಕೆ.ಜಿ. ಮೆಣಸಿನ ಬೀಜದ ಇಳುವರಿ ಪಡೆದಿದ್ದಾರೆ. ಪ್ರತಿ ಕೆ.ಜಿ ಬೀಜಕ್ಕೆ ₨5 ಸಾವಿರ ಬೆಲೆ ಇದೆ. ಖಾಸಗಿ ಕಂಪನಿಗಳು ಅವರ ಜಮೀನಿಗೆ ಬಂದು ಬೀಜವನ್ನು ಖರೀದಿಸುತ್ತಿವೆ. ಸ್ಥಳದಲ್ಲೇ ಹಣ ಪಾವತಿಯಾಗುತ್ತಿದೆ. ಇದುವರೆಗೂ ಮಾರುಕಟ್ಟೆಯ ಸಮಸ್ಯೆಯಾಗಿಲ್ಲ.

ಬೀಜದ ಉತ್ಪಾದನೆಯಿಂದಲೇ ರೈತ ರೇವಪ್ಪನವರು ₨10 ಲಕ್ಷಕ್ಕೂ ಅಧಿಕ ವೆಚ್ಚದ ವಾಸದ ಮನೆ ನಿರ್ಮಿಸಿದ್ದಾರೆ. ಮೆಣಸಿನ ಬೀಜದ ಉತ್ಪಾದನೆಯಿಂದಲೇ ಅಂದಾಜು ₨25 ಲಕ್ಷ ಆದಾಯದ ನಿರೀಕ್ಷೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.